ಶಿವಮೊಗ್ಗ : ಪ್ರಸ್ತುತ ಸಾಲಿನಲ್ಲಿ 845ಕಾಮಗಾರಿಗಳನ್ನು ಮುಂದುವರೆಸಲು ಸರ್ಕಾರ ಅನುಮೋದನೆ ದೊರೆತಿದ್ದು, ಬಾಕಿ ಉಳಿದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು 33ಕೋಟಿ ರೂ. ಅಗತ್ಯವಿದೆ ಎಂದು ಮಲೆನಾಡು ಪ್ರದೇಶ ಅಭಿವೃದ್ದಿ ಮಂಡಳಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ ಅವರು ತಿಳಿಸಿದರು.
ಶನಿವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಡಳಿಯ ಸರ್ವ ಸದಸ್ಯರ ಪ್ರಥಮ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
ಪ್ರಸ್ತುತ ಸಾಲಿನ 845 ಕಾಮಗಾರಿಗಳ ಪೈಕಿ 348ಕಾಮಗಾರಿಗಳು ಪೂರ್ಣಗೊಂಡಿದ್ದು, 23ಕೋಟಿ ರೂ. ಭರಿಸಲಾಗಿದೆ. 497ಕಾಮಗಾರಿಗಳು ವಿವಿಧ ಹಂತದಲ್ಲಿವೆ. ಪ್ರಗತಿಯಲ್ಲಿರುವ ಎಲ್ಲಾ ಕಾಮಗಾರಿಗಳನ್ನು ಇದೇ ಆರ್ಥಿಕ ವರ್ಷದಲ್ಲಿ ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿದೆ. 2019-20ನೇ ಸಾಲಿನಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ ತಲಾ 1ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದೆ. ಆದರೆ ಈ ಅನುದಾನ ಇದುವರೆಗೆ ಬಿಡುಗಡೆಯಾಗಿಲ್ಲ ಎಂದು ಅವರು ಹೇಳಿದರು.
ಮಲೆನಾಡಿನಲ್ಲಿ ಒತ್ತುವರಿ ಸಮಸ್ಯೆ, ಅಡಿಕೆ ಬೆಳೆಗಾರರ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳಿವೆ. ಮಂಡಳಿಯಿಂದ ಮುಂದಿನ ದಿನಗಳಲ್ಲಿ ರೈತರಿಗೆ ಅನುಕೂಲಕರವಾದಂತಹ ಯೋಜನೆಗಳನ್ನು ಅನುಷ್ಟಾನಗೊಳಿಸಲು ಉದ್ದೇಶಿಸಲಾಗಿದೆ. ಕೃಷಿ ವಿಜ್ಞಾನಿಗಳ ನೆರವನ್ನು ಪಡೆದು ರೈತರಿಗೆ ತಾಂತ್ರಿಕ ನೆರವನ್ನು ಮಂಡಳಿ ವತಿಯಿಂದ ಒದಗಿಸಲಾಗುವುದು ಎಂದು ಅವರು ಹೇಳಿದರು.
ಒಮ್ಮತದ ತಿರಸ್ಕಾರ: ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನು ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ವ್ಯಾಪ್ತಿಯಿಂದ ಹೊರಗಿಡುವ ಪ್ರಸ್ತಾಪವನ್ನು ಸಭೆಯಲ್ಲಿ ತಿರಸ್ಕರಿಸಲಾಯಿತು. ಶಿರಸಿ, ಕಾರ್ಕಳದಂತಹ ಕರಾವಳಿಯ ಹಲವು ತಾಲೂಕುಗಳು ಮಲೆನಾಡು ವ್ಯಾಪ್ತಿಯಲ್ಲಿ ಬರುವುದರಿಂದ ಮಂಡಳಿ ವ್ಯಾಪ್ತಿಯಲ್ಲಿ ಮುಂದುವರಿಸುವ ಕುರಿತು ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲು ತೀರ್ಮಾನಿಸಲಾಯಿತು.
ಸಾಲ ಪಡೆಯುವ ಬಗ್ಗೆ ಚರ್ಚೆ: ಮಂಡಳಿಯ ಅಭಿವೃದ್ದಿ ಕಾರ್ಯಗಳಿಗೆ ಕೇವಲ ಸರ್ಕಾರದಿಂದ ಅನುದಾನ ಪಡೆಯುವುದು ಮಾತ್ರವಲ್ಲದೆ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಲು ಬೈಲಾದಲ್ಲಿ ಅವಕಾಶವಿದೆ. ಈ ಹಿನ್ನೆಲೆಯಲ್ಲಿ ನಬಾರ್ಡ್ ಅಥವಾ ವಿಶ್ವಬ್ಯಾಂಕ್‍ನಿಂದ ಸಾಲ ಪಡೆಯುವ ಕುರಿತು ಪ್ರಸ್ತಾವನೆಯನ್ನು ಸಿದ್ಧಪಡಿಸಿ ಯೋಜನಾ ಇಲಾಖೆಯ ಅನುಮೋದನೆಗೆ ಸಲ್ಲಿಸುವ ಕುರಿತು ಶಾಸಕರಾದ ಸುನೀಲ್ ಕುಮಾರ್ ಹಾಗೂ ಕುಮಾರ ಬಂಗಾರಪ್ಪ ಅವರು ಪ್ರಸ್ತಾಪಿಸಿದರು.
Recent Comments