ಶಿವಮೊಗ್ಗ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಫೆ 06 ಮತ್ತು 07 ರಂದು ಎರಡು ದಿನಗಳ ಕಾಲ ಗೋಪಿಶೆಟ್ಟಿಕೊಪ್ಪದ ಸಾಹಿತ್ಯ ಗ್ರಾಮದಲ್ಲಿ ಜಿಲ್ಲಾ 19ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನ ಆಯೋಜಿಸಿದೆ.
ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ, ತೀರ್ಥಹಳ್ಳಿ ತಾಲ್ಲೂಕಿನ ಹಿರಿಯ ಸಾಹಿತಿ ಡಾ ಜೆ.ಕೆ.ರಮೇಶ್ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಲಿದ್ದಾರೆ. ಸಮ್ಮೇಳನದ ಮಹಾವೇದಿಕೆಗೆ ಡಾ.ನಾ.ಡಿಸೋಜ ಅವರ ಹೆಸರು ಇಡಲಾಗಿದೆ. ಸುಮಾರು 4 ಸಾವಿರ ಪ್ರತಿನಿಧಿಗಳು ಸಾಹಿತ್ಯ ಸಮ್ಮೇಳನಕ್ಕೆ ನೊಂದಣಿಯಾಗಿದ್ದು, ಎರಡು ದಿನಗಳ ಊಟೋಪಚಾರದ ಜೊತೆಗೆ ಓಓಡಿ ಸೌಲಭ್ಯ ನೀಡಲಾಗುತ್ತಿದೆ ಎಂದರು.
ಸಾಹಿತ್ಯ ಸಮ್ಮೇಳನದ ಎರಡು ದಿನಗಳಲ್ಲಿ 10ಕ್ಕೂ ಹೆಚ್ಚು ಗೋಷ್ಟಿಗಳು ನಡೆಯಲಿದ್ದು, ನಾಡಿನ ಪ್ರಸಿದ್ದ ಸಾಹಿತಿಗಳು, ಚಲನಚಿತ್ರ ನಟರು ಭಾಗವಹಿಸಲಿದ್ದಾರೆ. ಪುಸ್ತಕ ಮಾರಾಟ ಮಳಿಗೆಗಳ ಜೊತೆಯಲ್ಲಿ ವಿಭಿನ್ನ ಬಗೆಯ 25 ಕ್ಕು ಹೆಚ್ಚು ಮಳಿಗೆಗಳಿಗೆ ಅವಕಾಶ ನೀಡಲಾಗಿದೆ. ಶಿಕ್ಷಕಿ ಮೇರಿ ಡಿಸೋಜಾ ಸಂಗ್ರಹಿಸಿರುವ ಅಮೂಲ್ಯ ನಾಣ್ಯಗಳು ಹಾಗೂ ಶಿವಮೊಗ್ಗ ನಾಗರಾಜ ಅವರ ಸೆರೆ ಹಿಡಿದಿರುವ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಫೆ.6 ರ ಬೆಳಗ್ಗೆ 9.30 ಕ್ಕೆ ಸಾಹಿತ್ಯ ಗ್ರಾಮದ ಆವರಣದಲ್ಲಿ ಧ್ವಜಾರೋಹಣ ನೆರವೇರಲಿದ್ದು, ಡಿಡಿಪಿಐ ಮಂಜುನಾಥ ಎಸ್.ಆರ್ ರಾಷ್ಟ್ರಧ್ವಜ, ವಾರ್ತಾಧಿಕಾರಿ ಆರ್.ಮಾರುತಿ ನಾಡಧ್ವಜ, ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಮಂಜುನಾಥ ಪರಿಷತ್ತಿನ ಧ್ವಜಾರೋಹಣಗೊಳಿಸಲಿದ್ದಾರೆ ಎಂದರು. ನಂತರ ಬೆಳಗ್ಗೆ 10ಗಂಟೆಗೆ ಗೋಪಾಳದ ಕನಕ ಸರ್ಕಲ್‌ನಿಂದ ಹೊರಡುವ ಸಮ್ಮೇಳನಾಧ್ಯಕ್ಷರೊಂದಿಗೆ ಸಾಂಸ್ಕೃತಿಕ ನಡಿಗೆಯನ್ನು ರಾಜ್ಯ ಭೋವಿ ಅಭಿವೃದ್ಧಿ ನಿಗಮ ಅಧ್ಯಕ್ಷ ಎಸ್.