“ಗ್ಯಾಂಗ್ ಕಟ್ಟಿಕೊಂಡು ಬರೋನು ಗ್ಯಾಂಗ್ ಸ್ಟರ್ ..ಅವನು ಒಬ್ಬನೇ ಬರೋನು ಮಾನ್ ಸ್ಟರ್ “..ಇದು ಕೆಜಿಎಫ್ ಚಿತ್ರದ ಸಂಭಾಷಣೆ. ಸಧ್ಯ ಈ ಡೈಲಾಗ್ ಅಕ್ಷರಶಃ ಸತ್ಯವಾಗಿದೆ.ಯಾಕಂದ್ರೆ ಇಷ್ಟು ದಿನ ಪರಭಾಷೆಗೂ ಮೀರಿದ ಸಿನಿಮಾ ನಮ್ಮ ಸ್ಯಾಂಡಲ್ ವುಡ್ ನಲ್ಲಿ ಯಾವುದು ಬಂದಿಲ್ಲ ಅನ್ನುವವರಿಗೆ ಕೆಜಿಎಫ್ ಚಿತ್ರ ಇವೆಲ್ಲವನ್ನೂ ಮೀರಿ ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಸದ್ದು ಮಾಡ್ತಿದೆ ..ಗಡಿಯಾಚೆಗೂ ದೊಡ್ಡ ಕ್ರೇಜ್ ಹುಟ್ಟುಹಾಕ್ತಿದೆ.ಈಗಾಗ್ಲೇ ಟ್ರೈಲರ್ ಮೂಲಕ ಎಲ್ಲರಲ್ಲಿ ನಿರೀಕ್ಷೆಯನ್ನ ಹೆಚ್ಚಿಸಿದ್ದ ಕೆಜಿಎಫ್ ಸಿನಿಮಾ ಕನ್ನಡ ಸಿನಿ ಮಾರುಕಟ್ಟೆಯನ್ನ ಹೆಚ್ಚಿಸುವುದರ ಜೊತೆಗೆ ಕನ್ನಡಿಗರು ಹೆಮ್ಮೆ ಪಡುವಂತಹ ಚಿತ್ರವಾಗಿ ನಿಂತಿದೆ.ಬರೋಬ್ಬರಿ ಮೂರು ವರ್ಷದ ನಿರಂತರದ ಪರಿಶ್ರಮ,70 ಕೋಟಿಯ ಬಿಗ್ ಬಜೆಟ್ ನ ಈ ಚಿತ್ರ ಮಾಸ್ ಮನರಂಜನೆ ನೀಡುವುದಲ್ಲದೆ ಕೆಜಿಎಫ್ ಟು ಮುಂಬೈ ,ಮುಂಬೈ ಟು ಕೆಜಿಎಫ್ ನ ಥ್ರಿಲ್ಲಿಂಗ್ ಜರ್ನಿ ಮಾಡಿಸುತ್ತದೆ.. ಕೆಜಿಎಫ್ ಸಿನಿಮಾ ಅಂದ ಕೂಡಲೆ ಎಲ್ಲರ ತಲೆಗೆ ಬರೋದು ಇದೊಂದು ಪಕ್ಕಾ ಮಾಸ್ ಸಿನಿಮಾ ಅಂತ.ಇದು ಸತ್ಯ.ಆದ್ರೆ ಈಗಿನ ಕಾಲದ ಚಿತ್ರಗಳಿಗೆ ಹೋಲಿಸಲು ಸಾಧ್ಯವೇ ಇಲ್ಲ.ಅದಕ್ಕೆ ಮುಖ್ಯ ಕಾರಣ 70ರ ದಶಕದ ಗಂಭೀರ ಕಥೆ ಕೆಜಿಎಫ್ ಅಲ್ಲಿದೆ.ಈ ಕಥೆಯೇ ಪ್ರೇಕ್ಷಕರನ್ನ ಮುಂದೆ ಏನಾಗುವುದೋ ಅನ್ನೋ ಕುತೂಹಲ ಹುಟ್ಟಿಸತ್ತೆ. ನೀನು ಹೇಗೆ ಹುಟ್ಟಿದೆ ಅನ್ನೋದು ಮುಖ್ಯ ಅಲ್ಲ, ಸಾಯಬೇಕಾದ್ರೆ ದೊಡ್ಡ ಶ್ರೀಮಂತನಾಗಿ ಸಾಯಬೇಕು ಅದು ಹೇಗಾದ್ರೂ ಆಗಿರಲಿ. ಅನ್ನೋ ತಾಯಿಯ ಡೈಲಾಗ್ ಚಿತ್ರದ ದಿಕ್ಕನ್ನು,ನಾಯಕ ರಾಕಿಯ ಲೈಫ್ ನ್ನೇ ಬದಲಾಯಿಸುತ್ತದೆ. ಕೆಜಿಎಫ್ ನಲ್ಲಿ ನಡೆಯುವ ಅಧಿಕಾರಿಗಳ ದರ್ಪ,ಕಾರ್ಮಿಕರಿಗೆ ನೀಡುವ ಹಿಂಸೆ ನೋಡುಗರ ಕಣ್ಣಾಲಿಯಲ್ಲಿ ನೀರನ್ನ ತರಿಸುತ್ತದೆ.ಅಲ್ಲದೆ ಇದೇ ಸಮಯದಲ್ಲಿ ಅಧಿಕಾರಕ್ಕಾಗಿ ನಡೆಯುವ ಒಳ ಸಂಚು ಚಿತ್ರದ ಕಥೆಯ ದಿಕ್ಕನ್ನೇ ಬೇರೆಡೆ ಕರೆದು ನಿಲ್ಲಿಸುತ್ತದೆ.
