Cnewstv.in / 25.06.2022 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ರೈತರ ಟಿಸಿ ಸುಟ್ಟ 24 ಗಂಟೆಯಲ್ಲಿ ಟಿಸಿ ಬದಲಾವಣೆ : ಸಚಿವರ ವಿ.ಸುನಿಲ್ ಕುಮಾರ್.
ಶಿವಮೊಗ್ಗ : ರೈತರ ಟಿಸಿ ಸುಟ್ಟ 24 ಯೊಳಗೆ ಟಿಸಿ ಬದಲಾವಣೆ ಮಾಡುವಂತಹ ದಾಖಲೆಯ ನಿರ್ಧಾರ ಸೇರಿದಂತೆ ವಿವಿಧ ಹೊಸ ಯೋಜನೆಗಳ ಮೂಲಕ ರಾಜ್ಯದ ವಿದ್ಯುತ್ ಸರಬರಾಜಿನಲ್ಲಿ ಪ್ರಗತಿಯನ್ನು ಸಾಧಿಸಲಾಗುತ್ತಿದೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕøತಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸುನಿಲ್‍ಕುಮಾರ್ ತಿಳಿಸಿದರು.
ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತದ ವತಿಯಿಂದ ನಗರದ ಮಂಡ್ಲಿಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಮೆಸ್ಕಾಂ ನಗರ ವಿಭಾಗೀಯ ಕಚೇರಿ-2 ರ ಹಾಗೂ ಘಟಕ-6ರ ಕಟ್ಟಡದ ಉದ್ಘಾಟನೆಯನ್ನು ಇಂದು ನೆರವೇರಿಸಿ ಅವರು ಮಾತನಾಡಿದರು.
ಅಭಿವೃದ್ದಿ ಒಂದು ನಿರಂತರ ಪ್ರಕ್ರಿಯೆಯಾಗಿದ್ದು ಇಂಧನ ಇಲಾಖೆಯಲ್ಲಿ ಅತ್ಯುತ್ತಮ ಸುಧಾರಣೆಗಳು ಆಗಿವೆ. ಗ್ರಾಮೀಣ ಭಾಗದಲ್ಲಿ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಹೊಂದಿರುವವರಿಗೆ ಉಚಿತ ವಿದ್ಯುತ್ ನೀಡುವ ‘ಬೆಳಕು’ ಯೋಜನೆಯಡಿ ಕೇವಲ 100 ದಿನಗಳ ಅವಧಿಯಲ್ಲಿ 2 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಉಚಿತ ವಿದ್ಯುತ್ ಸಂಪರ್ಕ ನೀಡಲಾಗಿದೆ.
ರೈತರ ಸುಟ್ಟ ಟಿಸಿ ಬದಲಾವಣೆ ಮಾಡುವುದು ದೊಡ್ಡ ಸವಾಲಿನ ಕೆಲಸವಾಗಿದ್ದು ಕೇವಲ 24 ಗಂಟೆಗಳಲ್ಲಿ ಸುಟ್ಟ ಟಿಸಿ ಬದಲಾಯಿಸುವ ನಿರ್ಧಾರವನ್ನು ನಮ್ಮ ಇಲಾಖೆ ಕೈಗೊಂಡು ಈ ಕುರಿತು ಅಭಿಯಾನ ನಡೆಸಲಾಗಿದೆ. ಈ ನಿಟ್ಟಿನಲ್ಲಿ ರಾಜ್ಯದ 250 ಕಡೆ ಟಿಸಿ ಬ್ಯಾಂಕ್, 162 ಟಿಸಿ ರಿಪೇರಿ ಕೇಂದ್ರಗಳನ್ನು ತೆರೆಯಲಾಗಿದ್ದು, ಟಿಸಿ ಸುಟ್ಟ 24 ಗಂಟೆಯೊಳಗೆ ಟಿಸಿ ಬದಲಾಯಿಸುವ ಪ್ರಕ್ರಿಯೆಯಲ್ಲಿ ಶೇ.80 ರಿಂದ 90 ಪ್ರಗತಿ ಸಾಧಿಸುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಲಾಗಿದೆ.
ರಾಜ್ಯದಲ್ಲಿ ಕಳೆದ ತಿಂಗಳು ಟ್ರಾನ್ಸ್‍ಫಾರ್ಮರ್ ನಿರ್ವಹಣೆಗಾಗಿ 10 ದಿನಗಳ ವಿದ್ಯುತ್ ಪರಿವರ್ತಕ ಅಭಿಯಾನ ಕೈಗೊಂಡು ಎಲ್ಲ ಅಧಿಕಾರಿ/ನೌಕರರು ತಮ್ಮ ಸುತ್ತಮುತ್ತ ಇರುವ ಟಿಸಿ ಗಳನ್ನು ಪರಿಶೀಲಿಸಿ, ರಾಜ್ಯದಲ್ಲಿ ಸುಮಾರು 8 ರಿಂದ 9 ಲಕ್ಷ ಟಿಸಿಗಳ ನಿರ್ವಹಣೆ ಮಾಡುವ ಮೂಲಕ ಹೊಸ ದಾಖಲೆ ಮಾಡಲಾಗಿದೆ ಎನ್ನಬಹುದು.
ಬೇಸಿಗೆಯಲ್ಲಿ ವಿದ್ಯುತ್ ಕಡಿತ, ಲೋಡ್‍ಶೆಡ್ಡಿಂಗ್ ಆಗಲಿದೆ ಎಂಬ ಅನುಮಾನ ಜನರಲ್ಲಿ ಹೆಚ್ಚಿತ್ತು. ಆದ್ದರಿಂದ ಏಪ್ರಿಲ್, ಮೇ ತಿಂಗಳಲ್ಲಿ ಎದುರಾಗಬಹುದಾಗಿದ್ದ ಸವಾಲುಗಳ ಕುರಿತು ನವೆಂಬರ್, ಡಿಸೆಂಬರ್ ಮಾಹೆಯಲ್ಲೇ ಎಚ್ಚರಿಕೆ ವಹಿಸಲಾಗಿತ್ತು. ಬೇರೆ ರಾಜ್ಯಗಳಲ್ಲಿ ಕಲ್ಲಿದ್ದಲು ಕೊರತೆಯಿಂದ ವಿದ್ಯುತ್ ಅಡಚಣೆಯಾಗಿರಬಹುದು. ಆದರೆ ನಮ್ಮ ರಾಜ್ಯದಲ್ಲಿ ಕಲ್ಲಿದ್ದಲು ಕೊರತೆಯಾಗಿ ವಿದ್ಯುತ್ ಅಡಚಣೆಯಾಗಿದಲ್ಲ. ರಾಜ್ಯದಲ್ಲಿ ವಿದ್ಯುತ್ ಕೊರತೆಯಾಗದಂತೆ ಕೇಂದ್ರ ಸರ್ಕಾರದೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡು ಎಲ್ಲ ರೀತಿಯ ಕ್ರಮ ವಹಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ನಮ್ಮ ಅಧಿಕಾರಿಗಳ ತಂಡ ಕೂಡ ವಿಶೇಷ ಪ್ರಯತ್ನ ಮಾಡುತ್ತಿದೆ.
ಮುಖ್ಯಮಂತ್ರಿಯವರು ಎಸ್‍ಸಿ, ಎಸ್‍ಟಿ ಸಮುದಾಯಕ್ಕೆ ಉಚಿತವಾಗಿ 75 ಯುನಿಟ್ ಉಚಿತ ವಿದ್ಯುತ್ ನೀಡುವುದಾಗಿ ಘೋಷಿಸಿದ್ದು, ಲಕ್ಷಾಂತರ ಜನರು ಈ ಯೋಜನೆ ಉಪಯೋಗ ಪಡೆಯಲಿದ್ದಾರೆ.