ರವಿಕುಮಾರ್ ಮೆರವಣಿಗೆ ಚಾಲನೆ ನೀಡಲಿದ್ದಾರೆ. ಕರ್ನಾಟಕ ರಾಜ್ಯ ಎಸ್ಸಿ-ಎಸ್ಟಿ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜೆ.ಪಲ್ಲವಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್.ಮೋಹನ್‌ಕುಮಾರ್, ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಎಸ್.ಯೋಗೀಶ್, ಕುವೆಂಪು ವಿವಿ ಸಿಂಡಿಕೇಟ್ ಸದಸ್ಯ ಕೆ.ಪಿ.ಶ್ರೀಪಾಲ್, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಶರಣಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ.ಹೆಚ್ ಸೇರಿದಂತೆ ಮತ್ತಿತರರು ಉಪಸ್ಥಿತರಿರಲಿದ್ದಾರೆ.
ಬೆಳಗ್ಗೆ 10.30 ಕ್ಕೆ ನಡೆಯುವ ಸಮ್ಮೇಳನದ ಉದ್ಘಾಟನಾ ಸಮಾರಂಭ ಹಣತೆ ಹಚ್ಚೋಣ ಬನ್ನಿಯಲ್ಲಿ ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಉದ್ಘಾಟಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಅವರು ಸಮ್ಮೇಳನದ ಸ್ಮರಣ ಸಂಚಿಕೆ ಕ್ರಿಯಾಶೀಲತೆ ಒಳನೋಟ ಪುಸ್ತಕ ಲೋಕಾರ್ಪಣೆಗೊಳಿಸಲಿದ್ದಾರೆ. ಸರ್ವಾಧ್ಯಕ್ಷರಾದ ಡಾ.ಜೆ.ಕೆ.ರಮೇಶ್ ಅವರ ’ಇಂಡಿಯಾದ ಹೊರಗೊಂದು ಹಣಕು ಕೃತಿ ಹಾಗೂ ಬಿ.ಚಂದ್ರೇಗೌಡರ ದೇಶಾಂತರ ಕಾದಂಬರಿ ಗಳನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಲೋಕಾರ್ಪಣೆಗೊಳಿಸಲಿದ್ದಾರೆ. ಕಸಾಪ ರಾಜ್ಯಾಧ್ಯಕ್ಷರಾದ ಡಾ.ಮಹೇಶ್ ಜೋಷಿ ದತ್ತಿನಿಧಿ ಸ್ವೀಕಾರ ಮಾಡಲಿದ್ದಾರೆ. ಡಾ.ಜೆ.ಕೆ.ಆರ್ ಅವರ ‘ಮಲೆಯ ಸೀಮೆಯ ಕಥೆಗಳು’, ಪ್ರೊ.ಸತ್ಯನಾರಾಯಣ ಅವರ ಅಂತರಂಗದ ಸುತ್ತ ಹನಿಗವನ ಕೃತಿ, ಡಾ.ಶ್ರೀಪತಿ ಹಳಗುಂದ ಅವರ ವಿಮರ್ಶಾಕೃತಿ ‘ಚಿತ್ರ ಚಿಂತನ’ ಮತ್ತು ‘ವಿಲೋಚನ’ ಕೃತಿ ಲೋಕಾರ್ಪಣೆಗೊಳ್ಳಲಿದೆ ಎಂದು ಮಂಜುನಾಥ್ ತಿಳಿಸಿದ್ದಾರೆ.
C News TV Kannada News Online in cnewstv