‘ರಾ’ಕಿಂಗ್ ರಾಕಿಭಾಯ್ ಪಾತ್ರಕ್ಕೆ ಪ್ರೇಕ್ಷಕರು ಕ್ಲೀನ್ ಬೌಲ್ಡ್..
ತಾಯಿಯ ಮಾತಿನಂತೆ ಪ್ರಪಂಚ ಗೆಲ್ಲಬೇಕು.ಶ್ರೀಮಂತನಾಗಬೇಕು ಅಂತ ನಿರ್ಧಾರ ಮಾಡುವ ಯಶ್ ಅಂದ್ರೆ ರಾಖಿ ಮುಂಬೈಗೆ ಹೊಗ್ತಾನೆ. ಅಲ್ಲಿ ಬೂಟ್ ಪಾಲಿಶ್ ಮಾಡುತ್ತಲೇ ಪ್ರಪಂಚ ಗೆಲ್ಲುವ ಕನಸು ಕಾಣ್ತಾನೆ.ಮುಂದೆ ಇದೇ ರಾಕಿ ಕಂಡ್ರೆ ಇಡೀ ಮುಂಬೈ ನಡುಗುವಂತಾಗತ್ತೆ.ಮಾಯಾನಗರಿ ಮುಂಬೈನ ದೊಡ್ಡ ದೊಡ್ಡ ಮಾಫಿಯಾಗಳು ರಾಕಿಯ ಅನುಮತಿ ಇಲ್ಲದೆ ನಡೆಯುವುದೇ ಇಲ್ಲ.ಅಷ್ಟರ ಮಟ್ಟಿಗೆ ರಾಕಿಯು ಚಿತ್ರದಲ್ಲಿ ಅಬ್ಬರಿಸಿದ್ದಾನೆ.ಇನ್ನು ಯಶ್ ನಟನೆ ನೋಡುಗರಿಗೆ ಮಾಸ್ ಔತಣ ನೀಡತ್ತೆ. ಯಶ್ ನ ಲುಕ್,ಖದರ್,ಗಡ್ಡ ,ನಟನೆ ಚಿತ್ರವನ್ನ ಮತ್ತೆ ಮತ್ತೆ ನೋಡುವಂತೆ ಮಾಡುತ್ತದೆ.ವಿಶೇಷ ಅಂದ್ರೆ ರಾಕಿಂಗ್ ರಾಕಿಯ ಧೈರ್ಯ,ಹೀರೋಯಿಸಂ ಗಣಿಯ ಧೂಳಿನ ಮಧ್ಯೆಯೂ ಪಳ ಪಳ ಹೊಳೆಯುತ್ತದೆ.
ರೆಟ್ರೋ ಸ್ಟೈಲ್ ಕೆಜಿಎಫ್ ನ ಮುಖ್ಯ ಆಕರ್ಷಣೆ.
ಇಡೀ ಕೆಜಿಎಫ್ 70-80ರ ದಶಕದಲ್ಲಿ ನಡೆಯುವ ಸಿನಿಮಾ.ಹಾಗಾಗಿ ಚಿತ್ರದುದ್ದಕ್ಕೂ ಒಂದೆಡೆ ಯಶ್ ಡಾನ್ ನಂತೆ ಉದ್ದ ಕೂದಲು,ಗಡ್ಡ ಬಿಟ್ಟು ರೆಟ್ರೋ ಸ್ಟೈಲ್ ನಲ್ಲಿ ಸಖತ್ತಾಗಿ ಮಿಂಚಿದ್ರೆ ಮತ್ತೊಂದೆಡೆ ಎಲ್ಲಾ ಪಾತ್ರಧಾರಿಗಳು ರೆಟ್ರೋ ಸ್ಟೈಲ್ ನಲ್ಲಿ ಕಾಣಿಸಿಕೊಂಡಿದ್ದಾರೆ.ಇನ್ನೂ ಕೆಜಿಎಫ್ ನ ಲೊಕೇಷನ್ ,ಬಹುದೊಡ್ಡ ಸೆಟ್,ಅಷ್ಟೊಂದು ಜನ ಕಲಾವಿದರನ್ನ ನೋಡುವುದೇ ಕಣ್ಣಿ ಹಬ್ಬ..
