Cnewstv.in / 18.12.2021/ ಬೆಳಗಾವಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸ : ಸೆಕ್ಷನ್ 144 ಜಾರಿ. ಸ್ವಯಂಪ್ರೇರಿತ ದೂರು ದಾಖಲು
ಬೆಳಗಾವಿ : ನಗರದ ಅನಗೋಳದ ಕನಕದಾಸ ಕಾಲೋನಿಯಲ್ಲಿ ಇಂದು ನಸುಕಿನ ಜಾವ ಕಿಡಿಗೇಡಿಗಳು ಸಂಗೊಳ್ಳಿ ರಾಯಣ್ಣ ಪುತ್ಥಳಿ ವಿರೂಪಗೊಳಿಸಿರುವ ಘಟನೆ ನಡೆದಿದೆ. ಜನಸಂಚಾರವಿರದ ಹೊತ್ತಿನಲ್ಲಿ ದುಷ್ಕರ್ಮಿಗಳು ಆಗಮಿಸಿ ಪುತ್ಥಳಿ ಬೀಳಿಸಿ ವಿರೂಪಗೊಳಿಸಿದ್ದಾರೆ. ಸಂಗೊಳ್ಳಿ ರಾಯಣ್ಣ ಪುತ್ಥಳಿ ಹಾನಿಗೊಳಿಸಿ ಖಡ್ಗ, ಗುರಾಣಿ ಬೇರೆ ಬೇರೆ ಕಡೆ ಇಟ್ಟಿದ್ದಾರೆ.
ನಂತರ ಸ್ಥಳದಲ್ಲಿ ತೀವ್ರ ಗಲಾಟೆ, ಗದ್ದಲ ನಡೆದಿದೆ. ಬೈಕ್ ಕಾರುಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ, ಅದರಲ್ಲೂ ಪೊಲೀಸ್ ಇಲಾಖೆಯ ವಾಹನಗಳನ್ನು ಗುರಿಯಾಗಿಟ್ಟುಕೊಂಡು ಪುಂಡರು ಕಲ್ಲು ತೂರಾಟ ನಡೆಸಿದ್ದಾರೆ.
ಬೆಳಗಾವಿಯ ಮೂರು ವಿವಿಧ ಪೊಲೀಸ್ ಠಾಣೆಗಳಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ವಿರೂಪಗೊಳಿಸಿದ ಘಟನೆಗೆ ಸಂಬಂಧಿಸಿ 27 ಮಂದಿಯನ್ನು ಇದುವರೆಗೆ ಬಂಧಿಸಲಾಗಿದೆ.
ಬೆಳಗಾವಿಯ ಕ್ಯಾಂಪ್ ಪೊಲೀಸ್ ಠಾಣೆ, ಖಡೇಬಜಾರ್ ಪೊಲೀಸ್ ಠಾಣೆ ಮತ್ತು ಮಾರ್ಕೆಟ್ ಠಾಣೆಯಲ್ಲಿ ಮೂರು ಪ್ರತ್ಯೇಕ ದೂರುಗಳು ದಾಖಲಾಗಿವೆ. ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದು, ಕಾನೂನು ಸುವ್ಯವಸ್ಥೆ ಹಾಳು ಮಾಡುವುದು, ಭಾಷಾ ವೈಷಮ್ಯ ಮೂಡಿಸುವುದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಎಂದು ನೂರಾರು ಎಂಇಎಸ್ ಪುಂಡರ ವಿರುದ್ಧ ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡಿದ್ದಾರೆ.
ಘಟನೆ ಹಿನ್ನೆಲೆಯಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿರುವುದರಿಂದ ಇಂದು ಬೆಳಗ್ಗೆ 8 ಗಂಟೆಯಿಂದ ನಾಳೆ ಬೆಳಗ್ಗೆ 6 ಗಂಟೆಯವರೆಗೂ ಬೆಳಗಾವಿ ನಗರದಲ್ಲಿ 144 ಸೆಕ್ಷನ್ ಜಾರಿ ಮಾಡಿ ನಿಷೇಧಾಜ್ಞೆ ವಿಧಿಸಲಾಗಿದೆ
ಇದನ್ನು ಒದಿ : https://cnewstv.in/?p=7173
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments