Cnewstv / 09.01.2023 / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಹಾವೇರಿ ಸಾಹಿತ್ಯ ಸಮ್ಮೇಳನದ ಯಶಸ್ವಿ ಯಾತ್ರೆ….
“ಕೆಲವರ ಕೆನ್ನೆಯ ಮೇಲೆ…. ಇನ್ನು ಕೆಲರ ಕುತ್ತಿಗೆ ಸುತ್ತ ….. ಎದೆಗಪ್ಪಿಕೊಂಡವರು ಕೆಲವರು….. ಮೈ ತುಂಬ ಕನ್ನಡವಾದ ಕೆಲವರು …. ಒಟ್ಟಿನಲ್ಲಿ ಮನ ತುಂಬಿಕೊಂಡು ಎಲ್ಲರೂ ಕನ್ನಡವಾದವರು”.
ಏಲಕ್ಕಿ ನಾಡು ಹಾವೇರಿಯಲ್ಲಿ ಮೂರು ದಿನದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಲಕ್ಷಾಂತರ ಜನರ ನರ ನಾಡಿಗಳಲ್ಲಿ ಕನ್ನಡದ ಪರಿಮಳ ಘಮ್ಮೆಂದು ಆವರಿಸಿಕೊಂಡಿತ್ತು.
ಸರ್ಕಾರದ ಕಾರ್ಯಕ್ರಮದ ಪ್ರಕಾರ ಇದು ಅಕ್ಷರ ಜಾತ್ರೆ ! ಅಕ್ಷರ ಅದೆಷ್ಟು ಮಿಚಿಂತೋ ಗೊತ್ತಿಲ್ಲ …ಆದರೆ , ಹಾವೇರಿ ನಗರದ ಈ ಹೊರವಲಯ ಅಕ್ಷರಶಃ ಜಾತ್ರೆಯ ಭಾವ ಮೂಡಿಸಿದ್ದು ಮಾತ್ರ ದಿಟವಾಗಿತ್ತು.
ಕನ್ನಡತನವನ್ನು ಬರೀ ಪುಸ್ತಕದ ಚೌಕಟ್ಟಿನಲ್ಲಿ , ಕವಿ -ಪಂಡಿತರ ಅನಿಸಿಕೆ-ಅಂಬೋಣಗಳಲ್ಲಿ ಕಟ್ಟಿ ಹಾಕಲು ಸಾಧ್ಯವೇ? ಕನ್ನಡವನ್ನು ಕಳೆದ ಮೂರುದಿನಗಳಿಂದ ಹಾವೇರಿಯ ಜನರು ಸಂಭ್ರಮಿಸಿದಂತೆ ಇನ್ನಾರು ಸಂಭ್ರಮಿಸಿದ್ದು ನಾನು ಈವರೆಗೆ ನೋಡಿಲ್ಲ. ಅಕ್ಕ ಪಕ್ಕದ ಹಳ್ಳಿಗಳಿಂದ, ಊರಿಗೆ ಊರೇ ಈ ನುಡಿ ಸಂತೆಗೆ ಬಂದು ಕನ್ನಡತನ ಮೆರೆದ ರೀತಿ ಬಲು ಅನನ್ಯ.
ಒಂದೆಡೆ ಆ ಭವ್ಯ ವೇದಿಕೆ ಮೇಲಿನ ರಾಜಕಾರಣಿಗಳ, ಕವಿ ಕೋವಿದರ ಪಾಂಡಿತ್ಯ ಪ್ರದರ್ಶನದ ಭಾಷಣ-ಉಪನ್ಯಾಸಗಳು ಅಬಾಧಿತವಾಗಿ ಮೊಳಗುತ್ತಿದ್ದವು, ಇನ್ನೊಂದೆಡೆ ಜನ ಸಮಾನ್ಯರು ತಮ್ಮದೇ ರೀತಿಯಲ್ಲಿ ಯಾವುದೋ ಹಬ್ಬದ ಸಡಗರದಂತೆ ಕನ್ನಡದ ಅಭಿಮಾನವನ್ನು ಮೆರೆಯುತ್ತಿದ್ದರು. ಮರೆಯದ ಮಾಣಿಕ್ಯನಾಗಿ ಕನ್ನಡಿಗರ ಹೃದಯ ಸಿಂಹಾಸನಾಧೀಶ್ವರ ಅಪ್ಪು ಭಾವಚಿತ್ರಗಳನ್ನು ಕೈಯಲ್ಲಿ ಹಿಡಿದ ಅನೇಕರು ಓಡಾಡುತ್ತಿದ್ದುದು ವಿಶೇಷವಾಗಿತ್ತು .
