‘ಕಲಾ ತಪಸ್ವಿ’ ಹಿರಿಯ ನಟ ರಾಜೇಶ್ ಇನ್ನಿಲ್ಲ.

Cnewstv.in / 19.02.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

‘ಕಲಾ ತಪಸ್ವಿ’ ಹಿರಿಯ ನಟ ರಾಜೇಶ್ ಇನ್ನಿಲ್ಲ.

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ‘ಕಲಾತಪಸ್ವಿ’ ರಾಜೇಶ್ ಇಂದು ನಿಧನರಾಗಿದ್ದಾರೆ.

ಕಿಡ್ನಿ ವೈಫಲ್ಯ ಹಾಗೂ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ರಾಜೇಶ್ ಬೆಂಗಳೂರಿನ ಕಸ್ತೂರಬಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೆಲವು ದಿನಗಳಿಂದ ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡಲಾಗುತ್ತಿತ್ತು ಆದರೆ, ಇಂದು ಚಿಕಿತ್ಸೆ ಫಲಕಾರಿಯಾಗದೆ ಬೆಳಗಿನ ಜಾವ 2.30ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.

ಬೆಂಗಳೂರಿನಲ್ಲೇ ಜನಿಸಿದ ನಟ ರಾಜೇಶ್ ಅವರ ನಿಜನಾಮ ಮುನಿ ಚೌಡಪ್ಪ. ಚಿಕ್ಕವಯಸ್ಸಿನಲ್ಲೇ ನಟನೆಯಲ್ಲಿ ಆಸಕ್ತಿ ಬೆಳೆಸಿಕೊಂಡ ರಾಜೇಶ್ ಅವರು ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು. ಮನೆಯಲ್ಲಿ ಪೋಷಕರಿಗೆ ತಿಳಿಯದಂತೆ ‘ಸುದರ್ಶನ ನಾಟಕ ಮಂಡಳಿ’ ಸೇರಿದ ಮುನಿ ಚೌಡಪ್ಪ ರಂಗಭೂಮಿಯಲ್ಲಿ ‘ವಿದ್ಯಾಸಾಗರ್’ ಹೆಸರಿನಿಂದ ಗುರುತಿಸಿಕೊಂಡರು.

ಮೊದಲ ಬಾರಿಗೆ ಅವರು ನಾಟಕದಲ್ಲಿ ಶ್ರೀರಾಮನ ಪಾತ್ರದಲ್ಲಿ ಕಾಣಿಸಿಕೊಂಡರು. ಆಮೇಲೆ ಆದ ‘ಶಕ್ತಿ ನಾಟಕ ಮಂಡಳಿ’ಯನ್ನ ವಿದ್ಯಾಸಾಗರ್ ಆರಂಭಿಸಿದರು. ‘ನಿರುದ್ಯೋಗಿ ಬಾಳು’, ‘ಬಡವನ ಬಾಳು’, ‘ವಿಷ ಸರ್ಪ’, ‘ನಂದಾ ದೀಪ’, ‘ಚಂದ್ರೋದಯ’, ‘ಕಿತ್ತೂರು ರಾಣಿ ಚೆನ್ನಮ್ಮ’ ಮುಂತಾದ ನಾಟಕಗಳ ಮೂಲಕ ವಿದ್ಯಾಸಾಗರ್ ಗಮನ ಸೆಳೆದರು.

1968ರಲ್ಲಿ ತೆರೆಕಂಡ ‘ನಮ್ಮ ಊರು’ ಚಿತ್ರದಲ್ಲಿ ತಮ್ಮ ಹೆಸರನ್ನು ವಿದ್ಯಾಸಾಗರ್‌ ಇಂದ ರಾಜೇಶ್‌ ಎಂದು ಬದಲಾಯಿಸಿಕೊಂಡರು. ನಟ ರಾಜೇಶ್ ಅವರ ವೃತ್ತಿ ಬದುಕಿಗೆ ದೊಡ್ಡ ತಿರುವು ಕೊಟ್ಟ ಚಿತ್ರ ‘ನಮ್ಮ ಊರು’. ಸಿ.ವಿ.ಶಿವಶಂಕರ್ ನಿರ್ದೇಶನದ ‘ನಮ್ಮ ಊರು’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಚಿತ್ರದಲ್ಲಿ ನಟ ರಾಜೇಶ್ ಗಾಯಕರಾಗಿಯೂ ಜನಪ್ರಿಯತೆ ಪಡೆದರು.

‘ನಮ್ಮ ಊರು’, ‘ಗಂಗೆ ಗೌರಿ’, ‘ಸತೀ ಸುಕನ್ಯ’, ಬೆಳುವಲದ ಮಡಿಲಲ್ಲಿ’, ‘ಕಪ್ಪು ಬಿಳುಪು’, ‘ಬೃಂದಾವನ’, ‘ಬೋರೆ ಗೌಡ ಬೆಂಗಳೂರಿಗೆ ಬಂದ’, ‘ಮರೆಯದ ದೀಪಾವಳಿ’, ‘ಪ್ರತಿಧ್ವನಿ’, ‘ಕಾವೇರಿ’, ‘ದೇವರ ಗುಡಿ’, ‘ಬದುಕು ಬಂಗಾರವಾಯ್ತು’, ‘ಸೊಸೆ ತಂದ ಸೌಭಾಗ್ಯ’, ‘ಮುಗಿಯದ ಕಥೆ’, ‘ಬಿಡುಗಡೆ’, ‘ದೇವರದುಡ್ಡು’, ‘ಕಲಿಯುಗ’, ‘ಪಿತಾಮಹ’ ಮುಂತಾದ ಚಿತ್ರಗಳಲ್ಲಿ ರಾಜೇಶರು ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ಸೊಸೆ ತಂದ ಸೌಭಾಗ್ಯ, ದೇವರ ದುಡ್ಡ, ಕಲಿಯುಗ, ನಮ್ಮ ಬದುಕು’, ‘ಭಲೇ ಅದೃಷ್ಟವೋ ಅದೃಷ್ಟ’, ‘ಭಲೇ ಭಾಸ್ಕರ’, ‘ಹೆಣ್ಣು ಹೊನ್ನು ಮಣ್ಣು’, ‘ವಿಷ ಕನ್ಯೆ’, ‘ಕ್ರಾಂತಿ ವೀರ’, ‘ಬಿಡುಗಡೆ’ ಮುಂತಾದ 150ಕ್ಕೂ ಅಧಿಕ ಸಿನಿಮಾಗಳಲ್ಲಿ ನಟ ರಾಜೇಶ್ ನಟಿಸಿದ್ದಾರೆ.

ಕನ್ನಡ ಚಿತ್ರರಂಗದ ಅನೇಕ ಗಣ್ಯರು, ಅಭಿಮಾನಿಗಳು ಆಪ್ತರು ರಾಜೇಶ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಎಲ್ಲರೂ ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ. ಸಂಜೆ 6 ಗಂಟೆಯವರೆಗೆ ಬೆಂಗಳೂರಿನ ವಿದ್ಯಾರಣ್ಯಪುರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಲಾಗಿದೆ.

ಇದನ್ನು ಒದಿ : https://cnewstv.in/?p=8535

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*