Breaking News

ಕಾನೂನೂ ಕಾಪಾಡಲಾರದೇ ಹೆಣ್ಣನ್ನು?

ಹೆಣ್ಣನ್ನು ದೇವತೆ ಎಂದಾದರೂ ಪೂಜಿಸಲಿ, ಭೂಮಿ ಎಂದಾದರೂ ಆರಾಧಿಸಲಿ, ತಾಯಿ ಎನ್ನಲಿ, ಮಗಳೆನ್ನಲಿ ಆಕೆಯ ಶೋಷಣೆ ಮಾತ್ರ ನಿರಂತರವಾಗಿ ನಡೆಯುತ್ತಲೇ ಇದೆ. ಆಕೆಯ ಮೇಲಿನ ದೌರ್ಜನ್ಯ, ಲೈಂಗಿಕ ಶೋಷಣೆ ಹೆಚ್ಚುತ್ತಿದೆ. ಹೆಣ್ಣಿನ ಸಬಲೀಕರಣವಾಗಬೇಕು, ಲಿಂಗ ತಾರತಮ್ಯ ಹೋಗಬೇಕು ಎನ್ನುವ ಮಾತುಗಳು ಬರೀ ಪುಸ್ತಕಕ್ಕೆ ಸೀಮಿತವಾಗಿದೆ. ಆಕೆ ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಹಿನ್ನಡೆಯನ್ನು ಅನುಭವಿಸುತ್ತಿದ್ದಾಳೆ.
ಹೆಣ್ಣಿಲ್ಲದ ಒಂದು ಕುಟುಂಬವನ್ನು, ಒಂದು ಸಮಾಜವನ್ನು ಅಥವಾ ಒಂದು ದೇಶವನ್ನು ಕಲ್ಪನೆ ಮಾಡುವಂತಿಲ್ಲ. ಪ್ರತಿ ಮನೆಯಲ್ಲೂ ಹೆಣ್ಣು ತಾಯಿಯಾಗಿ, ಪತ್ನಿಯಾಗಿ, ಮಗಳಾಗಿ, ಅತ್ತೆ, ಸೊಸೆಯಾಗಿ ವಿವಿಧ ಪಾತ್ರಗಳಲ್ಲಿ ತನ್ನ ಕರ್ತವ್ಯವನ್ನು ನಿಭಾಯಿಸುತ್ತಾಳೆ. ಉದ್ಯೋಗ ಕ್ಷೇತ್ರದಲ್ಲೂ ತಾನು ಯಾರಿಗೂ, ಯಾವುದಕ್ಕೂ ಕಮ್ಮಿ ಇಲ್ಲವೆಂದು ಸಾಬೀತು ಮಾಡಿದ್ದಾಳೆ. ಆಕೆಯ ಇರುವಿಕೆ ಎಲ್ಲೆಡೆಯಲ್ಲೂ ಅನಿವಾರ್ಯವಾದರೂ ಆಕೆಯ ಮೇಲಿನ ದೌರ್ಜನ್ಯ ಏಕೆ ಹೆಚ್ಚಾಗುತ್ತಿದೆ, ಏಕೆ ಹೆಣ್ಣು ಹೆಚ್ಚು ಅಸುರಕ್ಷತೆಗೊಳಗಾಗುತ್ತಿದ್ದಾಳೆ, ಇದನ್ನು ಹೇಗೆ ತಡೆಯಬಹುದು ಎಂಬಿತ್ಯಾದಿ ವಿಚಾರಗಳು ಪ್ರಶ್ನೆಯಾಗಿಯೇ ಉಳಿದಿದೆ.
ಹೆಣ್ಣಿನ ಶೋಷಣೆ ಆಕೆ ತನ್ನ ತಾಯಿಯ ಗರ್ಭದಲ್ಲಿದ್ದಾಗಲೇ ಪ್ರಾರಂಭಗೊಳ್ಳುತ್ತದೆ. ಗರ್ಭದಲ್ಲಿರುವ ಮಗು ಹೆಣ್ಣೆಂದು ತಿಳಿದೊಡನೆ ಆಕೆಯ ಮನೆಯವರು ಅದನ್ನು ಗರ್ಭಪಾತದ ಮೂಲಕ ಮುಗಿಸುವ ಹುನ್ನಾರ ಮಾಡುತ್ತಾರೆ. ಹೆಣ್ಣು ಮಗು ಹುಟ್ಟಿದ್ದರೆ ಅದು ತನಗೆ ಶಾಪವೆಂದೊ, ಮುಂದೆ ತೊಡಕಾಗುವುದೆಂದೊ ಅದನ್ನು ತೆಗೆಸುವ ಪ್ರಯತ್ನ ಪ್ರಾರಂಭವಾಗುತ್ತದೆ. ಭ್ರೂಣಹತ್ಯೆ ನಿಷೇದ ಕಾಯ್ದೆ ಅಡಿಯಲ್ಲಿ ಈ ಹತ್ಯೆಗೆ ಶಿಕ್ಷೆ ಇದ್ದರೂ ಅದು ಜಾರಿಗೆ ಬರುವಲ್ಲಿ ವಿಫಲವಾಗಿದೆ. ಮಗು ಹೆಣ್ಣೋ, ಗಂಡೋ ಎಂಬ ವಿಷಯವನ್ನು ಅದು ಜನಿಸುವ ಮುನ್ನವೇ ತಿಳಿಸಬಾರದೆಂಬ ನಿಯಮವಿದ್ದಾಗಿಯೂ ತೆರೆಮರೆಯಲ್ಲಿ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ. ಭ್ರೂಣಹತ್ಯೆಗೆ ಕಾರಣಕರ್ತರಾಗುವವರ ವಿರುದ್ಧ ಸರ್ಕಾರ ಕಾನೂನೂ ಕ್ರಮ ತೆಗೆದುಕೊಳ್ಳುವಲ್ಲಿ ವಿಫಲವೋ ಅಥವಾ ಸಮಾನತೆಯ ಅರಿವು ಮೂಡಿಸುವಲ್ಲಿ ವಿಫಲವೋ ಎಂಬ ತೀರ್ಮಾನಕ್ಕೆ ಬರುವುದರೊಳಗಾಗಿ ಒಂದು ಹೆಣ್ಣು ಜೀವವೇ ನಿರ್ಜೀವವಾಗುತ್ತದೆ.
ದೈವವಶಾತ್ ಆ ಹೆಣ್ಣುಮಗು ಈ ಪ್ರಪಂಚಕ್ಕೆ ಕಾಲಿಟ್ಟಿತೆನ್ನಿ, ಅದರ ನಿಜವಾದ ಶೋಷಣೆ ಶಿಶುವಿನಿಂದಲೇ ಪ್ರಾರಂಭ. ಮಗುವಿಗೆ ಸತ್ವಯುತ ಆಹಾರದ ಕೊರತೆಯಿಂದಾಗಿ ಪೋಷಣೆ ಸರಿಯಾಗಿ ದೊರೆಯುವುದಿಲ್ಲ. ಮುಂದಿನ ಹಂತ ವಿದ್ಯಾಭ್ಯಾಸ : ಇತ್ತೀಚಿನ ದಿನಗಳಲ್ಲಿ ಹೆಣ್ಣುಮಗುವಿಗೂ ಒಂದು ಹಂತದವರೆಗೆ ವಿದ್ಯಾಭ್ಯಾಸ ದೊರೆಯುತ್ತದೆ. ಆದರೆ ಉನ್ನತ ವ್ಯಾಸಂಗದಲ್ಲಿ ತಾರತಮ್ಯವಿರುತ್ತದೆ. ಹೆಚ್ಚಾಗಿ ಹಳ್ಳಿಯ ಹೆಣ್ಣುಮಕ್ಕಳನ್ನು ಆರ್ಥಿಕ ಕಾರಣಕ್ಕಾಗಿಯೂ, ಸುರಕ್ಷತೆಯ ಕಾರಣಕ್ಕಾಗಿಯೂ ಉನ್ನತ ವ್ಯಾಸಂಗವನ್ನು ಮುಂದುವರಿಸಲು ಪೋಷಕರು ಅನು ಮಾಡುವುದಿಲ್ಲ. ಆಕೆ ಎಷ್ಟೇ ಬುದ್ಧಿವಂತೆಯಾಗಿದ್ದರೂ ಹೆಚ್ಚಿನ ಶಿಕ್ಷಣದ ಕೊರತೆಯಿಂದಾಗಿ ಉತ್ತಮ ಉದ್ಯೋಗವನ್ನು ಹೊಂದಲು, ಆರ್ಥಿಕ ಸಬಲತೆಯನ್ನು ಪಡೆಯಲು ಸಾಧ್ಯವಾಗುವುದಿಲ್ಲ.
ವಿವಾಹ ಹೆಣ್ಣಿಗೆ ಒಂದು ಮಹತ್ವದ ಘಟ್ಟ. ಆಕೆ ವಿವಾಹದ ನಂತರ ತನ್ನೆಲ್ಲಾ ಹಳೆಯ ಸಂಬಂಧಗಳನ್ನು ತೊರೆದು ಗಂಡನ ಮನೆಯ ಹೊಸ ಸಂಬಂಧಗಳಿಗೆ ಹೊಂದಿಕೊಳ್ಳಬೇಕಾಗುತ್ತದೆ. ಅಂತಹ ಸಮಯದಲ್ಲಿ ಆಕೆಗೆ ತನ್ನ ಗಂಡನಿಂದ ಮತ್ತು ಅವರ ಮನೆಯವರಿಂದ ಸಹಕಾರ ತುಂಬಾ ಮುಖ್ಯ. ಆದರೆ ಎಷ್ಟೋ ಮನೆಗಳಲ್ಲಿ ಸಹಕಾರದ ಬದಲು ಕಿರುಕುಳವೇ ಜಾಸ್ತಿ. ವರದಕ್ಷಿಣೆಯ ಕಾರಣದಿಂದ ಎಷ್ಟೋ ಕೊಲೆಗಳು, ಸಾವು, ಹಿಂಸೆ ಹಾಗೂ ವಿಚ್ಛೇದನೆಗಳು ನಡೆದಿದೆ. ವರದಕ್ಷಿಣೆ ಕಮ್ಮಿಯಾಯಿತು ಎಂದು, ಇನ್ನೂ ಹಣ ಬೇಕೆಂದೊ ಹೆಂಡತಿಯನ್ನು ತವರಿಗೆ ಅಟ್ಟುತ್ತಾರೆ. ಆಕೆ ನಿರಾಕರಿಸಿದಲ್ಲಿ ಆಕೆಯ ಮೇಲೆ ದೌರ್ಜನ್ಯವೆಸಗುತ್ತಾರೆ. ಇದು ಆಕೆಗೆ ಬೆಂಕಿ ಹಚ್ಚಿ ಸಾವಿಗೆ ದಬ್ಬುವವರೆಗೂ ಹೋಗಬಹುದು. ವರದಕ್ಷಿಣೆ ನಿಷೇದ ಕಾಯಿದೆ ಜಾರಿಗೆ ಬಂದಿದ್ದರೂ ಇಂದಿನವರೆಗೂ ಅದು ಒಂದು ಪಿಡುಗಾಗಿ ವಿವಾಹಿತ ಮಹಿಳೆಯನ್ನು ಕಾಡುತ್ತಿದೆ. ವರದಕ್ಷಿಣೆ ಕೊಟ್ಟವರಿಗೂ, ತೆಗೆದುಕೊಂಡವರಿಗೂ ಈ ಕಾಯ್ದೆಯಡಿಯಲ್ಲಿ ಶಿಕ್ಷೆ ಇದ್ದರೂ ಕೂಡ ತಮ್ಮ ಹೆಣ್ಣು ಮಕ್ಕಳು ಸುಖವಾಗಿರಬೇಕೆಂಬ ದೃಷ್ಟಿಯಿಂದ ಹೆಣ್ಣುಮಕ್ಕಳ ಪೋಷಕರು ವರದಕ್ಷಿಣೆ ಕೊಡುತ್ತಾರೆ. ಆನಂತರದಲ್ಲಿ ಏನಾದರೂ ಅನಾಹುತವಾದಲ್ಲಿ ವರದಕ್ಷಿಣೆ ಕಿರುಕುಳವೆಂದು ದೂರು ನೀಡುತ್ತಾರೆ. ವರದಕ್ಷಣೆ ಕೊಡುವ ಮೊದಲೇ ಪಾಲಕರು ಎಚ್ಚೆತ್ತುಕೊಂಡು ಕಾನೂನನ್ನು ಸಮಯೋಚಿತವಾಗಿ ಪ್ರಯೋಗಿಸಿದಲ್ಲಿ ಈ ದೌರ್ಜನ್ಯವನ್ನು ತಪ್ಪಿಸಬಹುದಲ್ಲವೇ?