ಕನ್ನಡದ ಸಾಹಿತಿಗಳು, ಆಡಳಿತಾಧಿಕಾರಿಗಳು , ರಾಜಕಾರಣಿಗಳ ಕೈಲಿಂದ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಸಾರ ಶ್ರೀ ಸಾಮಾನ್ಯನ ಹೃದಯ ತಲುಪಿ ಮಿರಿ ಮಿರಿ ಮಿಂಚುತ್ತಿತ್ತು. …..
ಮಣ್ಣಿನ ಸೊಗಡನು ಮೈಗೂಡಿಸಿಕೊಂಡ ಜಾನಪದೀಯ ಕವಿ ದೊಡ್ಡರಂಗೇಗೌಡರು ಈ ಸಮ್ಮೇಳನದ ಅಧ್ಯಕ್ಷರಾಗಿದ್ದಕ್ಕೂ ಸಾರ್ಥಕವಾಯಿತು .
ಕನ್ನಡ ಭಾಷೆ ಉಳಿಯುವುದು, ಬೆಳೆಯುವುದು ಸಾರ್ವಜನಿಕರ ಜೀವನದಲ್ಲಿ…..ಅವರ ಮಾತು-ಕತೆಗಳಲ್ಲಿ….ಸಂಸ್ಕೃತಿಯಲ್ಲಿ….ಅವರ ಹಾಡು ಹಸೆ ಪದ್ಧತಿಗಳಲ್ಲಿ …..ಅಂತಹ ವಾತಾವರಣ ಹಾವೇರಿಯ ನೆಲದಲ್ಲಿ ನಿಚ್ಛಳವಾಗಿ ಕಂಡು ಬಂತು.
ಈ ಪಾಟಿಯ ಜನರ ಪಾಲ್ಗೊಳ್ಳುವಿಕೆ ಬೆಂಗಳೂರಿನಲ್ಲಾಗಲಿ ಅಥವಾ ನನ್ನ ಊರು ಶಿವಮೊಗ್ಗೆಯಲ್ಲಾಗಲಿ ಊಹಿಸವೂ ಸಾಧ್ಯವಿಲ್ಲ . ನಾವು ಮಲೆನಾಡಿಗರ ಬದುಕು ನಮ್ಮ ಊಟದಂತೆ …ಅನ್ನ , ಆ ಅನ್ನಕ್ಕೊಂದು ಸಾರು … ಅಲ್ಲಿಗೆ ಮುಗಿಯಿತು . ಹಾವೇರಿಯ ಜನರ ವೈವಿಧ್ಯತೆ ಅವರ ಊಟದಂತೆ…. ರೊಟ್ಟಿ, ಕಾಳು ಪಲ್ಯ, ಸೊಪ್ಪಿನ ಪಲ್ಯ, ಶೇಂಗಾ ಪುಡಿ, ಈರುಳ್ಳಿ -ತರಕಾರಿ, ಖಾರಚಟ್ನಿ, ಮೊಸರು …. ಅಬ್ಬಬ್ಬಾ ! ಏನುಂಟು?! ಏನಿಲ್ಲ?! ಇದಲ್ಲವೇ ಜೀವನ ಪ್ರೀತಿ. ಅದೆಷ್ಟು ಜನರು!! ಅದೆಷ್ಟು ವೈವಿದ್ಯತೆ! ಕನ್ನಡವೆಂಬ ಸರಳ ಮಂತ್ರ ಎಲ್ಲರನ್ನೂ ಎಕಸೂತ್ರದಿ ಒಂದುಮಾಡಿದ ಪರಿ ಅದೆಷ್ಟು ಚಂದ!
ಕನ್ನಡ ಸಾಹಿತ್ಯ ಸಮ್ಮೇಳನದ ಹೆಸರಿನಲ್ಲಿ ಈ ಸಂಖ್ಯೆಯಲ್ಲಿ ಜನಪರರು ಸೇರುವಂತಾಗಿದ್ದು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಮಹೇಶ್ ಜೋಶಿಯವರ ಗೆಲುವು ಎಂದರೆ ತಪ್ಪಾಗಲಾರದು.
ಹಾವೇರಿಯ ಸಮ್ಮೇಳನದಲ್ಲಿ ಮೊಸರಲ್ಲಿ ಕಲ್ಲು ಹುಡುಕಿದಂತೆ ಜಾತಿ-ಧರ್ಮ, ವರ್ಗಕ್ಕಾದ ಅಪಮಾನದ ನೆಪ ಹೇಳಿ ಬೆಂಗಳೂರಿನಲ್ಲಿ ಒಂದಿಷ್ಟು ಅತೃಪ್ತ ಆತ್ಮಗಳು ಜನಪರ ಸಾಹಿತ್ಯ ಸಮ್ಮೇಳನ ನಡೆಸುತ್ತಿರುವುದು ನಿಜಕ್ಕೂ ಹಾಸ್ಯಸ್ಪದ ಎನಿಸಿತು .
ಅಸಲಿಗೆ ಯಾರು ವೇದಿಕೆಯ ಮೇಲೆ ಕೂತು ಕನ್ನಡತನ ಭೋಧಿಸುತ್ತಾನೆ ಎನ್ನುವುದು ಮುಖ್ಯವಾಗುವುದಿಲ್ಲ , ವೇದಿಕೆಯ ಎದುರು ಕೂತು ಯಾರು ಎಷ್ಟು ಕನ್ನಡತನವನ್ನು ಮೆರೆದೆರು ಎನ್ನುವುದೇ ಮುಖ್ಯವಲ್ಲವೇ? ಜನರು ಕನ್ನಡ ಪುಸ್ತಕಗಳನ್ನು ಓದುವುದೇ ಇಲ್ಲ ಎನ್ನುವ ಕಾಲಘಟ್ಟದಲ್ಲಿ ಇಲ್ಲಿನ ಪುಸ್ತಕ ಮಳಿಗೆಗಳಲ್ಲಿ ಕನ್ನಡ ಪುಸ್ತಕಗಳ ಭರ್ಜರಿ ವ್ಯಪಾರ ಬೇರೆಯದೇ ಕಥೆಯನ್ನು ಹೇಳುತ್ತಿದೆ .
ಈ ನಿಟ್ಟಿನಲ್ಲಿ ಹಾವೇರಿಯ ಸಾಹಿತ್ಯ ಸಮ್ಮೇಳನ ಅತ್ಯಂತ ಯಶಸ್ವಿಯಾಗಿ ನಡೆದಿದೆ.
ವ್ಯವಸ್ಥೆಯ ದೃಷ್ಟಿಯಿಂದ ಸಾಹಿತಿಗಳಿಗೆ, ಮಾರಾಟಗಾರರಿಗೆ, ಸರ್ಕಾರಿ ಅಧಿಕಾರಿಗಳಿಗೆ ಒಂದಿಷ್ಟು ತೊಂದರೆಗಳಾಗಿರಬಹುದು . ಈ ಮಟ್ಟದ ದೊಡ್ಡ ಜಾತ್ರೆಯಲ್ಲಿ ಇದು ಸಹಜ …..
ಆದರೆ ಪರಂಪರೆಯ ಆಶಯದಂತೆ ಲಕ್ಷಾಂತರ ಮಂದಿಗೆ ಅಕ್ಷರ ದಸೋಹ-ಅನ್ನ ದಾಸೋಹ ನಡೆಸಿದ ಹೆಗ್ಗಳಿಕೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಸಲ್ಲುತ್ತದೆ .
ಎಡಪಂಥೀಯರು ಹಾವೇರಿಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬಲಪಂಥೀಯ ಸಮ್ಮೇಳನವೆಂದು ಅಪಪ್ರಚಾರ ಮಾಡುತ್ತಿರುವಾದ ಕನ್ನಡ ಪಂಥದವನಾದ ನಾನು ಹಾವೇರಿಯ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಅಲ್ಲಿ ನೆರೆದಿರುವ ಜನಬಲದಲ್ಲಿ ಒಂದಾಗಿ ಬಂದೆ🙏
ಕನ್ನಡನಮ್ಮಅಸ್ತಿತ್ವನಮ್ಮ_ಅನಾವರಣ
~ ವಿನಯ್ ಶಿವಮೊಗ್ಗ.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments