Cnewstv / 09.07.2023 / ದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಉತ್ತರ ಭಾರತದಲ್ಲಿ ಧಾರಾಕಾರ ಮಳೆ. ಹಲವು ಪ್ರದೇಶಗಳು ಜಲಾವೃತ, ಪ್ರವಾಹ ಭೀತಿ…
ಮುಂಗಾರು ಮಾರುತಗಳು ಹಾಗೂ ರಾಜಸ್ಥಾನದ ನೈರುತ್ಯ ಭಾಗದಲ್ಲಿ ಚಂಡಮಾರುತದ ಚಟುವಟಿಕೆಗಳಿಂದಾಗಿ ದಕ್ಷಿಣ ಭಾರತ ಮಾತ್ರವಲ್ಲದೇ ರಾಷ್ಟ್ರ ರಾಜಧಾನಿ ದಿಲ್ಲಿ ಸೇರಿದಂತೆ ಉತ್ತರ ಭಾಗದಲ್ಲೂ ವರುಣ ಅಬ್ಬರಿಸತೊಡಗಿದ್ದಾನೆ.
ದಿಲ್ಲಿಯಲ್ಲಿ ಶನಿವಾರ ಈ ಋತುವಿನ ಮೊದಲ ಮಳೆ ಸುರಿದಿದ್ದು, ಒಂದೇ ದಿನದ ವರ್ಷಧಾರೆಗೆ ಇಡೀ ಜನಜೀವನ ಅಸ್ತವ್ಯಸ್ತವಾಯಿತು. ದಿಲ್ಲಿ ಮಾತ್ರವಲ್ಲದೇ ರಾಜಸ್ಥಾನ, ಹರ್ಯಾಣ, ಜಮ್ಮು-ಕಾಶ್ಮೀರ, ಹಿಮಾಚಲಪ್ರದೇಶ, ಕೇರಳ, ಮಹಾರಾಷ್ಟ್ರ ಸೇರಿದಂತೆ ಶನಿವಾರ ದೇಶಾದ್ಯಂತ ಧಾರಾಕಾರ ಮಳೆಯಾಗಿದೆ.
ಜಮ್ಮು ಮತ್ತು ಕಾಶ್ಮೀರ
ಝೇಲಂ ನದಿ ಮತ್ತು ಅದರ ಉಪ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ನಿರಂತರ ಮಳೆಯಿಂದಾಗಿ ಪ್ರವಾಹ ಭೀತಿ ಎದುರಾಗಿದ್ದು, ತೀರ ಪ್ರದೇಶದಲ್ಲಿರುವ ಜನರಿಗೆ ಸ್ಥಳಾಂತರಗೊಳ್ಳುವಂತೆ ಸೂಚಿಸಲಾಗಿದೆ. ಪೂಂಛ… ಜಿಲ್ಲೆಯಲ್ಲಿ ಉಕ್ಕಿ ಹರಿಯುತ್ತಿದ್ದ ನಾಲೆಯೊಂದಕ್ಕೆ ಜಾರಿ ಬಿದ್ದು ಇಬ್ಬರು ಯೋಧರು ಅಸುನೀಗಿದ್ದಾರೆ. ರಾತ್ರಿಪೂರ್ತಿ ಮಳೆಯಾದ ಕಾರಣ ಹಲವು ಕಡೆ ಭೂಕುಸಿತ ಉಂಟಾಗಿದ್ದು, ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಮತ್ತು ಮುಘಲ್ ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ.
ಮಹಾರಾಷ್ಟ್ರ
ರಾಜಧಾನಿ ಮುಂಬಯಿ ಸೇರಿದಂತೆ ರಾಜ್ಯದ ಹಲವೆಡೆ ಮಳೆ ಮುಂದುವರಿದಿದೆ. ವಾರಾಂತ್ಯದ ಮಳೆಯು ಜನಜೀವನವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿ ಸಿದೆ. ಹಲವು ಪ್ರದೇಶಗಳು ಜಲಾವೃತಗೊಂಡಿದ್ದು, ಭಾರೀ ಸಂಚಾರ ದಟ್ಟಣೆ ಉಂಟಾಗಿದೆ
ಹಿಮಾಚಲ ಪ್ರದೇಶ
ಜೂ.24ರಿಂದ ಈವರೆಗೆ ಮಳೆ ಸಂಬಂಧಿ ಅವಘಡಗಳಿಗೆ 43 ಮಂದಿ ಬಲಿಯಾಗಿದ್ದಾರೆ. 352 ಕೋಟಿ ರೂ. ನಷ್ಟ ಉಂಟಾಗಿದೆ. ಶನಿವಾರ ಮತ್ತು ಭಾನುವಾರ ರಾಜ್ಯದ 7 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಇಲ್ಲಿ ಒಂದೇ ದಿನ 204 ಮಿ.ಮೀ. ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಸೋಲನ್ ಜಿಲ್ಲೆಯಲ್ಲಿ ಉಂಟಾದ ಭೂಕುಸಿತದಿಂದ ಮೂರು ಮನೆಗಳು ಕುಸಿದುಬಿದ್ದಿವೆ. ದಿಢೀರ್ ಪ್ರವಾಹ ಉಂಟಾಗುವ ಭೀತಿಯೂ ಎದುರಾಗಿದೆ.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv