ಗಜ’ ಚಂಡಮಾರುತದ ಅಬ್ಬರಕ್ಕೆ 13 ಮಂದಿ ಬಲಿಯಾಗಿದ್ದಾರೆ. ಇಂದು ಬೆಳಗ್ಗಿನ ಜಾವವೇ ತಮಿಳುನಾಡು ಹಾಗೂ ಪುದುಚೆರಿಯ ತೀರವನ್ನು ತಲುಪಿದ ‘ಗಜ’ದ ಅಬ್ಬರಕ್ಕೆ ಜನತೆ ನಲುಗಿ ಹೋಗಿದ್ದಾರೆ. ಎರಡೂ ರಾಜ್ಯಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ಈಗಾಗಲೇ ಸುಮಾರು 76 ಸಾವಿರ ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನೆ ಮಾಡಲಾಗಿದೆ. ಇನ್ನು, ಇಂದು ಬಹುತೇಕ ಜಿಲ್ಲೆಗಳಲ್ಲಿ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಕಡಲು ತೀರದ ಪ್ರದೇಶಗಳಾದ ನಾಗಪಟ್ಟಿನಂ, ತಿರುವರೂರು, ತಂಜಾವೂರಿನಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿದ್ದು, ವಿದ್ಯುತ್ ಸಮಸ್ಯೆಯುಂಟಾಗಿದೆ. ಅಲ್ಲದೆ, ತಮಿಳುನಾಡಿನ ಕಡಲೂರು, ನಾಗಪಟ್ಟಿನಂ, ತೋಂಡಿ ಹಾಗೂ ಪಂಬನ್ ಹಾಗೂ ಪುದುಚೆರಿಯಲ್ಲಿ ಭಾರಿ ಮಳೆಯಾಗುತ್ತಿರುವ ವರದಿಗಳಾಗಿವೆ.
ಇನ್ನು, ತಮಿಳುನಾಡು ವಿಪತ್ತು ನಿರ್ವಹಣಾ ಮಂಡಳಿಯ ಕಾರ್ಯವನ್ನು ಡಿಎಂಕೆ ಅಧ್ಯಕ್ಷ ಸ್ಟಾಲಿನ್ ಶ್ಲಾಘಿಸಿದ್ದಾರೆ. ಸೈಕ್ಲೋನ್ ಗಜ ರಾಜ್ಯಕ್ಕೆ ಪ್ರವೇಶ ಮಾಡುವ ಮುನ್ನವೇ ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಿದ್ದಕ್ಕೆ ಶ್ಲಾಘನೆ ಮಾಡಿದ್ದಾರೆ. ಅಲ್ಲದೆ, ಚಂಡಮಾರುತದಿಂದ ತೊಂದರೆಗೊಳಗಾಗಿರುವ ಜನತೆಗೆ ನೆರವಾಗಲು ತನ್ನ ಪಕ್ಷದ ಕಾರ್ಯಕರ್ತರಿಗೆ ಸೂಚಿಸಿದ್ದಾರೆ.
ಸಮುದ್ರ ತೀರದಲ್ಲಿ ಯಾವುದೇ ಮೀನುಗಾರರು ತೊಂದರೆಯಿಂದ ಸಿಲುಕಿಕೊಂಡಿಲ್ಲ. ನಾವು ಈಗಾಗ್ಲೇ ಅನೇಕ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಮೀನುಗಾರಿಕಾ ಸಚಿವ ಜಯಕುಮಾರ್ ಹೇಳಿದ್ದಾರೆ.
ಚಂಡಮಾರುತದ ಅಬ್ಬರಕ್ಕೆ 10 ಪುರುಷರು, 3 ಮಹಿಳೆಯರು ಸೇರಿ 13 ಜನ ಮೃತಪಟ್ಟಿದ್ದು, ಸಾವಿಜನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಈ ಪೈಕಿ, ತಂಜಾವೂರಿನಲ್ಲಿ 4, ಪುದುಕೊಟ್ಟೈ ಹಾಗೂ ಕಡಲೂರಿನಲ್ಲಿ 3, ತಿರುವರೂರಿನಲ್ಲಿ ಇಬ್ಬರು ಹಾಗೂ ತಿರುಚ್ಚಿಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ.
ಇನ್ನು, ಗಜ ಚಂಡಮಾರುತದಿಂದ ಉಂಟಾಗಿರುವ ಪರಿಣಾಮಗಳ ಬಗ್ಗೆ ಹಾಗೂ ತೊಂದರೆಗಳ ಬಗ್ಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ತಮಿಳುನಾಡು ಸಿಎಂ ಪಳನಿಸ್ವಾಮಿ ಜತೆ ಮಾತುಕತೆ ನಡೆಸಿದ್ದಾರೆ.
ಗಜ ಚಂಡಮಾರುತದಿಂದ ಬಲಿಯಾದ ಸಂತ್ರಸ್ಥ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರವನ್ನು ತಮಿಳುನಾಡು ಸರಕಾರ ಘೋಷಿಸಿದೆ. ಅಲ್ಲದೆ, ಗಂಭೀರವಾಗಿ ಗಾಯಗೊಂಡವರಿಗೆ 1 ಲಕ್ಷ ರೂ. ಹಾಗೂ ಸಣ್ಣ ಪುಟ್ಟ ಗಾಯಗೊಳಗಾಗಿರುವವರಿಗೆ 25 ಸಾವಿರ ರೂ. ನೆರವು ನೀಡುವುದಾಗಿ ಸಿಎಂ ಘೋಷಿಸಿದ್ದಾರೆ.
ಸಂಗ್ರಹ.
Recent Comments