ಶಿವಮೊಗ್ಗ : ನಗರೋತ್ಥಾನ ಯೋಜನೆಯಡಿ ಶಿವಮೊಗ್ಗ ಮಹಾನಗರ ಪಾಲಿಕೆಗೆ ಬಿಡುಗಡೆ ಮಾಡಲಾಗಿರುವ 125ಕೋಟಿ ರೂ. ಯಾವುದೇ ಕಾರಣಕ್ಕೂ ಸರ್ಕಾರ ಹಿಂದಕ್ಕೆ ಪಡೆದುಕೊಳ್ಳುವುದಿಲ್ಲ ಎಂದು ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ ಅವರು ಸ್ಪಷ್ಪಪಡಿಸಿದರು. ಇಂದು ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್‍ಸಿಟಿ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರು.
ಕುಡಿಯುವ ನೀರು ಯೋಜನೆ ಪೂರ್ಣಗೊಳಿಸಿ: ಶಿವಮೊಗ್ಗ ನಗರದಲ್ಲಿ 24×7 ಕುಡಿಯುವ ನೀರಿನ ಯೋಜನೆ ತ್ವರಿತವಾಗಿ ಅನುಷ್ಟಾನಗೊಳಿಸಬೇಕು. ಆಗಸ್ಟ್ ವೇಳೆಗೆ ಟೆಂಡರ್ ಅವಧಿ ಮುಗಿಯುತ್ತಿದ್ದರೂ, ಇನ್ನೂ ಸಮರ್ಪಕವಾಗಿ ಯೋಜನೆ ಅನುಷ್ಟಾನಗೊಂಡಿಲ್ಲ. ನಿಗದಿತ ಅವಧಿಯ ಒಳಗಾಗಿ ಯೋಜನೆ ಪೂರ್ಣಗೊಂಡು ನೀರು ಪೂರೈಕೆ ಆರಂಭವಾಗದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಸಿದರು.
ಇದೇ ರೀತಿ ಒಳಚರಂಡಿ ಕಾಮಗಾರಿ ಅರ್ಧದಲ್ಲಿದ್ದು, ಮುಂದಿನ ಮಳೆಗಾಲದ ಅವಧಿಯಲ್ಲಿ ಅನಾಹುತಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೈಗೊಂಡಿರುವ ಎಲ್ಲಾ ಕಾಮಗಾರಿಗಳು ಮುಂದಿನ ಎರಡು ವರ್ಷಗಳ ಒಳಗಾಗಿ ಪೂರ್ಣಗೊಳಿಸಬೇಕು ಎಂದು ಸಚಿವರು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಮೇಯರ್ ಸುವರ್ಣ ಶಂಕರ್, ಶಾಸಕರಾದ ಪ್ರಸನ್ನ ಕುಮಾರ್, ಆಯನೂರು ಮಂಜುನಾಥ, ಹರತಾಳು ಹಾಲಪ್ಪ, ಅರಗ ಜ್ಞಾನೇಂದ್ರ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
C News TV Kannada News Online in cnewstv