ಶಿವಮೊಗ್ಗ: ಸೊರಬ ಶಾಸಕ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ವಿಶೇಷ ಆಹ್ವಾನದ ಮೇರೆಗೆ ಸೊರಬ ತಾಲೂಕಿನ ವಿವಿಧ ಪಿಯು ಕಾಲೇಜಿನ ವಿದ್ಯಾರ್ಥಿಗಳು ಬೆಳಗಾವಿಗೆ ಭೇಟಿ ನೀಡಿ, ಚಳಿಗಾಲದ ಅಧಿವೇಶನ ವೀಕ್ಷಿಸಿದ್ದಾರೆ.
ಸೊರಬದ ವಿದ್ಯಾರ್ಥಿಗಳು ಕಲಾಪ ವೀಕ್ಷಿಸುವುದಕ್ಕೆ ಉಭಯ ಸದನದ ಸಭಾಪತಿಗಳಿಂದ ಸಚಿವ ಮಧು ಬಂಗಾರಪ್ಪ ಮೊದಲೇ ಅನುಮತಿ ಪಡೆದಿದ್ದ ಹಿನ್ನೆಲೆ ಬೆಳಗಾವಿಗೆ ವಿದ್ಯಾರ್ಥಿಗಳು, ಉಪನ್ಯಾಸಕರೊಂದಿಗೆ ಭೇಟಿ ನೀಡಿದ್ದಾರೆ.
ಜಿಲ್ಲೆಯ ಸೊರಬ ತಾಲೂಕಿನ ಸಿರಿವಂತೆ, ಸೊರಬ, ಉಳವಿ ಹಾಗೂ ಆನವಟ್ಟಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ 350ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಉಪನ್ಯಾಸಕರೊಂದಿಗೆ ವಿಶೇಷ ಬಸ್ಸಿನಲ್ಲಿ ಬೆಳಗಾವಿಗೆ ತೆರಳಿ, ಕಲಾಪವನ್ನ ವೀಕ್ಷಿಸಿದರು. ಸುವರ್ಣಸೌಧದಲ್ಲಿ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪರನ್ನು ಭೇಟಿ ಮಾಡಿದ ವಿದ್ಯಾರ್ಥಿಗಳು, ಬೆಳಿಗ್ಗೆ ಕಲಾಪ ಆರಂಭವಾಗುತ್ತಿದ್ದಂತೆಯೇ ವಿಧಾನಸಭೆಯ ಕಲಾಪವನ್ನು ವೀಕ್ಷಿಸಿದರು. ಬಳಿಕ ವಿಧಾನ ಪರಿಷತ್ ಕಲಾಪವನ್ನು ಸಹ ವೀಕ್ಷಿಸಿದರು.
ಬಳಿಕ ಸುವರ್ಣಸೌಧದ ವಿಶೇಷ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರೊಂದಿಗೆ ಸಹಕಾರ ಸಚಿವರಾದ ಕೆ.ಎನ್. ರಾಜಣ್ಣ, ಶರಣ ಬಸಪ್ಪ ದರ್ಶನಾಪುರ, ಶಿವಾನಂದ ಪಾಟೀಲ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ವಿದ್ಯಾರ್ಥಿಗಳಿಗೂ ರಾಜಕೀಯ ಜ್ಞಾನಬೇಕೆಂಬ ಕಾರಣಕ್ಕೆ ಸೊರಬದ ವಿದ್ಯಾರ್ಥಿಗಳಿಗೆ ಅಲ್ಲಿನ ಉಪನ್ಯಾಸಕ ಸಿಬ್ಬಂದಿ, ಆಡಳಿತ ಮಂಡಳಿ ಒತ್ತಾಸೆಯ ಮೇರೆಗೆ ಈ ವ್ಯವಸ್ಥೆ ಮಾಡಲಾಗಿತ್ತು. ಯುವಜನತೆಗೆ ರಾಜಕೀಯ ಜ್ಞಾನ ಬೇಕಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಮಹತ್ವ ಗೊತ್ತಾಗಬೇಕಿದೆ ಎಂದರು.
ಸುವರ್ಣಸೌಧದ ಸಭಾಂಗಣದಲ್ಲಿ ಸಚಿವರಾದ ಕೆ.ಎನ್ ರಾಜಣ್ಣ, ಶರಣಬಸಪ್ಪಗೌಡ ದರ್ಶನಾಪುರ ಅವರು ಶೈಕ್ಷಣಿಕವಾಗಿ ಮಕ್ಕಳಿಗೆ ಶಿಕ್ಷಣದ ಅರಿವು ಹಾಗೂ ಅದರ ಮಹತ್ವದ ಕುರಿತು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಭೀಮಣ್ಣ ಟಿ ನಾಯ್ಕ್, ರಾಜು ಚಿಮ್ಮನಕಟ್ಟಿ ಸೇರಿದಂತೆ ಶಾಲಾ ಕಾಲೇಜಿನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
Recent Comments