Breaking News

ಶ್ರೀಕಾಂತ್‌ ಎಂಬ ಸ್ನೇಹದ ದೊರೆ..

Www.cnewstv.in / 03.11.2023 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಶ್ರೀಕಾಂತ್‌ ಎಂಬ ಸ್ನೇಹದ ದೊರೆ…

ಗಾಜನೂರು ಬಳಿ 2015ರಲ್ಲಿ ಕೋಮುದ್ವೇಷಕ್ಕೆ ಜೀವ ತೆತ್ತಿದ್ದ ಬಜರಂಗದಳದ ಕಾರ್ಯಕರ್ತ ವಿಶ್ವನಾಥ್‌ ಶೆಟ್ಟಿ ಅವರ ತಾಯಿ ಚಿಂದಿ ಆಯ್ದು ಬದುಕು ಸಾಗಿಸುತ್ತಾ, ಆಲ್ಕೊಳದ ಪಾಳುಬಿದ್ದ ಮನೆಯಲ್ಲಿ ನೆಲೆಸಿದ್ದರು. ಶಿವಮೊಗ್ಗದ ತೀರ್ಥಹಳ್ಳಿ ರಸ್ತೆಯ ಭಾರತಿ ಕಾಲೊನಿ ಬಳಿ ಎರಡು ವರ್ಷಗಳ ಹಿಂದೆ ಬಜರಂಗ ದಳದ ಕಾರ್ಯಕರ್ತ ಹರ್ಷ ಅವರ ಕೊಲೆಯಾದ ನಂತರ ಹರ್ಷನ ಕುಟುಂಬಕ್ಕೆ ನೆರವಿನ ಮಹಾಪೂರವೇ ಹರಿದು ಬರುತ್ತಿತ್ತು. ಅತ್ತ ಬಜರಂಗ ದಳದ ಮತ್ತೊಬ್ಬ ಕಾರ್ಯಕರ್ತ ವಿಶ್ವನಾಥ್‌ ಕುಟುಂಬವನ್ನು ಎಲ್ಲರೂ ಮರೆತೇಬಿಟ್ಟಿದ್ದರು.

ಎಲ್ಲರೂ ಮರೆತಿದ್ದ ವಿಶ್ವನಾಥ್‌ ಕುಟುಂಬದ ದುಸ್ಥಿತಿ ವರದಿ ಮಾಡಲು ಅಲ್ಲಿಗೆ ತೆರಳಿದ್ದಾಗ ಕೆಲ ಮುಸ್ಲಿಂ ಹುಡುಗರು ಆಗಲೇ ಮನೆ ಸ್ವಚ್ಛಗೊಳಿಸುವ ಕಾರ್ಯದಲ್ಲಿ ತೊಡಗಿದ್ದರು. ವಿಶ್ವನಾಥ್‌ ತಾಯಿಗೆ ಅಗತ್ಯವಿದ್ದ ದವಸಧಾನ್ಯ, ಸಾಮಗ್ರಿಗಳನ್ನು ಹೊತ್ತುತಂದ ವಾಹನ ಮನೆಯ ಮುಂದೆ ನಿಂತಿತ್ತು. ಇದೇನು ಹೀಗೆ.. ಹಿಂದೂ ಸಂಘಟನೆಯ ಕಾರ್ಯಕರ್ತ ವಿಶ್ವನಾಥ್‌ ಕುಟುಂಬದ ಸಂಕಷ್ಟದ ಸ್ಥಿತಿ ವರದಿ ಮಾಡಲು ಬಂದರೆ ಯಾರೋ ಅಲ್ಲಿನ ಸ್ಥಿತಿಯನ್ನೇ ಬದಲಿಸಿದ್ದಾರಲ್ಲಾ ಎಂದು ಆಶ್ಚರ್ಯ ಚಕಿತನಾದೆ. ಅದು ಯಾರು ಎನ್ನುವುದನ್ನು ಊಹಿಸಲು ಸಮಯದ ಅಗತ್ಯವೇ ಇರಲಿಲ್ಲ. ಶಿವಮೊಗ್ಗದಲ್ಲಿ ಇಂತಹ ಕಾರ್ಯದಲ್ಲಿ ಸದಾ ಸಹಾಯ ಹಸ್ತ ಚಾಚುವುದಕ್ಕೆ ಹೆಸರಾದವರೇ ಜೆಡಿಎಸ್‌ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್‌. ಬಡಜನರಿಗೆ, ದುರ್ಬಲರಿಗೆ, ಕೂಲಿ ಕಾರ್ಮಿಕರಿಗೆ, ಶೋಷಿತ ಸಮುದಾಯಕ್ಕೆ ಶ್ರೀಕಾಂತ್‌ ಮಾಡಿದಷ್ಟು ಸಹಾಯ ಬಹುಶಃ ಶಿವಮೊಗ್ಗದಲ್ಲಿ ಯಾರೂ ಮಾಡಿರಲಿಕ್ಕೆ ಸಾಧ್ಯವಿಲ್ಲ ಎನ್ನುವುದು ಜನರ ಮನೆಮಾತಾಗಿದೆ. ಹಾಗಾಗಿಯೇ ಅವರನ್ನು ಶಿವಮೊಗ್ಗದ ಜನರು ಕೊಡುಗೈ ದಾನಿ, ಸ್ನೇಹದ ದೊರೆ ಎಂದು ಪ್ರೀತಿಯಿಂದ ಕರೆಯುತ್ತಾರೆ.

