Cnewstv | ಶಿವಮೊಗ್ಗ | ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಜನರೇ ಮೆಚ್ಚಿದ ‘ಬಂಗಾರ’ದ ಮನುಷ್ಯ……
ಬಡವರ ಜೀವನಕ್ಕೆ ಆಧಾರವಾದ ಕನಸುಗಾರ…
ರಾಜ್ಯಕಂಡ ವರ್ಣರಂಜಿತ ರಾಜಕಾರಣಿ,ಬಡವರ ಬಂಧು,ಹಿಂದುಳಿದ ವರ್ಗಗಳ ನೇತಾರ,ಹಲವು ಪಕ್ಷಗಳ ಸೃಷ್ಟೀಕರ್ತ,ಬರದಿಂದ ಕಂಗೆಟ್ಟ ಜನರಿಗೆ ಅನ್ನ ಹಾಕಿದ ಅಪ್ಪಟ್ಟ ಬಂಗಾರದ ಮನುಷ್ಯ ಮಾಜಿ ಮುಖ್ಯಮಂತ್ರಿ ಸಾರೇಕೊಪ್ಪ ಬಂಗಾರಪ್ಪ.
ಹೌದು, ದೇವರಾಜ ಅರಸು ನಂತರ ನಾಡಿನ ಅಸಂಖ್ಯಾತ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಕೆಲಸ ಮಾಡಿದವರು ಸಾರೇಕೊಪ್ಪ ಬಂಗಾರಪ್ಪನವರು. ಐದು ದಶಕಗಳ ಕಾಲ ರಾಜಕೀಯ ನಡೆಸಿದ ಅವರು ಸೋಲಿಲ್ಲದ ಸರದಾರ ಎಂಬ ಹೆಗ್ಗಳಿಕೆ ಹೊಂದಿದವರು.
ಸಮಾಜವಾದಿ ನಾಯಕ ಶಾಂತವೀರ ಗೋಪಾಲಗೌಡರ ಶಿಷ್ಯರಾಗಿ ೧೯೬೨ ರಲ್ಲಿ ರಾಜಕೀಯ ವಲಯಕ್ಕೆ ಪಾದಾರ್ಪಣೆ ಮಾಡಿದರು.ಹಠದ ರಾಜಕಾರಣಿ ಎಂದೇ ಗುರುತಿಸಿಕೊಂಡಿದ್ದ ಸಾರೇಕೊಪ್ಪ ಬಂಗಾರಪ್ಪ ರಾಜಕಾರಣದಲ್ಲಿ ಹಲವಾರು ಪ್ರಥಮಗಳನ್ನು ದಾಖಲಿಸಿದ್ದಾರೆ. ಅತಿ ಹೆಚ್ಚು ಪಕ್ಷ ಸ್ಥಾಪನೆಯಿಂದ ಹಿಡಿದು ಶಾಸಕರನ್ನು ಸೃಷ್ಟಿಸುವ ಕಾರ್ಖಾನೆ ಎಂಬ ಬಿರುದನ್ನು ಸಹ ಪಡೆದವರು.
ಸಮಾಜವಾದಿ ಚಳವಳಿಯಲ್ಲಿ ಗುರುತಿಸಿಕೊಂಡ ಯುವಕ ಬಂಗಾರಪ್ಪ 1967 ರಲ್ಲಿ ಮೊದಲ ಬಾರಿಗೆ ಸೊರಬದಲ್ಲಿ ಸೋಷಲಿಸ್ಟ್ ಪಾರ್ಟಿಯಿಂದ ಸ್ಪರ್ಧಿಸಿದರು. ಮತ್ತೆ ರಾಜಕೀಯವಾಗಿ ತಿರುಗಿ ನೋಡಲೇ ಇಲ್ಲ. ತಮ್ಮ ರಾಜಕೀಯ ಜೀವನದ ಕೊನೆಯವರೆಗೂ ಜನಪ್ರತಿನಿಧಿಯಾಗಿಯೇ ಇದ್ದರೂ ಅಧಿಕಾರ ಅನುಭವಿಸಿದ್ದು ಮಾತ್ರ ಕಡಿಮೆ.

ಅನ್ನ ನೀಡಿದ ಬಂಗಾರ:
ಬಂಗಾರಪ್ಪನವರು ಮುಖ್ಯಮಂತ್ರಿಯಾಗಿ ಎರಡು ವರ್ಷಗಳ ಕಾಲ ಕ್ರಾಂತಿಕಾರಕ ಯೋಜನೆ ಜಾರಿ ಮಾಡಿ ಜನರ ಪ್ರೀತಿಗಳಿಸಿದರು.ಅಧಿಕಾರಕ್ಕೆ ಯಾವತ್ತೂ ಅಂಟಿಕೊಂಡವರಲ್ಲ,ಅವರು ಸಂಸದರಾಗಿದ್ದ ಅವಽಯಲ್ಲಿ ಅವರ ಪಕ್ಷ ಅಧಿಕಾರದಲ್ಲಿ ಇಲ್ಲದಿದ್ದರೂ ರಾಜ್ಯದಲ್ಲಿ ಬಂದಿದ್ದ ಭೀಕರ ಬರಗಾಲದ ಹೊತ್ತಲ್ಲಿ ಜನರೊಂದಿಗೆ ನಿಂತಿದ್ದರು.ಲಕ್ಷಾಂತರ ರೈತರಿಗೆ ಅಕ್ಕಿ ಭತ್ತ ವಿತರಣೆ ಮಾಡಿ ಹಸಿವು ನೀಗಿಸಿದ್ದರು.ರೈತರಿಗೆ ನೀಡಿದ ಭತ್ತದ ಬೀಜಗಳು ಮೊಳಕೆಯೊಡೆದು ಹೊಲದಲ್ಲಿ ತೆನೆ ತೂಗಿ ಕಂಗೊಳಿಸಿದಾಗ ರೈತರ ಬಳಿ ತಾವೇ ಹೋಗಿ ನಾನಿದ್ದೇನೆ ಎಂದು ಧೈರ್ಯ ತುಂಬಿದ ಬಂಗಾರದ ಮನುಷ್ಯ.ಹೃದಯವಂತ ನಾಯಕ.

ಕಾವೇರಿಗಾಗಿ ಅಧಿಕಾರ ತ್ಯಜಿಸಿದ ವೀರಕನ್ನಡಿಗ:
ಬಂಗಾರಪ್ಪ ರಾಜ್ಯದ ಮುಖ್ಯಮಂತ್ರಿಯಾದ ಅವಽಯಲ್ಲಿ ಕಾವೇರಿ ಡ್ಯಾಮ್‌ನಿಂದ ತಮಿಳುನಾಡಿಗೆ ೨೦೫ ಟಿಎಂಸಿ ನೀರು ಬಿಡುಗಡೆ ಮಾಡಬೇಕು ಎಂಬ ಟ್ರಿಬ್ಯುನಲ್ ಆದೇಶಕ್ಕೆ ದೇಶವೇ ಬೆಚ್ಚಿ ಬೀಳುವ ನಿರ್ಧಾರವನ್ನು ತೆಗೆದುಕೊಂಡಿದ್ದರು. ಟ್ರಿಬ್ಯುನಲ್ ಕೊಟ್ಟ ಆದೇಶಕ್ಕೆ ಪ್ರತಿಯಾಗಿ ಬಂಗಾರಪ್ಪನವರು ಸುಗ್ರಿವಾಜ್ಣೆ ಹೊರಡಿಸಿದರು.ಡ್ಯಾಮ್‌ನಲ್ಲಿದ್ದ ನೀರನ್ನು ನಮ್ಮ ರಾಜ್ಯಕ್ಕೆ ಸಂಗ್ರಹಿಸಿಡಲು ಆದೇಶಿಸಿದರು.ಇದರ ವಿರುದ್ದವಾಗಿ ತಮಿಳುನಾಡು ಸಿಎಂ ಜಯಲಲಿತಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.ನ್ಯಾಯಾಽಕರಣದ ತೀರ್ಪನ್ನು ಸುಪ್ರೀಂ ಕೋರ್ಟ್ ಪುರಸ್ಕರಿಸಿತ್ತು.ನೀರನ್ನು ಬಿಡುವಂತೆ ಕರ್ನಾಟಕಕ್ಕೆ ಆದೇಶಿಸಿತ್ತು.ಸುಪ್ರೀಂ ಕೋರ್ಟ್ ತೀರ್ಪಿನ ಬೆನ್ನಲ್ಲೇ ಕರ್ನಾಟಕದಲ್ಲಿ ಭಾರೀ ಹೋರಾಟ ನಡೆಯಿತು.ಕರ್ನಾಟಕ ಬಂದ್ ಆಯಿತು.ಕನ್ನಡ ಪರ ಸಂಘಟನೆಗಳ ಬಂದ್‌ಗೂ ಪರೋಕ್ಷವಾಗಿ ಬಂಗಾರಪ್ಪ ಬೆಂಬಲ ಕೊಟ್ಟಿದ್ದರು.ಅಲ್ಲದೇ ರೈತರ ಜೊತೆ ನಿಂತು ಕಾವೇರಿ ಹೋರಾಟಕ್ಕೆ ಇಳಿದಿದ್ದರು. ನ್ಯಾಯಾಂಗ ನಿಂದನೆ ಎಂದರೂ ಕ್ಯಾರೇ ಅನ್ನದೇ ರೈತರ ಪರವಾಗಿ ನಿಂತಿದ್ದರು.ಕಾವೇರಿ ಪರವಾಗಿ ಬಂಗಾರಪ್ಪನವರಿಗೆ ಬದ್ದತೆಯನ್ನು ತೋರಿಸುತ್ತದೆ.

