ಹಿರಿಯ ಸಾಹಿತಿ ನಾ.ಡಿಸೋಜ ನಿಧನ : ಬೇಳೂರು ಸಂತಾಪ

ಶಿವಮೊಗ್ಗ: ಹಿರಿಯ ಸಾಹಿತಿ ನಾ.ಡಿಸೋಜ ಅವರು ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು,ಮಂಗಳೂರಿನ ಫಾಧರ್ ಮುಲ್ಲರ್ ಆಸ್ಪತ್ರೆಯಲ್ಲಿ ಇಂದು ಸಂಜೆ 7.30ಕ್ಕೆ ಮೃತಪಟ್ಟಿದ್ದಾರೆ ಎಂದು ಅವರ ಪುತ್ರ ನವೀನ್, ಸಾಮಾಜಿಕ ಜಾಲತಾಣ ಹಾಗೂ ವೀಡಿಯೋ ಮೂಲಕ ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ‘ನಾಡಿ’ ಎಂದೇ ಪ್ರಸಿದ್ಧರಾಗಿದ್ದ ಹಿರಿಯ ಸಾಹಿತಿ ನಾ.ಡಿಸೋಜಾ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಜತೆಗೆ ಮಡಿಕೇರಿಯಲ್ಲಿ ನಡೆದ 80 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರು ಕೂಡ ಆಗಿದ್ದರು.
ಸೋಮವಾರ ಪೂರ್ತಿ ದಿನ ಸಾಹಿತಿ ನಾ.ಡಿಸೋಜ ಅವರ ಮನೆಯ ಬಳಿ ಹಾಗೂ ಮಂಗಳವಾರ ಸಾಗರದ ನೆಹರು ಮೈದಾನ ಅಥವಾ ಟೌನ್ ಹಾಲ್ ಬಳಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದ್ದು, ಮಂಗಳವಾರ ಸಂಜೆಯ ವೇಳೆಗೆ ಡಿಸೋಜ ಅವರ ಅಂತ್ಯಸಂಸ್ಕಾರ ನೆರವೇರಲಿದೆ.
ಸಾಹಿತಿ ಡಿಸೋಜ ಅವರ ನಿಧನಕ್ಕೆ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಸಂತಾಪ ಸೂಚಿಸಿದ್ದಾರೆ. ಹಿರಿಯ ಸಾಹಿತಿ ನಾ.ಡಿಸೋಜ ಅವರ ಬದುಕು ಬೇರೆಯಲ್ಲ, ಬರಹ ಬೇರೆಯಲ್ಲ ಎರಡೂ ಒಂದೇ. ಬರೆದಂತೆ ಬದುಕಿದವರು, ಬದುಕಿದಂತೆ ಬರೆದವರು. ಕನ್ನಡ ಸಾಹಿತ್ಯ ಲೋಕಕ್ಕೆ ನಾ.ಡಿಸೋಜಾ ಅವರ ಅಗಲಿಕೆ ತುಂಬಲಾರದ ನಷ್ಟ ಎಂದು ಸಂತಾಪ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *

*