Breaking News

ಭಾರತದ ಮೊಟ್ಟ ಮೊದಲ ಶಿಕ್ಷಕಿ, ವಿದ್ಯಾದೇವತೆ ಸಾವಿತ್ರಿಬಾಯಿ ಫುಲೆಯವರ ಜೀವನ ಚರಿತ್ರೆ.

Cnewstv.in / 03.01.2022 / ವಿಶೇಷ ಅಂಕಣ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಭಾರತದ ಮೊಟ್ಟ ಮೊದಲ ಶಿಕ್ಷಕಿ, ವಿದ್ಯಾದೇವತೆ ಸಾವಿತ್ರಿಬಾಯಿ ಫುಲೆಯವರ ಜೀವನ ಚರಿತ್ರೆ.

ಹೇಮಂತ್ ಚಿನ್ನು

ಸಾವಿತ್ರಿಬಾಯಿ ಫುಲೆ(1831-1897) ಶಿಕ್ಷಕಿ, ಸಂಚಾಲಕಿ, ಮುಖ್ಯೋಪಾಧ್ಯಾಯಿನಿ ಸಾಮಾಜಿಕ ಮತ್ತು ಮಹಿಳಾ ಹಕ್ಕುಗಳ ಹೋರಾಟಗಾರ್ತಿ, ಭಾರತದ ಮೊಟ್ಟ ಮೊದಲ ಶಿಕ್ಷಕಿ, ದಣಿವರಿಯದ ಸತ್ಯಶೋಧಕಿ. ಆಧುನಿಕ ಶಿಕ್ಷಣದ ತಾಯಿ. ಸಾವಿತ್ರಿಬಾಯಿ ಅವರ ವೇಷ ಭೂಷಣ ಸರಳವಾಗಿತ್ತು. ಖಾದಿ ಸೀರೆಯನ್ನೇ ಅವರು ಧರಿಸುತ್ತಿದ್ದರು.

ಜನನ_ಜೀವನ.

ಸಾವಿತ್ರಿಬಾಯಿ ಫುಲೆ ಜನವರಿ 3, 1831ರಲ್ಲಿ ಮಹಾರಾಷ್ಟ್ರದ ಸತಾರಜಿಲ್ಲೆಯ ‘ನೈಗಾಂನ್’ನಲ್ಲಿ ಹುಟ್ಟಿದರು. ತಂದೆ ನೇವಸೆ ಪಾಟೀಲ. ತಾಯಿ ಲಕ್ಷ್ಮೀಬಾಯಿ. ಬಾಲ್ಯದಲ್ಲಿಯೇ ಸಾವಿತ್ರಿಬಾಯಿ ಫುಲೆ ಅವರು ಜ್ಯೋತಿಬಾಫುಲೆಯವರನ್ನು ಲಗ್ನವಾದರು. ಸಾವಿತ್ರಿಬಾಯಿ ಅವರ ಯಶಸ್ಸು, ಶ್ರೇಯಸ್ಸಿನ ವಿಕ್ರಮಪಾಲು ಜ್ಯೋತಿ ಬಾ ಫುಲೆ ಅವರದಾಗಿತ್ತು. ಸ್ತ್ರೀ ಶಿಕ್ಷಣವನ್ನು ತೆರೆದ ಕೀರ್ತಿ ಜ್ಯೋತಿಬಾಫುಲೆ ಅವರಿಗೆ ಸಲ್ಲಬೇಕು.

ವಿವಾಹ_ವಿದ್ಯಾಭ್ಯಾಸ.

ಬಾಲ್ಯ ವಿವಾಹ ರೂಢಿಯಲ್ಲಿದ್ದ ಕಾಲದಲ್ಲಿ ಸಾವಿತ್ರಿಬಾಯಿ ಫುಲೆ ಮದುವೆಯಾದಾಗ ಅವರಿಗೆ 8 ವರ್ಷ ವಯಸ್ಸು, ಜ್ಯೋತಿಬಾಫುಲೆ ಅವರಿಗೆ 13 ವರ್ಷ ವಯಸ್ಸಾಗಿತ್ತು. ಸಾವಿತ್ರಿಬಾಯಿ ಅವರಿಗೆ ಮನೆಯೇ ಮೊದಲ ಪಾಠಶಾಲೆ, ಪತಿ ಜ್ಯೋತಿಬಾ ಅವರೇ ಗುರುಗಳು. 1847ರಲ್ಲಿ ಸಾವಿತ್ರಿಬಾಯಿ ಶ್ರೀಮತಿ ಮಿಚಲ್ ಅವರ ನಾರ್ಮಲ್ ಶಾಲೆಯಲ್ಲಿ ಶಿಕ್ಷಕಿಯ ತರಭೇತಿ ಪಡೆದರು. ಆಗ ಅವರಿಗೆ 17ವರ್ಷ. ಹೀಗಾಗಿ ಮಹಾರಾಷ್ಟ್ರದಲ್ಲಿ ತರಭೇತಾದ ಮೊದಲ ಶಿಕ್ಷಕಿಯಾದರು.

ಶಿಕ್ಷಕಿಯಾಗಿ.

ಸಾವಿತ್ರಿಬಾಯಿ ಶ್ರೀ ಭಿಡೆಯವರ ಮನೆಯಲ್ಲಿ ಆರಂಭಗೊಂಡ ಕನ್ಯಾಶಾಲೆಯ ಪ್ರಧಾನ ಶಿಕ್ಷಕಿಯಾದರು. ಆ ಕಾಲದಲ್ಲಿ ಹಿಂದೂ ಸ್ರ್ರೀಯೊಬ್ಬಳು ಶಿಕ್ಷಕಿಯಾಗುವುದು ಧರ್ಮಕ್ಕೂ, ಸಮಾಜಕ್ಕೂ ದ್ರೋಹ ಬಗೆದಂತೆ. ಅವರು ಪಾಠಶಾಲೆಗೆ ಹೊರಟಾಗ ಕೆಲವರು ಕೇಕೆ ಹಾಕಿ ನಗುತ್ತಿದ್ದರು, ಅವರ ಮೇಲೆ ಕೆಸರು, ಸಗಣಿ ಎರಚಿ, ಕಲ್ಲನ್ನೂ ತೂರುತ್ತಿದ್ದರು. ಇದರಿಂದ ಧೃತಿಗೆಡದ ಸಾವಿತ್ರಿಬಾಯಿಯವರು ಯಾವಾಗಲೂ ಒಂದು ಸೀರೆಯೊಂದನ್ನು ತಮ್ಮ ಬ್ಯಾಗಿನಲ್ಲಿ ಇಟ್ಟುಕೊಳ್ಳುತ್ತಿದ್ದರು.
ದಾರಿಯಲ್ಲಿ ಕೆಸರು, ಸಗಣಿ ಎರಚಿಸಿಕೊಂಡಾಗ, ಬೇಸರ ಗೊಳ್ಳದೆ- ನಮ್ಮ ಮೇಲೆ ಎರಚುವ ಸಗಣಿ, ತೂರುವ ಕಲ್ಲುಗಳನ್ನು ಹೂಗಳೆಂದು ಪರಿಭಾವಿಸಿ, ಶಾಲೆಯಲ್ಲಿ ಮಕ್ಕಳು ಬರುವುದರೊಳಗೆ ಬ್ಯಾಗಿನಲ್ಲಿ ಇಟ್ಟುಕೊಂಡಿರುತ್ತಿದ್ದ ಮತ್ತೊಂದು ಸೀರೆಯನ್ನು ಉಟ್ಟುಕೊಂಡು ಪಾಠಕ್ಕೆ ಅಣಿಯಾಗುತ್ತಿದ್ದರು. 1848ರಿಂದ 1852ರ ಅವಧಿಯಲ್ಲಿ 18ಪಾಠಶಾಲೆಗಳನ್ನು ಫುಲೆ ದಂಪತಿಗಳು ತೆರೆದರು.
ಈ ಪಾಠಶಾಲೆಗಳ ಆಡಳಿತದ ಜವಾಬ್ದಾರಿಯನ್ನು ಸಾವಿತ್ರಿಬಾಯಿ ನಿರ್ವಹಿಸಬೇಕಾಗಿತ್ತು. ಶಿಕ್ಷಕಿ, ಸಂಚಾಲಕಿ, ಮುಖ್ಯೋಪಾಧ್ಯಾಯಿನಿ ಮುಂತಾದ ಕೆಲಸಗಳನ್ನು ಇವರು ಸಮರ್ಪಕವಾಗಿ ನಿಭಾಯಿಸುವುದರ ಮೂಲಕ ಜ್ಯೋತಿಬಾಫುಲೆ ಅವರಿಗೆ ನೆರವಾದರು. ಬ್ರಿಟಿಷ್ ಸರ್ಕಾರದವರು ಅವರ ಕೆಲಸ ಕಾರ್ಯಗಳನ್ನು ಕೂಲಂಕುಷವಾಗಿ ಅವಲೋಕಿಸಿ ಮೆಚ್ಚುಗೆ ಸೂಸಿದ್ದರು.
ಇಂದು ಭಾರತದ ಮಹಿಳೆಯರ ಸಮಾಜದ ಎಲ್ಲಾ ಕ್ಷೇತ್ರದಲ್ಲಿ ಸಮಾನತೆಯ ಹಕ್ಕಿಗೆ ಕಾರಣರಾದವರು ಮಾತೆ ಸಾವಿತ್ರಿ ಬಾಪುಲೆ. ಇವರು ಸಮಾಜದ ಅನಿಷ್ಟ ಪದ್ದತಿಗಳಾದ ಬಾಲ್ಯ ವಿವಾಹ, ಸತಿಸಹಗಮನ ಪದ್ದತಿ, ಕೇಶ ಮುಂಡನೆ ವಿರುದ್ದ ಹೋರಾಟ ಮಾಡಿ, ಮಹಿಳೆಯರಿಗೋಸ್ಕರ ಪ್ರ ಪ್ರಥಮವಾಗಿ ಶಾಲೆಗಳು, ಅಬಲಾಶ್ರಮ ಸ್ಥಾಪನೆ ಮಾಡಿದ ಕೀತಿ೯ ಇವರಿಗೆ ಸಲ್ಲುತ್ತದೆ. ಇವರು ಒಟ್ಟು 14 ಶಾಲೆಗಳನ್ನು ಸ್ಥಾಪನೆ ಮಾಡುತ್ತಾರೆ.
ಈ ಎಲ್ಲಾ ಸಾಧನೆಗಳನ್ನು ಪರಿಗಣಿಸಿ ಬ್ರಿಟಿಷ್ ಸರಕಾರ ಇವರಿಗೆ “ಇಂಡಿಯಾಸ್ ಫಸ್ಟ್ ಲೇಡಿ ಟೀಚರ್” ಎಂದು ಬಿರುದು ಕೂಡ ಕೊಟ್ಟಿದೆ. ಸ್ತ್ರೀಯರು ಕೂಡ ಪುರುಷರಂತೆ ಶಿಕ್ಷಣವನ್ನು ಪಡೆಯಬೇಕೆಂಬ ಮಹದಾಸೆಯಿಂದ ತಮಗೊದಗಿದ ಕಷ್ಟ – ಕಾರ್ಪಣ್ಯಗಳನ್ನು ಲೆಕ್ಕಿಸದೇ ಸ್ತ್ರೀ ಸಂಕುಲಕ್ಕೆ ಶೈಕ್ಷಣಿಕ ರಹದಾರಿಯನ್ನು ತೋರಿಸಿದರು.