ಬಡವರಗಾಗಿ ಹಲವು ಯೋಜನೆ:
ಬಂಗಾರಪ್ಪ ದೇಶ ಕಂಡ ಮುತ್ಸದಿ ರಾಜಕಾರಣಿ.ಸಮಜವಾದಿ ಚಿಂತನೆಯ ರಾಜಕಾರಣಿಯಾಗಿದ್ದರಿಂದ ತಮ್ಮ ರಾಜಕೀಯ ಜೀವನವನ್ನು ಸಾಮಾಜಿಕ ನ್ಯಾಯದ ಪರಿಪಾಲನೆಯಲ್ಲಿಯೇ ಸಾಗಿಸಿದವರು.ಅವರ ರಾಜಕೀಯ ಯಾವತ್ತಿಗೂ ನೊಂದವರ ಪರವಾಗಿತ್ತು ಎಂಬುದಕ್ಕೆ ಅವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ಜಾರಿಗೆ ತಂದ ಯೋಜನೆಗಳೇ ಸಾಕ್ಷಿ. ಜಾತಿಯ ಸಂಕೋಲೆಗೆ ಸಿಲುಕಿಕೊಳ್ಳದೇ ಸರ್ವ ಜನಾಂಗದ ಪ್ರೀತಿಯ ಜನನಾಯಕರಾಗಿ ರಾಜ್ಯದ ಜನರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆದುಕೊಂಡಿದ್ದಾರೆ.ಬಡವರ,ಧ್ವನಿ ಇಲ್ಲದವರ ಪರವಾಗಿದ್ದ ಬಂಗಾರಪ್ಪ ಅವರು ಜಾರಿಗೆ ತಂದಿದ್ದ ಗ್ರಾಮೀಣ ಕೃಪಾಂಕ ಯೋಜನೆ ಅದೆಷ್ಟೋ ಗ್ರಾಮೀಣ ನಿರುದ್ಯೋಗಿಗಳ ಮನೆ ಬೆಳಗಿಸಿದೆ.
ರೈತರಿಗೆ ೧೦ ಹೆಚ್‌ಪಿ ಉಚಿತ ವಿದ್ಯುತ್,ಸೂರಿಲ್ಲದ ಬಡವರಿಗಾಗಿ ಆಶ್ರಯ ಯೋಜನೆ,ಆಶಕ್ತ ವಿದ್ಯಾರ್ಥಿಗಳಿಗೆ ಜ್ಣಾನದ ಜೆಳಿಗೆ ತುಂಬಿಸಿದ ಆಕ್ಷಯ ಯೋಜನೆ,ದೇವಾಲಯಗಳ ಅಭಿವೃದ್ದಿಗೆ ಆರಾಧನಾದಂತಹ ಪಂಚ ಯೋಜನೆಗಳನ್ನು ನೀಡಿ ಬಡವರ ಜೀವನಕ್ಕೆ ಆಧಾರವಾದ ಕನಸುಗಾರ ಸಾರೇಕೊಪ್ಪ ಬಂಗಾರಪ್ಪ.
