Cnewstv | 20.03.2025 | ಬೆಂಗಳೂರು | ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಟೀಮ್ ಇಂಡಿಯಾಗೆ 58 ಕೋಟಿ ರೂ. ಘೋಷಿಸಿದ ಬಿಸಿಸಿಐ.
ಮುಂಬೈ : ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ವಿಜೇತ ಭಾರತ ತಂಡಕ್ಕೆ ಬಿಸಿಸಿಐ 58 ಕೋಟಿ ರೂ. ನಗದು ಬಹುಮಾನ ಘೋಷಣೆ ಮಾಡಿದೆ.
ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡವನ್ನು ಬಗ್ಗು ಬಡಿದು ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಟ್ರೋಫಿ ಮುಡಿಗೇರಿಸಿಕೊಂಡಿತ್ತು. ಈ ಶ್ರೇಷ್ಠ ಸಾಧನೆಯನ್ನು ಗೌರವಿಸುವ ಸಲುವಾಗಿ ಇದೀಗ 58 ಕೋಟಿ ರೂ. ನಗದು ಬಹುಮಾನ ಘೋಷಿಸಲಾಗಿದ್ದು, ಈ ಮೊತ್ತವನ್ನು ಆಟಗಾರರು, ತರಬೇತಿ ಮತ್ತು ಸಹಾಯಕ ಸಿಬ್ಬಂದಿಗಳು ಹಂಚಿಕೊಳ್ಳಲಿದ್ದಾರೆ.
ಈ ಹಿಂದೆ 2024 ರಲ್ಲಿ ಟಿ20 ವಿಶ್ವಕಪ್ ಗೆದ್ದಿದ್ದ ಭಾರತ ತಂಡಕ್ಕೆ ಬಿಸಿಸಿಐ 125 ಕೋಟಿ ರೂ. ಬಹುಮಾನ ಮೊತ್ತ ನೀಡಿತ್ತು. ಈ ಬಹುಮಾನ ಮೊತ್ತವನ್ನು ಆಟಗಾರರು ಹಾಗೂ ಸಿಬ್ಬಂದಿಗಳಿಗೆ ಹಂಚಲಾಗಿದೆ. ಇಲ್ಲಿ ಟೀಮ್ ಇಂಡಿಯಾ ಆಟಗಾರರಿಗೆ ಹಾಗೂ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ತಲಾ 5 ಕೋಟಿ ರೂ. ನೀಡಲಾಗಿದೆ. ಇನ್ನುಳಿದ ಸಿಬ್ಬಂದಿಗಳಿಗೆ ತಲಾ 2.5 ಕೋಟಿ ರೂ. ನಿಗದಿ ಮಾಡಲಾಗಿತ್ತು. ಇದೇ ಮಾದರಿಯಲ್ಲಿ ಈ ಬಾರಿ 58 ಕೋಟಿ ರೂ. ಅನ್ನು ಟೀಮ್ ಇಂಡಿಯಾ ಸದಸ್ಯರಿಗೆ ಹಂಚಲಾಗುತ್ತದೆ.
ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಝಿಲೆಂಡ್ ಮೊದಲು ಬ್ಯಾಟಿಂಗ್ ಮಾಡಿ 50 ಓವರ್ಗಳಲ್ಲಿ 251 ರನ್ ಕಲೆಹಾಕಿತು. ಈ ಗುರಿಯನ್ನು ಟೀಮ್ ಇಂಡಿಯಾ 49 ಓವರ್ಗಳಲ್ಲಿ ಚೇಸ್ ಮಾಡಿ 4 ವಿಕೆಟ್ಗಳ ಜಯ ಸಾಧಿಸಿತ್ತು. ಈ ಮೂಲಕ ಮೂರನೇ ಬಾರಿ ಚಾಂಪಿಯನ್ಸ್ ಟ್ರೋಫಿಯನ್ನು ಎತ್ತಿ ಹಿಡಿಯುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾಗಿತ್ತು.
ಇದಕ್ಕೂ ಮುನ್ನ 2002 ರಲ್ಲಿ ಸೌರವ್ ಗಂಗೂಲಿ ನಾಯಕತ್ವದಲ್ಲಿ ಹಾಗೂ 2013 ರಲ್ಲಿ ಮಹೇಂದ್ರ ಸಿಂಗ್ ಧೋನಿ ಮುಂದಾಳತ್ವದಲ್ಲಿ ಟೀಮ್ ಇಂಡಿಯಾ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಂಡಿದ್ದರು. ಇದೀಗ ರೋಹಿತ್ ಶರ್ಮಾ ನೇತೃತ್ವದಲ್ಲಿ ಭಾರತ ತಂಡವು ಮೂರನೇ ಬಾರಿ ಚಾಂಪಿಯನ್ಸ್ ಟ್ರೋಫಿ ಕಿರೀಟವನ್ನು ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಚಾಂಪಿಯನ್ಸ್ ಟ್ರೋಫಿಯ ಭಾರತ ತಂಡ : ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಹರ್ಷಿತ್ ರಾಣಾ, ಮೊಹಮ್ಮದ್. ಶಮಿ, ಅರ್ಷದೀಪ್ ಸಿಂಗ್, ರವೀಂದ್ರ ಜಡೇಜಾ, ವರುಣ್ ಚಕ್ರವರ್ತಿ.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಇದನ್ನು ಇದಿ…