ಜನಸ್ನೇಹಿ ವಿದ್ಯುತ್ ಉತ್ಪಾದನೆಗಾಗಿ ಹಸಿರು ವಿದ್ಯುತ್‍ಗೆ ಹೆಚ್ಚು ಒತ್ತು ನೀಡಿ, ಹೈಬ್ರಿಡ್ ಪಾರ್ಕ್ ನಿರ್ಮಾಣ ಯೋಜನೆಗೆ ತಯಾರಿ ನಡೆಸಲಾಗುತ್ತಿದೆ. 1 ಸಾವಿರ ಮೆಗಾವ್ಯಾಟ್ ಹಸಿರು ವಿದ್ಯುತ್ ಉತ್ಪಾದಿಸಲು ಸರ್ವೇ ಕಾರ್ಯ ಆರಂಭಿಸಲಾಗಿದೆ. ರೈತರ ಪಂಪ್‍ಸೆಟ್‍ಗಳಿಗೆ ಸೋಲಾರ್ ಮೂಲಕ ವಿದ್ಯುತ್ ನೀಡಲು 2 ಯೋಜನೆ ರೂಪಿಸಿದ್ದು, ಕುಸುಮ್ ಬಿ ಯೋಜನೆಯಡಿ ಮೊದಲ ಹಂತದಲ್ಲಿ ಸುಮಾರು 10 ಸಾವಿರ ವೈಯಕ್ತಿಕ ಫಲಾನುಭವಿಗಳಿಗೆ ಸೌಲಭ್ಯ ನೀಡಲು ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ. ಹಾಗೂ ಫೀಡರ್‍ಗಳಿಗೆ ಸೋಲಾರ್ ಮೂಲಕ ವಿದ್ಯುತ್ ನೀಡುವ ಯೋಜನೆ ಕೂಡ ಪ್ರಗತಿಯಲ್ಲಿದ್ದು ರಾಜ್ಯದ ಜನತೆ ಈ ಎಲ್ಲ ಯೋಜನೆಗಳ ಸದುಪಯೋಗ ಪಡೆಯಬೇಕು.
ನಾವು ಶರಾವತಿಯಿಂದ ಶೇ.20 ವಿದ್ಯುತ್‍ನ್ನು ಪಡೆಯುತ್ತಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ ವಿದ್ಯುತ್ ಅಡಚಣೆಯಾಗದಂತೆ ಎಲ್ಲ ರೀತಿಯ ಕ್ರಮ ವಹಿಸಲಾಗುತ್ತಿದ್ದು ಈ ನಿಟ್ಟಿನಲ್ಲಿ ಜಿಲ್ಲೆಯ ಶಿಕಾರಿಪುರ, ಸಾಗರ, ಸೊರಬ, ತೀರ್ಥಹಳ್ಳಿ ಭದ್ರಾವತಿ, ಶಿವಮೊಗ್ಗ ಗ್ರಾಮಾಂತರ ಒಟ್ಟು 6 ಕಡೆಗಳಲ್ಲಿ 110 ಕೆವಿ ಸ್ಟೇಷನ್ ಮತ್ತು ಸಾಗರದ ನಾಡಮಂಚಾಲೆಯಲ್ಲಿ 70 ಕೋಟಿ ವೆಚ್ಚದಲ್ಲಿ 200 ಕೆವಿ ಸ್ಟೇಷನ್ ಸ್ಥಾಪನೆಗೆ ಟೆಂಡರ್ ಆಗಿದೆ. ಮುಂದಿನ ತಿಂಗಳು ಗುದ್ದಲಿ ಪೂಜೆ ಸಹ ನಡೆಯಲಿದ್ದು ರಾಜ್ಯದಲ್ಲಿ ವಿದ್ಯುತ್ ಸರಬರಾಜಿನಲ್ಲಿ ಹೊಸ ಪ್ರಗತಿಯನ್ನು ಕಾಣುತ್ತಿದ್ದೇವೆ ಎಂದರು.
ಇದನ್ನು ಒದಿ : https://cnewstv.in/?p=10258
Recent Comments