ಮಲೆನಾಡಿಗೆ ಹಲವು ಕೊಡುಗೆ:
ಶಿವಮೊಗ್ಗ ಸೇರಿದಂತೆ ಮಲೆನಾಡಿನ ಸರ್ವ ಸಮುದಾಯಕ್ಕೆ ಹಲವು ಕೊಡುಗೆಗಳನ್ನು ನೀಡಿದ್ದಾರೆ.ಬಗರ್‌ಹುಕುಂ ಕಾಯಿದೆ ಜಾರಿಗೆ ತರುವ ಮೂಲಕ ಉಳುವವನೆ ಹೊಲದೊಡೆಯ ಕಾಯಿದೆಗೆ ಮತ್ತಷ್ಟು ಶಕ್ತಿ,ಸತ್ವ ತುಂಬಿದ್ದರು.ರಾಷ್ಟ್ರಕವಿ ಕುವೆಂಪು ಹೆಸರಿನಲ್ಲಿ ವಿಶ್ವವಿದ್ಯಾಲಯ,ಹಂಪಿ ಕನ್ನಡ ವಿವಿ,ಮಲೆನಾಡು ಪ್ರದೇಶಾಭಿವೃದ್ದಿ ಮಂಡಳಿ,ಕರ್ನಾಟಕ ರತ್ನ ಪ್ರಶಸ್ತಿ ಸ್ಥಾಪನೆ ಮೂಲಕ ತಾವೊಬ್ಬ ಸಾಂಸ್ಕೃತಿಕ ನಾಯಕ ಎಂಬುದನ್ನು ನಾಡಿಗೆ ಸಾಕ್ಷೀಕರಿಸಿದ್ದಾರೆ.

ನಾಯಕರ ಸೃಷ್ಟಿಸಿದ ಕಾರ್ಖಾನೆ ಬಂಗಾರಪ್ಪ:
ನಾನು ಯಾವತ್ತಿದ್ದರೂ ಎಂಜಿನ್,ಭೋಗಿಯಾಗಲು ಇಷ್ಟ ಪಡಲ್ಲ,ನಾನು ಯಾವತ್ತಿಗೂ ನಾಯಕ ಎಂಬ ಮಾತನ್ನು ಸ್ವತಃ ಬಂಗಾರಪ್ಪನವರು ಸಾರಿ ಸಾರಿ ಹೇಳುತ್ತಿದ್ದರು.ಅವರ ಮಾತಿನಂತೆ ಅವರ ರಾಜಕೀಯ ಜೀವನದಲ್ಲಿ ಹಲವು ನಾಯಕರನ್ನು ಸೃಷ್ಟಿ ಮಾಡಿದ್ದಾರೆ. ಬಂಗಾರಪ್ಪನವರ ಗರಡಿಯಲ್ಲಿ ಪಳಗಿದವರು ಕಾಂಗ್ರೆಸ್-ಜೆಡಿಎಸ್,ಬಿಜೆಪಿ ಪಕ್ಷದಲ್ಲಿ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.ಡಿಸಿಎಂ ಡಿ.ಕೆ ಶಿವಕುಮಾರ್,ಸಚಿವರಾದ ರಾಮಲಿಂಗಾ ರೆಡ್ಡಿ,ಡಿ.ಸುಧಾಕರ್,ಕೆ.ಜೆ.ಜಾರ್ಜ್,ಜಾರಕಿಹೊಳಿ ಬ್ರದರ್‍ಸ್,ಗೋವಿಂದ ಕಾರಜೋಳ,ರಮೇಶ್ ಜಿಗಜಿಣಿಗಿ,ಭೀಮಣ್ಣ ನಾಯ್ಕ್,ಹರತಾಳು ಹಾಲಪ್ಪ,ಬೇಳೂರು ಗೋಪಾಲಕೃಷ್ಣ,ದಿ.ಪೂರ್‍ಯನಾಯ್ಕ್,ಶಾಸಕಿ ಶಾರದಾ ಪೂರ್‍ಯನಾಯ್ಕ್,ಜಿ.ಡಿ ನಾರಾಯಣಪ್ಪ,ಕಬಸೆ ಆಶೋಕ್ ಮೂರ್ತಿ ಸೇರಿದಂತೆ ಹಲವಾರು ನಾಯಕರನ್ನು ಬೆಳಸಿದ್ದಾರೆ.
ರಾಜಕಾರಣದ ಎಲ್ಲ ಪಟ್ಟುಗಳನ್ನು ಅರಿತು ಪಕ್ಕ ರಾಜಕಾರಣಿಯಾದ್ರೂ ಬಂಗಾರಪ್ಪನವರು ವಾತ್ಸಲ್ಯಮಯಿ ತಾಯಿಯಂತಹ ಮೃದು ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸಲು ಹಿಂದೆ ಬಿದ್ದವರೇ ಅಲ್ಲ.

