Breaking News

2 ವರ್ಷದಲ್ಲಿ 800 ಕೊಳ ನಿರ್ಮಾಣ ಮಾಡಿದ IFS ಅಧಿಕಾರಿ ವೈಭವ್‌ ಸಿಂಗ್‌.

Cnewstv.in /19.01.2022 / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

2 ವರ್ಷದಲ್ಲಿ 800 ಕೊಳ ನಿರ್ಮಾಣ ಮಾಡಿದ IFS ಅಧಿಕಾರಿ ವೈಭವ್‌ ಸಿಂಗ್‌.

ಉತ್ತರಖಂಡದ ರುದ್ರಪ್ರಯಾಗವು ಸಮುದ್ರಮಟ್ಟದಿಂದ ಸುಮಾರು 3,000 ಮೀ. ಎತ್ತರದಲ್ಲಿದೆ. ಇದು ಅತಿವೃಷ್ಟಿ, ಕಾಡ್ಗಿಚ್ಚಿಗೆ ಹೆಚ್ಚು ಒಳಗಾಗುವ ಪ್ರದೇಶ. ಅಲ್ಲಿ ನೀರಿಗಾಗಿ ಪರದಾಡುವ ಸ್ಥಿತಿ. ಬೇಸಗೆ ಕಾಲದಲ್ಲಿ ಮಣ್ಣಿನಲ್ಲಿ ತೇವಾಂಶವಿಲ್ಲದೆ ಬೆಂಕಿ ಹತ್ತಿಕೊಳ್ಳುತ್ತದೆ, ಮಳೆಗಾಲದಲ್ಲಿ ಭೂ ಕುಸಿತ ಉಂಟಾಗುವ ಭೀತಿಯಿರುತ್ತದೆ. ಇಲ್ಲಿನ ಕಾಡುಗಳಲ್ಲಿ ಪೈನ್‌ ಟ್ರೀಗಳೇ ತುಂಬಿರುವುದರಿಂದ ಮಣ್ಣಿನ ಸವೆತ ಹೆಚ್ಚಾಗಿತ್ತು. ಅಂತಹ ಊರಿನಲ್ಲಿ ನೀರಿನ ಸಮಸ್ಯೆಗೆ ಮುಕ್ತಿ ನೀಡಿದವರು ವೈಭವ್‌ ಸಿಂಗ್‌. ಇವರು ರುದ್ರಪ್ರಯಾಗ್‌ ಜಿಲ್ಲೆಯಲ್ಲಿ ಭಾರತೀಯ ಅರಣ್ಯ ಸೇವಾ ಅಧಿಕಾರಿಯಾಗಿ ಮತ್ತು ವಿಭಾಗೀಯ ಅರಣ್ಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.

2019ರಲ್ಲಿ ರುದ್ರಪ್ರಯಾಗ್‌ ಅಧಿಕಾರಿಯಾಗಿ ಬಂದ ಇವರು ಅಲ್ಲಿ ಸಾಕಷ್ಟು ಬದಲಾವಣೆ ತರಲು ಮುಂದಾಗುತ್ತಾರೆ. ಅವರಿಗೆ ಸರಕಾರ ಬೆಂಬಲ ನೀಡುತ್ತದೆ. ವೈಭವ್‌ ಮಣ್ಣಿನ ತೇವಾಂಶ ಸಂರಕ್ಷಣೆ ಮಾಡಲು ಒತ್ತು ನೀಡಿದರು, ಜತೆಗೆ ಗರ್ವಾಲಿಯಲ್ಲಿ ಕೊಳಗಳನ್ನು ನಿರ್ಮಿಸಿದರು. ವೈಭವ್‌ ಮತ್ತು ಅವರ ಸಿಬಂದಿ ಇಲ್ಲಿ ಒಟ್ಟು 612 ಕೊಳಗಳನ್ನು ನಿರ್ಮಿಸಿದರು. ಒಟ್ಟು 10 ಮಿಲಿಯನ್‌ ಲೀಟರ್‌ಗಳಷ್ಟು ನೀರನ್ನು ಸಂಗ್ರಹಿಸುವ ಸಾಮರ್ಥ್ಯ ಇದು ಹೊಂದಿದೆ. ಜತೆಗೆ ಸುಮಾರು 400 ಎಕರೆ ಜಾಗದಲ್ಲಿ ಅವನತಿ ಹೊಂದಿದ್ದ ಅರಣ್ಯವನ್ನು ಮತ್ತೆ ಹಸುರಾಗಿಸಿದ್ದಾರೆ.