ಜೆಡಿಎಸ್‌ಗೆ ಜೀವ ತುಂಬಿದ್ದ ಶ್ರೀಕಾಂತ್:

ಅದು 2004ನೇ ಇಸವಿ ಮಾಜಿ ಪ್ರಧಾನಿ ದೇವೇಗೌಡರು ಬೆಂಗಳೂರಿನಲ್ಲಿ ಯುವ ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಶ್ರೀಕಾಂತ್‌ ಅವರನ್ನು ಕರೆದು ನೀನು ಶಿವಮೊಗ್ಗ ಜಿಲ್ಲೆಯ ಹುಡುಗ. ಎಚ್‌.ಡಿ.ಕುಮಾರಸ್ವಾಮಿ, ವೈ.ಎಸ್.ವಿ ದತ್ತ ಎಲ್ಲ ಮಾಹಿತಿ ನೀಡಿದ್ದಾರೆ. ಸಮಾಜವಾದಿ ತವರಾದ ಅಲ್ಲಿ ಪಕ್ಷವನ್ನು ಬಲಪಡಿಸುವ ಅಗತ್ಯವಿದೆ. ನೀನು ಶಿವಮೊಗ್ಗದತ್ತ ಪಯಣ ಬೆಳೆಸು. ಒಂದು ದೊಡ್ಡ ಸಮಾವೇಶ ಆಯೋಜಿಸು ಎಂದು ಆದೇಶಿಸಿದ್ದರು. ಅವರ ಆಜ್ಞೆಯನ್ನು ಶಿರಸಾವಹಿಸಿ ಪಾಲಿಸುತ್ತಿದ್ದ ಶ್ರೀಕಾಂತ್‌ ಮರು ಮಾತನಾಡದೇ ಶಿವಮೊಗದತ್ತ ಪಯಣ ಬೆಳಸೇಬಿಟ್ಟಿದ್ದರು. ಅಂದಿನಿಂದ ಇಂದಿನವರೆಗೂ ಶ್ರೀಕಾಂತ್‌ ಶಿವಮೊಗ್ಗದ ಅವಿಭಾಜ್ಯ ಅಂಗದಂತೆಯೇ ಬದುಕಿದ್ದಾರೆ. 

ಸುನಾಮಿ ಮತ್ತು ಮೊದಲ ಸಮಾವೇಶ: 

