ಶಿವಮೊಗ್ಗ : ನಿನ್ನೆ ಭಜರಂಗದಳದ ಕಾರ್ಯಕರ್ತನ ಮೇಲೆ ಹಲ್ಲೆ ನಡೆದಿದ್ದರಿಂದ ಆರಂಭಗೊಂಡಿರುವ ಗಲಾಟೆಯನ್ನು ನಿಯಂತ್ರಣ ಮಾಡಲು ಪೋಲಿಸರು ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಸೆಕ್ಷನ್ 144 ನಿಷೇದಾಜ್ಞೆ ಜಾರಿಗೊಳಿಸಿದ್ದರು. ಈ ಕಾರಣದಿಂದಾಗಿ ಇಂದು ಬೆಳಗ್ಗೆಯಿಂದಲೇ ಶಿವಮೊಗ್ಗ ನಗರ ಸಹಜ ಸ್ಥಿತಿಗೆ ಮರಳಿದೆ. ಆದರೆ ನಿನ್ನೆಯ ಗಲಭೆಯಿಂದ ಭಯಭೀತರಾಗಿರುವ ಜನತೆ ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ಶಿವಮೊಗ್ಗದ ಬಹುತೇಕ ರಸ್ತೆಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದವು. ಮುಂಜಾಗ್ರತಾ ಕ್ರಮವಾಗಿ ಶಿವಮೊಗ್ಗದ ಎಲ್ಲ ಅಂಗಡಿ ಮುಂಗಟ್ಟುಗಳ ಬಾಗಿಲು ಮುಚ್ಚಲಾಗಿದೆ. ಆದರೆ ಹಾಲಿನ ಅಂಗಡಿಗಳು ಹಾಗೂ ಮೆಡಿಕಲ್ ಶಾಪ್ ಗಳನ್ನು ತೆರೆಯಲಾಗಿದೆ..
ನಗರ ವ್ಯಾಪ್ತಿಯಲ್ಲಿ ನಿಷೇದಾಜ್ಞೆ ಜಾರಿಯಲ್ಲಿದ್ದರೂ ವಾಹನ ಸಂಚಾರಕ್ಕೆ ಯಾವುದೇ ನಿರ್ಬಂಧವಿಲ್ಲದಿರುವುದರಿಂದ ಕೆಲವೊಂದಿಷ್ಟು ವಾಹನ ಸಂಚಾರ ಶಿವಮೊಗ್ಗದಲ್ಲಿತ್ತು. ಇಂದು ಬೆಳಗ್ಗೆಯಿಂದಲೇ ಆಟೋಗಳು ರಸ್ತೆಗಿಳಿದಿದ್ದವು. ಶಿವಮೊಗ್ಗ ನಗರದಿಂದ ಬೇರೆ ತಾಲೂಕು ಹಾಗೂ ಜಿಲ್ಲೆಗಳಿಗೆ ತೆರಳುವ ಖಾಸಗಿ ಬಸ್ ಗಳ ಸಂಚಾರ ಸ್ಥಗಿತಗೊಂಡಿದ್ದರಿಂದ ದಿನಜನಜಂಗುಳಿಯಿಂದ ತುಂಬಿರುತ್ತಿದ್ದ ಖಾಸಗಿ ಬಸ್ ನಿಲ್ದಾಣ ಇಂದು ಜನರಿಲ್ಲದೆ ಬಿಕೋ ಎನ್ನುತ್ತಿತ್ತು. ಶಿವಮೊಗ್ಗ ನಗರದ ಗಾಂಧಿ ಬಜಾರ್, ಅಮೀರ್ ಅಹಮದ್ ಸರ್ಕಲ್, ನೆಹರೂ ರಸ್ತೆಯಲ್ಲಿ ಬ್ಯಾರಿಕೇಡ್‍ಗಳನ್ನು ಹಾಕಿ ರಸ್ತೆ ಬಂದ್ ಮಾಡಲಾಗಿದೆ. ಹಾಗಾಗಿ ಭದ್ರಾವತಿ ಕಡೆಯಿಂದ ಬರುವ ಕೆಎಸ್‍ಆರ್ ಟಿ ಸಿ ಬಸ್‍ಗಳು ಬೈಪಾಸ್ ಮೂಲಕ, ಇತರೆಡೆಯಿಂದ ಬರುವ ಬಸ್ಸುಗಳು ಕುವೆಂಪು ರಸ್ತೆ ಮೂಲಕ ಸಾಗರ ರಸ್ತೆಯಿಂದ ಬಸ್ ನಿಲ್ದಾಣಕ್ಕೆ ತಲುಪುತ್ತಿವೆ.
Recent Comments