ಲೇಖಕಿಯಾಗಿ.

1854ರಲ್ಲಿ ಸಾವಿತ್ರಿಬಾಯಿಯವರು ‘ಕಾವ್ಯಫೂಲೆ'(ಕಾವ್ಯ ಅರಳಿದೆ) ಎನ್ನುವ ಕವನಸಂಕಲನವನ್ನು ಪ್ರಕಟಿಸಿದರು. ಈ ಕಾವ್ಯವು 19ನೇ ಶತಮಾನದ ಸಮಾಜವನ್ನು ದಾಖಲಿಸುವಲ್ಲಿ ಮೈಲಿಗಲ್ಲಾಗಿದೆ. ಇವರು ಈ ಕೃತಿಯನ್ನು’ಅಭಂಗ್’ ಶೈಲಿಯಲ್ಲಿ ರಚಿಸಿದ್ದಾರೆಂದು ವಿಮರ್ಶಕರು ಅಭಿಪ್ರಾಯ ಪಟ್ಟಿದ್ದಾರೆ. ಈ ಕೃತಿಯಿಂದಾಗಿ ಸಾವಿತ್ರಿಬಾಯಿಯವರನ್ನು ಮರಾಠಿ ಕಾವ್ಯದ ಪ್ರವರ್ತಕಿ ಎಂದು ಕರೆಯಲಾಗಿದೆ.
ಅವರ ಎರಡನೇಯ ಕೃತಿ ‘ಭವನಕಾಶಿ ಸುಬೋಧ ರತ್ನಾಕರ್'(ಅಪ್ಪಟ ಮುತ್ತುಗಳ ಸಾಗರ) 1891ರಲ್ಲಿ ಪ್ರಕಟವಾಯಿತು. ಇದು ಜ್ಯೋತಿಬಾ ಅವರನ್ನು ಒಳಗೊಂಡಂತೆ ಬರೆದ ಒಂದು ಬಯೋಗ್ರಫಿ.
ಮೂರನೆಯದು ಜ್ಯೋತಿಬಾ ಅವರ ಭಾಷಣಗಳ ಸಂಪಾದಿತ ಕೃತಿಯನ್ನು 1892ರಲ್ಲಿ ಸಂಪಾದಿಸಲಾಯಿತು. ನಾಲ್ಕನೇ ಕೃತಿ- ಕರ್ಜೆ(ಸಾಲ) ಎಂಬುದಾಗಿದೆ. ಸಾಮಾಜಿಕ ಕಳಕಳಿಯುಳ್ಳ ಕೃತಿಗಳಾಗಿವೆ.
ಕರ್ನಾಟಕ ಶಿಕ್ಷಕರ ಬಳಗ.

ಇದನ್ನು ಒದಿ : https://cnewstv.in/?p=7323

ಆದರ್ಶ ಪತ್ನಿಯಾಗಿ.

ಜ್ಯೋತಿಬಾ ಅವರ ತತ್ವ ಮತ್ತು ಪ್ರಗತಿಪರ ದೃಷ್ಟಿಕೋನವನ್ನು ತಮ್ಮದಾಗಿಸಿಕೊಳ್ಳುವ ಸಾವಿತ್ರಿಬಾಯಿಯವರು ಜೀವಮಾನವಿಡೀ ಪತಿಯೊಂದಿಗೆ ಹೆಗಲಿಗೆ ಹೆಗಲುಕೊಟ್ಟು ನಿಲ್ಲುತ್ತಾರೆ. ಇವರಿಬ್ಬರ ನಡುವೆ ಒಂದು ಮಧುರವಾದ ಬಾಂಧವ್ಯ ಮತ್ತು ವೈಯಕ್ತಿಕ ಭಾವನೆಗಳನ್ನು ಗೌರವಿಸಿಕೊಳ್ಳುವ ಗುಣವಿತ್ತು. ಅವರಿಗೆ ಮಕ್ಕಳಿರದಿದ್ದರು ಸಂತೋಷವಾಗಿದ್ದರು. ಪತ್ನಿಯ ಮೇಲೆ ಅಗಾಧ ಪ್ರೀತಿ ಹೊಂದಿದ್ದ ಜ್ಯೋತಿಬಾ ಫುಲೆ ಅವರು ಮಕ್ಕಳಿಗಾಗಿ ಮರುಮದುವೆಯಾಗಲಿಲ್ಲ.
ಮುಂದೆ ಫುಲೆ ದಂಪತಿಗಳು 1874ರಲ್ಲಿ ವಿಧವೆಯೊಬ್ಬಳ ಮಗನಾದ ಯಶವಂತನನ್ನು ದತ್ತು ತೆಗೆದುಕೊಂಡು, ಆತ ಸಮಾಜದಲ್ಲಿ ಸತ್ಪ್ರಜೆಯಾಗುವ ಅವಕಾಶವನ್ನು ಕಲ್ಪಿಸುತ್ತಾರೆ. 1863ರಲ್ಲಿ ಅನಾಥ ಮಕ್ಕಳಿಗಾಗಿ ಶಿಶುಕೇಂದ್ರವನ್ನು ತೆರೆಯುತ್ತಾರೆ. ಆ ಅನಾಥ ಮಕ್ಕಳೊಂದಿಗೆ ಪ್ರಾಂಜಲ ಮನಸ್ಸಿನಿಂದ ಬೆರೆಯುತ್ತಾರೆ.

ಸಾಮಾಜಿಕ ಕ್ರಾಂತಿಕಾರಿಯಾಗಿ.

150ವರ್ಷಗಳ ಹಿಂದೆಯೇ ಸಾವಿತ್ರಿಬಾಯಿ ಶಾಲೆಯನ್ನು ತೊರೆಯದ ವಿದ್ಯಾರ್ಥಿಗಳಿಗೆ ಸ್ಟೈಫಂಡ್ ಕೊಡುವ ಯೋಜನೆ ತಂದಿದ್ದರು. ಶಿಕ್ಷಣದಲ್ಲಿ ವೈವಿಧ್ಯತೆ ತಂದಿದ್ದರು.
1860ರ ದಶಕದಲ್ಲಿ ವಿಧವೆಯರ ತಲೆಬೋಳಿಸುವ ಪದ್ಧತಿಯನ್ನು ಪ್ರಬಲವಾಗಿ ವಿರೋಧಿಸಿದರು. ವಿಧವೆಯರಿಗೆ, ವಿವಾಹಬಾಹಿರವಾಗಿ ಗರ್ಭಿಣಿಯರಾಗುವ ಮಹಿಳೆಯರಿಗಾಗಿ ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಿದರು. ವಿವಾಹಬಾಹಿರ ಸಂಬಂಧದಿಂದ ಹುಟ್ಟಿದ ಮಕ್ಕಳಿಗಾಗಿ ಭಿನ್ನವಾದ ಶಿಶುಕೇಂದ್ರಗಳನ್ನು ಸ್ಥಾಪಿಸಿದರು. ಈ ಬಗೆಯ ಸಾಮಾಜಿಕ ಸಂಘಟನೆಗಳ ಮೂಲಕ ನೂರಾರು ಮಹಿಳೆಯರ ಮತ್ತು ಮಕ್ಕಳ ಬದುಕಿಗೊಂದು ನೆಲೆ ಕೊಟ್ಟರು.
ಸಾವಿತ್ರಿಬಾಯಿ ‘ಸತ್ಯೋಧಕ’ ಸಮಾಜದ ಅಧ್ಯಕ್ಷೆಯಾಗಿದ್ದರು. 19ನೇ ಶತಮಾನದ ಇತಿಹಾಸದಲ್ಲಿ ಹಿಂದೂ ಧಾರ್ಮಿಕ ಮದುವೆಗಳನ್ನು ಪೂಜಾರಿಗಳಿಲ್ಲದೆ ನೆರವೇರಿಸಿದ್ದುದು ಒಂದು ಕ್ರಾಂತಿಕಾರಿ ಹೋರಾಟವಾಗಿದೆ. ಈ ಸಂದರ್ಭದಲ್ಲಿ ಬ್ರಾಹ್ಮಣರ ಅಧಿಪತ್ಯವಿಲ್ಲದ ಮದುವೆಗಳನ್ನು ಏರ್ಪಡಿಸಿದ್ದರು. ಅಲ್ಲದೆ ಮೊಟ್ಟ ಮೊದಲ ಬಾರಿ ಕಾನೂನಿನ ನೆರವನ್ನು ಪಡೆದು ಮದುವೆ ನೆರವೇರಿಸಿದ್ದು ಇಂದಿಗೂ ಇತಿಹಾಸದಲ್ಲಿ ದಾಖಲಾಗದೆ ಉಳಿದಿರುವ ಸಂಗತಿ.
ಬದಲಾವಣೆಯ ಹರಿಕಾರರಾಗಿ
ಮಹಿಳೆಯರ ಹಕ್ಕುಗಳಿಗಾಗಿ ನಿರಂತರ ಚಳುವಳಿ ಸಂಘಟನೆಗಳನ್ನು ಸಂಘಟಿಸಿದರು.

1848 ರಲ್ಲಿ ಪತಿ ಜ್ಯೋತಿಬಾ ಫುಲೆಯವರೊಂದಿಗೆ ಸೇರಿ ತಳ ಸಮುದಾಯದ ಹೆಣ್ಣುಮಕ್ಕಳಿಗಾಗಿ ಪುಣೆಯಲ್ಲಿ ಶಾಲೆಯನ್ನು ಪ್ರಾರಂಭಿಸಿದರು.
1855 ರಲ್ಲಿ ಕೂಲಿ ಕಾರ್ಮಿಕರಿಗಾಗಿ ರಾತ್ರಿಪಾಳೆಯದ ಶಾಲೆ ಸ್ಥಾಪನೆ.
1868 ರಲ್ಲಿ ದಲಿತರಿಗಾಗಿ ಮನೆಯ ಕುಡಿಯುವ ನೀರಿನ ಟ್ಯಾಂಕನ್ನು ಬಿಟ್ಟುಕೊಟ್ಟರು.
ಬ್ರಾಹ್ಮಣ ವಿಧವೆಯ ಮಗುವೊಂದನ್ನು ದತ್ತು ತೆಗೆದುಕೊಂಡರು.
ಪಶ್ಚಿಮ ಮಹಾರಾಷ್ಟ್ರದ ಕ್ಷಾಮ ಪ್ರದೇಶಗಳಲ್ಲಿ ಎರಡು ವರ್ಷ ಸೇವೆ ಸಲ್ಲಿಸಿದರು.

ಪ್ರಶಸ್ತಿ ಗೌರವ.

ಶಿಕ್ಷಣ ಕೇತ್ರದಲ್ಲಿನ ಸಾಧನೆಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಫುಲೆ ದಂಪತಿಗಳಿಗೆ ಸನ್ಮಾನ.
ಬ್ರಿಟಿಷ್ ಸರಕಾರ ಇವರಿಗೆ *”ಇಂಡಿಯಾಸ್ ಫಸ್ಟ್ ಲೇಡಿ ಟೀಚರ್”* ಎಂದು ಬಿರುದು ಕೂಡ ಕೊಟ್ಟಿದೆ.
ಗಣ್ಯರ ದೃಷ್ಠಿಯಲ್ಲಿ ಸಾವಿತ್ರಿಬಾಯಿ ಫುಲೆ
ಥಾಮ್ ವುಲ್ಫ್ ಮತ್ತು ಸುಜನ ಆಂಡ್ರಡೆ. ಸಾವಿರಾರು ದೀಪಗಳನ್ನು ಹಚ್ಚಿದ ಆಧುನಿಕ ಶಿಕ್ಷಣದ ತಾಯಿ ಸಾವಿತ್ರಿಬಾಯಿ ಫುಲೆಗೆ ನಾವು ಚಿರಋಣಿಯಾಗಿರಬೇಕು. ಇಂದಿನ ಅಕ್ಷರಸ್ಥ ಭಾರತೀಯ ಪ್ರತಿಯೊಬ್ಬ ಮಹಿಳೆಯ ಮನದಲ್ಲೂ ಸಾವಿತ್ರಿಬಾಯಿ ಫುಲೆ ಇದ್ದಾರೆ.
150ವರ್ಷಗಳ ಹಿಂದೆ ಸ್ತ್ರೀ ವಿಮೋಚನೆ ಕನಸಾಗಿದ್ದ ಕಾಲದಲ್ಲಿ ಅದನ್ನು ನನಸಾಗಿಸಲು ಸಾವಿತ್ರಿಬಾಯಿ ಫುಲೆ ಶ್ರಮಿಸಿದ್ದಾರೆ. ಆದರಿಂದು ಸ್ತ್ರೀ ವಿಮೋಚನೆ ಫ್ಯಾಷನ್ ಆಗಿದೆ.
ಗೋವಂಡೆ – ಫುಲೆ ದಂಪತಿಗಳ ಪ್ರಕಾರ ಹುಟ್ಟುವ ಪ್ರತಿಯೊಂದು ಮಗುವು ವಿಶೇಷವಾದುದು. ಮಕ್ಕಳು ಭೂಮಿಯ ಮೇಲಿನ ನಕ್ಷತ್ರಗಳು ಎಂದಿದ್ದಾರೆ. ಅವರ ಈ ಮಾತುಗಳಲ್ಲಿ ಎಷ್ಟೊಂದು ಸತ್ಯ ಅಡಗಿದೆ !

ನಿಧನ.

10 ಮಾರ್ಚ್ 1897ರಲ್ಲಿ ಪ್ಲೇಗ್ ಪೀಡಿತ ರೋಗಿಗಳ ಸೇವೆಯಲ್ಲಿ ತೊಡಗಿದ್ದಾಗ ಸ್ವತಃ ಸಾವಿತ್ರಿಬಾಯಿ ಫುಲೆ ಅವರೇ ಆ ಕಾಯಿಲೆಯ ಸೋಂಕಿಗೆ ಬಲಿಯಾಗಿ ತೀರಿಕೊಂಡರು.

ಕೃಪೆ : ಅಂತರ್ಜಾಲ, ಸಂಗ್ರಹ ಮಾಹಿತಿ..

ಇದನ್ನು ಒದಿ : https://cnewstv.in/?p=7325

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*