Cnewstv.in / 13.08.2021/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಬೆಂಗಳೂರಿನಲ್ಲಿ ಸಿನಿಮಾ ಸ್ನೇಹಿತ ರಘುರಾಜ್ ಮಲ್ನಾಡ್ ಜೊತೆಯಲ್ಲಿ ಬಂದಿದ್ದ ಚಿತ್ರರಂಗದ ಕನಸಿನ ಬುತ್ತಿ ಕಟ್ಟಿಕೊಂಡ, ಯುವ ನಿರ್ದೇಶಕ ಚಿಕ್ಕು (ಚಿಕ್ರಾಮು) ಬೇಟಿ ಆಕಸ್ಮಿಕವಾಗಿ ಆಯಿತು, ಅವರಲ್ಲಿನ ಕಲಾವೇಗವನ್ನು ಅರಿತು ಮಾತಾಡಿಸುವುದಕ್ಕೆ ಶುರು ಮಾಡಿದೆ, ಕೇಳುತ್ತಾ ಹೋದರೆ ಅತೀವ ಕುತೂಹಲವೇ ಗೂಡು ಕಟ್ಟುತಿತ್ತು, ಇಂತಹ ಅಸಲಿ ಸಂಗತಿಗಳತ್ತ ಚಿತ್ತವರಿಸಿ ಅಕ್ಷರದ ಗೂಡಿನ ಗುಬ್ಬಚ್ಚಿಯನ್ನು “ಚೆಂದನವನ”ದಲ್ಲಿ ಹಾರಿ ಬಿಡುತ್ತಿದ್ದೇನೆ.
ಹೌದು “ಕಲೆ ಎನ್ನುವುದು ಯಾರ ಮನೆಯ ಸ್ವತ್ತಲ್ಲ” ಅದೊಂದು ಸ್ವಚ್ಚಂದ ಬಾನಕ್ಕಿ ಯಾರಲ್ಲಿ ಆಸಕ್ತಿಯ ಅಮಲು ಏರುತ್ತದೆಯೋ..! ಅಲ್ಲಿ ಹಸಿವಿನ ಧಾವಂತ ಹೆಚ್ಚಾಗುತ್ತದೆ. ಈ ಕಲಾ ಹಸಿವಿನ ಮೊದಲು ಯುವ ಮನಸು “ಎತ್ತಣ ಪಯಣ ಎತ್ತಣದ ಕೊನೆ” ಎನ್ನುವಂತಾಗುತ್ತದೆ, ಬಹಳಷ್ಟು ಯುವಕರಿಗೆ ಶುರುವಿನಲ್ಲಿಯೇ ಕೊನೆಯ ತುದಿ ಕಾಣುತ್ತದೆ ಎಂದರೆ ಅವರಲ್ಲಿನ ಕನಸುಗಳನ್ನು ಸಾಕಾರಗೊಳಿಸುವ ಚಿಕ್ಕ ಪ್ರಯತ್ನಗಳು ಮಾಡದೆ ಬರೀಯ ಮಾತಿನಲ್ಲಿಯೇ ಹತಾಶದ ಕೂಪದಡಿ ಸಿಲುಕಿ ಬಿಡುತ್ತಾರೆ, ಆದರೆ ಸಾಧಿಸುವ ಮನಸು ಕನಸಿಗೆ ಬಣ್ಣ ಹಚ್ಚುವ ಕೆಲಸ ಮಾಡುತ್ತಲೇ ಇರುತ್ತದೆ, ಹೀಗೆ ತಮ್ಮ ಎದೆಮಾನಸದಲ್ಲಿ ಅವಿತಿಟ್ಟ ಕನಸಿಗೆ ಕಾಮನಬಿಲ್ಲಿನ ವರ್ಣಗಳ ಸಿಂಗರಿಸಿ ನಡೆದವರು ಇದೇ ಚಿಕ್ರಾಮು.
ನಿರ್ದೇಶಕ ಎಂದು ಗುರುತಿಸಿಕೊಳ್ಳುವ ಮೊದಲು ಚಿಕ್ರಾಮು ಬದುಕಿನ ಮೊಗಸಾಲೆಗಳನ್ನು ಹುಡುಕುತ್ತ ಹೊರಟವರು, ದೃಡಕಾಯ ಹೊಂದುವುದಕ್ಕಾಗಿ ಜಿಮ್ ಗೆ ಸೇರಿಕೊಳ್ಳುತ್ತಾರೆ ಇದೇ ಜಿಮ್ ಇಕ್ಕೆಲ ಮೈದಾನದಲ್ಲಿದ್ದ “ಸಿನಿಮಾ ಸೆಟ್” ಗೆ ನಟ-ನಟಿಯರು ಓಡಾಡುವ ದೃಶ್ಯ ಕಣ್ಣಿಗೆ ಕಟ್ಟುತ್ತದೆ ಅದಾಗಲೇ ತನ್ನೊಳಗಿನ ಕಲಾ ಆಸಕ್ತಿಯ ಬುತ್ತಿ ಬಿಚ್ಚುತ್ತದೆ, ಒಮ್ಮೆಲೆ ಅನಿಸುತ್ತದೆ ನಾನು ಕೂಡ ನಟನಾಗಬಹುದಾ..?ನಿರ್ದೇಶಕನಾಗಬಹುದಾ..? ಇಂತಹದೊಂದು ಕೆರಳಿದ ಆಸಕ್ತಿಯನ್ನು ಹೊತ್ತು ಗಾಂಧಿನಗರದ ಸುತ್ತಾ ಸುತ್ತುವುದಕ್ಕೆ ಶುರುವಿಡುತ್ತಾರೆ,
ಸಾಮಾನ್ಯವಾಗಿ ಆಸಕ್ತಿ ಇದ್ದರಷ್ಟೆ ಸಾಲದು ಅದಕ್ಕೆ ಬೆಸುಗೆಯಾಗುವ ಕಲಾಮನಸುಗಳು ಬೇಕಲ್ಲವೇ..? ಇದು ಈ ಹೊತ್ತಿನ ಸಿನಿಮಾ ರಂಗದಲ್ಲಿ ತುಂಬಾನೆ ವಿರಳ, ಸಿಕ್ಕಿದರೆ ಸಾಕಷ್ಟು ಪ್ರತಿಭೆಗಳಿಗೆ ಅವಕಾಶ ಸಿಗಬಹುದು. ಆದರೆ ಚಿಕ್ರಾಮುವಿಗೆ ಇಂತಹ ಯಾವುದೇ ಸಂಪರ್ಕಗಳು ಸಾಧ್ಯವಾಗಲಿಲ್ಲ ಬದಲಿಗೆ ಅವಮಾನ, ಅಸಡ್ಡೆ, ತಾತ್ಸಾರತೆಗಳೇ ತುಂಬಿಕೊಂಡವು. ಆದರೂ ಇವೆಲ್ಲವನ್ನು ಮೆಟ್ಟಿ ಕಲಾಲೋಕದಲ್ಲಿ ಪಯಣಿಸಲೇ ಬೇಕು ಎಂದುಕೊಂಡ ಚಿಕ್ರಾಮುವಿಗೆ ಓರ್ವ ನಿರ್ದೇಶಕರ ಪರಿಚಯ ಆಗಿಬಿಡುವ ದಿನಮಾನ ಎದುರಾಗಿ ಬಿಡುತ್ತದೆ. ಒಮ್ಮೆ ಎಂದಿನಂತೆ ಕಲಾ ಹೆಬ್ಬಾಗಿಲಿನೊಳಗೆ ಮೊದಲ ಹೆಜ್ಜೆಯನ್ನಿಡುವ ಉತ್ಸಾಹ ಕುಗ್ಗಿಸಿಕೊಳ್ಳದೆ ಗಾಂಧಿನಗರದ “ಕನಿಷ್ಕ” ಹೊಟೆಲ್ ಹಿಂಬದಿ ಸ್ಮೋಕಿಂಗ್ ಮಾಡುತ್ತಾ ಕುಳಿತಿದ್ದವರಿಗೆ… ದೂರದಿ ನಿಂದು ಕೂಗಿ ಏನ್ರೋ ಮಾಡ್ತಾ ಇದ್ದೀರಾ..? ಎಂದು ಕರೆದಿದ್ದು ನೋಡಿ ಸ್ಮೋಕಿಂಗ್ ನಿಲ್ಲಿಸಿ ಸ್ನೇಹಿತರೊಂದಿಗೆ ಅವರ ಬಳಿ ಧಾವಿಸಿ ಬರುತ್ತಾರೆ.
ಅದಾಗ ಕೂಗಿದವರ ಮಾತು ಮುಂದುವರೆಯುತ್ತದೆ, ಎನ್ರಪ್ಪ ಯುವಕರು ಹೀಗೆ ಕೂತು ಬಿಟ್ಟರೆ ಸಮಾಜ ಏನಾಗಬೇಡ ಟೈಮ್ ವೇಸ್ಟ್ ಮಾಡಬ್ಯಾಡ್ರಪ್ಪ ಎಂದು ಹೇಳಿದ್ದನ್ನು ಕೇಳಿ..? ಇಂತಿವರಿಗೆ ಮುಜುಗರ ತರಿಸುತ್ತದೆ, ಆ ವ್ಯಕ್ತಿ ಮತ್ತೆ… ಸರಿ ಏನು ಮಾಡುತ್ತಿದ್ದೀರಾ ಎಂದು ಪ್ರಶ್ನಿಸುತ್ತಾರೆ ಅದಕ್ಕೆ ಚಿಕ್ರಾಮು ತಕ್ಷಣವೇ ಸಹನಿರ್ದೇಶಕನಾಗಬೇಕು ಅವಕಾಶಕ್ಕಾಗಿ ಹುಡುಕುತ್ತಿದ್ದೇನೆ ಎಂದು ಹೇಳುತ್ತಾರೆ ಹೀಗೆ…ಉತ್ತರಿಸಿದನ್ನು ಕೇಳಿ ಆ ವ್ಯಕ್ತಿ ನಕ್ಕು ನೋಡಪ್ಪ ನಾನು ನಿರ್ದೇಶಕನಾಗಿ ಸಿನಿಮಾ ಇಂಡಸ್ಟ್ರೀನಲ್ಲಿದ್ದೇನೆ ಎಂದು ಗುರುಪ್ರಸಾದ್ ತಿಳಿಸುತ್ತಾರೆ ಅದಾಗಲೇ ಚಿಕ್ರಾಮುಗೆ ಖುಷಿ ತರಿಸುತ್ತದೆ, ಕೂಡಲೇ ಅವರೊಂದಿಗೆ ಆಪ್ತತೆಯಿಂದ ವರ್ತಿಸಿ ಅವರ ಸಂಪರ್ಕವನ್ನು (ಮೊಬೈಲ್ ನಂಬರ್) ಸಾಧಿಸುತ್ತಾರೆ.
ಆದರೆ ಆ ನಂಬರ್ ಮಿಸ್ ಆಗಿಬಿಡುತ್ತದೆ, ಒಮ್ಮೆ ಬೆಂಗಳೂರಿನ “ಕಲ್ಪನಾ ಥಿಯೇಟರ್” ನಲ್ಲಿ “ಮಠ” ಚಲನಚಿತ್ರ ಬಿಡುಗಡೆಗೆ ಬಂದ ಸಿನಿಮಾ ಬಳಗದಿಂದ ನಿರ್ದೇಶಕರಾದ ಗುರುಪ್ರಸಾದ್ ಕಾಂಟ್ಯಾಕ್ಟ್ ನಂಬರ್ ಪಡೆದು ಪೋನಾಯಿಸಿ ನಿರ್ದೇಶಕರಾಗುವ ಕನಸಿಗೆ ಸ್ವತಃ ಬಣ್ಣ ಬಳಿದುಕೊಳ್ಳುತ್ತಾರೆ.
ಈ ಸಂಪರ್ಕದಿಂದ ಶುರುವಾದ ಸಿನಿಮಾ ಪಯಣದ ಮೊದಲ ಅಧ್ಯಾಯದಲ್ಲಿ “ಮನಸುಗಳ ಮಾತು ಮಧುರ” “ನನ್ನೆದೆಯ ಹಾಡು” “ಡಾರ್ಕ್” ಕಮರ್ಷಿಯಲ್ ಸಿನಿಮಾದಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡುತ್ತಾರೆ ಚಿಕ್ರಾಮು. ನಂತರ ನಿರ್ದೇಶಕರಾದ ಪಿಸಿ, ಶೇಖರ್ ಸಿನಿ ಪಾಳಯದಲ್ಲಿ ಅಸೋಸಿಯಟ್ ಡೈರೆಕ್ಟರ್ ಆಗಿ “ಬೈ ಟೂ ಕಾಫಿ” “ನಾಯಕ” “ರೋಮಿಯೋ” “ಸ್ಟೈಲ್ ಕಿಂಗ್” “ಚಡ್ಡಿ ದೋಸ್ತ್” “ಅರ್ಜುನ” “ರಾಗ” “ಟೆರರಿಸ್ಟ್” “ಸಾಗುವ ದಾರಿಯಲ್ಲಿ” ಎನ್ನುವ ಸಾಕಷ್ಟು ಸಿನಿಮಾಗಳಲ್ಲಿ ಕೆಲಸವನ್ನು ಮಾಡಿ ಓರ್ವ ನಿರ್ದೇಶಕನಿಗೆ ಇರಬೇಕಾದ ವಿಸ್ತಾರತೆಗಳನ್ನು ಅರ್ಥೈಸಿಕೊಳ್ಳುವ ಚಿಕ್ರಮು ಮೊದಲ ನಿರ್ದೇಶನದ ಮೂಲಕ ಗಾಂಧಿನಗರದಲ್ಲಿ ಸದ್ದು ಮಾಡುತ್ತಾರೆ.
ಅವರ ನಿರ್ದೇಶನದ ಮೊದಲ ಚಿತ್ರ “ಇಂತಿ ನಿಮ್ಮ ಬೈರಾ” ದಲ್ಲಿ ಒಂದಿಷ್ಟು ಯಶಸ್ಸು ಕಾಣುತ್ತಾರೆ* ಇಲ್ಲಿಗೆ ತಾನು ಕಂಡ ಕನಸಿನ ಲೋಕದಲ್ಲಿಮ ಮೊದಲಹೆಜ್ಜೆ ನನಸಾಗುತ್ತದೆ, ಈ ಹೊತ್ತಿನ ಚಿತ್ತ ಸಮಾಜ ಯಾವ ಆಕರ್ಷಣೆಗಳಿಗೆ ಒಳಗಾಗುತ್ತದೆ, ಸಿನಿ ದುನಿಯಾದ ಆಂತರಿಕ ವೇಗ, ಅತಿ ಮುಖ್ಯವಾಗಿ ಎಲ್ಲಾ ಮಾಧ್ಯಮಗಳಿಗಿಂತಲೂ ಅತ್ಯಂತ ಪ್ರಭಾವಿ ಮಾಧ್ಯಮವಾಗಿ ಬೆಳೆಯುತ್ತಿರುವ ಸಿನಿ ಲೋಕ ಮನರಂಜನೆಗಷ್ಟೇ ಸೀಮಿತವಲ್ಲ ಅದೊಂದು ಮನುಷ್ಯ ಬದುಕಿನ ಅಧ್ಯಯನದ ಕೊಂಡಿ, ಹಾಗೂ ಅನುಕರಣೆಯ ಜಗತ್ತು, ಇಂತಹ ಆಯಾಮಗಳ ಅರಿವಿಟ್ಟುಕೊಂಡೇ ಚಿಕ್ರಾಮು “ಇಂತಿ ನಿಮ್ಮ ಬೈರಾ” ಚಿತ್ರದ ಮೂಲಕ ನಿರ್ದೇಶಕನಾಗಿ ಪ್ರಬುದ್ದಮಾನರಾಗಿ ದರ್ಶಿಸಿಕೊಳ್ಳುತ್ತಿದ್ದಾರೆ. ಇನ್ನೂ ಚಿತ್ರಕಥೆ ಬರೆಯುತ್ತಿರುವ ಚಿಕ್ರಾಮು ಸಾಕಷ್ಟು ಚಿತ್ರಗಳಿಗೆ ನಿರ್ದೇಶಕರಾಗಿ ಕೆಲಸ ಮಾಡುವುದಕ್ಕೆ ಗಾಂಧಿನಗರದಲ್ಲಿ ಸಹಿ ಹಾಕಿದ್ದಾರೆ.