ಅಪ್ಪಟ ಕಲಾವಿದ:
ಬಂಗಾರಪ್ಪ ಅವರೊಬ್ಬ ಅಪ್ಪಟ ಕಲಾವಿದರು.ಜನಪದ ಪ್ರೇಮಿಯಾಗಿದ್ದರು.ಶಾಸ್ತ್ರೀಯ ಸಂಗೀತ ಕಲಿತಿದ್ದ ಅವರು ಸಂಗೀತ ಪ್ರೇಮಿಯಾಗಿದ್ದರು.ಸಾಹಿತ್ಯದ ಬಗ್ಗೆ ಅಪಾರ ಜ್ಣಾನ ಹೊಂದಿದ್ದ ಅವರು ನಾಡಿನ ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯಕ್ಕೆ ಪ್ರೀತಿಯ ರಾಜಕಾರಣಿಯಾಗಿದ್ದರು.ಗ್ರಾಮೀಣ ಜಾನಪದ ಕಲೆಯನ್ನು ಪ್ರೀತಿಸುತ್ತಿದ್ದ ಅವರು,ಡೊಳ್ಳು ಕುಣಿತ,ಜಾನಪದ ನೃತ್ಯಗಳು ಎಲ್ಲಿಯೇ ಇದ್ದರೂ ತಾವೊಬ್ಬ ಕಲಾವಿದರಂತೆ ಹೆಜ್ಜೆ ಹಾಕುತ್ತಿದ್ದರು.

ಸೋಲಿಲ್ಲದ ಸರ್ದಾರ:
ರಾಜ್ಯದಲ್ಲೇ ಹಲವು ಪ್ರಥಮಗಳ ಸೂತ್ರದಾರ.ಕ್ಷೇತ್ರಕ್ಕೆ ಬಾರದೇ ಗೆಲವು ಕಂಡ ಸರ್ದಾರ.ಚುನಾವಣೆಯಲ್ಲಿ ಸೋಲಿಲ್ಲದ ಸರ್ದಾರ ಎಂದೇ ಪ್ರಖ್ಯಾತರಾಗಿದ್ದರು ಬಂಗಾರಪ್ಪ,ಶಿವಮೊಗ್ಗ ಜಿಲ್ಲೆಯಲ್ಲಿ ಬಂಗಾರಪ್ಪ ಎಂಬ ಹೆಸರಿಗೆ ಅಷ್ಟೊಂದು ಶಕ್ತಿ ಇದೆ.ಜನರ ಜೊತೆಗಿನ ಅವರ ಬಾಂಧವ್ಯ,ರಾಜಕೀಯದ ಹೊರತಾದ ಅವರ ಸರಳತೆ ಜನರ ಮನಸ್ಸು ಗೆದ್ದಿದೆ.ಹಠದ ರಾಜಕಾರಣಿ ಎಂದೇ ಗುರುತಿಸಿಕೊಂಡಿದ್ದ ಬಂಗಾರಪ್ಪ ರಾಜಕಾರಣದಲ್ಲಿ ಹಲವು ದಾಖಲೆಗಳನ್ನು ಸೃಷ್ಟಿಸಿದ್ದಾರೆ.ಪಕ್ಷ ಸ್ಥಾಪನೆಯಿಂದ ಹಿಡಿದು,ಶಾಸಕರನ್ನು ಸೃಷ್ಟಿಸುವ ಕಾರ್ಖಾನೆ ಎಂಬ ಬಿರುದನ್ನು ಪಡೆದುಕೊಂಡಿದ್ದಾರೆ. ೧೯೬೭ರಲ್ಲಿ ಮೊದಲ ಬಾರಿಗೆ ಸೊರಬ ವಿಧಾನ ಸಭಾ ಕ್ಷೇತ್ರದಿಂದ ಸೋಶಿಯಲಿಸ್ಟ್ ಪಾರ್ಟಿಯಿಂದ ಸ್ಪಧಿಸಿ ಗೆದ್ದಿದ್ದ ಅವರು,ಅಲ್ಲಿಂದ ರಾಜಕೀಯವಾಗಿ ಮತ್ತೆ ಹಿಂದಿರುಗಿ ನೋಡಿದ್ದೇ ಇಲ್ಲ. ಬಂಗಾರಪ್ಪನವರ ರಾಜಕೀಯ ಯಾವತ್ತಿಗೂ ನೊಂದವರ ಪರವಾಗಿತ್ತು ಎಂಬುದಕ್ಕೆ ಅವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ಜಾರಿಗೆ ತಂದ ಯೋಜನೆಗಳೇ ಸಾಕ್ಷಿಯಾಗಿದ್ದವು.
– ಶರತ್ ಪುರದಾಳ್
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv