ಶಿವಮೊಗ್ಗ: ಚುನಾವಣೆಯಲ್ಲಿ ಪುನಃ ಆಯ್ಕೆಯಾಗಿ ರಾಜ್ಯಾಧ್ಯಕ್ಷನಾಗಿ ಮುಂದುವರೆಯುವೆ. ಪಕ್ಷದೊಳಗಿನ ಆಂತರಿಕ ಗೊಂದಲ ವಾರದ ಬಳಿಕ ಸರಿಯಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಿಶ್ವಾಸ ವಕ್ತಪಡಿಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಯತ್ನಾಳ್ ಹೇಳಿಕೆಯಿಂದ ಪಕ್ಷಕ್ಕೆ ಡ್ಯಾಮೇಜ್ ಆಗಿದೆ ಎಂಬ ಸದಾನಂದಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು,ಈಗಾಗಲೇ ಏನೇನು ಡ್ಯಾಮೇಜ್ ಆಗಬೇಕೋ ಅವೆಲ್ಲವೂ ಆಗಿ ಹೋಗಿದೆ. ಕಳೆದ ವರ್ಷದಿಂದ ನಾನು ಎಲ್ಲಿಯೂ ಬಹಿರಂಗ ಹೇಳಿಕೆ ಕೊಟ್ಟಿಲ್ಲ. ಯಾರೇ ಏನೇ ಹೇಳಿದರೂ ಯಾರ ವಿರುದ್ಧವೂ ಬಹಿರಂಗ ಹೇಳಿಕೆ ಕೊಟ್ಟಿಲ್ಲ. ಪಕ್ಷದ ವಿರುದ್ಧವೂ ಹೇಳಿಕೆ ಕೊಟ್ಟಿಲ್ಲ. ಬಿಜೆಪಿ ರಾಜ್ಯದ ಅಧ್ಯಕ್ಷನಾಗಿ ಕರ್ತವ್ಯದ ಅರಿವು ನನಗಿದೆ. ಬಹಳ ದೊಡ್ಡ ಜವಾಬ್ದಾರಿಯನ್ನ ಕಳೆದೊಂದು ವರ್ಷದಿಂದ ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದೇನೆ. 8-10 ದಿನಗಳಲ್ಲಿ ರಾಜ್ಯದ ಅಧ್ಯಕ್ಷ ಯಾರೆಂಬುದಕ್ಕೆ ಉತ್ತರ ಸಿಗಲಿದೆ. ಬಳಿಕ ಎಲ್ಲಾ ಸಮಸ್ಯೆಗಳು ಬಗೆ ಹರಿಯಲಿದೆ ಎಂದರು.
ಬಿಜೆಪಿಯಲ್ಲಿ ಆಂತರಿಕ ಪ್ರಜಾಪ್ರಭುತ್ವದ ವ್ಯವಸ್ಥೆ ಇದೆ. ಈ ರೀತಿ ಯಾವುದೇ ರಾಜಕೀಯ ಪಕ್ಷದಲ್ಲಿ ಇಲ್ಲ. ವ್ಯವಸ್ಥಿತವಾಗಿ ಸಂಘಟನೆ ಚುನಾವಣೆ ನಡೆಯುತ್ತದೆ ಅಂದರೆ ಅದು ಬಿಜೆಪಿ ಪಕ್ಷದಲ್ಲಿ ಮಾತ್ರ. ಮಂಡಲ ಮಟ್ಟದಿಂದ ರಾಜ್ಯಮಟ್ಟದವರೆಗೂ ಚುನಾವಣೆ ನಡೆಯುತ್ತದೆ ಎಂದು ಹೇಳಿದ್ದಾರೆ.