Cnewstv.in / ಶಿವಮೊಗ್ಗ / 14.05.2021 / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಶಿವಮೊಗ್ಗ : ಹವಾಮಾನ ತಜ್ಞರ ಮಾಹಿತಿಯಂತೆ ನಾಳೆಯಿಂದ ಮುಂದಿನ 2-3ದಿನಗಳ ಕಾಲ ರಾಜ್ಯದಲ್ಲಿ ಸಾಮಾನ್ಯದಿಂದ ಭಾರೀ ಮಳೆ ಆಗುವ ಸಾಧ್ಯತೆ ಇದ್ದು, ಸಾರ್ವಜನಿಕರು ಹಾಗೂ ತಗ್ಗು ಪ್ರದೇಶದ ನಿವಾಸಿಗಳು ಮುಂಜಾಗ್ರತಾ ಕ್ರಮವಾಗಿ ಸುರಕ್ಷತಾ ಸ್ಥಳಗಳಿಗೆ ಸ್ಥಳಾಂತರಗೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಸೂಚನೆ ನೀಡಿದ್ದಾರೆ.
ಈ ಸಂಬಂಧ ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಎಲ್ಲಾ ತಾಲೂಕುಗಳ ತಹಶಿಲ್ದಾರರು ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ವಿಡಿಯೊ ಸಂವಾದ ನಡೆಸಿ, ಅಗತ್ಯ ಹಾಗೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.
ಕೊರೋನ ಸೋಂಕು ಜಿಲ್ಲೆಯಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿರುವಾಗಲೆ ಮುಂಗಾರು ಮಳೆಯಿಂದ ಸಂಭವಿಸಬಹುದಾದ ಜೀವ ಮತ್ತು ಪ್ರಾಣ ಹಾನಿಗಳನ್ನು ನಿಯಂತ್ರಿಸುವ ಕಾರ್ಯದಲ್ಲಿ ರಕ್ಷಣಾ, ಕಂದಾಯ, ಅಗ್ನಶಾಮಕ, ಮೆಸ್ಕಾಂ ಹಾಗೂ ಸಂಬಂಧಿಸಿದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಿದ್ದತೆಗಳನ್ನು ಕೈಗೊಂಡು ಸದಾಸನ್ನದ್ಧರಾಗಿರುವಂತೆ ಸೂಚಿಸಿದ ಅವರು ಮುಂಗಾರು ಮಳೆಯಿಂದಾಗುವ ಅನಾಹುತದ ಪರಿಹಾರ ಕಾರ್ಯಗಳಿಗೆ ತಾಲೂಕುವಾರು 25ಲಕ್ಷ ರೂ.ಗಳನ್ನು ಮಂಜೂರು ಮಾಡಲಾಗುವುದು ಎಂದವರು ನುಡಿದರು.
ಇದೆ ಸಂದರ್ಭದಲ್ಲಿ ಸಕಾಲಕ್ಕೆ ನೆರವಿಗೆ ಧಾವಿಸುವ ಪ್ರಕೃತಿ ವಿಕೋಪ ಕಾರ್ಯಾಚರಣೆ ತಂಡದ ಸದಸ್ಯರ ಮೊ.ನಂಬರನ್ನು ಸಂಗ್ರಹಿಸಿಟ್ಟುಕೊಳ್ಳುವಂತೆ ಹಾಗೂ ಮಳೆಗಾಳಿಯಿಂದ ಧರೆಗುರುಳುವ ಮರಗಳನ್ನು ತೆರವುಗೊಳಿಸಲು ಅಗತ್ಯ ಸಿಬ್ಬಂದಿಗಳನ್ನು ಸಿದ್ದವಾಗಿರಲು ಸೂಚಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ತಮ್ಮ ಕಾರ್ಯಕ್ಷೇತ್ರದ ವ್ಯಾಪ್ತಿಯಲ್ಲಿನ ಚರಂಡಿಗಳು ಸರಾಗವಾಗಿ ಮಳೆ ನೀರನ್ನು ಹರಿಯುವಂತೆ ಸ್ವಚ್ಚವಾಗಿಟ್ಟುಕೊಳ್ಳುವಲ್ಲಿ ಕ್ರಮ ಕೈಗೊಳ್ಳುವಂತೆ ಹಾಗೂ ಮಳೆ ಹಾನಿಯಿಂದ ರಕ್ಷಣೆಗಾಗಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಪ್ರತ್ಯೇಕ ಸಹಾಯವಾಣಿ ಕೇಂದ್ರವನ್ನು ತೆರೆದು ಸಿಬ್ಬಂಧಿಯನ್ನು ನಿಯೋಜಿಸುವಂತೆ ಸೂಚಿಸಿದರು.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments