ಅನಧಿಕೃತ ಕಲ್ಲು ಗಣಿಗಾರಿಕೆ ಮುಂದುವರೆಸುವವರ ಗಡಿಪಾರು: ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್

 

ಶಿವಮೊಗ್ಗ : ಜಿಲ್ಲೆಯಲ್ಲಿ ಅನಧಿಕೃತ ಕಲ್ಲು ಗಣಿಗಾರಿಕೆಯನ್ನು ಹಲವು ಬಾರಿ ದಾಳಿ ನಡೆಸಿ ಸ್ಥಗಿತಗೊಳಿಸಿದ್ದರೂ, ಮತ್ತೆ ನಡೆಯುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಅಂತಹ ವ್ಯಕ್ತಿಗಳ ವಿರುದ್ಧ ಗಡಿಪಾರು ಸೇರಿದಂತೆ ಕುರಿತು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ತಿಳಿಸಿದರು.

ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮರಳು ಸಮಿತಿ ಸಭೆಯಲ್ಲಿ ಈ ಕುರಿತು ಸೂಚನೆಗಳನ್ನು ನೀಡಿದರು.

ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗಿರುವ ವಲಯಗಳಲ್ಲಿ ಕ್ರಶರ್, ಕ್ವಾರಿ ಸೇರಿದಂತೆ ಗಣಿಗಾರಿಕೆಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಅಕ್ರಮ ಗಣಿಗಾರಿಕೆ ಕ್ವಾರಿಗಳ ಮೇಲೆ ದಾಳಿ ನಡೆಸಿ ಕ್ರಮಗಳನ್ನು ಕೈಗೊಂಡಿದ್ದರೂ, ಹಲವು ಮಂದಿ ಅದೇ ಕೃತ್ಯವನ್ನು ಮುಂದುವರೆಸಿರುವುದು ಗಮನಕ್ಕೆ ಬಂದಿದೆ. ಅಂತಹ ವ್ಯಕ್ತಿಗಳನ್ನು ಗುರುತಿಸಿ ಭಾರೀ ಪ್ರಮಾಣದ ದಂಡ ವಿಧಿಸುವುದು ಮಾತ್ರವಲ್ಲದೆ ಗಡಿಪಾರು ಮಾಡಲು ಪ್ರಸ್ತಾವನೆಗಳನ್ನು ಸಲ್ಲಿಸಬೇಕು. ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಈ ಕಾರ್ಯವನ್ನು ಮಾಡುವಂತೆ ಜಿಲ್ಲಾಧಿಕಾರಿ ಅವರು ತಿಳಿಸಿದರು.

ಹೊರ ಜಿಲ್ಲೆ ಸಾಗಾಣಿಕೆಗೆ ಅವಕಾಶವಿಲ್ಲ: ಜಿಲ್ಲೆಯಲ್ಲಿ ಮರಳನ್ನು ಬೇರೆ ಜಿಲ್ಲೆಗಳಿಗೆ ಸಾಗಾಟ ಮಾಡಲು ಅವಕಾಶ ನೀಡಲು ಸಾಧ್ಯವಿಲ್ಲ. ಈಗಾಗಲೇ ಜಪ್ತಿ ಮಾಡಲಾಗಿರುವ ಮರಳು, ಜಂಬಟಿಗೆ ಇತ್ಯಾದಿಗಳನ್ನು ಸರ್ಕಾರದ ನಿರ್ಮಾಣ ಏಜೆನ್ಸಿಗಳಿಗೆ ಬಳಕೆಗಾಗಿ ನೀಡಬಹುದಾಗಿದೆ. ಸರ್ಕಾರದ ವಿವಿಧ ವಸತಿ ಯೋಜನೆಗಳ ಅಡಿಯಲ್ಲಿ ಮನೆಗಳನ್ನು ನಿರ್ಮಿಸುವ ಫಲಾನುಭವಿಗಳಿಗೆ ಸಹ ಅಂತಹ ಮರಳನ್ನು ನೀಡಬಹುದಾಗಿದೆ ಎಂದರು.

ಹೊಸನಗರ ತಾಲೂಕಿನ ಮಣಶೆಟ್ಟಿ ಗ್ರಾಮದ ಶರಾವತಿ ಹಿನ್ನೀರಿನ ಕೆ.ಪಿ.ಸಿ.ಎಲ್ ಜಮೀನಿನಲ್ಲಿ ಅನಧಿಕೃತವಾಗಿ ಶೇಖರಣೆ ಮಾಡಲಾಗಿದ್ದ ಸುಮಾರು 7500 ಮೆ.ಟನ್ ಸಾದಾ ಮರಳನ್ನು ವಶಪಡಿಸಿಕೊಳ್ಳಲಾಗಿದ್ದು, ಅದನ್ನು ನಿಯಮಾನುಸಾರ ಸರ್ಕಾರಿ ಕಾಮಗಾರಿಗಳಿಗೆ ವಿಲೇವಾರಿ ಮಾಡುವಂತೆ ಜಿಲ್ಲಾಧಿಕಾರಿ ಅವರು ಸೂಚಿಸಿದರು.

ಮರಳು ಕೊರತೆ ಇಲ್ಲ: ಸರ್ಕಾರದ ವಿವಿಧ ಯೋಜನೆಗಳ ಅನುಷ್ಟಾನಕ್ಕೆ ಮರಳಿನ ಕೊರತೆ ಇರುವುದಿಲ್ಲ. ಕೆಲವು ಇಲಾಖೆಗಳಿಗೆ ಪ್ರತ್ಯೇಕ ಮರಳಿನ ಬ್ಲಾಕ್‍ಗಳನ್ನು ಗುರುತಿಸಿ ನೀಡಲಾಗಿದ್ದು, ಖಾಸಗಿ ಮರಳಿನ ಬ್ಲಾಕ್‍ಗಳಲ್ಲಿ ಸಹ ಸರ್ಕಾರಿ ಇಲಾಖೆಗಳಿಗೆ ಕೋಟಾ ನಿಗದಿಪಡಿಸಲಾಗಿದೆ. ಈ ಮರಳನ್ನು ಇಲಾಖೆಗಳು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.

ತಾಲೂಕು ಮಟ್ಟದ ಅಧಿಕಾರಿಗಳಿಂದ ವಿಡಿಯೊ ಕಾನ್ಫರೆನ್ಸ್ ಮೂಲಕ ಜಿಲ್ಲಾಧಿಕಾರಿ ಅವರು ಮಾಹಿತಿಯನ್ನು ಪಡೆದುಕೊಂಡರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಅಡಿಷನಲ್ ಎಸ್ಪಿ ಎಚ್.ಟಿ.ಶೇಖರ್, ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಿರಿಯ ಭೂವಿಜ್ಞಾನಿ ರಶ್ಮಿ ಉಪಸ್ಥಿತರಿದ್ದರು.

 

ಸುದ್ದಿ ಹಾಗೂ ಜಾಹಿರಾತಿಗಾಗಿ 7676236690

Contact for News / Advertisement 7676236690

Leave a Reply

Your email address will not be published. Required fields are marked *

*