Breaking News

“ಮಂಟಪ” ಮುಳುಗಿತ್ತಾ? ಶಿವಮೊಗ್ಗ ಜಿಲ್ಲೆಯಲ್ಲಿ ಪ್ರತಿ ವರ್ಷ ಮಳೆಗಾಲದಲ್ಲಿ ಕೇಳುವ ಪ್ರಶ್ನೆ. ಆದರೆ ಈ ಕೋರ್ಪಳಯ್ಯ ಮಂಟಪದ ಹಿಂದಿನ ರೋಚಕ ಕಥೆ ಗೊತ್ತಾ??

 

Cnewstv.in / 23.07.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ತುಂಗಾ ನದಿಯ ಎಡದಂಡೆಯ ಮೇಲಿರುವ ಶಿವಮೊಗ್ಗ ನಗರಕ್ಕೆ ಕುಡಿಯುವ ನೀರಿನ ಪ್ರಮುಖ ಆಸರೆಯೇ “ತುಂಗಾ ನದಿ”. ನಮ್ಮ ಶಿವಮೊಗ್ಗದಲ್ಲಿ ಪ್ರತಿ ವರ್ಷ ಮಳೆಯ ಪ್ರಮಾಣವನ್ನು ಅಳೆಯುವ ಪದ್ಧತಿ ವಿಶೇಷವಾಗಿದೆ. ಮಳೆ ಜಾಸ್ತಿಯಾಗಿದೆ ಅಥವಾ ಕಡಿಮೆಯಾಗಿದೆ ಅಥವಾ ವಾಡಿಕೆಯಂತೆ ಆಗಿದೆ ಅನ್ನೋದು ನಿರ್ಧಾರ ಆಗುವುದು ಎಷ್ಟು ಸರಿ “ಕೋರ್ಪಳಯ್ಯನ ಮಂಟಪ” ಮುಳುಗಿದೆ ಅನ್ನೋದರ ಮೇಲೆ. ಹಾಗಾದರೆ ಈ ಕೋರ್ಪಳಯ್ಯನ ಮಂಟಪ ಮಳೆಯನ್ನು ಅಳೆಯುವ ಸಾಧನವೇ, ಇದನ್ನು ಕಟ್ಟಿಸಿದ್ದು ಯಾರು, ಕೋರ್ಪಳಯ್ಯ ಎಂದರೆ ಏನು ಎಂಬ ಪ್ರಶ್ನೆ ಸಹಜವಾಗಿ ಕಾಡುತ್ತದೆ. ನಮ್ಮ ಶಿವಮೊಗ್ಗದ ಎಲ್ಲಾ ಜನರಿಗೆ ಪರಿಚಯ ಇರುವ ಈ ಕೋರ್ಪಳಯ್ಯ ಮಂಟಪದ ಹಿಂದಿನ ಕಥೆ ವ್ಯಥೆಯ ಬಗ್ಗೆ ಯಾರಿಗೂ ತಿಳಿದಿಲ್ಲ. ಇದರ ಹಿಂದೆ ಒಂದು ರೋಚಕವಾದ ಫಿಲ್ಮೀ ತರಹದ ಪ್ರೀತಿ, ಪ್ರೇಮ, ದೋಖಾ ಎಲ್ಲವೂ ಸೇರಿದೆ.