ಉದ್ಯೋಗ ಕ್ಷೇತ್ರದಲ್ಲೂ ಹೆಣ್ಣಿನ ಶೋಷಣೆ ಅವಿರತವಾಗಿ ನಡೆಯುತ್ತಿದೆ. ಉದ್ಯೋಗ ಪಡೆಯುವಲ್ಲಿ ಅಥವಾ ಬಡ್ತಿ ಹೊಂದುವಲ್ಲಿ ಆಕೆ ಲೈಂಗಿಕ ಶೋಷಣೆಗೆ ಒಳಗಾಗುವ ಪರಿಸ್ಥಿತಿ ಇದೆ. ಎಷ್ಟೋ ಹೆಣ್ಣುಮಕ್ಕಳು ಈ ರೀತಿಯ ಕಿರುಕುಳವನ್ನು ತಡೆಯಲಾರದೆ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳಿವೆ, ಉದ್ಯೋಗ ತೊರೆದವರಿದ್ದಾರೆ, ಅಲ್ಲದೆ ಮಾನಸಿಕ ಖಿನ್ನತೆಗೆ ಒಳಗಾದವರೆಷ್ಟೋ! ಉದ್ಯೋಗ ಕ್ಷೇತ್ರಗಳಲ್ಲಿ ಭದ್ರತೆಯನ್ನು ಒದಗಿಸುವ ಸಲುವಾಗಿ 2013 ರಲ್ಲಿ ಕಾನೂನೂ ಜಾರಿಗೆ ಬಂದಿದೆ. ಈ ಕಾಯ್ದೆಯ ಪ್ರಕಾರ ಪ್ರತಿ ಉದ್ಯೋಗ ಕ್ಷೇತ್ರದಲ್ಲೂ ಒಂದು ಆಂತರೀಕ ಸಮಿತಿಯನ್ನು ರಚಿಸಿ ಲೈಂಗಿಕ ಶೋಷಣೆಗೆ ಒಳಪಟ್ಟ ಹೆಣ್ಣುಮಕ್ಕಳ ದೂರನ್ನು ಸ್ವೀಕರಿಸಿ, ಪರಿಶೀಲನೆ ನಡೆಸಿ ತ್ವರಿತವಾಗಿ ಕ್ರಮ ತೆಗೆದುಕೊಳ್ಳಬೇಕೆಂಬ ಹಾಗೂ ಆಕೆಗೆ ಸುರಕ್ಷಿತವಾಗಿ ಕಾರ್ಯ ನಿರ್ವಹಿಸುವ ವಾತಾವರಣ ನಿರ್ಮಿಸಬೇಕೆಂಬ ನಿಯಮವಿದೆ. ಆದರೆ ಪ್ರತಿದಿನ, ಪ್ರತಿಕ್ಷಣ ಉದ್ಯೋಗ ಕ್ಷೇತ್ರದಲ್ಲಿ ಹೆಣ್ಣಿನ ಲೈಂಗಿಕ ಶೋಷಣೆ ನಡೆಯುತ್ತಲೇ ಇದೆ. ಶೇ.30% ಮಹಿಳೆಯರು ತಮ್ಮ ಶೋಷಣೆಯ ವಿರುದ್ಧ ಭಯದಿಂದಾಗಿ ಧ್ವನಿ ಎತ್ತುವುದೇ ಇಲ್ಲ. ಮೂರು ಜನ ಮಹಿಳೆಯರಲ್ಲಿ ಕನಿಷ್ಠ ಇಬ್ಬರು ಶೋಷಣೆಗೆ ಒಳಗಾಗುತ್ತಾರೆ. ಹಾಗಾಗಿಯೇ ಶೇ.80% ಮಹಿಳೆಯರು ತಮ್ಮ ಸುರಕ್ಷತೆಯ ಬಗ್ಗೆ ಭಯ ಹೊಂದಿದ್ದಾರೆ. ಆರ್ಥಿಕ ಕಾರಣಕ್ಕಾಗಿಯೇ ಅಥವಾ ಇನ್ನಾವುದೋ ಕಾರಣಕ್ಕಾಗಿಯೋ ಉದ್ಯೋಗ ಬಿಡಲಾರದ ಹೆಣ್ಣಮಕ್ಕಳು ನಿರಂತರವಾಗಿ ಲೈಂಗಿಕ ಶೋಷಣೆಗೆ ಒಳಗಾಗುತ್ತಿದ್ದಾರೆ.
ರಕ್ಷಕರೇ ಭಕ್ಷಕರಾದಾಗ :
ಪಾಲಕರು ತಮ್ಮ ಮಕ್ಕಳ ಪರಿಪೂರ್ಣ ಬೆಳವಣಿಗೆಗೆ ಜವಾಬ್ದಾರರು. ಆದರೆ ತಂದೆಯೇ ತನ್ನ ಮಗಳ ಮೇಲೆ ಅತ್ಯಚಾರವೆಸಗಿದ ಪ್ರಕರಣಗಳು ಎಷ್ಟಿಲ್ಲ? ನಾಲ್ಕು ಗೋಡೆಗಳ ಮಧ್ಯೆ ನಡೆಯುವ ಈ ವಿಷಯ ಆ ಹೆಣ್ಣುಮಗಳ ಮನಸ್ಸಿನ ಮೇಲೆ ಬೀರುವ ಪ್ರಭಾವ ಅತ್ಯಂತ ಭಯಂಕರ. ಬಹಳಷ್ಟು ಸಮಯದಲ್ಲಿ ಆಕೆ ಗರ್ಭವತಿಯಾದಾಗಲೇ ವಿಷಯ ಬಹಿರಂಗವಾಗುತ್ತದೆ. ತಂದೆಯೇ ಅಲ್ಲದೆ ಸಹೋದರ, ಆತ್ಮೀಯ ಸ್ನೇಹಿತರಿಂದ ಅತ್ಯಾಚಾರಕ್ಕೆ ಒಳಪಟ್ಟ ಹೆಣ್ಣಮಕ್ಕಳು ಲೆಕ್ಕವಿಲ್ಲದಷ್ಟು. ಒಂದು ವರದಿಯ ಪ್ರಕಾರ ಪ್ರತಿ 47 ನಿಮಿಷಗಳಿಗೊಮ್ಮೆ ಒಂದು ಹೆಣ್ಣುಮಗುವಿನ ಅತ್ಯಾಚಾರವಾಗುತ್ತದೆ. ತಮ್ಮ ಮನೆಯಲ್ಲಿಯೇ ಹೆಣ್ಣಿಗೆ ಸುರಕ್ಷತೆ ಇಲ್ಲದಿದ್ದರೆ ಆಕೆ ಹೋಗುವುದಾದರೂ ಎಲ್ಲಿ ?