ಶಿವಮೊಗ್ಗಕ್ಕೆ ತೆರಳಿದ ಶ್ರೀಕಾಂತ್‌ ಅಲ್ಪ ಸಮಯದಲ್ಲೇ ಪಕ್ಷವನ್ನು ಪ್ರಬಲವಾಗಿ ಸಂಘಟಿಸಿದ್ದರು. ಅದೇ ವರ್ಷ ಡಿಸೆಂಬರ್‌ 24ರಂದು ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಬೃಹತ್‌ ಜೆಡಿಎಸ್‌ ಸಮಾವೇಶ ಆಯೋಜಿಸಿದ್ದರು. ಸಹ್ಯಾದ್ರಿ ಕಾಲೇಜಿನ ಎಂಆರ್‌ಎಸ್‌ ವೃತ್ತದಿಂದ ಸಮುದಾಯ ಭವನದವರೆಗೂ ರ್‍ಯಾಲಿ ಹಮ್ಮಿಕೊಂಡಿದ್ದರು. ಆದರೆ, ಅಂದೇ ಬಂಗಾಳಕೊಲ್ಲಿಯಲ್ಲಿ ಸುನಾಮಿ ಅಪ್ಪಳಿಸಿ, ಅಪಾರ ಸಾವುನೋವು ಸೃಷ್ಟಿಸಿತ್ತು. ಹಾಗಾಗಿ, ರ್‍ಯಾಲಿ ರದ್ದುಗೊಳಿಸಿದ ದೇವೇಗೌಡರು, ಸಮಾವೇಶ ನಡೆಸಿದ್ದರು. ಸಮಾವೇಶದ ನಂತರ ಕೆಲವೇ ವರ್ಷಗಳಲ್ಲಿ ಅಂದಿನ ಜೆಡಿಎಸ್‌ ಮುಖಂಡರಾಗಿದ್ದ ಎಂ.ಬಿ.ಶಿವಣ್ಣ, ಪಾ.ರಾ.ಶ್ರೀನಿವಾಸ್‌, ಭೈರಪ್ಪ, ಅಗಸನಹಳ್ಳಿ ಕಾಂತರಾಜ್‌, ರಾಜಯ್ಯ, ಸಿದ್ದಪ್ಪ ಮೊದಲಾದವರ ಸಹಕಾರದಲ್ಲಿ ಜೆಡಿಎಸ್‌ಗೆ ಶಿವಮೊಗ್ಗ ಜಿಲ್ಲೆಯಲ್ಲಿ ಭದ್ರ ನೆಲೆ ಕಲ್ಪಿಸಿದರು. 

ಮೊದಲ ಪ್ರಯತ್ನದಲ್ಲೇ 20 ಸಾವಿರ ಮತ:

1999ರ ನಂತರ ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪ್ರಬಲವಾಗತೊಡಗಿತ್ತು. 1989ರಿಂದ ಚುನಾವಣಾ ಕಣಕ್ಕೆ ಇಳಿದಿದ್ದ ಕೆ.ಎಸ್‌.ಈಶ್ವರಪ್ಪ ಅವರು ಮೊದಲ ಪ್ರಯತ್ನದಲ್ಲೆ ಯಶ ಕಂಡರೂ, 1999ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಚ್‌.ಎಂ.ಚಂದ್ರಶೇಖರಪ್ಪ ಎದುರು ಸೋತಿದ್ದರು. 2004 ಚುನಾವಣೆಯಲ್ಲಿ ಮತ್ತೆ ಗೆದ್ದಿದ್ದರು. 2008ರ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಶ್ರೀಕಾಂತ್ ಅವರಿಗೆ ಪೈಪೋಟಿ ನೀಡಿದ್ದರು. ಜೆಡಿಎಸ್‌ ಅಧಿಕಾರ ನೀಡಲಿಲ್ಲ ಎಂಬ ಕಾರಣಕ್ಕೆ ಸೃಷ್ಟಿಯಾದ ಯಡಿಯೂರಪ್ಪ ಅಲೆಯ ಮಧ್ಯೆಯೂ ಶ್ರೀಕಾಂತ್ 20 ಸಾವಿರ ಮತಗಳನ್ನು ಪಡೆದು ಭವಿಷ್ಯ ನಾಯಕ ಎನ್ನುವುದನ್ನು ಸಾಬೀತು ಮಾಡಿದ್ದರು. ನಂತರ 2013ರಲ್ಲಿ ಕೆಜೆಪಿ ಸೇರುವಂತೆ ಯಡಿಯೂರಪ್ಪ ಆಹ್ವಾನ ನೀಡಿದರೂ, ಒಪ್ಪದೆ ಜೆಡಿಎಸ್‌ನಿಂದ ಸ್ಪರ್ಧಿಸಿದ್ದರು. ಇತರೆ ಅಭ್ಯರ್ಥಿಗಳಿಗೆ ಸರಿಸಮನಾಗಿ ಪೈಪೋಟಿ ನೀಡಿದ್ದರು. 29 ಸಾವಿರ ಮತಗಳನ್ನು ಪಡೆದು ಅವರು ಸೋಲು ಕಂಡರೂ ಜಿಲ್ಲಾ ಜೆಡಿಸ್‌ ಅಧ್ಯಕ್ಷರಾಗಿ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ಮೂರರಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದರು. 