1800ರ ನಂತರದಲ್ಲಿ
ಹದಿನೇಳನೆಯ ಶತಮಾನದಲ್ಲಿ ಪಶ್ಚಿಮ ಘಟ್ಟದ ಮಲೆನಾಡಿನಲ್ಲಿ ಪ್ರಾರಂಭವಾದ ಕಾಫಿ ಬೆಳೆಯುವ ಪದ್ಧತಿ ಪ್ರಥಮ ಹಂತದಲ್ಲಿ ನಿರ್ದಿಷ್ಟ ಪ್ರಮಾಣದಲ್ಲಿ ಬೆಳೆಯುತ್ತಿದ್ದರು. ಆದರೆ 1800ರಲ್ಲಿ ಬದಲಾದ ರಾಜಕೀಯ ಸನ್ನಿವೇಶ, ನಮ್ಮ ಮಲೆನಾಡಿನಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಂಡವು. ಬ್ರಿಟಿಷ್ ಸರ್ಕಾರ ಪಶ್ಚಿಮ ಘಟ್ಟದಲ್ಲಿ ಇರುವ ನೈಸರ್ಗಿಕ ಸಂಪತ್ತನ್ನು ಕೊಳ್ಳೆ ಹೊಡೆಯಲು, ಬ್ರಿಟನ್ ದೇಶದ ಹಲವಾರು ವ್ಯಾಪಾರ ಕಂಪನಿಗಳಿಗೆ ಗುತ್ತಿಗೆಯನ್ನು ನೀಡುತ್ತದೆ. ಕುಂಸಿ ಮೈನಿಂಗ್ (ಗಣಿಗಾರಿಕೆ), ಹೊನ್ನಾಳಿ ಚಿನ್ನದ ಗಣಿಗಾರಿಕೆ, ಟಿಂಬರ್ ಲಾಬಿ ಜೊತೆಗೆ ಕಾಫಿ ಪ್ಲಾಂಟೇಷನ್ ಯುರೋಪಿಯನ್ ಅವರ ಗಮನ ಸೆಳೆಯುತ್ತದೆ. 1831 ರಿಂದ 1881ರ ವರೆಗೆ ಚಾಲ್ತಿಯಲ್ಲಿದ್ದ ಕಮಿಷನರ್ ರೂಲ್ ಸಮಯದಲ್ಲಿ ಕರ್ನಾಟಕದ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಇರುವ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಮಡಿಕೇರಿಯಲ್ಲಿ ಹಲವಾರು ಯುರೋಪಿಯನ್ನರು ನಮ್ಮ ನೈಸರ್ಗಿಕ ಭರಿತ ಸಾವಿರಾರು ಹೆಕ್ಟೇರ್ ಕಾಡನ್ನು ಕಡಿದು ಕಾಫಿ ಬೆಳೆಯಲು ಪ್ರಾರಂಭಿಸುತ್ತಾರೆ. ಪ್ಯಾರಿ ಅ್ಯಂಡ ಕಂಪನಿಯ (Parry & Company) ಏಜೆಂಟ್ ಆಗಿದ್ದ ಎಚ್. ಜೊಲಿ (JH Jolly) ಚಿಕ್ಕಮಗಳೂರಿನಲ್ಲಿ ಬೆಳೆಯುವ ಕಾಫಿಯನ್ನು ಖರೀದಿಸಲು 1823ರಲ್ಲಿ ಮೈಸೂರು ಮಹಾರಾಜರ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕುತ್ತಾನೆ. ಇದರ ನಂತರ ಥೋಮಸ್ ಕ್ಯಾನಾನ್ (Thomas Cannon Mylemoney) 1830ರಲ್ಲಿ ಅಂದಿನ ಕಡೂರು ಜಿಲ್ಲೆಯಲ್ಲಿ (ಇಂದಿನ ಚಿಕ್ಕಮಗಳೂರು) ದೊಡ್ಡ ಪ್ರಮಾಣದಲ್ಲಿ ಕಾಫಿ ಬೆಳೆಯಲು ಶುರು ಮಾಡುತ್ತಾನೆ. ನೋಡು ನೋಡುತ್ತಲೆ, ಮಿಡಲ್ಟನ್ (A Middleton), ಫಾಸ್ಟರ್ (RO Foster), ಬ್ರೂಕ್ ಮೋಕೆಟ್ (Brooke Mocket), ವಿಲಿಯಮ್ಸ್ (RW Williams), ಚೆಸ್ಟರ್ (CK Chester), ರಾಡ್‌ಕ್ಲಿಫ್ (Radcliff) ಮತ್ತು ಡೆಂಟನ್ (Denton) ಇವರುಗಳು ನಮ್ಮ ಪಶ್ಚಿಮ ಘಟ್ಟದ ಕಾಡನ್ನು ಕಡಿದು ಕಾಫಿ ಪ್ಲಾಂಟೇಷನ್ ವ್ಯವಸಾಯವನ್ನು ಪ್ರಾರಂಭಿಸುತ್ತಾರೆ.

