ಈ ರಾಜ್ಯದಲ್ಲಿ ಎದುರಾಗಿರುವ ಉಪ ಚುನಾವಣೆಯಲ್ಲಿ ಸಮ್ಮಿಶ್ರ ಸರ್ಕಾರದ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಇಂದು ಸುದ್ದಿಗೋಷ್ಟಿಯಲಿ ಹೇಳಿದರು. ಮೀಟೂ ಪ್ರಕರಣದಲ್ಲಿ ಕೇಂದ್ರದ ಒಂದು ವಿಕೆಟ್ ಪತನವಾಗಿರುವುದು ಮೋದಿ ಸರ್ಕಾರದ ಮುಂದಿನ ದಿವಾಳಿಗೆ ಸಾಕ್ಷಿಯಾಗಿದೆ. ತತ್ವ ಸಿದ್ಧಾಂತ ಹೇಳುವ ಬಿಜೆಪಿಯಲ್ಲಿ ಮಹಿಳೆಯರಿಗೆ ಗೌರವವಿಲ್ಲ. ಮೀಟೂ ಅಭಿಯಾನದಲ್ಲಿ ಹತ್ತಾರು ಮಹಿಳೆಯರು ಆರೋಪ ಮಾಡಿ ಇಷ್ಟು ದಿನಗಳ ಮೇಲೆ ಸಚಿವ ಅಕ್ಪರ್ ರಾಜೀನಾಮೆ ನೀಡಿದ್ದಾರೆ. ಇದು ಬಿಜೆಪಿ ಪಕ್ಷಕ್ಕೆ ಒಂದು ಪಾಠ. ಮೋದಿ ಸರ್ಕಾರದಲ್ಲಿ ಯಡಿಯೂರಪ್ಪ ಹಾಗೂ ಮಕ್ಕಳಿಗೆ ಮಾತ್ರ ಅಚ್ಛೆ ದಿನ್ ಬಂದಿದೆ. ಉಪ ಚುನಾವಣೆಯಲ್ಲಿ ಸ್ಪರ್ಧಿಸಿರುವ ಬಿ.ವೈ. ರಾಘವೇಂದ್ರರ ಆಸ್ತಿ ಶೇ.60ರಷ್ಟು ಹೆಚ್ಚಾಗಿದೆ.ಇವರಿಂದ ಜಿಲ್ಲೆಯ ಅಭಿವೃದ್ಧಿ ಸಾಧ್ಯವಿಲ್ಲ. ತುಮರಿ ಸೇತುವೆಗೆ ಬರೀ ಗುದ್ದಲಿಪೂಜೆ ಮಾಡಿದ್ದಾರೆ. ಆದರೆ ಈವರೆಗೂ ಟೆಂಡರ್ ಆಗಿಲ್ಲ. ಹಣ ಬಿಡುಗಡೆಯಾಗಿಲ್ಲ.ಇನ್ನು ಕಾಂಗ್ರೆಸ್ ಆಡಳಿತದಲ್ಲಿ ಹಸಿರುಮಕ್ಕಿ ಸೇತುವೆ ನಿರ್ಮಾಣಕ್ಕೆ 90ಕೋಟಿರೂ. ಬಿಡುಗಡೆ ಮಾಡಿದ್ದು, ಆ ಕಾಮಗಾರಿ ಈಗ ಪ್ರಾರಂಭವಾಗುತ್ತಿದೆ. ಅಭಿವೃದ್ಧಿ ಏನಿದ್ದರೂ ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರದಿಂದ ಮಾತ್ರ ಸಾಧ್ಯ ಎಂದರು. ಈಗ ಎದುರಾಗಿರುವ ಉಪಚುನಾವಣೆಯಿಂದ ಜಿಲ್ಲೆಯಲ್ಲಿ ಜಿದ್ದಾಜಿದ್ದಿ ರಾಜಕಾರಣ ಪ್ರಾರಂಭವಾಗಿದೆ. ಸಮ್ಮಿಶ್ರ ಅಭ್ಯರ್ಥಿ ಮಧು ಬಂಗಾರಪ್ಪರನ್ನು ಗೆಲ್ಲಿಸಲು ಎರಡೂ ಪಕ್ಷಗಳ ನಾಯಕರು ಒಂದಾಗಿ ಕೆಲಸ ಮಾಡುತ್ತೇವೆ. ಜಿಲ್ಲೆಯಲ್ಲಿ ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರು ಕೈಗೊಂಡ ಅಭಿವೃದ್ಧಿ ಕೆಲಸಗಳ ಛಾಪು ಇನ್ನೂ ಇದೆ. ಮಧು ಬಂಗಾರಪ್ಪರನ್ನು ಗೆಲ್ಲಿಸುವ ಮೂಲಕ ಬಂಗಾರಪ್ಪನವರ ಆತ್ಮಕ್ಕೆ ಶಾಂತಿ ದೊರಕುವಂತೆ ಮಾಡುತ್ತೇವೆ. ರಾಜ್ಯದ ಸಮ್ಮಿಶ್ರ ಸರ್ಕಾರವನ್ನು ಅಪವಿತ್ರ ಮೈತ್ರಿ ಎಂದು ಬಿಜೆಪಿ ನಾಯಕರು ಪದೇ ಪದೇ ಹೇಳುತ್ತಿದ್ದಾರೆ. ಆದರೆ ಅವರು ಜೆಡಿಎಸ್ ಜೊತೆ ಸೇರಿ ಸರ್ಕಾರ ಮಾಡಿದ್ದು ಪವಿತ್ರವೇ ಎಂದು ಪ್ರಶ್ನಿಸಿದರು.?? ಯಡಿಯೂರಪ್ಪರಿಗೆ ಕಣ್ಣು ಕಾಣಿಸೋಲ್ಲ, ಕಿವಿ ಕೇಳಿಸೊಲ್ಲ. ಆದ್ದರಿಂದ ಸಮ್ಮಿಶ್ರ ಸರ್ಕಾರದ ಅಭಿವೃದ್ಧಿ ಕೆಲಸಗಳು ಅವರಿಗೆ ಕಾಣಿಸುತ್ತಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿಯವರು ರೈತರ ಸಾಲ ಮನ್ನಾ ಮಾಡಿದ್ದು ಅವರಿಗೆ ತಿಳಿಯುತ್ತಿಲ್ಲ ಎಂದು ವ್ಯಂಗ್ಯವಾಡಿದರು.

Recent Comments