ಬೆಂಗಳೂರು : ರಾಜ್ಯ ಸರ್ಕಾರಿ ನೌಕರರಿಗೆ ನಾಲ್ಕನೆಯ ಶನಿವಾರ ರಜೆ ನೀಡುವ ಜತೆಯಲ್ಲಿ ವಿವಿಧ ಜಯಂತಿ ಆಚರಣೆ ವೇಳೆ ನೀಡಲಾಗುತ್ತಿದ್ದ ರಜೆಗೆ ಕತ್ತರಿ ಹಾಕಲು ಸರ್ಕಾರ ಮುಂದಾಗಿತ್ತು. ಆದರೆ, ಅದಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲು ನಿರ್ಧರಿಸಿದೆ ಎನ್ನಲಾಗಿದೆ.
ಸರ್ಕಾರಿ ಕಚೇರಿಗಳಿಗೆ ಪ್ರತಿ ತಿಂಗಳ ನಾಲ್ಕನೆ ಶನಿವಾರ ರಜೆ ನೀಡುವುದಾಗಿ ಸರ್ಕಾರ ಪ್ರಕಟಿಸಿತ್ತು. ಅದರ ಜತೆಗೆ ಕೆಲವು ಜಯಂತಿಗಳಿಗೆ ನೀಡುತ್ತಿದ್ದ ರಜೆಯನ್ನು ರದ್ದುಗೊಳಿಸಲಾಗಿತ್ತು. ಆರನೇ ವೇತನ ಆಯೋಗ ತನ್ನ 2ನೇ ಅವಧಿಯಲ್ಲಿ ನಾಲ್ಕನೆ ಶನಿವಾರದ ರಜೆಗೆ ಕುರಿತು ಶಿಫಾರಸು ಮಾಡಿತ್ತು. ಇದರಂತೆ ತಿಂಗಳ 2 ಮತ್ತು 4ನೇ ಶನಿವಾರ ಸರ್ಕಾರಿ ನೌಕರರಿಗೆ ರಜೆ ಸಿಗಲಿದೆ.
ಇದರೊಂದಿಗೆ ಮಹಾವೀರ ಜಯಂತಿ, ವಾಲ್ಮೀಕಿ ಜಯಂತಿ, ಕನಕ ಜಯಂತಿ, ಬಸವ ಜಯಂತಿ, ಕಾರ್ಮಿಕ ದಿನಾಚರಣೆಗಳಿಗೆ ಇರುವ ಸಾರ್ವತ್ರಿಕ ರಜೆಯನ್ನು ರದ್ದುಪಡಿಸಲಾಗಿತ್ತು. ಆ ದಿನಗಳನ್ನು ಕೆಲಸದ ದಿನಗಳನ್ನಾಗಿ ಪರಿವರ್ತಿಸಲು ಸೂಚಿಸಲಾಗಿತ್ತು. ಆದರೆ, ಈ ನಿರ್ಧಾರಕ್ಕೆ ವಿವಿಧ ಸಮುದಾಯಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ರಜೆಯ ರದ್ದು ಹಾಗೂ ಬದಲಾವಣೆಗಳ ಕುರಿತು ಗಹನವಾದ ಚರ್ಚೆ ನಡೆಯಿತು.
Recent Comments