ಶಾಲಾ ಕಾಲೇಜುಗಳು ದೇವಾಲಯವಿದ್ದಂತೆ. ಆದರೆ ಬಹಳಷ್ಟು ಶಿಕ್ಷಕರು ದೇವರಾಗುವ ಬದಲು ರಾಕ್ಷಸರಾಗುತ್ತಿದ್ದಾರೆ. ಶಾಲೆಗಳಲ್ಲಿ ಚಿಕ್ಕ ಚಿಕ್ಕ ಹೆಣ್ಣಮಕ್ಕಳ ಮೇಲೆ ಅತ್ಯಾಚಾರ ಲೈಂಗಿಕ ಶೋಷಣೆಯ ವಿಚಾರಗಳು ಪ್ರತಿನಿತ್ಯ ಮಾಧ್ಯಮಗಳಲ್ಲಿ ಪ್ರಕಟವಾಗುತ್ತದೆ. ವಿದ್ಯೆ ಕಲಿಸುವ ಗುರು ಅತ್ಯಾಚಾರಿಯಾದರೆ ಶಿಕ್ಷಣಕ್ಕೆ ಎಲ್ಲಿದೆ ಬೆಲೆ. ಎಷ್ಟೋ ಹೆಣ್ಣಮಕ್ಕಳು ಶಿಕ್ಷಕರ ಭಯದಿಂದಾಗಿ ಈ ವಿಷಯವನ್ನು ಯಾರೊಂದಿಗೂ ಹಂಚಿಕೊಳ್ಳಲು ಭಯ ಪಡುತ್ತಾರೆ. ಎಷ್ಟೋ ಮಕ್ಕಳಿಗೆ ತಾವು ಲೈಂಗಿಕ ಶೋಷಣೆಗೆ ಒಳಪಟ್ಟಿರುವ ವಿಷಯವೂ ಕೂಡ ಅರಿವಿಗೆ ಬಂದಿರುವುದಿಲ್ಲ.
ತಮ್ಮ ಮೇಲೆ ಆದ ಶೋಷಣೆಯನ್ನು ಪೊಲೀಸರಿಗೆ ದೂರು ನೀಡಲು ಹೋದ ಎಷ್ಟೋ ಸಂದರ್ಭಗಳಲ್ಲಿ ಆಕೆ ಪೊಲೀಸ್ ಠಾಣೆಯಲ್ಲಿಯೇ ಲೈಂಗಿಕ ಶೋಷಣೆಗೆ ಒಳಗಾಗಿದ್ದಿದೆ. ಹಾಗಾಗಿ ಎಷ್ಟೋ ಮಂದಿ ಠಾಣೆಗೆ ಹೋಗಿ ದೂರು ನೀಡಲು ಹಿಂಜರಿಯುವ ಪರಿಸ್ಥಿತಿ ಬಂದಿದೆ. ಅತ್ಯಾಚಾರಿಗಳಿಗೆ, ಲೈಂಗಿಕ ಶೋಷಣೆ ಮಾಡುವವರಿಗೆ ಕಾನೂನಿನ ಅಡಿಯಲ್ಲಿ ಶಿಕ್ಷೆ ಇದ್ದರೂ ಕೂಡ ಅದು ಪರಿಣಾಮಕಾರಿಯಾಗಿ ಜಾರಿಗೆ ಬರುವಲ್ಲಿ ವಿವಿಧ ಕಾರಣಗಳಿಂದ ವಿಫಲತೆ ಕಂಡಿದೆ.
ಒಟ್ಟಾರೆಯಾಗಿ ಹೆಣ್ಣು ಎಲ್ಲೂ ಸುರಕ್ಷಿತವಲ್ಲ. ಮನೆಯಲ್ಲಿ, ರಸ್ತೆಯಲ್ಲಿ, ಬಸ್ಸು, ರೈಲುಗಳಲ್ಲಿ, ಉದ್ಯೋಗ ಸ್ಥಳದಲ್ಲಿ ಪದೇ ಪದೇ ಲೈಂಗಿಕ ಶೋಷಣೆಗೆ ಒಳಗಾಗುತ್ತಾಳೆ. ಪ್ರತಿ 44 ನಿಮಿಷಗಳಿಗೊಮ್ಮೆ ಒಂದು ಹೆಣ್ಣು ಮಗುವಿನ ಅಪಹರಣ, 47 ನಿಮಿಷಗಳಿಗೊಮ್ಮೆ ಒಂದು ಅತ್ಯಾಚಾರ ಹಾಗೂ ಪ್ರತಿದಿನ 17 ವರದಕ್ಷಿಣೆಯ ಸಾವು ನಡೆಯುತ್ತದೆ. ಇದಲ್ಲದೆ ಹೆಣ್ಣುಮಕ್ಕಳ ಮಾರಾಟ ಒಂದು ದಂಧೆಯಾಗಿ ಪರಿಣಮಿಸಿದೆ. ಹೆಣ್ಣುಮಕ್ಕಳನ್ನು ವೇಶ್ಯಾವಾಟಿಕೆಗಾಗಿಯೋ, ಭಿಕ್ಷಾಟನೆಗಾಗಿಯೋ ಬಳಸಿಕೊಳ್ಳುವುದು ಸಾಮಾನ್ಯವಾಗಿದೆ. ಇದನ್ನು ತಡೆಗಟ್ಟಲು ಸಾಕಷ್ಟು ಕಾನೂನುಗಳಿದ್ದರೂ ಈ ದಂಧೆಗಳು ನಿರಾತಂಕವಾಗಿ ನಡೆಯುತ್ತಿದೆ.
ಹೆಣ್ಣಿನ ರಕ್ಷಣೆಗಾಗಿ ಸಾಕಷ್ಟು ಕಾನೂನುಗಳು ಇದ್ದಾಗಿಯೂ ಅವುಗಳನ್ನು ಸಫಲವಾಗಿ ಜಾರಿಗೊಳಿಸುವಲ್ಲಿ ಸರ್ಕಾರದ ವಿಫಲತೆಯು ಒಂದು ಕಾರಣವಾಗಿದೆ. ಹೆಣ್ಣುಮಕ್ಕಳಿಗೆ ವಿದ್ಯಾಭ್ಯಾಸದ ಕೊರತೆ, ಆರ್ಥಿಕವಾಗಿ ಸಬಲತೆಯಿಲ್ಲದಿರುವಿಕೆ, ಸ್ವಂತವಾಗಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳದಾರದಂತಹ ಪರಿಸ್ಥಿತಿ ಆಕೆಯನ್ನು ಹೆಚ್ಚು ಅಸುರಕ್ಷಿತಳಾಗಿ ಮಾಡುತ್ತದೆ. ಪುರುಷ ಪ್ರಧಾನ ಸಮಾಜದಲ್ಲಿ ಒಬ್ಬ ಹೆಣ್ಣು ಸ್ವತಂತ್ರವಾಗಿ ಎಲ್ಲೂ ಓಡಾಡದ, ಬದುಕುವ, ಉದ್ಯೋಗ ಮಾಡುವ ಹಾಗೂ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳಲಾರದ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾಳೆ. ಇಂಥಹ ಸಮಯದಲ್ಲಿ ಆಕೆ ತನ್ನನ್ನು ತಾನು ರಕ್ಷಿಸಿಕೊಳ್ಳಬೇಕಾದ ಪರಿಸ್ಥಿತಿ ಏರ್ಪಟ್ಟಿದೆ. ಬಾಲ್ಯದಿಂದಲೇ ತನ್ನನ್ನು ರಕ್ಷಿಸಿಕೊಳ್ಳುವ ವಿಧಾನಗಳನ್ನು ಕಲಿಸಿದಲ್ಲಿ ಆಕೆಯ ಮೇಲಿನ ದೌರ್ಜನ್ಯ ಕಡಿಮೆಯಾಗಬಹುದು. ಹಾಗೆಯೇ ಅಂತರ್ಜಾಲದ ಅನುಕೂಲ, ಅನಾನುಕೂಲಗಳ ಬಗ್ಗೆ ತಿಳುವಳಿಕೆ ನೀಡುವ ಅಗತ್ಯವಿದೆ. ಎಲ್ಲಕ್ಕಿಂತ ಹೆಚ್ಚಾಗಿ ಮಹಿಳೆಯ ಮೇಲೆ ದೌರ್ಜನ್ಯ ಎಸಗುವ ಪರಿಸ್ಥಿತಿ ಮಧ್ಯಪಾನದಿಂದ ಉಂಟಾದಾಗ ಅದನ್ನು ತಡೆಗಟ್ಟುವ ಅಗತ್ಯವಿದೆ. ಒಟ್ಟಾರೆಯಾಗಿ ಕಾನೂನಿನ ಕಟ್ಟುನಿಟ್ಟಿನ ಅನುಸರಣೆಯಿಂದ, ಸಮಾಜದಲ್ಲಿ ಕಾನೂನಿನ ಅರಿವು ಮೂಡಿಸುವುದರಿಂದ, ಹೆಣ್ಣಮಕ್ಕಳನ್ನು ಗೌರವದಿಂದ ಕಾಣುವ ಸಂಪ್ರದಾಯವನ್ನು ಪ್ರತಿ ಕುಟುಂಬದಲ್ಲೂ ಕಲಿಸಿದಲ್ಲಿ ನಮ್ಮ ಸಂವಿಧಾನದಲ್ಲಿ ತಿಳಿಸಲಾದ ಸಮಾನತೆಯನ್ನು ನಿಜವಾದ ಅರ್ಥದಲ್ಲಿ ಪಡೆಯಬಹುದಾಗಿದೆ.

 

DR. Rohini

Leave a Reply

Your email address will not be published. Required fields are marked *

*

Tags

*ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ* *9916660399* Accident Bangalore Bhadravathi BJP B S yaduvurappa B Y Ragavendra Congress Corona Corona report Corona virus Covid 19 Gajanur dam Hosanagara JDS K S Eshwarappa MP election M P Election News NSUI Sagara Shikaripura Shimoga shimoga district Shivammoga Shivamoga Shivamogga Shivamogga NSUI SP shivamogga ಒಮಿಕ್ರಾನ್ ಸೋಂಕಿತರ ಸಂಖ್ಯೆ 578 ಕ್ಕೆ ಏರಿಕೆ. ಕಾಂಗ್ರೆಸ್ ಕೊರೊನಾ ಕೋಟೆ ಶ್ರೀ ಮಾರಿಕಾಂಬ ಜಾತ್ರೆ : ಇಂದು ಗಾಂಧಿಬಜಾರ್ ನಲ್ಲಿ ಚಪ್ಪರ ಪೂಜೆ.‌ ಚಾರುಲತಾ ಸೋಮಲ್‌ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಜಿಲ್ಲೆಯಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 791 ಕೊರೊನಾಗೆ 7 ಜನ ಬಲಿ ಜಿಲ್ಲೆಯಲ್ಲಿ ಎರಡಂಕಿಗೆ ಇಳಿದ ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 38 ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ. ನಾಳೆ ನಗರದಲ್ಲಿ ವಿದ್ಯುತ್ ವ್ಯತ್ಯಯ. ಮೆಗ್ಗಾನ್ ಆಸ್ಪತ್ರೆ ಶಿವಮೊಗ್ಗ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸಚಿವ ಕೆ.ಎಸ್.ಈಶ್ವರಪ್ಪ ಸಿಗಂದೂರು

Recent Comments