ಶಿವಮೊಗ್ಗ: ನಗರದ ಸಾಗರ ರಸ್ತೆಯಲ್ಲಿ ಇನ್ನೋವಾ ಕಾರಿನ ಡಿಕ್ಕಿಯಲ್ಲಿ ಗಾಂಜಾ ಇಟ್ಟು ಸಾಗಿಸುತ್ತಿದ್ದ 7 ಜನರನ್ನು ದೊಡ್ಡಪೇಟೆ ಠಾಣೆ ಪೊಲೀಸರು ಬಂಧಿಸಿದ್ದು, ಬಂಧಿತರಿಂದ 1.217 ಕೆಜಿ ಒಣ ಗಾಂಜಾ ಮತ್ತು ಕಾರನ್ನು ಜಪ್ತಿ ಮಾಡಿದ್ದಾರೆ.
ಶಿವಮೊಗ್ಗ ಆಜಾದ್ ನಗರದ ತನ್ವೀರ್ ಪಾಷಾ ಅಲಿಯಾಸ್ ಮಾರ್ಕೆಟ್ ಫೌಜಾನ್(26), ಮೊಹಮ್ಮದ್ ಇಬ್ರಾಹಿಂ @ ಮುನ್ನ(25), ಆರ್ ಎಂ ಎಲ್ ನಗರದ ಅಕೀಫ್ @ ಪುಕ್ಕಿ (28), ಮೊಹಮ್ಮದ್ ಫೈಜಲ್ @ ಬಚ್ಚಾ ಫೈಜಲ್ (21), ಇಲಿಯಾಜ್ ನಗರದ ಅರ್ಬಾಜ್ ಖಾನ್ @ ಮಜರ್ (26), ಟಿಪ್ಪು ನಗರದ ಜಾಫರ್ ಸಾದಿಕ್(25), ಸವಾಯಿಪಾಳ್ಯದ ಅಬ್ದುಲ್ ಅಜೀಜ್(25) ಬಂಧಿತರು.
ನಗರದ ಸಾಗರ ರಸ್ತೆಯ ಎಂಎಡಿಬಿ ಕಚೇರಿ ಎದುರು ವಾಹನಗಳ ತಪಾಸಣೆ ನಡೆಸುತ್ತಿದ್ದ ವೇಳೆ ಬಂದ ಇನ್ನೋವಾ ಕಾರು ಪರಿಶೀಲಿಸಿದಾಗ ಗಾಂಜಾ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ.
ಬಂಧಿತರಿಂದ 1.15 ಲಕ್ಷ ರೂ. ಮೌಲ್ಯದ ಒಣ ಗಾಂಜಾ ಮತ್ತು 5 ಲಕ್ಷ ರೂ. ಮೌಲ್ಯದ ಇನ್ನೋವಾ ಕಾರನ್ನು ಜಪ್ತಿ ಮಾಡಿದ್ದಾರೆ.
ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
