ಪೈನಾಪಲ್ ಹಣ್ಣಿನ ಒಳಗೆ ಸ್ಪೋಟಕವನ್ನಿಟ್ಟು ಅದನ್ನು ಆನೆ ತಿನ್ನುವಂತೆ ಮಾಡಿ ಆನೆಯನ್ನು ಕೊಂದಿರುವ ಘಟನೆ ಕೇರಳ ರಾಜ್ಯದ ಪಲ್ಲಕಾಡ್ ಜಿಲ್ಲೆಯಲ್ಲಿ ನಡೆದಿದೆ. ಆಹಾರವನ್ನು ಅರಸಿ ಆನೆಯೊಂದು ಹಳ್ಳಿಯ ಕಡೆಗೆ ಬಂದಿದೆ. ಈ ವೇಳೆ ಕೆಲ ದುಷ್ಕರ್ಮಿಗಳು ಪೈನಾಪಲ್ ಹಣ್ಣಿನ ಒಳಗೆ ಸ್ಪೋಟಕವನ್ನು ಇಟ್ಟು ಆನೆ ಇರುವ ಪ್ರದೇಶದಲ್ಲಿ ಇಟ್ಟಿದ್ದಾರೆ. ಆನೆ ಈ ಪೈನಾಪಲ್ ಹಣ್ಣನ್ನು ತಿನ್ನುವಾಗ ಆನೆಯ ಬಾಯಿಯಲ್ಲೇ ಸ್ಪೋಟಕ ಸ್ಫೋಟಗೊಂಡಿದೆ. ಇದರಿಂದ ಆನೆಯ ನಾಲಿಗೆ ಹಾಗೂ ಬಾಯಿಗೆ ಗಂಭೀರವಾದ ಗಾಯವಾಗಿದ್ದು ಆಹಾರ ಸೇವಿಸುವುದೇ ಕಷ್ಟವಾಗಿದೆ. ಯಮಯಾತನೆಯನ್ನು ಸಹಿಸಿಕೊಳ್ಳಲು ಆನೆ ಸಮೀಪದ ಕಾಡಿನಲ್ಲಿದ್ದ ನದಿಯಲ್ಲಿ ನಿಂತುಕೊಂಡಿದೆ. ಕೆಲ ದಿನಗಳ ಕಾಲ ಈ ನರಕವನ್ನು ಅನುಭವಿಸಿದ ಆನೆ ನದಿಯಲ್ಲಿಯೇ ಸಾವನ್ನಪ್ಪಿದೆ. ಈ ಘಟನೆ ನಡೆದು 20 ದಿನಗಳ ಬಳಿಕ ಪ್ರಕರಣ ಅಲ್ಲಿನ ಅರಣ್ಯ ಇಲಾಖೆಗೆ ತಿಳಿದು ಬಂದಿದೆ. ಮೃತ ಆನೆಯ ಮರಣೋತ್ತರ ಪರೀಕ್ಷೆ ನಡೆಸಿದಾಗ ಆನೆಯ ಹೊಟ್ಟೆಯಲ್ಲಿ ಮರಿ ಇರುವುದು ತಿಳಿದು ಬಂದಿದೆ. ಸ್ಪೋಟಕವನ್ನಿಟ್ಟು ಆನೆಯನ್ನು ಕೊಂದ ಪಾಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಸೋಷಿಯಲ್ ಮೀಡಿಯಾದಲ್ಲಿ ಆಂದೋಲನವೇ ಆರಂಭಗೊಂಡಿದೆ. ಸ್ಥಳೀಯ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ ಐಆರ್ ದಾಖಲಿಸಿಕೊಂಡು ಆನೆಯನ್ನು ಕೊಂದವರ ಪತ್ತೆಗಾಗಿ ಕ್ರಮ ಕೈಗೊಂಡಿದ್ದಾರೆ.
Recent Comments