ಶಿವಮೊಗ್ಗ : ಅಕ್ಕಮಹಾದೇವಿ ಜನ್ಮಸ್ಥಳ ಉಡುತಡಿಯ ಸಮಗ್ರ ಅಭಿವೃದ್ದಿಗೆ ಸರ್ಕಾರ ಈಗಾಗಲೇ 30ಕೋಟಿ ರೂ.ಗಳನ್ನು ಮೀಸಲಾಗಿರಿಸಿದ್ದು, ಜಿಲ್ಲೆಯ ಆಕರ್ಷಕ ಪ್ರವಾಸಿ ತಾಣಗಳಲ್ಲೊಂದನ್ನಾಗಿ ರೂಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದರು.
ಅವರು ಇಂದು ಉಡುಗುಣಿ ಗ್ರಾಮಕ್ಕೆ ಭೇಟಿ ನೀಡಿ ಕಾಮಗಾರಿಗಳನ್ನು ಪರಿಶೀಲಿಸಿದ ಅವರು, ಶರಣೆ ಅಕ್ಕಮಹಾದೇವಿಯವರ ಹಾಗೂ 12ನೇ ಶತಮಾನದ ಶಿವಶರಣರ ಮಾಹಿತಿಯನ್ನು ಜನಸಾಮಾನ್ಯರಿಗೆ ತಲುಪಿಸುವ ಸದುದ್ದೇಶ ಹೊಂದಲಾಗಿದೆ ಎಂದ ಅವರು ಈ ಕ್ಷೇತ್ರವು ಕರ್ನಾಟಕ ಮಾತ್ರವಲ್ಲದೇ ದೇಶದ ವಿಶಿಷ್ಟ ಪ್ರವಾಸಿ ತಾಣವನ್ನಾಗಿ ರೂಪಿಸಲಾಗುವುದು. ಇಲ್ಲಿಗೆ ಭೇಟಿ ನೀಡುವ ಪ್ರತಿಯೊಬ್ಬ ಪ್ರವಾಸಿಯೂ ಅಕ್ಕಮಹಾದೇವಿಯವರ ದರ್ಶನ ಪಡೆದು ಪುನೀತರಾಗುವುದರ ಜೊತೆಗೆ ಇರುವಷ್ಟು ಸಮಯ ಇಲ್ಲಿನ ಸುಂದರ ತಾಣದಲ್ಲಿ ಕಳೆಯುವ ಸಮಯ ಸದಾ ನೆನಪಿನಲ್ಲಿ ಉಳಿಯುವಂತಾಗಲಿದೆ. ಜೊತೆಗೆ ಅಕ್ಕನ ಆದರ್ಶಗಳನ್ನು ಅವರ ಜೀವನಾದರ್ಶಗಳನ್ನು ಮೈಗೂಡಿಸಿಕೊಳ್ಳಲು ಸಹಕಾರಿಯಾಗಲಿದೆ. ಇದರಿಂದಾಗಿ ಸತ್ ಚಿಂತನೆಯ ಸುಂದರ ಸಮಾಜ ನಿರ್ಮಾಣಗೊಳ್ಳಲಿದೆ ಎಂದವರು ನುಡಿದರು.
ಮುಂದಿನ 10ತಿಂಗಳಲ್ಲಿ ಈ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿದೆ. ಇಲ್ಲಿನ ಸುಂದರ ತಾಣದಲ್ಲಿ ಪಾದಚಾರಿ ಮಾರ್ಗ, ವಾಯುವಿಹಾರ, ಒಂದು ಕಿ.ಮೀ.ಗೂ ಹೆಚ್ಚಿನ ದೂರದ ದೋಣಿ ವಿಹಾರ ಕೈಗೊಳ್ಳಲು ಅವಕಾಶ ಕಲ್ಪಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಜಿಲ್ಲಾಧಿಕಾರಿ ಕೆ.ವಿ.ಶಿವಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಎಂ.ಎಲ್.ವೈಶಾಲಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಸ್ಥಳೀಯ ಸಂಸ್ಥೆಯ ಚುನಾಯಿತ ಪ್ರತಿನಿಧಿಗಳು ಉಪಸ್ಥಿತರಿದ್ದರು.
Recent Comments