ಸಂಪಿಗೆ ಕಾನ್ ಎಸ್ಟೇಟ್ 

ತರೀಕೆರೆ ತಾಲ್ಲೂಕಿನ ಬಾಬಬುಡನ್ ಗಿರಿ ಪ್ರರ್ವತ ಶ್ರೇಣಿಯ ಉತ್ತರ ಭಾಗದ ಇಳಿಜಾರಿನಲ್ಲಿ ಸಂಪಿಗೆ ಕಾನ್ ಎಸ್ಟೇಟ್ (822 Acres) ಅನ್ನು ಸೆಪ್ಟೆಂಬರ್ 1861ರಲ್ಲಿ ಪ್ರಾರಂಭಿಸಿದ ಸಹೋದರರು ಆದ ಜಾನ್ ಡೆಂಟನ್ (John Denton) ಮತ್ತು ವಿಲಿಯಂ ಡೆಂಟನ (William Denton) ಈ ಭಾಗದಲ್ಲಿ ಕಾಫಿ ವ್ಯವಸಾಯದ ಪ್ರಮುಖ ಪ್ರವರ್ತಕರು. ಡೆಂಟನ ಸಹೋದರರು ಬರುವ ಮುಂಚೆ ಈ ಭಾಗದಲ್ಲಿ ಇದ ಕಾಫಿ ತೋಟಗಳು ಅಂದರೆ ಸಂತವೇರಿ (santaveri), ಕಲ್ ಹಟ್ಟಿ (kalhatti) ಮತ್ತು ಕೇಸಿನವರ್ತೆ (kesinavarty). ಜಾನ್ ಡೆಂಟನಗೆ ಮಕ್ಕಳಿಲ್ಲದ ಕಾರಣ ಅವನು ತನ್ನ ಬಾವ ಮೈದುನ ಹೆನ್ರಿ ಕೋರ್ಪಳಿಸ್ (Henry Courpalais) ನನ್ನು ತನ್ನ ಭಾಗೀದಾರನನ್ನಾಗಿ ಮಾಡುತ್ತಾನೆ. ಕೆಲವು ವರ್ಷಗಳಲ್ಲೇ ಜಾನ್ ಮತ್ತು ವಿಲಿಯಂ ಡೆಂಟನ ಸಹೋದರರು ತೀರಿಕೊಂಡಾಗ ಸಂಪಿಗೆ ಖಾನ್ ಎಸ್ಟೇಟ್ ಸಂಪೂರ್ಣವಾಗಿ ಹೆನ್ರಿ ಕೋರ್ಪಳಿಸ್ ಅವರ ಕೈವಶ ಆಗುತ್ತದೆ. ಕಾನೂನು ಬದ್ಧವಾಗಿ ಇಡೀ ಸಂಪಿಗೆ ಖಾನ್ ಎಸ್ಟೇಟ್ ಅನ್ನು ತನ್ನ ಹೆಸರಿಗೆ ಮಾಡಿ ಕೊಳ್ಳಲು ಹೆನ್ರಿ ಕೋರ್ಪಳಿಸ್ ವಿಲಿಯಂ ಡೆಂಟನ್ ನ ವಿಧವೆ ಚಾರ್ಲೊಟ್ಟೆ (Charlotte) ಯನ್ನು ಪ್ರೀತಿಸಿ ಮದುವೆಯಾಗಿ ಇಡೀ ಎಸ್ಟೇಟ್ ಅನ್ನು ತನ್ನ ಹೆಸರಿಗೆ ಮಾಡಿಕೊಳ್ಳುತ್ತಾನೆ. ಕೆಲವು ಸಮಯದ ನಂತರ ಹೆನ್ರಿ ಕೋರ್ಪಳಿಸ್ ಮಸ್ಕಲಮರಡಿ (Maskalmardi), ಕುರ್ಕನಮಟ್ಟಿ (Kurkanmatti) ಮತ್ತು ಚೌಡಿ ಕಾನ್ (Chowdy Kan) ಎಸ್ಟೇಟ್ ಗಳನ್ನು ಕೊಂಡು ಕೊಳ್ಳುತ್ತಾನೆ.