ಇದಿಷ್ಟು ಅವರ ಸಿನಿಲೋಕದ ಪಯಣ ಎನ್ನುವುದಾದರೆ ಚಿಕ್ಕು( ಚಿಕ್ರಾಮು ) ಬೆಳೆದಿದ್ದು, ಓದಿದ್ದು ನಾಗಮಂಗಲದ ಹತ್ತಿರದ ಕುಂಬಿನಕೊಪ್ಪಲಿನಲ್ಲಿ, ತಂದೆ ಜವರೇ ಗೌಡ ತಾಯಿ ಪುಟ್ಟ ಸಿದ್ದಮ್ಮ ನವರ ಮಧ್ಯಮವರ್ಗದ ಕುಟುಂಬ, ಆರು ಜನ ಮಕ್ಕಳಲ್ಲಿ ಚಿಕ್ರಾಮು ಐದನೇಯವರು, ಉನ್ನತ ವ್ಯಾಸಾಂಗಕ್ಕಾಗಿ ಬೆಂಗಳೂರು ಅರಿಸಿ ಬಂದವರು ಕಲಾ ಜಗತ್ತಿನಲ್ಲಿ ಪಯಣಿಸುವ ಆಸಕ್ತಿಯನ್ನು ತಳೆದು ಇಲ್ಲಿಯವರೆಗೆ ಬಂದಿದ್ದಾರೆ ಎನ್ನುವುದು ಶ್ಲಾಘನೀಯ.
ಇನ್ನೂ ಕನ್ನಡ ಸಿನಿಮಾದ ನಿರ್ದೇಶಕರು ಬಿಗ್ ಬಜೆಟ್ ಚಿತ್ರದಲ್ಲಿ ಕೆಲಸ ಮಾಡಿದ್ದರೆ ಮಾತ್ರ ಸೆಲಿಬ್ರಿಟಿಯ ಸಾಲಿನೊಳಗೆ ಆಗ್ರಜನೆಂದುಕೊಂಡು ಬೀಗಿ ಮುಗ್ಗರಿಸಿ ಬೀಳುತ್ತಿರುವುದು ವಾಸ್ತವಕ್ಕೆ ಹಿಡಿದ ಕೈಗನ್ನಡಿಯಾಗಿದ್ದರು ಕೆಲ ನಿರ್ದೇಶಕರಿಗೆ ಇರಬೇಕಾದ ಪ್ರತಿಭಾ ಅರ್ಹತೆಗಳಿಗೇನು ಎನ್ನುವುದರ ಅರಿವು ಇಲ್ಲದೇ ಇರುವುದರಿಂದಲೇ “ಬಿಗ್ ಬಜೆಟ್” ಸಿನಿಮಾದ ನಿರ್ದೇಶಕ ಎನ್ನುವ ಪಟ್ಟಿಯಲ್ಲಿರಬೇಕಷ್ಟೆ ಇಂತಹ ಮಾನಸೀಕತೆಯಿಂದ ಸಿನಿರಸಿಕರಿಗೆ ಹಾಗೂ ಚಿತ್ತ ಸಮಾಜಕ್ಕೆ ಕೊಡುವ ಸಂದೇಶಗಳು, ಕಾಣಿಕೆಗಳು ಇಲ್ಲಿ ಅಪ್ರಾದನವಾಗಿಯೇ ಉಳಿದು ನರಳುತ್ತಿದೆ. ಇಂತಹದೊಂದು ವಿಮರ್ಶೆ, ತಾತ್ವಿಕ ಚರ್ಚೆಗಳು ಸಿನಿರಂಗದಲ್ಲಿ ಆಗಬೇಕಾದ ಅನಿವಾರ್ಯತೆಗಳಿವೆ ಎಂದು ಇಲ್ಲಿ ಉಲ್ಲೇಖಿಸುತ್ತೇನೆ.
ಶರವೇಗದಿ ನಿರ್ಮಾಣವಾಗುತ್ತಿರುವ ಕೋಟಿ ಲೆಕ್ಕವಿಟ್ಟ ವೆಚ್ಚದ ಸಿನಿಮಾಗಳು ಯಾವ ಸಂದೇಶವನ್ನು ನೀಡುತ್ತಿದೆ ಎನ್ನುವ ಅವಲೋಕನಕ್ಕೆ ಮನಸನ್ನು ಎಡೆಮಾಡಿಕೊಟ್ಟರೆ ಹಿಂದಿನ ದಿನಮಾನದ ಪುಟ್ಟಣ್ಣ ಕಣಗಾಲ್, ಸಿದ್ದಲಿಂಗಯ್ಯ, ಬಾಲಚಂದರ್ ಇನ್ನೂ ಮುಂತಾದವರಂತಹ ಮೇರು ನಿರ್ದೇಶಕರ ಕಲಾ ಕ್ರಿಯಾಶೀಲತೆಗಳು, ಅವರಿಗಿದ್ದ ಸಿನಿಮಾ ಸಾತ್ವಿಕ ಕಾಳಜಿ, ಸದಭಿರುಚಿಯ ತಳಹದಿಯ ಮೇಲೆ ಕಟ್ಟಿದ ಕಡಿಮೆ ಬಜೆಟ್ ಸಿನಿಮಾಗಳಿಂದಲೇ ಚಿತ್ತಸಮಾಜದ ಮೇಲೆ ಆರೋಗ್ಯಕರ ಪರಿಣಾಮಗಳು ಉಂಟು ಮಾಡುತ್ತಿದ್ದವು ಎನ್ನುವುದು ಎಂದಿಗೂ ಮರೆಯಲಾಗದು.
ಅಂದಿನ ಕಾಲದ ಕತೆ. ಸಾಹಿತ್ಯ, ನಟನೆಗಳುಂದ ನಿರ್ಮಿಸಿದ ಇತಿಹಾಸದ ದಾಖಲೆಗಳು ಇಂದಿಗೂ ಅಜರಾಮರವಾಗಿದೆ ಎಂದು ಮೆಲಕು ಹಾಕಿ ಇಂತಹ ಸಾಲಿನಲ್ಲಿ ನಮ್ಮ ಚಿಕ್ರಾಮು ಕೂಡ ಸಾಗುತ್ತಾರೆ.* ಎನ್ನುವ ಆಶಯವೂ ಕೂಡ ವ್ಯಕ್ತವಾಗುತ್ತದೆ, ಅಲ್ಲದೆ ಬಿಗ್ ಬಜೆಟ್ ಹಾಗೂ ಲೋ-ಬಜೆಟ್ ಸಿನಿಮಾ ಎನ್ನುವ ವ್ಯತ್ಯಾಸಗಳನ್ನು ಹಾಗೂ ಕಮರ್ಷಿಯಲ್ ಮತ್ತು ಕಲಾತ್ಮಕ ಚಿತ್ರಗಳ ನಡುವಿನ ಅಂತರವನ್ನು ಅರಿತುಕೊಳ್ಳುವ ಪ್ರಬುದ್ದತೆ ಚಿಕ್ರಾಮುವರಿಗೆ ಇದ್ದೇ ಇದೆ ಎಂದು ಉವಾಚಿಸಿ “ಚಂದನವನ”ದಲ್ಲಿ ಹೊಸದೊಂದು ಭರವಸೆ ಮೂಡಿಸಿರುವ ಯುವ ನಿರ್ದೇಶಕ ಚಿಕ್ರಾಮು ಕನ್ನಡ ಚಿತ್ರರಂಗದಲ್ಲಿ ಯಶಸ್ಸಿನ ಮೇರು ಮೆಟ್ಟಿಲುಗಳನ್ನು ಏರುವುದರಲ್ಲಿ ಯಾವ ನಿಸ್ಸಂದೇಹವಿಲ್ಲವಾಗಿದೆ ಎಂದು ಅಂಬೋಣಿಸುತ್ತೇನೆ.
ಗಾರಾ.ಶ್ರೀನಿವಾಸ್
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments