cnewstv | 03.11.2024 | ಶಿವಮೊಗ್ಗ | ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಪ್ರಧಾನಿ ಬಗ್ಗೆ ಅವಹೇಳನಕಾರಿ ಹೇಳಿಕೆ: ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಕ್ಷಮೆಯಾಚನೆಗೆ ಸಂಸದ ಶ್ರೀ ಬಿ ವೈ ರಾಘವೇಂದ್ರ ಆಗ್ರಹ
ಶಿವಮೊಗ್ಗ : ವಿಶ್ವದಲ್ಲೇ ಅತಿ ಹೆಚ್ಚು ಅಪ್ರೂವಲ್ ರೇಟಿಂಗ್ ಹೊಂದಿರುವ ಅತ್ಯಂತ ಪ್ರಬಲ ನಾಯಕ ಎಂದು ಜಾಗತಿಕ ಸಂಸ್ಥೆಗಳಿಂದ, ಮಾಧ್ಯಮಗಳಿಂದ ಗೌರವಿಸಲ್ಪಟ್ಟಿರುವ ದೇಶದ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿಜೀ ಬಗ್ಗೆ ಹಗುರವಾಗಿ, ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವ ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ತಕ್ಷಣ ತಮ್ಮ ಹೇಳಿಕೆಗೆ ಬೇಷರತ್ ಆಗಿ ಕ್ಷಮೆಯಾಚಿಸಬೇಕು ಹಾಗು ಇತರರ ಬಗ್ಗೆ ಹಗುರವಾಗಿ ಮಾತನಾಡುವ ಪ್ರವೃತ್ತಿಯನ್ನು ನಿಲ್ಲಿಸಬೇಕು ಎಂದು ಶಿವಮೊಗ್ಗದ ಸಂಸದರಾದ ಶ್ರೀ ಬಿ ವೈ ರಾಘವೇಂದ್ರ ಆಗ್ರಹಿಸಿದ್ದಾರೆ.
“ಶ್ರೀ ಮೋದಿಜೀ ಅವರು ಇಂದು ವಿಶ್ವ ನಾಯಕರಾಗಿ ಬೆಳೆದು ನಿಂತಿದ್ದಾರೆ. ಇಡೀ ವಿಶ್ವವೇ ಅವರನ್ನು ಗೌರವಿಸುತ್ತಿದೆ. ವಿಶ್ವದ ಅತಿ ವೇಗವಾಗಿ ಬೆಳೆಯುವ ಆರ್ಥಿಕ ಶಕ್ತಿಯಾಗಿ ಭಾರತವನ್ನು ಬೆಳೆಸಿ ನಿಲ್ಲಿಸಿರುವ ಶ್ರೀ ಮೋದಿಜೀ ಅವರು ಕರ್ನಾಟಕ ಸರಕಾರದ ಆರ್ಥಿಕ ದುಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು ಸಹಜವಾಗಿಯೇ ಇದೆ. ಅವರ ಹಿತವಚನವನ್ನು ಗೌರವಿಸುವ ಬದಲು, ಅವರ ಬಗ್ಗೆ ಅವಹೇಳನಕಾರಿ ಪದ ಪ್ರಯೋಗಿಸಿರುವುದು ಶ್ರೀ ಸಿದ್ದರಾಮಯ್ಯ ರಂತಹ ಹಿರಿಯ ನಾಯಕರಿಗೆ ಭೂಷಣವಲ್ಲ,” ಎಂದು ಅವರು ತಿಳಿಸಿದ್ದಾರೆ.
“ಪ್ರಧಾನಿಗಳ ಕ್ಷಮೆಯಾಚಿಸಿ ಜನರ ಎದುರು ಗೌರವ ಉಳಿಸಿಕೊಳ್ಳಿ,” ಎಂದು ಅವರು ಶ್ರೀ ಸಿದ್ದರಾಮಯ್ಯನವರನ್ನು ಆಗ್ರಹಿಸಿದ್ದಾರೆ.