ವಿರಸ ಸರಸ

ಹೆನ್ರಿ ಕೋರ್ಪಳಿಸ್ ಮತ್ತು ಚಾರ್ಲೊಟ್ಟೆ ಮಧ್ಯದಲ್ಲಿ ವಿರಸ ಶುರುವಾಗಿ ಎಷ್ಟರಮಟ್ಟಿಗೆ ಹೋಗುತ್ತದೆ ಅಂದರೆ, ಸಂಪಿಗೆ ಖಾನ್ ಎಸ್ಟೇಟ್ ಹಕ್ಕಿ ಗೋಸ್ಕರ ಚಾರ್ಲೊಟ್ಟೆ ಹೆನ್ರಿ ವಿರುದ್ಧ ದಾವೆಯನ್ನು ಹೂಡುತ್ತಾಳೆ. ಚಾರ್ಲೊಟ್ಟೆಗೆ ತನ್ನ ಮೊದಲ ಪತಿಯಿಂದ ನಾಲ್ಕು ಮಕ್ಕಳಿದ್ದರೆ, ಹೆನ್ರಿ ಜೊತೆಗೆ ಯಾವುದೇ ಮಕ್ಕಳಿರಲಿಲ್ಲ. ಈ ವಿರಸದಿಂದ ಸ್ವಲ್ಪ ಮಟ್ಟಿಗೆ ನೆಮ್ಮದಿ ಕಂಡು ಕೊಳ್ಳಲು ಹೆನ್ರಿ ಶಿವಮೊಗ್ಗದ ಕಡೆ ಮುಖ ಮಾಡುತ್ತಾನೆ. ಶಿವಮೊಗ್ಗದಲ್ಲಿ ಆ ಹೊತ್ತಿಗೆ ಕೆನರೀಸ್ ಮಿಶನರಿಗಳು (Canarese or Wesleyan Missionary) ತಮ್ಮ ನೆಲೆಯನ್ನು ಕಂಡು ಕೊಳ್ಳಲು ಹರಸಾಹಸ ಪಡುತ್ತಿರುವಾಗ, ಅವರ ನೆರವಾಗಿ ನಿಂತಿದ್ದು ಹೆನ್ರಿ. ಹೆನ್ರಿ ಈ ಮಿಶನರಿಗಳಿಗೆ ಆರ್ಥಿಕ ನೆರವು ನೀಡುತ್ತಾನೆ. ಸೆಪ್ಟೆಂಬರ್ 5 1896ರಂದು ಉದ್ಘಾಟನೆ ಗೊಂಡ ವೆಸ್ಲಿಯನ್ ಚರ್ಚ್ ಅನ್ನು ಸಂಪೂರ್ಣವಾಗಿ ತನ್ನ ದುಡ್ಡಿನಿಂದ (ರೂ 4500) ಕಟ್ಟಿಸುತ್ತಾನೆ. ಮೊದಲ ಹೆಂಡತಿ ಇಂದ ದೂರ ಇದ್ದ ಹೆನ್ರಿಗೆ ಶಿವಮೊಗ್ಗದ ಒಂದು ಲಂಬಾಣಿ ಹೆಣ್ಣಿನ ಜೊತೆಗೆ ಪ್ರೇಮ ಚಿಗುರಿ ಅವಳನ್ನು ವರಿಸಿ ಅವಳಿಂದ ಎರಡೂ ಮಕ್ಕಳನ್ನು ಪಡೆಯುತ್ತಾನೆ. ಶಿವಮೊಗ್ಗದಲ್ಲಿ ವಾಸಿಸಲು ಕೋಟೆ ರಸ್ತೆಯಲ್ಲಿ ಒಂದು ವಿಶಾಲವಾದ ಕಟ್ಟಡವನ್ನು ನಿರ್ಮಾಣ ಮಾಡುತ್ತಾನೆ, ಅದನ್ನೇ ಜನರು ಇಂದಿಗೂ ಕೋರ್ಪಳಯ್ಯನ ಛತ್ರಯಂದು ಕರೆಯುತ್ತಾರೆ. 1891ರಲ್ಲಿ ಮೊದಲ ಹೆಂಡತಿ ಚಾರ್ಲೊಟ್ಟೆ ಜೊತೆಗೆ ಸಂಧಾನ ಮಾಡಿಕೊಂಡು ತನ್ನ ಸುರ್ಪದಿಯಲ್ಲಿ ಇದ್ದ ಚೌಡಿ ಕಾನ್ ಎಸ್ಟೇಟ್ ಅನ್ನು ಅವಳಿಗೆ ಹಸ್ತಾಂತರಿಸುತ್ತಾನೆ. ಅದೇ ತರ ಕರ್ಕಣಮಟ್ಟಿ ಎಸ್ಟೇಟ್ ಅನ್ನು ತನ್ನ ತಮ್ಮನಿಗೆ ನೀಡುತ್ತಾನೆ. ಜೂನ್ 20 1901ರಂದು ಶಿವಮೊಗ್ಗದಲ್ಲಿ ತನ್ನ ಕೊನೆ ಉಸಿರು ಎಳೆದ ಹೆನ್ರಿ ಕೋರ್ಪಳಿಸ್ ನನ್ನು ಕೋರ್ಪಳಯ್ಯನ ಛತ್ರದ ಹತ್ತಿರ ಸಮಾಧಿ ಮಾಡಲಾಯಿತು. ಹೆನ್ರಿ ಬರೆದ ವಿಲ್(Will) ಪ್ರಕಾರ ಸಂಪಿಗೆ ಖಾನ್ ಎಸ್ಟೇಟ್ ಅನ್ನು ತನ್ನ ತಮ್ಮನ ಮಗ ಕ್ಲೌಡಿ ಕೋರ್ಪಳಿಸ್ (Claude Courpalais) ಮತ್ತು ಮಸ್ಕಲಮರಡಿ ಎಸ್ಟೇಟ್ ಅನ್ನು ತನ್ನ ಇಬ್ಬರೂ ಮಕ್ಕಳಾದ EJ Courpalais ಮತ್ತು WR Courpalais ಗೇ ಹಸ್ತಾಂತರ ಆಗುತ್ತದೆ.

