ಶಿವಮೊಗ್ಗ : ಕೋವಿಡ್-19 ಹಿನ್ನೆಲೆಯಲ್ಲಿ ವಿಧಿಸಲಾಗಿರುವ ಲಾಕ್‍ಡೌನ್‍ನಲ್ಲಿ ಯಾವುದೇ ಸಡಿಲಿಕೆಯನ್ನು ಮಾಡಿರುವುದಿಲ್ಲ ಆದರೆ ಕೆಲವು ಚಟುವಟಿಕೆಗಳನ್ನು ನಡೆಸಲು ಹೆಚ್ಚುವರಿಯಾಗಿ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಸ್ಪಷ್ಪಪಡಿಸಿದರು.
ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ನಿನ್ನೆಯಿಂದ ಹೆಚ್ಚುವರಿಯಾಗಿ ಕೆಲವು ಸೇವೆಗಳನ್ನು ಆರಂಭಿಸಲು ಅವಕಾಶ ನೀಡಲಾಗಿದೆ. ಜ್ಯೂಸ್, ಐಸ್‍ಕ್ರೀಂ ಅಂಗಡಿ, ಮೊಬೈಲ್ ರಿಚಾರ್ಜ್ ಅಂಗಡಿಗಳು, ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳು, ಇಲೆಕ್ಟ್ರಿಕಲ್ ರಿಪೇರಿ, ಕೃಷಿ ಸಂಬಂಧಿತ ಮೆಕ್ಯಾನಿಕ್ ಅಂಗಡಿಗಳು, ಪ್ಲಂಬರ್‍ನಂತಹ ಸ್ವಯಂ ಉದ್ಯೋಗ ಕೈಗೊಂಡಿರುವವರು ಅಂಗಡಿ ತೆರೆಯಬಹುದಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಎಲ್ಲಾ ರೀತಿಯ ಕೈಗಾರಿಕೆಗಳನ್ನು ಆರಂಭಿಸಲು ಅನುಮತಿ ನೀಡಲಾಗಿದೆ. ಇದಕ್ಕಾಗಿ ಪ್ರತ್ಯೇಕ ಪಾಸ್ ಪಡೆಯುವ ಅಗತ್ಯವಿಲ್ಲ. ಆದರೆ ಎಲ್ಲಾ ಸಂದರ್ಭಗಳಲ್ಲಿ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಅವರು ತಿಳಿಸಿದರು.
ವಾಹನ ಸವಾರರಿಗೆ ಎಚ್ಚರಿಕೆ: ಗಾಂಧಿ ಬಜಾರ್‍ನಲ್ಲಿ ಅನುಮತಿ ನೀಡಲಾಗಿರುವ ಅಂಗಡಿಗಳನ್ನು ಸೋಮವಾರದಿಂದ ತೆರೆಯಲು ಅವಕಾಶ ನೀಡಲಾಗುವುದು. ದ್ವಿಚಕ್ರ ವಾಹನದಲ್ಲಿ ಒಬ್ಬರು ಹಾಗೂ ನಾಲ್ಕು ಚಕ್ರ ವಾಹನಗಳಲ್ಲಿ ಕೇವಲ ಇಬ್ಬರು ಮಾತ್ರ ಪ್ರಯಾಣಿಸಲು ಅವಕಾಶವಿದೆ. ಈ ಕುರಿತು ಈಗಾಗಲೇ ಹಲವು ಬಾರಿ ಎಚ್ಚರಿಕೆ ನೀಡಲಾಗಿದ್ದು, ಇನ್ನು ಮುಂದೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪಡಿತರ ವಿತರಣೆ: ಮೇ ಮೊದಲ ವಾರದಲ್ಲಿ ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿರುವ ಪಡಿತರ ಅಕ್ಕಿ ಮತ್ತು ತೊಗರಿ ಬೇಳೆ ವಿತರಣೆ ಆರಂಭಿಸಲಾಗುವುದು. ಜಿಲ್ಲಾಡಳಿತದಿಂದ ವಿವಿಧ ಸೇವೆಗಳಿಗೆ ಈಗಾಗಲೇ ನೀಡಿರುವ ಪಾಸ್ ದುರುಪಯೋಗ ಪಡಿಸಿರುವುದು ಕಂಡು ಬಂದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ಹೇಳಿದರು.
ಖಾಸಗಿ ಆಸ್ಪತ್ರೆಗಳು ಕಡ್ಡಾಯ ಮಾಹಿತಿ ಒದಗಿಸಬೇಕು: ಜಿಲ್ಲೆಯ ಪ್ರತಿಯೊಂದು ಖಾಸಗಿ ಆಸ್ಪತ್ರೆ ಹಾಗೂ ಕ್ಲಿನಿಕ್‍ಗಳಲ್ಲಿ ಜ್ವರ, ಉಸಿರಾಟ ತೊಂದರೆ, ಗಂಟಲು ನೋವು ಇತ್ಯಾದಿ ರೋಗಗಳ ಚಿಕಿತ್ಸೆಗಾಗಿ ಬರುವವರ ಮಾಹಿತಿಯನ್ನು ಪ್ರತಿ ದಿನ ಗೂಗಲ್ ಸ್ಟ್ರೆಡ್ ಶೀಟ್‍ನಲ್ಲಿ ಒದಗಿಸುವಂತೆ ಈಗಾಗಲೆ ಸೂಚನೆ ನೀಡಲಾಗಿದೆ. ಈ ಕುರಿತು ಪರಿಶೀಲಿಸಲು ತಾಲೂಕು ಮಟ್ಟದಲ್ಲಿ ಅಧಿಕಾರಿಗಳ ತಂಡ ರಚಿಸಲಾಗಿದ್ದು, ಪ್ರತಿ ದಿನ ತಪಾಸಣೆ ನಡೆಸಲಾಗುತ್ತಿದೆ. ಮಾಹಿತಿಯನ್ನು ಒದಗಿಸದಿರುವ ಪ್ರಕರಣಗಳಲ್ಲಿ ಅಂತಹ ವೈದ್ಯರ ವಿರುದ್ಧ ಕಾನೂನು ಕ್ರಮ ಜರುಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಆರೋಗ್ಯ ತಪಾಸಣೆ: ಜಿಲ್ಲೆಯಾದ್ಯಂತ ಇದುವರೆಗೆ 13ಲಕ್ಷಕ್ಕೂ ಹೆಚ್ಚು ಜನರ ಆರೋಗ್ಯ ಸಮೀಕ್ಷೆ ನಡೆಸಲಾಗಿದೆ. ಗರ್ಭಿಣಿಯರು, ಡಯಾಬಿಟಿಸ್, ಶುಗರ್, ಹೆಚ್‍ಐವಿ ಪೀಡಿತರು, 60ವರ್ಷ ಮೇಲ್ಪಟ್ಟವರ ಆರೋಗ್ಯ ತಪಾಸಣೆಯನ್ನು ಪ್ರತಿ ಮೂರು ದಿನಗಳಿಗೊಮ್ಮೆ ನಡೆಸುವಂತೆ ಆಶಾ ಕಾರ್ಯಕರ್ತೆಯರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
Recent Comments