ಕೆಜಿಎಫ್ ನ ‘ಪ್ರಶಾಂತ’ವಾದ ರಿಯಲ್ ಹೀರೋ ನಿರ್ದೇಶಕ.!
ಉಗ್ರಂ ಚಿತ್ರದಂತಹ ಸೂಪರ್ ಹಿಟ್ ಸಿನಿಮಾ ನೀಡಿದ್ದಂತಹ ಪ್ರಶಾಂತ್ ನೀಲ್ ಮತ್ತೆ ಪ್ರೇಕ್ಷಕರಿಗೆ ಕೆಜಿಎಫ್ ಮೂಲಕ ಮಾಸ್ ಮನೋರಂಜನೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.ಚಿತ್ರದುದ್ದಕ್ಕೂ ಹೊಡಿ,ಬಡಿ,ಕಡಿ ಇದ್ದರೂ ಸಹ ಎಲ್ಲಿಯೂ ನೋಡುಗರಿಗೆ ಹಿಂಸೆಯಾಗದಂತೆ ಅದ್ಭುತವಾಗಿ ಕಥೆಯನ್ನು ರೂಪಿಸಿದ್ದಾರೆ.ಇದಕ್ಕೆ ಅನುಗುಣವಾಗಿ ಅದ್ಭುತವಾಗಿರುವ ರವಿಬಸ್ರೂರು ಸಂಗೀತ, ಭುವನ್ ಗೌಡ ಕ್ಯಾಮರಾ ವರ್ಕ್ ಸ್ಟೋರಿಗೆ ಪ್ಲಸ್ ಪಾಯಿಂಟ್ ಆಗಿದ್ದು,ಚಿತ್ರ ಮತ್ತಷ್ಟು ರಿಚ್ ಆಗಿ ಮೂಡಿಬಂದಿದೆ ಅಂದ್ರೆ ತಪ್ಪಾಗಲ್ಲ.. ರಾಕಿಭಾಯ್ ಜೊತೆ ಈ ಸಿನಿಮಾದಲ್ಲಿ ಬಹಳಷ್ಟು ಕಲಾವಿದರು ಅಭಿನಯಿಸಿದ್ದಾರೆ. ಅನಂತ್ ನಾಗ್, ಮಾಳವಿಕ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಜಿಜಿ, ಅಯ್ಯಪ್ಪ, ವಸಿಷ್ಠ ಸಿಂಹ, ಅಚ್ಯುತ್ ರಾವ್, ಶ್ರೀನಿಧಿ ಶೆಟ್ಟಿ, ಬಿ ಸುರೇಶ್ ಅನ್ಮೋಲ್ ಸೇರಿದಂತೆ ಅನೇಕರು ತಮ್ಮ ಪಾತ್ರವನ್ನ ಅತ್ಯುತ್ತಮವಾಗಿ ನಟಿಸಿದ್ದಾರೆ.ಆದ್ರೂ ಬಹುತೇಕ ಚಿತ್ರದುದ್ದಕ್ಕೂ ಯಶ್ ಒಬ್ಬರೇ ಕಾಣಿಸಿಕೊಂಡಿದ್ದಾರೆ.ಬಾಹುಬಲಿಯನ್ನ ಕಟ್ಟಪ್ಪ ಯಾಕೆ ಕೊಂದ ?ಅನ್ನುವ ಪ್ರಶ್ನೆಯಂತೆಯೇ ಸಧ್ಯ ಕೆಜಿಎಫ್ ನಲ್ಲಿ ಗಣಿ ಕಾರ್ಮಿಕರ ಪರವಾಗಿ ನಿಂತು ಹೋರಾಡುವ ರಾಕಿ ಕಥೆ ಮುಂದೆ ಏನಾಗುತ್ತೋ..!?ಎನ್ನುವ ಕುತೂಹಲ ಎಲ್ಲರಲ್ಲಿ ಮೂಡುತ್ತಿರೋದಂತು ಸುಳ್ಳಲ್ಲ…
ವಿಮರ್ಶೆ: ಪ್ರಿಯದರ್ಶಿನಿ.ಮರೀಚಿ.
Recent Comments