ಇವರು ತಮ್ಮ ಎರಡು ವರ್ಷಗಳ ಅವಧಿಯಲ್ಲಿ 887 ಕೊಳಗಳನ್ನು ನಿರ್ಮಿಸಿದ್ದಾರೆ. ಪ್ರತೀ ಕೊಳವು 10 ಸಾವಿರದಿಂದ 2,50,000 ಲೀ. ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ. ಮಳೆಗಾಲದಲ್ಲಿ ಮಳೆ ನೀರು ಇದರಲ್ಲಿ ಶೇಖರಣೆಯಾಗಿ ನೀರಿನ ಸಮಸ್ಯೆ ನೀಗುವುದರ ಜತೆಗೆ ಮಣ್ಣಿನ ತೇವಾಂಶವನ್ನು ಹೆಚ್ಚಿಸುತ್ತದೆ. ಕೊಳ ನಿರ್ಮಿಸುವುದಕ್ಕೆ ಜಾಗ ಆಯ್ದುಕೊಳ್ಳವುದೇ ಇವರಿಗೆ ಬಹುದೊಡ್ಡ ಸಮಸ್ಯೆಯಾಗಿತ್ತು. ಇಳಿಜಾರು ಪ್ರದೇಶದ ತಳಭಾಗದಲ್ಲಿ ಈ ಕೊಳಗಳನ್ನು ನಿರ್ಮಿಸಲು ಹೆಚ್ಚು ಆದ್ಯತೆ ನೀಡಿದರು. ಇವುಗಳ ನಿರ್ಮಾಣದಿಂದಾಗಿ ನೀರಿನ ಸಮಸ್ಯೆ, ಕಾಡ್ಗಿಚ್ಚು ಸಮಸ್ಯೆಗಳು ಕಡಿಮೆಯಾಗುವುದರ ಜತೆಗೆ ಅಂತರ್ಜಲ ಮಟ್ಟ ಹೆಚ್ಚಾಗಲು ಕಾರಣವಾಯಿತು. ಸದ್ಯ ಇಲ್ಲಿ 70 ನೀರು ಸರಬರಾಜು ಯೋಜನೆಗಳಿವೆ. ಕೆಲವೇ ವರ್ಷಗಳಲ್ಲಿ ರುದ್ರಪ್ರಯಾಗ್‌ ನೀರಿನ ಸಮಸ್ಯೆಯೇ ಕಾಡದಷ್ಟು ಬದಲಾಗಿದೆ. ಹಚ್ಚಹಸುರಿನಿಂದ ಕಂಗೊಳಿಸುತ್ತಿದೆ.

ಅಂತಹ ಬರಡು ಭೂಮಿಯಲ್ಲೇ ಸಮೃದ್ಧ ನೀರು ಹರಿದಾಡುವಂತೆ, ಮಣ್ಣಿನಲ್ಲಿ ತೇವಾಂಶ ಹೆಚ್ಚಾಗುವಂತೆ ಮಾಡಲು ಸಾಧ್ಯವಾದರೆ ನಮಗೂ ಸಾಧ್ಯವಲ್ಲವೇ? ನಾವು ಪ್ರಯತ್ನ ಪಟ್ಟರೆ ನಮ್ಮ ಊರು ಕೂಡ ನೀರಿನ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು. ಇದರಿಂದಾಗಿ ಪ್ರಕೃತಿಯ ಒಳಿತೂ ಸಾಧ್ಯ. ಪ್ರಕೃತಿಯಿಂದಲೇ ಎಲ್ಲ ಪಡೆಯುವ ನಾವು ಪ್ರಕೃತಿಗೂ ಒಂದಿಷ್ಟು ಕೊಡುಗೆ ನೀಡೋಣ…

ಲೇಖನ : ರಂಜಿನಿ (ಸಂಗ್ರಹ ಮಾಹಿತಿ)

ಇದನ್ನು ಒದಿ : https://cnewstv.in/?p=7746

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*