<“ಭ್ರಷ್ಟಾಚಾರದಲ್ಲಿ ಓಲೈಕೆ ರಾಜಕಾರಣದಲ್ಲಿ ಮುಳುಗಿಹೋಗಿದ್ದ ದೇಶವನ್ನು ಇವತ್ತು ಜಗತ್ತಿನ ಬಲಿಷ್ಠ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲಿಸಿರುವುದು ಸಣ್ಣ ಸಾಧನೆಯಲ್ಲ. ಅಷ್ಟೇ ಮುಖ್ಯವಾದ ಮೋದೀಜೀಯವರ ಇನ್ನೊಂದು ಕೊಡುಗೆಯೆಂದರೆ, ನಮ್ಮೆಲ್ಲರಲ್ಲೂ ನಮ್ಮ ಅಸ್ಮಿತೆಯ ಬಗ್ಗೆ, ನಮ್ಮ ಸಂಸ್ಕೃತಿಯ ಬಗ್ಗೆ, ನಮ್ಮ ಇತಿಹಾಸದ ಬಗ್ಗೆ, ಹಾಗೂ ನಮ್ಮ ಆರ್ಥಿಕ ಶಕ್ತಿಯ ಬಗ್ಗೆ ಹೆಮ್ಮೆ ಮತ್ತು ಆತ್ಮವಿಶ್ವಾಸ ಮೂಡಿಸಿರುವುದು. ಆಯುಷ್ಮಾನ್ ಭಾರತ, ಜನೌಷಧಿ, ಆವಾಸ್ ಯೋಜನಾ, ಉಚಿತ ರೇಷನ್, ಉಜ್ವಲಾ ಯೋಜನೆ, ಮುಂತಾದ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಜನರ ಬದುಕಿನ ಮೇಲೆ ನೇರವಾದ ಧನಾತ್ಮಕ ಪರಿಣಾಮ ಬೀರಿರುವ ನಾಯಕ, ಮೋದೀಜಿ” ಎಂದಿರುವ ರಾಘವೇಂದ್ರ ಅವರು, ಕಾಂಗ್ರೆಸ್ಸಿನ ಯಾವುದೇ ಗ್ಯಾರಂಟಿ ಪಟಾಕಿಗಳೂ ಮಾಡದಂಥ ಜನಪರ ಕೆಲಸವನ್ನು ಮೋದೀಜೀಯವರ ಕಾರ್ಯಕ್ರಮಗಳು ಮಾಡಿವೆ ಎಂದಿದ್ದಾರೆ. “ಡಿಜಿಟಲ್ ಎಕಾನಮಿಯ ಮೂಲಕ ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗಿವೆ. ಇವೆಲ್ಲ ಕ್ರಾಂತಿಕಾರಿ ಬೆಳವಣಿಗಗಳ ನಡುವೆಯೂ ದೇಶದ ಆರ್ಥಿಕತೆಯನ್ನು ಸದೃಢವಾಗಿ ಉಳಿಸಿಕೊಂಡಿರುವುದು ಮೋದೀಜೀ ಹಾಗೂ ವಿತ್ತ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರ ಹೆಗ್ಗಳಿಕೆ” ಎಂದೂ ಅವರು ವಿವರಿಸಿದ್ದಾರೆ.
ಇದಕ್ಕೆ ವ್ಯತಿರಿಕ್ತವಾಗಿ, ಸಿದ್ದರಾಮಯ್ಯನವರ ಸರ್ಕಾರ ತಾನು ನೀಡಿದ ಗ್ಯಾರಂಟಿ ಭರವಸೆಗಳನ್ನು ಸರಿಯಾಗಿ ನಿರ್ವಹಿಸಲಾಗದೆ ರಾಜ್ಯವನ್ನು ದೀವಾಳಿಯ ಅಂಚಿಗೆ ತಂದು ನಿಲ್ಲಿಸಿದೆ ಎಂದು ಕಿಡಿ ಕಾರಿರುವ ಅವರು, ಅದರ ಬಿಸಿ ತಟ್ಟುತ್ತಿರುವುದರಿಂದಲೇ ಅವರದೇ ಪಕ್ಷದ ನಾಯಕರುಗಳು ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಮಾತಾಡುತ್ತಿದ್ದಾರೆ, ಅಭಿವೃದ್ಧಿ ಕೆಲಸಗಳಿಗೆ ಹಣವೇ ಇಲ್ಲ ಎಂದು ಶಾಸಕರುಗಳು ರೇಗುತ್ತಿದ್ದಾರೆ, ಸಂಬಳವೇ ಬಂದಿಲ್ಲ ಎಂದು ಅನೇಕ ನೌಕರರು ಕೊರಗುತ್ತಿದ್ದಾರೆ ಎಂದು ಟೀಕಿಸಿದ್ದಾರೆ..
“ಹಿರಿಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು ಸಿಎಂ ಅವರ ಹಳೆಯ ಚಾಳಿ. ಇದು ಅವರ ವ್ಯಕ್ತಿತ್ವಕ್ಕೆ ಹಲವಾರು ಭಾರಿ ಕುಂದುಂಟು ಮಾಡಿದೆ. ಇನ್ನು ಮುಂದೆ ಪದ ಪ್ರಯೋಗ ಸಂದರ್ಭದಲ್ಲಿ ಬಹು ಎಚ್ಚರಿಕೆಯನ್ನು ಸಿಎಂ ವಹಿಸಬೇಕು,” ಎಂದೂ ಅವರು ತಿಳಿಸಿದ್ದಾರೆ.
ಇದ್ದದ್ದು ಇದ್ದ ಹಾಗೆ ಹೇಳಿದರೆ ಎದಿದು ಬಂದು ಎದೆಗೆ ಒದ್ದ ಅನ್ನೊ ಹಾಗೆ ಸಿದ್ದರಾಮಯ್ಯನವರು ತಮ್ಮ ಹೊಣೆಗೇಡಿ ಮತ್ತು ಹಗುರ ಮಾತಿನ ಮೂಲಕ ತಮ್ಮ ಹತಾಶೆಯನ್ನು ಹೊರಹಾಕುತ್ತಿದ್ದಾರೆ.
ಈ ನೆಲದ ಕ್ರಾಂತಿಪುರುಷ, ಅಣ್ಣ ಬಸವಣ್ಣ ಬಗ್ಗೆ ಅಪಾರ ಗೌರವವಿದೆ ಎಂದು ಸಿಎಂ ಸದಾ ಹೇಳುತ್ತಿರುತ್ತಾರೆ. ಅಣ್ಣ ಬಸವಣ್ಣನ ವಚನ ಪ್ರಕಾರ ನುಡಿದರೆ ಮುತ್ತಿನ ಹಾರದಂತಿರಬೇಕು.
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು.
ನುಡಿದರೆ ಸ್ಫಟಿಕದ ಸಲಾಕೆಯಂತಿರಬೇಕು.
ನುಡಿದರೆ ಲಿಂಗ ಮೆಚ್ಚಿ ʼಅಹುದಹುದೆʼನಬೇಕು.
ನುಡಿಯೊಳಗಾಗಿ ನಡೆಯದಿದ್ದರೆ,
ಕೂಡಲಸಂಗಮದೇವನೆಂತೊಲಿವನಯ್ಯಾ?
ಅಣ್ಣ ಬಸವಣ್ಣ ಅವರನ್ನು ಬರೀ ಭಾಷಣಕ್ಕೆ ಸೀಮಿತಗೊಳಿಸಿಕೊಳ್ಳದೆ, ಅವರ ಆದರ್ಶವನ್ನು ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ಪಾಲಿಸಿದರೆ, ಅದು ಎಲ್ಲರಿಗೂ ಶೋಭೆ”, ಎಂದು ರಾಘವೇಂದ್ರ ಅವರು ಸಿದ್ದರಾಮಯ್ಯನವರಿಗೆ ಬುದ್ಧಿ ಹೇಳಿದ್ದಾರೆ.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments