Breaking News

ಕಾರ್ಮಿಕರ ದಿನಾಚರಣೆಯ ಹಿನ್ನಲೆ ಮತ್ತು ಇತಿಹಾಸ..

Cnewstv.in / 01.05.2022 / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಕಾರ್ಮಿಕರ ದಿನಾಚರಣೆಯ ಹಿನ್ನಲೆ ಮತ್ತು ಇತಿಹಾಸ..

ಭಾರತ ಸೇರಿದಂತೆ ಪ್ರಪಂಚದ ಹಲವು ದೇಶಗಳಲ್ಲಿ ಕಾರ್ಮಿಕ ಸಂಘಗಳು ಮೇ 1 ರಂದು ‘ಅಂತರರಾಷ್ಟ್ರೀಯ ಕಾರ್ಮಿಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಪ್ರಪಂಚದ ಹಲವೆಡೆ ಮೇ 1 ರಂದು ಸರ್ಕಾರಿ ರಜೆಯನ್ನು ಘೋಷಿಸಲಾಗಿದೆ.

1886ರ ವರ್ಷದ ಮೇ 4ರಂದು ಚಿಕಾಗೋದ, ಇಲಿನಾಯ್ಸ್ ಪ್ರದೇಶದ ಹೇ ಮಾರ್ಕೆಟ್ ಎಂಬಲ್ಲಿ ಕಾರ್ಮಿಕರ ಮೇಲೆ ನಡೆದ ದಮನಕಾರಿ ಘಟನೆಯನ್ನು ಈ ಆಚರಣೆ ಹಿನ್ನೆಲೆಯಾಗಿ ಇಟ್ಟುಕೊಂಡಿವೆ.

ಕಾರ್ಮಿಕ ಪ್ರಭುತ್ವದ ಶುಭಯುಗದ ಉದಯದ ಕುರುಹಾಗಿ ಮೇ 1ರಂದು ಉತ್ಸವಾಚರಣೆ ಮಾಡಬೇಕೆಂದು ರಾಬರ್ಟ್ ಓವೆನ್ ಸೂಚಿಸಿದ್ದ. ಆದರೆ ವಾಸ್ತವವಾಗಿ 1889ಕ್ಕಿಂತ ಮುಂಚೆ ಮೇ ದಿನಾಚರಣೆ ಮಾಡಿದ್ದಕ್ಕೆ ಆಧಾರಗಳು ದೊರಕುವುದಿಲ್ಲ. ಆ ವರ್ಷ ಪ್ಯಾರಿಸಿನಲ್ಲಿ ಸಮಾವೇಶ ಗೊಂಡಿದ್ದ ಸಮಾಜವಾದಿ ಅಂತರರಾಷ್ಟ್ರೀಯದ ಪ್ರಥಮ ಅಧಿವೇಶನದಲ್ಲಿ ಮೇ 1ನೆಯ ದಿನಾಂಕವನ್ನು (ಅದು ವಾರದ ಯಾವ ದಿನವೇ ಬರಲಿ) ವಾರ್ಷಿಕ ಅಂತರ ರಾಷ್ಟ್ರೀಯ ಉತ್ಸವದಿನವೆಂದು ಆಚರಿಸಬೇಕೆಂದು ನಿರ್ಧರಿಸಲಾಯಿತು. ಮೇ 1ರಂದು ಸಾರ್ವಜನಿಕ ರಜಾದಿನವೆಂದು ಘೋಷಿಸಬೇಕೆಂದು ಒತ್ತಾಯಪಡಿಸಲು ನೇರ ಕ್ರಮ ಕೈಗೊಳ್ಳಬೇಕೆಂದೂ ನಿರ್ಣಯಿಸಲಾಯಿತು.

ಮೇ ದಿನಾಚರಣೆಯಲ್ಲಿ ಭಾಗವಹಿಸಿದ ಮೊಟ್ಟಮೊದಲಿನ ಭಾರತೀಯ ಕಾರ್ಮಿಕರು ಇಂಗ್ಲೆಂಡಿನಲ್ಲಿದ್ದ ಭಾರತೀಯ ನಾವಿಕರು. ಭಾರತಕ್ಕೆ ಸ್ವಾತಂತ್ರ್ಯ ನೀಡಬೇಕೆಂಬ ಘೋಷಣೆಯನ್ನೊಳಗೊಂಡ ಪ್ರದರ್ಶನಚಿತ್ರಗಳನ್ನು ಹಿಡಿದು ಮೆರವಣಿಗೆಯಲ್ಲಿ ಅವರು ಹೈಡ್ ಪಾರ್ಕಿನ ಮೇ ದಿನದ ಉತ್ಸವಸಭೆಗೆ ಹೋದರು (1925). ಭಾರತದಲ್ಲಿ 1927 ರಿಂದೀಚೆಗೆ ಪ್ರತಿವರ್ಷವೂ ಕಾರ್ಮಿಕರು ಈ ದಿನವನ್ನಾಚರಿಸುತ್ತಿದ್ದಾರೆ. ಭಾರತದಲ್ಲಿ ಈ ಉತ್ಸವದಲ್ಲಿ ಭಾಗವಹಿಸುವವರು ಕಾರ್ಮಿಕ ಸಂಘಗಳವರು, ಸಮಾಜವಾದಿಗಳು ಮತ್ತು ಕೆಲವು ಬುದ್ಧಿ ಜೀವಿಗಳು ಮಾತ್ರ. 1927ರಲ್ಲಿ ಮುಂಬಯಿಯಲ್ಲಿ ನಡೆದ ಉತ್ಸವದಲ್ಲಿ ಅನೇಕ ಕಾರ್ಮಿಕ ಮುಖಂಡರು ಭಾಗವಹಿಸಿದ್ದರು. ಅದೇ ವರ್ಷ ಕಲ್ಕತ್ತದಲ್ಲಿ ಬಂಗಾಳ ಪ್ರದೇಶ ಕಾರ್ಮಿಕ ಸಂಘ ಕಾಂಗ್ರೆಸ್ ಮೇ ದಿನವನ್ನಾಚರಿಸಿದಾಗ ಪೋಲೀಸರು ಅನೇಕ ನಿರ್ಬಂಧಕಾಜ್ಞೆಗಳನ್ನು ವಿಧಿಸಿದರೆಂದು ತಿಳಿದು ಬರುತ್ತದೆ. 1928 ರಿಂದ 1934ರ ವರೆಗೆ ಆ ಉತ್ಸವಾಚರಣೆಯ ದಿನದಂದು ದಿನಾಚರಣೆಯ ಕಾರ್ಮಿಕರ ಅನೇಕ ಮುಷ್ಕರಗಳು ನಡೆದುವು.

ಎರಡನೆಯ ಮಹಾಯುದ್ಧಾನಂತರ ಆ ದಿನವನ್ನು ಹೆಚ್ಚು ವ್ಯಾಪಕವಾಗಿ ಆಚರಿಸಲು ಪ್ರಾರಂಭವಾಯಿತು. ಕಾರ್ಮಿಕರೂ ಕಾರ್ಮಿಕ ಸಂಘಗಳೂ ಅಧಿಕ ಸಂಖ್ಯೆಯಲ್ಲಿ ಭಾಗವಹಿಸತೊಡಗಿದವು. 1969ರಲ್ಲಿ ಭಾರತ ರಾಷ್ಟ್ರೀಯ ಕಾರ್ಮಿಕ ಸಂಘಗಳ ಕಾಂಗ್ರೆಸ್ ಒಂದನ್ನು ಬಿಟ್ಟು ಉಳಿದೆಲ್ಲ ಕಾರ್ಮಿಕ ಸಂಘಗಳೂ ಒಟ್ಟಾಗಿ, ತಮ್ಮ ಹಕ್ಕುಗಳನ್ನು ಸಾಧಿಸಲು ಭಾರಿ ಮೆರವಣಿಗೆಯಲ್ಲಿ ಪಾರ್ಲಿಮೆಂಟ್ ಭವನದ ಬಳಿಗೆ ಮೆರವಣಿಗೆಯಲ್ಲಿ ಹೋಗಿ ಪ್ರದರ್ಶನ ನಡೆಸಿದುವು.

ಇದನ್ನು ಒದಿ‌ : https://cnewstv.in/?p=9636

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.

Leave a Reply

Your email address will not be published. Required fields are marked *

*