ಮೇಯರ್- ಉಪಮೇಯರ್ ಚುನಾವಣೆ ವಿಳಂಬ ಮಾಡುವ ಮೂಲಕ ಜನಪ್ರತಿನಿಧಿಗಳಿದ್ದರೂ ಪಾಲಿಕೆಯಲ್ಲಿ ಅಧಿಕಾರಿಗಳ ಆಡಳಿತಕ್ಕೆ ಅವಕಾಶ ಮಾಡಿಕೊಡುವ ಮೂಲಕ ಸಮ್ಮಿಶ್ರ ಸರ್ಕಾರ ಪ್ರಜಾಪ್ರಭುತ್ವಕ್ಕೆ ದ್ರೋಹ ಬಗೆದಿದೆ ಎಂದು ಮಾಜಿ ಉಪಮುಖ್ಯಮಂತ್ರಿ, ಶಾಸಕ ಕೆ.ಎಸ್. ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು. ಶಿವಮೊಗ್ಗ, ತುಮಕೂರು, ಮೈಸೂರು ಪಾಲಿಕೆಗಳ ಮೇಯರ್ ಹಾಗೂ ಅನೇಕ ಸ್ಥಳಿಯ ಸಂಸ್ಥೆಗಳ ಚುನಾವಣೆಗಳು ನಡೆದು ಮೀಸಲಾತಿ ಘೋಷಿಸಿದ್ದರೂ ಚುನಾವಣೆ ನಡೆಸಲು ವಿಳಂಬ ಮಾಡಲಾಗುತ್ತಿದೆ. ಘೋಷಿತ ಮೀಸಲಾತಿ ಬಿಜೆಪಿಗೆ ಹೆಚ್ಚು ಅನುಕೂಲವಾಗುತ್ತಿದೆ. ಹೀಗಾಗಿ ಇದನ್ನು ಬದಲಿಸಲು ಕುತಂತ್ರ ರಾಜಕಾರಣ ಮಾಡುತ್ತಿದೆ. ಸರ್ಕಾರ ತಕ್ಷಣ ಮೇಯರ್- ಉಪಮೇಯರ್ ಚುನಾವಣೆ ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. ಈ ಸಮ್ಮಿಶ್ರ ಸರ್ಕಾರ ರಾಜ್ಯದ ಅಭಿವೃದ್ಧಿ ಬಗ್ಗೆ ಕಾಳಜಿ ವಹಿಸದೆ ಬೇಜವಬ್ದಾರಿಯಾಗಿ ನಡೆದುಕೊಳ್ಳುತ್ತಿದೆ. ವಿಧಾನಸೌಧದಲ್ಲಿ ಯಾವ ಮಂತ್ರಿಗಳು ಇರುವುದಿಲ್ಲ. ಮುಖ್ಯಮಂತ್ರಿಗಳ ಕಥೆಯೂ ಇದೇ ಆಗಿದೆ. ಜನಪ್ರತಿನಿಧಿಗಳಿಗೆ ಇವರು ಸಿಗದಿದ್ದರೆ ಜನರ ಸಮಸ್ಯೆಗಳನ್ನು ಯಾರು ಬಗೆಹರಿಸಬೇಕು ಎಂದು ಪ್ರಶ್ನಿಸಿದರು.ಇನ್ನು ಮುಖ್ಯಮಂತ್ರಿಗಳು ವಾರಕ್ಕೆ ಒಮ್ಮೆ ನಿಗದಿತ ದಿನದಂದು ವಿಧಾನಸೌಧದಲ್ಲಿ ಇರುವ ಪರಿಪಾಠ ಬೆಳೆಸಿಕೊಳ್ಳಬೇಕು. ಇದರಿಂದ ಇತರೆ ಸಚಿವರು ವಿಧಾನಸೌಧದಲ್ಲಿ ಇರುತ್ತಾರೆ. ಆಗ ಜನರ ಕೆಲಸಗಳು ಆಗುತ್ತವೆ ಎಂದು ಸಲಹೆ ನೀಡಿದರು. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನಾನು ಹಿಂದೂ ಎಂದು ಹೇಳಿಕೊಂಡಿರುವುದನ್ನು ಸ್ವಾಗತಿಸಿದ ಈಶ್ವರಪ್ಪ, ಈಗಲಾದರೂ ಹಿಂದೂತ್ವದ ಬಗ್ಗೆ ಒಳ್ಳೆಯ ಅಭಿಪ್ರಾಯ ಬಂದಿತಲ್ಲ. ಅದನ್ನು ಮುಂದುವೆರೆಸಿಕೊಳ್ಳಲಿ ಎಂದು ಹೇಳಿದರು.
Recent Comments