ಶಿವಮೊಗ್ಗ : ಭಾನುವಾರ ೨೬ ಏಪ್ರಿಲ್ ೨೦೨೦ರಂದು ಬಸವ ಜಯಂತಿ. ಕೋವಿಡ್-೧೯ ವೈರಾಣುವಿನಿಂದ ರಕ್ಷಣೆ ಪಡೆಯಲು ದೇಶಕ್ಕೆ ದೇಶವೇ ದಿಗ್ಬಂಧನವನ್ನು ಪಾಲಿಸುತ್ತಿದೆ. ಇದು ವೈರಾಣುವಿನ ಪ್ರಸರಣ ತಡೆಗೆ ಅನಿವಾರ್ಯ. ಪ್ರತೀ ವರ್ಷದಂತೆ ಉತ್ಸವದೊಂದಿಗೆ ಬಸವ ಜಯಂತಿ ಆಚರಿಸಬೇಕೆಂಬುದು ಈ ಬಾರಿ ಅಸಾಧ್ಯ. ಈ ಸ್ಥಿತಿಯನ್ನು ಅರಿತು ನಾವೆಲ್ಲ ಜವಾಬ್ದಾರಿಯಿಂದ ವರ್ತಿಸಬೇಕಿದೆ. ಆದ್ದರಿಂದ ತಾವು ತಮ್ಮ ಮನೆಗಳಲ್ಲೇ ಬಸವಣ್ಣನವರ ಪೂಜೆ ನೆರವೇರಿಸಿ, ವಚನ ಪಠಣ ಮಾಡಿ ಬಸವ ಜಯಂತಿಯನ್ನು ಆಚರಿಸಲು ಸೂಚಿಸಿದೆ. ನಮ್ಮ ಬಸವಕೇಂದ್ರದಲ್ಲಿ ಕೂಡಾ ಅಂದು ಬೆಳಗ್ಗೆ ಎಂದಿನಂತೆ ಇಷ್ಟಲಿಂಗ ಪೂಜೆ ಮುಗಿಸಿ ಬಸವಣ್ಣನವರಿಗೆ ನೂರೆಂಟು ಬಸವಲಿಂಗ ನಾಮಾವಳಿಗಳೊಂದಿಗೆ ಪೂಜಿಸಿ ಅಂಬಲಿ ಹಾಗು ಮಜ್ಜಿಗೆ ನೈವೇದ್ಯಮಾಡಿ ಬಸವ ಜಯಂತಿ ಆಚರಿಸಲಾಗುವುದು. ಯಾವುದೇ ಕಾರಣಕ್ಕೂ ಈ ಸಂದರ್ಭದಲ್ಲಿ ಬಸವಕೇಂದ್ರಕ್ಕೆ ಬರುವುದು ಬೇಡ.
ಇದರ ಜೊತೆಗೆ ನಿಮ್ಮ ಕೈಲಾದಷ್ಟು ಆರ್ಥಿಕ ಸಹಾಯವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿ ಅಥವಾ ನಿಮ್ಮ ಸುತ್ತಮುತ್ತ ಇರುವ ಕೂಲಿ ಕಾರ್ಮಿಕರು, ಮನೆಗೆಲಸದವರು, ನಿರ್ಗತಿಕರು,ಅಶಕ್ತರಿಗೆ ಅಗತ್ಯ ಸಹಕಾರ ನೀಡುವ ಮೂಲಕ ಕರೋನಾ ತಂದೊಡ್ಡಿರುವ ಆತಂಕ ನಿವಾರಣೆಗೆ ಅಳಿಲಸೇವೆ ಸಲ್ಲಿಸಿ ಈ ಬಸವ ಜಯಂತಿಯನ್ನು ಸ್ಮರಣೀಯಗೊಳಿಸಬಹುದು. ಈಗಾಗಲೇ ನಮ್ಮ ಬಸವಕೇಂದ್ರದಿಂದ ಸದ್ಭಕ್ತರ ಸಹಕಾರ ಪಡೆದು ಅಗತ್ಯವಿರುವ ೬೫೦ಜನರಿಗೆ ಒಂದುವಾರಕ್ಕೆ ಬೇಕಾಗುವ ಆಹಾರ ಪದಾರ್ಥಗಳ ಕಿಟ್ ವಿತರಿಸಲಾಗಿದೆ ಎಂದು ತಮ್ಮ ಗಮನಕ್ಕೆ ತರಬಯಸುತ್ತೇವೆ ಎಂದು ಬಸವಕೇಂದ್ರದ ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿಸವ ತಿಳಿಸಿದ್ದಾರೆ.
Recent Comments