Breaking News

ಅಗತ್ಯ ವಸ್ತುಗಳ ಸೇವೆ ಇರುತ್ತದೆ : ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್

 

ಶಿವಮೊಗ್ಗ  : ರಾಜ್ಯ ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‍ಡೌನ್ ಜಾರಿಗೊಳಿಸಲಾಗಿದ್ದು, ಈ ಅವಧಿಯಲ್ಲಿ ಅಂಗಡಿಗಳಲ್ಲಿ ಹಾಲು, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಮಾರಾಟ ಎಂದಿನಂತೆ ಮುಂದುವರೆಯಲಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ತಿಳಿಸಿದರು.

ಅವರು ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಇಂದಿನಿಂದ ಮಾ.31ರವರೆಗೆ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‍ಡೌನ್ ಘೋಷಿಸಲಾಗಿದೆ. ಐದಕ್ಕಿಂತ ಹೆಚ್ಚು ಜನರು ಸೇರುವುದನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲು ಸೂಚಿಸಲಾಗಿದೆ. ಜನರು ಒಟ್ಟಾಗಿ ಸೇರುವಂತಹ ಮಾರುಕಟ್ಟೆ ಪ್ರದೇಶಗಳನ್ನು ಮುಚ್ಚಲು ಆದೇಶಿಸಲಾಗಿದೆ. ಇದೇ ರೀತಿ ಅಗತ್ಯ ವಸ್ತುಗಳು, ದಿನಸಿ ಸಾಮಾಗ್ರಿ ಇತ್ಯಾದಿ ಅಂಗಡಿಗಳನ್ನು ಹೊರತುಪಡಿಸಿ ಬೇರೆಲ್ಲಾ ಅಂಗಡಿಗಳನ್ನು ಸಂಪೂರ್ಣವಾಗಿ ಮುಚ್ಚಲು ಆದೇಶಿಸಲಾಗಿದೆ ಎಂದು ಹೇಳಿದರು.

ತಳ್ಳು ಗಾಡಿಗಳಿಗೆ ಅವಕಾಶ: ರಸ್ತೆ ಬದಿ ವ್ಯಾಪಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗುವುದು. ಆದರೆ ತಳ್ಳುಗಾಡಿಗಳಲ್ಲಿ ಮನೆ ಬಾಗಿಲಿಗೆ ತರಕಾರಿ, ಹೂವು, ಹಣ್ಣು ಇತ್ಯಾದಿ ವಸ್ತುಗಳ ಮಾರಾಟವನ್ನು ಪ್ರೋತ್ಸಾಹಿಸಲಾಗುವುದು. ಜನರು ಗಾಬರಿಗೊಳ್ಳದೆ, ಅನಗತ್ಯವಾಗಿ ಮನೆಯಿಂದ ಹೊರಗೆ ಬಾರದೆ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.

 

Leave a Reply

Your email address will not be published. Required fields are marked *

*