Breaking News

“ಸಾಮಾಜಿಕ ಬದಲಾವಣೆಯ ಹರಿಕಾರ ಜಗಜೀವನರಾಮ್”

Cnewstv.in / ಅಂಕಣ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

“ಸಾಮಾಜಿಕ ಬದಲಾವಣೆಯ ಹರಿಕಾರ ಜಗಜೀವನರಾಮ್”

ದೇಶಾದ್ಯಂತ “ಬಾಬುಜಿ” ಎಂದೇ ಕರೆಯಲ್ಪಡುವ ಜಗಜೀವನರಾಮ್ ರವರು ಧೀಮಂತ ರಾಷ್ಟ್ರೀಯ ನಾಯಕ, ಸ್ವಾತಂತ್ರ್ಯ ಮತ್ತು ಸಾಮಾಜಿಕ ನ್ಯಾಯ ಹೋರಾಟಗಾರ ಹಾಗೂ ಅತ್ಯುತ್ತ್ತಮ ಸಂಸದೀಯ ಪಟುವಾಗಿದ್ದರು.

ಬಾಬು ಜಗಜೀವನರಾಮ್ ಅವರು ಸ್ವಾತಂತ್ರ್ಯ ಹೋರಾಟಗಾರರಾಗಿ, ಸಂವಿಧಾನ ರಚನಾ ಸಭೆಯ ಸದಸ್ಯರಾಗಿ ಮತ್ತು ಮೊದಲ ಉಪ ಪ್ರಧಾನಿಯಾಗಿ ನಮ್ಮ ದೇಶಕ್ಕೆ ಮಹತ್ತರ ಕೊಡುಗೆ ನೀಡಿದ್ದಾರೆ. ಅಸ್ಪøಶ್ಯತಾ ನಿವಾರಣೆಯ ಹೋರಾಟದ ಮಹಾನ್ ದಲಿತ ನಾಯಕ ಜಗಜೀವನರಾಮ್‍ರವರ 115ನೇ ಜಯಂತೋತ್ಸವವನ್ನು ಏಪ್ರಿಲ್ 5 ರಂದು ದೇಶದಾದ್ಯಂತ ಆಚರಿಸಲಾಗುತ್ತದೆ.

ಇದನ್ನು ಒದಿ : https://cnewstv.in/?p=9260

ಭಾರತದ ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರದ ರಾಜಕಾರಣದಲ್ಲಿ ಬಾಬು ಜಗಜೀವನರಾಮ್ ಅವರ ಪಾತ್ರ ಪ್ರಮುಖವಾದದ್ದು. ಭಾರತದಲ್ಲಿ ದೀರ್ಘ ಕಾಲದಿಂದ ಬೆಳೆದುಕೊಂಡು ಬಂದಿದ್ದ ಮೇಲು-ಕೀಳು ತಾರತಮ್ಯ, ಜಾತಿ ಪದ್ಧತಿ, ಸ್ಪøಶ್ಯ- ಅಸ್ಪøಶ್ಯ ಎಂಬ ಮನೋಭಾವಗಳನ್ನು ತೊಡೆದು ಹಾಕಲು ಸಾಮಾಜಿಕ ನೆಲೆಗಟ್ಟಿನಲ್ಲಿ ಹೋರಾಡಿದವರು ಅನೇಕರು. ಆದರೆ ಅವರ ಏಳಿಗೆಗೆ ಹೆಚ್ಚಿನ ಚುರುಕು ನೀಡಿ ಒಂದು ಸ್ಪಷ್ಟ ರೂಪ ಕೊಟ್ಟ ಕೆಲವೇ ಕೆಲವು ನಾಯಕರಲ್ಲಿ ಬಾಬು ಜಗಜೀವನರಾಮ್ ಒಬ್ಬರು.