ಕೋರ್ಪಳಯ್ಯನ ಛತ್ರ ಮತ್ತು ಮಂಟಪ

ತುಂಗೆಯ ದಂಡೆಯ ಮೇಲೆ ತಾನು ವಾಸಿಸಲು ನಿರ್ಮಾಣ ಮಾಡಿದ ಬ್ರಿಟಿಷ್ ಶೈಲಿಯ ಕಟ್ಟಡದಲ್ಲಿ ಸಾರ್ವಜನಿಕರಿಗೆ ತಂಗಲು ವ್ಯವಸ್ಥೆ ಮಾಡಿದ ಪರಿಣಾಮವಾಗಿ ಇದನ್ನು ಕೋರ್ಪಳಯ್ಯ ಛತ್ರವೆಂದು ಪ್ರಸಿದ್ಧಿ ಪಡೆಯುತ್ತದೆ. ಈ ಕಟ್ಟಡ ಚಚ್ಚೌಕವಾಗಿದ್ದು ಮಂಗಳೂರು ಹೆಂಚಿನ ಸೂರು ಹೊಂದಿರುತ್ತದೆ. ಈ ಕಟ್ಟಡದ ಎರಡು ಬದಿಯಲ್ಲಿ ಮೊದಲ ಅಂತಸ್ತಿನಲ್ಲಿ ಬಾಲ್ಕನಿಗಳಿದ್ದು ಅದನ್ನು ಸಂಪರ್ಕಿಸಲು ಸುರುಳಿಯಾಕಾರದ ಮೆಟ್ಟಲುಗಳನ್ನು ಕಲ್ಪಿಸಲಾಗಿತ್ತು. ದಾರಿಹೋಕರಿಗೆ ತಂಗಲು ವಿಶಾಲವಾದ ಕೊಠಡಿಯನ್ನು ನಿರ್ಮಾಣ ಮಾಡಲಾಗಿತ್ತು. ತುಂಗ ನದಿಗೆ ಹೋಗಿ ಬರಲು ಹಿಂಬದಿಯಲ್ಲಿ ಒಂದು ಬಾಗಿಲು ಇದ್ದು, ಅನೇಕ ಮೆಟ್ಟಿಲುಗಳ ಮೂಲಕ ಮಂಟಪಕ್ಕೆ ಹೋಗಲು ವ್ಯವಸ್ಥೆ ಮಾಡಲಾಗಿತ್ತು.

ಹಲವಾರು ವರ್ಷ ಸಾರ್ವಜನಿಕ ಛತ್ರವಾಗಿ ಮತ್ತು ಹಲವಾರು ಜನರ ಮದುವೆ ಮತ್ತು ಇತರೆ ಶುಭ ಸಮಾರಂಭಗಳಿಗೆ ಸಾಕ್ಷಿಯಾಗಿದ್ದ ಕಟ್ಟಡವನ್ನು, ಸರ್ಕಾರ 2009ರಲ್ಲಿ ನೆಲಸಮ ಮಾಡಿ ಹೊಸ ಕಟ್ಟಡವನ್ನು ಕಟ್ಟಿದೆ. ನಮ್ಮ ಶಿವಮೊಗ್ಗದ ಪರಂಪರೆಯ ಭಾಗವಾಗಿದ್ದ ಸ್ಮಾರಕವನ್ನು ಸಂರಕ್ಷಿಸುವ ಬದಲು ಅದನ್ನು ಕೆಡವಿದ್ದು ನಿಜಕ್ಕೂ ಶೋಚನೀಯ. ಹೆನ್ರಿ ಅವರ ನೆನಪಿಗೆ ಉಳಿದಿರುವ ಕೋರ್ಪಳಯ್ಯ ಮಂಟಪವನ್ನಾದರು ಸರ್ಕಾರ ಉಳಿಸಲಿ.

ಮಾಹಿತಿ : ಅಜಯ್ ಕುಮಾರ್ – ಲೇಖಕರು, ಶಿವಮೊಗ್ಗ

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*