ಶಿವಮೊಗ್ಗ:
ಆರ್ಥಿಕ ಸಂಕಷ್ಟದಲ್ಲಿರುವ ವಿದ್ಯಾರ್ಥಿನಿಯರಿಗೆ ಕೂಡಲೇ ಹಾಸ್ಟೆಲ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಎನ್‍ಎಸ್‍ಯುಐ ಕಾರ್ಯಕರ್ತರು ಇಂದು ಸಹ್ಯಾದ್ರಿ ಕಾಲೇಜು ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಕುವೆಂಪು ವಿವಿ ಕುಲಪತಿಯವರಿಗೆ ಮನವಿ ಸಲ್ಲಿಸಿದ್ದಾರೆ. ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿನಿಯರಿಗೆ ಸಮರ್ಪಕ ಹಾಸ್ಟೆಲ್ ಸೌಲಭ್ಯ ಇಲ್ಲದೆ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಆರ್ಥಿಕ ಸಂಕಷ್ಟದಲ್ಲಿರುವ ವಿದ್ಯಾರ್ಥಿನಿಯರಿಗೂ ಹಾಸ್ಟೆಲ್ ಸೌಲಭ್ಯ ನೀಡುತ್ತಿಲ್ಲ. ಅಲ್ಲದೆ ಶಿಫಾರಸ್ಸು ಇರುವ ವಿದ್ಯಾರ್ಥಿನಿಯರಿಗೆ ಮಾತ್ರ ಹಾಸ್ಟೆಲ್ ಗೆ ಅವಕಾಶ ನೀಡಲಾಗುತ್ತಿದೆ. ಇದರಿಂದ ಬಡ ವಿದ್ಯಾರ್ಥಿನಿಯರಿಗೆ ಅನ್ಯಾಯವಾಗುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಹಾಸ್ಟೆಲ್ ನಲ್ಲಿ ಕೇವಲ 100 ಕಿ.ಮೀ. ದೂರ ಇರುವ ವಿದ್ಯಾರ್ಥಿನಿಯರಿಗೆ ಆದ್ಯತೆ ನೀಡುತ್ತಿದ್ದು, 100 ಕಿ.ಮಿ.ದೂರಕ್ಕಿಂತ ಕಡಿಮೆ ಇರುವ ಬಡ, ಮಧ್ಯಮ ವರ್ಗದ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಅವಕಾಶ ನೀಡುತ್ತಿಲ್ಲ ಇದರಿಂದ ಬಡ ಕುಟುಂಬದ ವಿದ್ಯಾರ್ಥಿನಿಯರು ಕಾಲೇಜು ತರಗತಿಯಿಂದ ವಂಚಿತರಾಗುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಹಾಸ್ಟೆಲ್ ಸೌಲಭ್ಯ ಒದಗಿಸಲು ವಿದ್ಯಾರ್ಥಿನಿಯರಿಂದ 6500 ರೂ. ಮುಂಗಡ ಸ್ವೀಕರಿಸಿದ್ದು, ಈ ವರ್ಷವೂ ಸ್ವೀಕರಿಸಲಾಗುತ್ತಿದೆ. ಕಳೆದ ವರ್ಷ ಪಾವತಿ ಮಾಡಿದ್ದ ವಿದ್ಯಾರ್ಥಿನಿಯರಿಗೆ ಕೇವಲ 1500 ರೂ. ಹಿಂದಿರುಗಿಸಲಾಗುತ್ತಿದೆ. ಇನ್ನೂಳಿದ ಹಣಕ್ಕೆ ಉತ್ತರ ನೀಡುತ್ತಿಲ್ಲ. ಜೊತೆಗೆ ಕಾಲೇಜಿನಲ್ಲಿ ಸೂಕ್ತವಾದ ಲ್ಯಾಬ್ ವ್ಯವಸ್ಥೆಯಿಲ್ಲ. ವಿದ್ಯಾರ್ಥಿಗಳ ಸಮಸ್ಯೆ ಪರಿಹರಿಸಲು ಆಡಳಿತ ಮಂಡಳಿಯು ಸರಿಯಾಗಿ ಸ್ಪಂದಿಸುತ್ತಿಲ್ಲ. ಕಾಲೇಜು ಹಾಗೂ ಹಾಸ್ಟಲ್‍ಗಳಲ್ಲಿ ವಿದ್ಯಾರ್ಥಿನಿಯರಿಗೆ ಆಗುತ್ತಿರುವ ಸಮಸ್ಯೆಗಳನ್ನು ಶೀಘ್ರವೇ ಪರಿಹರಿಸಬೇಕೆಂದು ಪ್ರತಿಭಟನಕಾರರು ಆಗ್ರಹಿಸಿದ್ದಾರೆ.
Recent Comments