1908 ಏಪ್ರಿಲ್ 5 ರಂದು ಬಿಹಾರದ ‘ಆರಾ’ ಜಿಲ್ಲೆಯ ಚಾಂದ್ವಾ ಗ್ರಾಮದಲ್ಲಿ ಜನಿಸಿದ ಬಾಬು ಜಗಜೀವನರಾಮ್ ಅವರು ವಿದ್ಯಾರ್ಥಿಯಾಗಿದ್ದಾಗಲೇ ಸಾಕಷ್ಟು ನಿಂಧನೆ, ಅಪಮಾನ ಹಾಗೂ ನೋವುಗಳನ್ನು ಅನುಭವಿಸಿದ್ದರು. ತಂದೆ ಶೋಭಿರಾಮ್ ಬ್ರಿಟಿಷರ ಭಾರತೀಯ ಸೈನ್ಯದಲ್ಲಿದ್ದು, ಹಲವು ಕಡೆ ಕೆಲಸ ಮಾಡಿ, ತಮ್ಮ ಹುದ್ದೆಗೆ ರಾಜಿನಾಮೆ ಕೊಟ್ಟು ಆರಾ ಪಟ್ಟಣದ ಸಮೀಪದ ಚಾಂದ್ವಾ ಗ್ರಾಮದಲ್ಲಿ ಭೂಮಿಯನ್ನು ಕೊಂಡು ಕೃಷಿಯನ್ನು ಆರಂಭಿಸಿದರು.

ಸಣ್ಣ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡ ಜಗಜೀವನ್ ರಾಮ್ ತಾಯಿ ವಾಸಂತಿ ದೇವಿಯವರ ಆರೈಕೆಯಲ್ಲಿ ಬೆಳೆದರು. ಬಾಲಕ ರಾಮ್ ಆರಾದಲ್ಲಿನ ಮಾಧ್ಯಮಿಕ ಶಾಲೆಯಲ್ಲಿದ್ದಾಗ ಅಲ್ಲಿ ಎರಡು ಪ್ರತ್ಯೇಕ ಕುಡಿಯುವ ನೀರಿನ ಮಡಕೆಗಳನ್ನು ಇಡಲಾಗಿತ್ತು. ಒಂದು ಮಡಕೆ ನೀರು ಹಿಂದು ಮಕ್ಕಳಿಗೆ, ಮತ್ತೊಂದು ಮುಸ್ಲಿಂ ಮಕ್ಕಳಿಗಾಗಿ. ರಾಮ್ ಹಿಂದು ಮಡಕೆಯ ನೀರನ್ನು ಕುಡಿದಾಗ, ಶಾಲಾ ಪ್ರಾಂಶುಪಾಲರವರೆಗೆ ದೂರು ಹೋಯಿತು. ಆಗ ಪ್ರಾಂಶುಪಾಲರು ಮೂರನೆಯ ಮಡಕೆಯನ್ನು ಇರಿಸಿ, ಅದು ಅಸ್ಪøಶ್ಯ ಮಕ್ಕಳಿಗೆ ಎಂದು ಹೇಳಿದರು.

ಮೊದಲ ಬಾರಿಗೆ ಅಸ್ಪøಶ್ಯತೆಯ ಅಪಮಾನ ರಾಮ್ ಅವರನ್ನು ಬಹುವಾಗಿ ಕಾಡಿತು. ಇದರಿಂದ ಸಿಟ್ಟಿಗೆದ್ದ ಬಾಲಕ ರಾಮ್ ಎರಡು ಬಾರಿ ಆ ಮಡಕೆಗಳನ್ನು ಒಡೆದುಹಾಕಿ ತಮ್ಮ ಕೋಪವನ್ನು ಪ್ರದರ್ಶಿಸಿದರು. ಪ್ರಾಂಶುಪಾಲರೇನೋ ಆ ಮೂರನೇ ಮಡಿಕೆ ತೆಗೆಸಿದರು. ಆದರೆ ಈ ಜಾತಿ ಪದ್ಧತಿಯ ಅಪಮಾನದ ಗಾಯ ಬಾಲಕ ರಾಮ್ ಅವರ ಎದೆಯೊಕ್ಕಿತು. ಮುಂದೆ ಜೀವನದ ಉದ್ದಕ್ಕೂ ರಾಮ್ ನಡೆಸಿದ ಎಲ್ಲ ಚಟುವಟಿಕೆಗಳ ಹಿಂದೆ ಈ ನೋವು ಉಳಿದುಕೊಂಡೇ ಇತ್ತು . ಇಂತಹ ಅಪಮಾನದಿಂದ ದಲಿತರನ್ನು ಪಾರು ಮಾಡುವ ಆಶಯವೇ ರಾಮ್ ಅವರ ಎಲ್ಲ ಚಟವಟಿಕೆಗಳ ಪ್ರಧಾನ ಅಂಶವಾಗಿ ಮಾರ್ಪಟ್ಟಿತ್ತು.

ಮುಂದೆ ದಲಿತ ನಾಯಕರಾಗಿ ರೂಪುಗೊಂಡ ಜಗಜೀವನ ರಾಮ್ ಅವರಿಗೆ ಬಿಹಾರ ಕಾರ್ಯಕ್ಷೇತ್ರವಾಯಿತು. ಗಾಂಧೀಜಿಯವರು ಆರಂಭಿಸಿದ್ದ ಅಸ್ಪøಶ್ಯತೆಯ ವಿರುದ್ದದ ಹೋರಾಟದಲ್ಲಿ ರಾಮ್ ಪಾಲ್ಗೊಂಡರು. 1935ರಲ್ಲಿ ದಲಿತರ ಸಮಾನತೆಗಾಗಿ ಹೋರಾಡುವ ಉದ್ದೇಶದಿಂದ ಅಸ್ತಿತ್ವಕ್ಕೆ ಬಂದ “ಅಖಿಲ ಭಾರತ ದಮಮನಿತ ವರ್ಗಗಳ ಒಕ್ಕೂಟ”ವನ್ನು ಸ್ಥಾಪಿಸುವಲ್ಲಿ ಜಗಜೀವನ್‍ರಾಮ್ ಅವರು ನಿರ್ವಹಿಸಿದ ಪಾತ್ರ ಮಹತ್ವದಾಗಿತ್ತು.

ಬಾಬು ಜಗಜೀವನರಾಮ್ 1937 ರಲ್ಲಿ ಬಿಹಾರದ ವಿಧಾನ ಸಭೆಗೆ ಆಯ್ಕೆಯಾಗಿ, 1946ರಲ್ಲಿ ಜವಹರಲಾಲ್ ನೆಹರು ಅವರ ನೇತೃತ್ವದಲ್ಲಿ ಪ್ರಥಮ ಹಂಗಾಮಿ ಸರ್ಕಾರ ರಚನೆಯಾದಾಗ ಸಂಪುಟದ ಅತ್ಯಂತ ಕಿರಿಯ ಸಚಿವರಾಗಿ ಕಾರ್ಮಿಕ ಖಾತೆಯನ್ನು ನೀಡಲಾಗಿತ್ತು. ಮುಂದೆ ಬಾಬುಜೀ ಅವರು ತಮ್ಮ ರಾಜಕೀಯ ಪಯಣದಲ್ಲಿ ಹಿಂದುರುಗಿ ನೋಡಿದ್ದೇ ಇಲ್ಲ. ಹಲವಾರು ಖಾತೆಗಳ ಸಚಿವ ಸ್ಥಾನಗಳನ್ನು ನಿರ್ವಹಿಸಿದರು. ಈ ಖಾತೆಗಳನ್ನು ಸಮರ್ಥವಾಗಿ ನಿರ್ವಹಿಸಿ ಹೊಸ-ಹೊಸ ಕಾಯ್ದೆಗಳನ್ನು ಜಾರಿಗೆ ತಂದು ಕಾರ್ಮಿಕ ಖಾತೆಗಳ ಶಿಲ್ಪಿ ಎಂದು ಕರೆಯಲ್ಪಟ್ಟರು. ಭಾರತದಲ್ಲಿ ಪ್ರಪ್ರಥಮ ಬಾರಿಗೆ ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕಾನೂನು ರಚಿಸಿದ್ದು ಬಾಬುಜೀ ಅವರ ಹೆಗ್ಗಳಿಕೆ.

1971 ರಲ್ಲಿ ಭಾರತ-ಪಾಕ್ ಮಧ್ಯೆ ಯುದ್ಧ ನಡೆದಾಗ (ಬಾಂಗ್ಲಾ ಪ್ರತ್ಯೇಕ ರಾಷ್ಟ್ರವಾಗಿ ಉದಯವಾದದ್ದು ಈ ಯುದ್ಧದ ಫಲಶೃತಿ) ಜಗಜೀವನ ರಾಮ್ ಕೇಂದ್ರ ಸಂಪುಟದಲ್ಲಿ ರಕ್ಷಣಾ ಸಚಿವರಾಗಿದ್ದರು. ರಾಮ್ ಅವರು ಕೃಷಿ ಸಚಿವರಾಗಿದ್ದಾಗ ಭಾರತೀಯ ಕೃಷಿ ಆಧುನೀಕರಣಗೊಂಡಿತು ಮತ್ತು ಭಾರತದಲ್ಲಿ ಹಸಿರು ಕ್ರಾಂತಿ ನಡೆಯಿತು. 1974ರಲ್ಲಿ ದೇಶ ಬರಗಾಲವನ್ನು ಎದುರಿಸಿದಾಗ ಆಹಾರದ ಬಿಕ್ಕಟ್ಟನ್ನು ನಿಭಾಯಿಸುವ ಹೊಣೆಯನ್ನು ಹೊತ್ತು, ಆಹಾರ ಖಾತೆಯನ್ನು ಹೆಚ್ಚುವರಿಯಾಗಿ ನಿರ್ವಹಿಸಿದರು.

1975ರಲ್ಲಿ ಅಂದಿನ ಪ್ರಧಾನಿಯಾಗಿದ್ದ ಇಂದಿರಾಗಾಂಧಿಯವರು ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದಾಗ ಅದನ್ನು ಜಗಜೀವನರಾಮ್ ಅವರು ಬೆಂಬಲಿಸಿದರು. 1977 ರಲ್ಲಿ ಕಾಂಗ್ರೆಸ್ ತೊರೆದು “ಕಾಂಗ್ರೆಸ್ ಫಾರ್ ಡೆಮಾಕ್ರಸಿ” ಎಂಬ ಹೊಸ ಪಕ್ಷವನ್ನು ಸ್ಥಾಪಿಸಿ, ಜನತಾ ಪಕ್ಷದ ಮೈತ್ರಿಯನ್ನು ಸೇರಿದರು. ನಂತರ ಅವರು ಭಾರತದ ಉಪಪ್ರಧಾನಿಯಾಗಿ ಸೇವೆ ಸಲ್ಲಿಸಿದರು (1977-79).

ಜಗಜೀವನ್‍ರಾಮ್ ಅವರು ‘ದೀರ್ಘಕಾಲ ಸೇವೆ ಸಲ್ಲಿಸಿದ ಕ್ಯಾಬಿನೆಟ್ ಮಂತ್ರಿ’ ಎಂಬ ದಾಖಲೆಯನ್ನು ಹೊಂದಿದ್ದಾರೆ. 1952ರಲ್ಲಿ ನಡೆದ ಮೊದಲ ಚುನಾವಣೆಯಿಂದ ಹಿಡಿದು 34 ವರ್ಷಗಳ ಕಾಲ ನಿರಂತರ ಸಂಸದರಾಗಿ ಸೇವೆ ಸಲ್ಲಿಸಿದರು. 1986ರಲ್ಲಿ ಅವರು ಮರಣ ಹೊಂದುವವರೆಗೂ ಸಂಸತ್ತಿನಲ್ಲಿ ಸದಸ್ಯರಾಗಿದ್ದರು.

ಬಾಬುಜೀ ಅವರು ಅಲಂಕರಿಸಿದ ಪ್ರಮುಖ ಸಚಿವಾಲಯಗಳೆಂದರೆ, ಕೇಂದ್ರ ಕಾರ್ಮಿಕ ಮಂತ್ರಿ(1946-52), ಕೇಂದ್ರ ಸಂಪರ್ಕ ಸಚಿವರು(1952-56), ಕೇಂದ್ರ ಸಾರಿಗೆ ಮತ್ತು ರೈಲ್ವೇ ಸಚಿವರು(1956-62), ಕೇಂದ್ರ ಸಾರಿಗೆ ಮತ್ತು ಸಂಪರ್ಕ ಸಚಿವರು(1962-63), ಕಾರ್ಮಿಕ, ಉದ್ಯೋಗ ಮತ್ತು ಪುನರ್ವಸತಿ ಕೇಂದ್ರ ಸಚಿವರು(1966-67), ಕೇಂದ್ರ ಆಹಾರ ಮತ್ತುಕೃಷಿ ಸಚಿವರು(1967-70), ಕೇಂದ್ರ ರಕ್ಷಣ ಸಚಿವರು (1970-74, 1977-79), ಕೇಂದ್ರ ಕೃಷಿ ಮತ್ತು ನೀರಾವರಿ ಸಚಿವರು (1974-77).

ದಲಿತ ಸಮುದಾಯ ಮತ್ತು ದೇಶದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ ಬಾಬುಜೀ ಅವರು 1986 ಜುಲೈ 6 ರಂದು ಕೊನೆಯುಸಿರೆಳೆದರು. ಅವರ ಸಮಾದಿ ಸ್ಥಳವನ್ನು “ತನ್ಮಯಿ” ಸ್ಮಾರಕವಾಗಿ ಪರಿವರ್ತಿಸಲಾಗಿದೆ. ಮತ್ತು ಬಾಬುಜೀ ಅವರ ಜನ್ಮ ದಿನವನ್ನು ಭಾರತದಲ್ಲಿ ತನ್ಮಯಿ ದಿನ (ಸಮಾನತೆ ದಿನ) ಎಂದು ಆಚರಿಸಲಾಗುತ್ತಿದೆ.

ದಲಿತರ ಕುರಿತು ತೀವ್ರ ಸಹಾನುಭೂತಿ ಹೊಂದಿದ್ದ ಬಾಬುಜಿ ತಮ್ಮ ಜ್ಞಾನ ಮತ್ತು ವ್ಯಾಪಕ ದೃಷ್ಟಿಕೋನದಿಂದ ದೇಶ ಸೇವೆ ಮಾಡಿದರು. ಸರ್ವ ಜನರ ಕಲ್ಯಾಣದ ಕನಸು ಕಂಡಿದ್ದರು.

ರಿಥೇಶ ನಾಯ್ಕ್.

ಇದನ್ನು ಒದಿ : https://cnewstv.in/?p=9262

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*

Tags

*ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ* *9916660399* Accident Bangalore Bhadravathi BJP B S yaduvurappa B Y Ragavendra Congress Corona Corona report Corona virus Covid 19 Hosanagara JDS Kerala K S Eshwarappa MP election M P Election News NSUI Sagara Shikaripura Shimoga shimoga district Shivammoga Shivamoga Shivamogga Shivamogga NSUI SP shivamogga ಒಮಿಕ್ರಾನ್ ಸೋಂಕಿತರ ಸಂಖ್ಯೆ 578 ಕ್ಕೆ ಏರಿಕೆ. ಕಾಂಗ್ರೆಸ್ ಕೊರೊನಾ ಕೋಟೆ ಶ್ರೀ ಮಾರಿಕಾಂಬ ಜಾತ್ರೆ : ಇಂದು ಗಾಂಧಿಬಜಾರ್ ನಲ್ಲಿ ಚಪ್ಪರ ಪೂಜೆ.‌ ಚಾರುಲತಾ ಸೋಮಲ್‌ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಜಿಲ್ಲೆಯಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 791 ಕೊರೊನಾಗೆ 7 ಜನ ಬಲಿ ಜಿಲ್ಲೆಯಲ್ಲಿ ಎರಡಂಕಿಗೆ ಇಳಿದ ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 38 ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ. ನಾಳೆ ನಗರದಲ್ಲಿ ವಿದ್ಯುತ್ ವ್ಯತ್ಯಯ. ಮೆಗ್ಗಾನ್ ಆಸ್ಪತ್ರೆ ಶಿವಮೊಗ್ಗ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸಚಿವ ಕೆ.ಎಸ್.ಈಶ್ವರಪ್ಪ ಸಿಗಂದೂರು

Recent Comments