ಜಿಲ್ಲಾ ಪಂಚಾಯ್ತಿ, ನಗರ ಪಾಲಿಕೆಯಲ್ಲೂ ಜೆಡಿಎಸ್‌ ಬಾವುಟ:

ಶಿವಮೊಗ್ಗ ಜಿಲ್ಲೆಯಲ್ಲಿ ಹಂತಹಂತವಾಗಿ ಜೆಡಿಎಸ್‌ ಪಕ್ಷವನ್ನು ಪ್ರವರ್ಧಮಾನಕ್ಕೆ ತಂದ ಶ್ರೀಕಾಂತ್‌ ನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯಿತಿಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದರು. ಒಂದು ಅವಧಿ ಶಾರದಾ ಪುರ್‍ಯಾನಾಯ್ಕ ಅವರು ಮತ್ತೊಂದು ಅವಧಿ ಜೆಡಿಎಸ್‌ನ ಜ್ಯೋತಿ ಕುಮಾರ್ ಅವರು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ಪೂರ್ಣಾವಧಿ ಪೂರೈಸಿದರು. ನಗರ ಪಾಲಿಕೆಯಲ್ಲಿ ಜೆಡಿಎಸ್‌ನ ಏಳು ಮಲೈ, ನಾಗರಾಜ ಕಂಕಾರಿ ಅವರನ್ನು ಮೇಯರ್‌ ಹಾಗೂ ಎಚ್‌.ಫಾಲಾಕ್ಷಿ, ರೇಖಾ ಚಂದ್ರಶೇಖರ್‌ ಅವರನ್ನು ಉಪಮೇಯರ್‌ ಮಾಡುವಲ್ಲಿ ಅವರ ತಂತ್ರಗಾರಿಕೆ ಇತ್ತು. ಜೆಡಿಎಸ್‌ಗೆ ಒಂದು ಘನತೆ ತಂದುಕೊಡುವಲ್ಲಿ ಶ್ರೀಕಾಂತ್ ಶ್ರಮ  ಶ್ಲಾಘನೀಯ.

ಕಾಂಗ್ರೆಸ್‌ ಜತೆ ಸದಾ ಮೈತ್ರಿ:

ಜಿಲ್ಗೆಯ ಕಾಂಗ್ರೆಸ್‌ ಜೊತೆ ಸದಾ ಮೈತ್ರಿಯ ಬಾಗಿಲು ತೆರೆದಿದ್ದರು. ಪಾಲಿಕೆ, ಜಿಲ್ಲಾ ಪಂಚಾಯಿತಿ ಅಷ್ಟೇ ಅಲ್ಲ,  ಕಾಂಗ್ರೆಸ್ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಮಧು ಬಂಗಾರಪ್ಪ ಪರ ಶ್ರಮಿಸಿದ್ದರು. ಜೆಡಿಎಸ್‌ ಸೋಲು ಕಂಡರೂ, ಎರಡೂ ಪಕ್ಷಗಳ ಒಗ್ಗಟ್ಟು ಭವಿಷ್ಯದಲ್ಲಿನ ಮೈತ್ರಿ ರಾಜಕಾರಣಕ್ಕೆ ಮತ್ತೊಂದು ಬಾಗಿಲು ತೆರೆಯಲು ಶ್ರೀಕಾಂತ್ ನಾಂದಿ ಹಾಡಿದ್ದರು.

 

ರಾಜ್ಯ ಜೆಡಿಎಸ್‌ ಪ್ರಧಾನ ಕಾರ್ಯದರ್ಶಿಯಾಗಿ, ದಶಕಗಳ ಕಾಲ ಜಿಲ್ಲಾ ಜೆಡಿಎಸ್‌ ಅಧ್ಯಕ್ಷರಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿ, ಬಲಗೊಳಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ್ದ, ‘ಶ್ರೀಕಾಂತ್‌ ಎಂದರೆ ಜೆಡಿಎಸ್‌, ಜೆಡಿಎಸ್‌ ಎಂದರೆ ಶ್ರೀಕಾತ್‌’ ಎನ್ನುವ ಮನೆಮಾತಾಗಿದ್ದ ಅವರಿಗೆ ಪಕ್ಷದ ಅಧಿಕಾರ ಹೊರತು ಯಾವ ಸ್ಥಾನಮಾನವೂ ಸಿಗಲಿಲ್ಲ ಎನ್ನುವುದು ಬೇಸರದ ಸಂಗತಿ. ಈಚೆಗಷ್ಟೇ ಜೆಡಿಎಸ್‌ ತೊರೆದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಅ.25ರಂದು ತಮ್ಮ ಅಪಾರ ಬೆಂಬಲಗರ ಜತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಶಿಕ್ಷಣ ಸಚಿವ ಮಧು ಬಂಗಾರಪ್ಪ ಮತ್ತಿತರ ನಾಯಕರ ಸಮ್ಮುಖದಲ್ಲಿ ಕಾಂಗ್ರೆಸ್‌ ಸೇರಿದ್ದಾರೆ. ಹೊಸ ಮನ್ವಂತರಕ್ಕೆ ಮತ್ತೊಂದು ಹೆಜ್ಜೆ ಇಟ್ಟಿದ್ದಾರೆ. ಇದೇ ನವೆಂಬರ್‌ 4ರಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅವರನ್ನು ತನ್ನ ಮನೆಗೆ ಬರಮಾಡಿಕೊಳ್ಳುತ್ತಿದೆ.

ಭರತ್‌ಚಂದ್ರ ಸಿ.ಎಸ್‌.

All the best.. ಶ್ರೀಕಾಂತ್‌ ಸಾರ್. ಕಾಂಗ್ರೆಸ್‌ನಲ್ಲಿ ನಿಮ್ಮ ರಾಜಕೀಯ ಭವಿಷ್ಯ ಉಜ್ವಲವಾಗಲಿ.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*

Tags

*ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ* *9916660399* Accident Bangalore Bhadravathi BJP B S yaduvurappa B Y Ragavendra Congress Corona Corona report Corona virus Covid 19 Hosanagara JDS Kerala K S Eshwarappa MP election M P Election News NSUI Sagara Shikaripura Shimoga shimoga district Shivammoga Shivamoga Shivamogga Shivamogga NSUI SP shivamogga ಒಮಿಕ್ರಾನ್ ಸೋಂಕಿತರ ಸಂಖ್ಯೆ 578 ಕ್ಕೆ ಏರಿಕೆ. ಕಾಂಗ್ರೆಸ್ ಕೊರೊನಾ ಕೋಟೆ ಶ್ರೀ ಮಾರಿಕಾಂಬ ಜಾತ್ರೆ : ಇಂದು ಗಾಂಧಿಬಜಾರ್ ನಲ್ಲಿ ಚಪ್ಪರ ಪೂಜೆ.‌ ಚಾರುಲತಾ ಸೋಮಲ್‌ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಜಿಲ್ಲೆಯಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 791 ಕೊರೊನಾಗೆ 7 ಜನ ಬಲಿ ಜಿಲ್ಲೆಯಲ್ಲಿ ಎರಡಂಕಿಗೆ ಇಳಿದ ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 38 ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ. ನಾಳೆ ನಗರದಲ್ಲಿ ವಿದ್ಯುತ್ ವ್ಯತ್ಯಯ. ಮೆಗ್ಗಾನ್ ಆಸ್ಪತ್ರೆ ಶಿವಮೊಗ್ಗ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸಚಿವ ಕೆ.ಎಸ್.ಈಶ್ವರಪ್ಪ ಸಿಗಂದೂರು

Recent Comments