Www.cnewstv.in / 25.01.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಬಸವಣ್ಣ ವಿಶ್ವವ್ಯಾಪಿ ಸಾಂಸ್ಕೃತಿಕ ನಾಯಕ.
ಶಿವಮೊಗ್ಗ : ವಚನ ಸಾಹಿತ್ಯ ಪರಂಪರೆಯು ಇಡೀ ಸಮಸ್ತ ಲೋಕಕ್ಕೆ ಶರಣರು ನೀಡಿದ ಶ್ರೇಷ್ಠ ಕೊಡುಗೆ. ವಚನ ಸಾಹಿತ್ಯವು ಜಾತಿ, ಸಮುದಾಯವ ಮೀರಿದ್ದು, ಎಲ್ಲರ ಬದುಕಿಗೂ ಉಪಯುಕ್ತ ಆಗಬಲ್ಲ ಸಾಹಿತ್ಯ ವಚನ ಸಂಗ್ರಹ ಎಂದು ಬಸವಕೇಂದ್ರದ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು.
ಶಿವಮೊಗ್ಗ ನಗರದ ಬೆಕ್ಕಿನ ಕಲ್ಮಠದಲ್ಲಿ ಶ್ರೀ ಗುರುಬಸವ ಮಹಾಸ್ವಾಮಿಗಳ 112ನೇ ಪುಣ್ಯ ಸ್ಮರಣೋತ್ಸವ, ಶರಣ ಸಾಹಿತ್ಯ ಹಾಗೂ ಭಾವೈಕ್ಯ ಸಮ್ಮೇಳನ ಪ್ರಯುಕ್ತ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮಾಜ ಸಂಘಟಿಸುವ ಶ್ರೇಷ್ಠ ಕಾಯಕವನ್ನು ಬದುಕಿನಲ್ಲಿ ನಡೆಸಿದವರು ವಿಶ್ವಗುರು ಬಸವಣ್ಣ. ಶರಣರ ಕಾಲಘಟ್ಟದಲ್ಲಿ ಬಸವಣ್ಣ ಅವರ ಸಂಪರ್ಕಕ್ಕೆ ಬಂದಿರುವ ಪ್ರತಿಯೊಬ್ಬ ವ್ಯಕ್ತಿಯು ಶ್ರೇಷ್ಠ ಶರಣರಾಗಿ ಗುರುತಿಸಿಕೊಂಡ ನಿದರ್ಶನಗಳಿವೆ. ಬಸವಣ್ಣ ಅವರನ್ನು ವಿರೋಧಿಸುವ ವ್ಯಕ್ತಿಯು ವಚನ ಸಾಹಿತ್ಯದ ಸಾರ ಅರ್ಥ ಮಾಡಿಕೊಂಡರೆ ಉತ್ತಮ ಬದುಕು ರೂಪಿಸಿಕೊಳ್ಳಲು ಸಾಧ್ಯವಿದೆ ಎಂದು ತಿಳಿಸಿದರು.
ಶಿವಮೊಗ್ಗದ ಫ್ರೀಡಂ ಪಾರ್ಕ್ ಗೆ ಅಲ್ಲಮಪ್ರಭು ನಾಮಕರಣ ಹಾಗೂ ಬಸವಣ್ಣನನ್ನು ಕರ್ನಾಟಕ ರಾಜ್ಯ ಸರ್ಕಾರವು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿರುವುದು ಅತ್ಯಂತ ಸಂತೋಷದ ಸಂಗತಿ. ವಚನ ಸಾಹಿತ್ಯ ಸಾರ ಪ್ರತಿಯೊಬ್ಬರ ಜೀವನಕ್ಕೂ ಮಾರ್ಗದರ್ಶನ ಎಂದರು.
ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿದ್ದ ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದು ಭಾಗವಹಿಸುವಿಕೆಯ ಮಹತ್ವವನ್ನು ಮಕ್ಕಳಲ್ಲಿ ಪೋಷಕರು ಹಾಗೂ ಶಿಕ್ಷಕರು ತಿಳಿಸಬೇಕು. ಸ್ಪರ್ಧೆಯ ಜತೆಯಲ್ಲಿ ಮಕ್ಕಳಿಗೆ ವಚನ ಸಾಹಿತ್ಯ ಶ್ರೇಷ್ಠತೆ ಹಾಗೂ ಜೀವನದಲ್ಲಿ ಅಳವಡಿಸಿಕೊಳ್ಳುವ ಬಗ್ಗೆ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.
ಬಸವಣ್ಣ ರಾಜ್ಯ ಸರ್ಕಾರ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿರುವುದು ಸಂತೋಷದ ಸಂಗತಿ. ಬಸವಣ್ಣ ರಾಜ್ಯಕ್ಕೆ ಮಾತ್ರ ಸೀಮಿತವಲ್ಲ. ಒಂದು ಪ್ರದೇಶಕ್ಕೆ ಸೀಮಿತ ಅಲ್ಲ, ಬಸವಣ್ಣ ವಿಶ್ವವ್ಯಾಪಿ ಸಾಂಸ್ಕೃತಿಕ ನಾಯಕ ಎಂದು ತಿಳಿಸಿದರು.
ಬೆಕ್ಕಿನ ಕಲ್ಮಠದಲ್ಲಿ ಆರೋಗ್ಯ ತಪಾಸಣೆ ಉಚಿತ ಶಿಬಿರ ಹಾಗೂ ರಕ್ತದಾನ ಹಮ್ಮಿಕೊಳ್ಳಲಾಗಿತ್ತು. ಅನೇಕ ಭಕ್ತರು ಹಾಗೂ ಸಾರ್ವಜನಿಕರು ರಕ್ತದಾನ ಮಾಡಿದರು. ಇದೇ ಸಂದರ್ಭದಲ್ಲಿ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು. ವಚನ ಗಾಯನ ಸ್ಪರ್ಧೆ ಹಾಗೂ ವಚನ ಕಂಠಪಾಠ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು.
ಜಡೆ ಸಂಸ್ಥಾನ ಮಠದ ಶ್ರೀ ಯೋಗಾಚಾರ್ಯ ಡಾ. ಮಹಾಂತ ಸ್ವಾಮೀಜಿ, ಶ್ರೀ ಗುರುಬಸವ ಮಹಾಸ್ವಾಮಿಗಳವರ 112ನೇ ಪುಣ್ಯ ಸ್ಮರಣೋತ್ಸವ ಸಮಿತಿ ಅಧ್ಯಕ್ಷ ಎಚ್.ಸಿ.ಯೋಗೀಶ್, ಪ್ರಧಾನ ಕಾರ್ಯದರ್ಶಿ ಮಹಾಲಿಂಗಯ್ಯ ಶಾಸ್ತ್ರಿ, ಕೋಶಾಧ್ಯಕ್ಷ ಇ.ವಿಶ್ವಾಸ್, ಪ್ರಚಾರ ಸಮಿತಿ ಅಧ್ಯಕ್ಷ ಸೋಮನಾಥ್.ಕೆ.ಆರ್., ಸುಜಯಪ್ರಸಾದ್, ಶೀಲಾ ಸುರೇಶ್, ರುದ್ರಯ್ಯಶಾಸ್ತ್ರಿ ಮತ್ತಿತರರು ಉಪಸ್ಥಿತರಿದ್ದರು.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಇದನ್ನು ಒದಿ..
Recent Comments