ಶಿವಮೊಗ್ಗ: ವಾಯುಸೇನೆಯ ತರಬೇತಿ ವೇಳೆಯಲ್ಲಿ ಪ್ಯಾರಾಚೂಟ್ ತೆರೆಯದೇ ಶಿವಮೊಗ್ಗ ಮೂಲದ ಯೋಧ ಸಾವನ್ನಪ್ಪಿದ್ದಾರೆ.
ಉತ್ತರ ಪ್ರದೇಶದ ಆಗ್ರಾದಲ್ಲಿ ನಿನ್ನೆ ಪ್ಯಾರಾಚೂಟ್ ತರಬೇತಿ ವೇಳೆ ದುರ್ಘಟನೆ ನಡೆದಿದ್ದು, ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕು ಸಂಕೂರಿನ ಗೋರಗದ್ದೆಯ ಜಿ.ಎಸ್. ಮಂಜುನಾಥ್(36) ಎಂಬ ಯೋಧ ಮೃತಪಟ್ಟಿದ್ದಾರೆ.
ವಾಯುಪಡೆಯ ವಾರೆಂಟ್ ಅಧಿಕಾರಿಯಾಗಿದ್ದ ಮಂಜುನಾಥ್, ನಿನ್ನೆ ತರಬೇತಿ ವೇಳೆ ಇತರೆ 11 ಜನರೊಂದಿಗೆ ವಿಮಾನದಿಂದ ಜಿಗಿದಿದ್ದರು. ಮಂಜುನಾಥ್ ಹೊರತುಪಡಿಸಿ 10 ಜನರು ಪ್ಯಾರಾಚೂಟ್ ಮೂಲಕ ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದರು. ತರಬೇತುದಾರರಾಗಿದ್ದ ಮಂಜುನಾಥ್ ಅವರ ಪ್ಯಾರಾಚೂಟ್ ತೆರೆದುಕೊಳ್ಳದ ಕಾರಣ ಅವರು ಸುಮಾರು 1500 ಅಡಿ ಎತ್ತರದಿಂದ ಬಿದ್ದಿದ್ದರು. ತಕ್ಷಣವೇ ಅವರನ್ನ ಸಮೀಪದ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಯಿತಾದರೂ, ಅದು ಫಲಕಾರಿಯಾಗದೇ ಮಂಜುನಾಥ್ ಮೃತಪಟ್ಟಿದ್ದಾರೆ.
ಮಂಜುನಾಥ್ ಮೃತದೇಹ ಭಾನುವಾರ ಮುಂಜಾನೆ ಹೊಸನಗರ ತಲುಪಲಿದ್ದು, ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 8 ಗಂಟೆಗೆ ಹೊಸನಗರದ ಮಾವಿನಕೊಪ್ಪ ವೃತ್ತದಿಂದ ತಾಲೂಕು ಕಚೇರಿ ಮಾರ್ಗವಾಗಿ ಹುತಾತ್ಮ ಯೋಧನ ಅಂತಿಮ ಯಾತ್ರೆ ನಡೆಯಲಿದ್ದು, ಭಾನುವಾರವೇ ಸಂಕೂರು ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನಡೆಯಲಿದೆ.
