ಶಿವಮೊಗ್ಗ :ಮಹಾನಗರಪಾಲಿಕೆಯು ಶಿವಮೊಗ್ಗ ಮಹಾನಗರದ ವ್ಯಾಪ್ತಿಯಲ್ಲಿ ಮಾರಾಣಾಂತಿಕ ಕೊರೋನ ವೈರಸ್ನ ನಿಯಂತ್ರಣಕ್ಕಾಗಿ ಹಾಗೂ ನಿರಾಶ್ರಿತ ಕಾರ್ಮಿಕರ ಊಟ, ವಸತಿ, ಆರೋಗ್ಯ ಮುಂತಾದ ತುರ್ತು ಸಮಸ್ಯೆಗಳ ಪರಿಹಾರ ಕ್ರಮವಾಗಿ ಪ್ರತಿ 7ವಾರ್ಡುಗಳಿಗೆ ಓರ್ವರಂತೆ ಅಧಿಕಾರಿಗಳನ್ನೊಳಗೊಂಡ ತಂಡವನ್ನು ನಿಯೋಜಿಸಲಾಗಿದ್ದು, ಸಂಕಷ್ಟಕ್ಕೊಳಗಾದವರು ಈ ಕೆಳಕಂಡವರನ್ನು ಸಂಪರ್ಕಿಸಿ ಸಹಾಯ ಪಡೆದುಕೊಳ್ಳುವಂತೆ ಮಹಾನಗರಪಾಲಿಕೆಯ ಆಯುಕ್ತ ಚಿದಾನಂದ ಎಸ್.ವಟಾರೆ ಅವರು ತಿಳಿಸಿದ್ದಾರೆ.
ಒಂದರಿಂದ ಏಳನೇ ವಾರ್ಡ್ವರೆಗಿನ ಬಾಧಿತರು ಚಾಮರಾಜ್, ಸಹಾಯಕ ಕಾರ್ಯಪಾಲಕ ಅಭಿಯಂತರ ಮೊ.9448127454, ವಾರ್ಡ್ ಎಂಟರಿಂದ ಹದಿನಾಲ್ಕನೆ ವಾರ್ಡಿನ ಬಾಧಿತರು ಶ್ರೀಧರ್ ಜೆ., ಕಾರ್ಯಪಾಲಕ ಅಭಿಯಂತರರು, ಮೊ.8762288680, ವಾರ್ಡ್ ನಂಬರ್ 15ರಿಂದ 21ರವರಗಿನ ಬಾಧಿತರು ಅನಂತಪದ್ಮನಾಭ ಎಂ.ಆರ್. ಕಾರ್ಯಪಾಲಕ ಅಭಿಯಂತರರು ಮೊ.7022116800, ವಾರ್ಡ್ 22ರಿಂದ 28ರವರೆಗಿನ ಬಾಧಿತರು ಭರಮರೆಡ್ಡಿ ಬಿ.ಎಲ್., ಕಾರ್ಯಪಾಲಕ ಅಭಿಯಂತರರು, ಮೊ.9448425301 ಹಾಗೂ ವಾರ್ಡ್ ನಂಬರ್ 29ರಿಂದ 35ರವರೆಗಿನ ಬಾಧಿತರು ಬಾಲಾಜಿರಾವ್ ಹೆಚ್.ಎಂ. ಉಪ ಆಯುಕ್ತರು, ಕಂದಾಯ ವಿಭಾಗ, ಮೊ. 9901716488 ಇವರನ್ನು ಸಂಪರ್ಕಿಸಿ ಸಹಾಯ ಪಡೆಯಬಹುದಾಗಿದೆ ಎಂದವರು ತಿಳಿಸಿದ್ದಾರೆ.
ಈಗಾಗಲೇ ಸಂಕಷ್ಟಕ್ಕೊಳಗಾದ, ವಲಸೆ ಬಂದ ಕಾರ್ಮಿಕರು ಹಾಗೂ ನಿರಾಶ್ರಿತರಿಗಾಗಿ ನಗರದ ಆಯ್ದ ಕಡೆಗಳಲ್ಲಿ 20ಸ್ಥಳಗಳನ್ನು ಗುರುತಿಸಲಾಗಿದ್ದು, ಪ್ರಸ್ತುತ ನಾಲ್ಕು ಸ್ಥಳಗಳಲ್ಲಿ ವಸತಿ ಸೌಲಭ್ಯವನ್ನು ಕಲ್ಪಿಸಿ, ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ನಗರದ ಹೊಳೆ ಬಸ್ಸ್ಟಾಪ್ನ ಸಮೀಪದಲ್ಲಿರುವ ಬೆಕ್ಕಿನ ಕಲ್ಮಠದಲ್ಲಿ ಹೈದರಾಬಾದ್ ಕರ್ನಾಟಕ ಭಾಗದ ಕಲಬುರಗಿ ಮತ್ತು ಬೀದರ್ನ 30ಕಾರ್ಮಿಕರಿಗೆ, ಖಾಸಗಿ ಬಸ್ನಿಲ್ದಾಣದ ಲಾಡ್ಜ್ನಲ್ಲಿ ಬಿಕ್ಷಕರು ಹಾಗೂ ವಸತಿಹೀನ 40ಜನರಿಗೆ, ನಗರದ ಓ.ಟಿ.ರಸ್ತೆಯಲ್ಲಿರುವ ದುರ್ಗಾ-ಅಮೃತ ಲಾಡ್ಜ್ನಲ್ಲಿ ಉತ್ತರ ಪ್ರದೇಶದಿಂದ ವಲಸೆ ಬಂದಿದ್ದ 17ಕಾರ್ಮಿಕರಿಗೆ ಹಾಗೂ ಪಾಲಿಕೆ ವತಿಯಿಂದ ನಗರದಲ್ಲಿ ವಸತಿ ರಹಿತವಾಗಿರುವವರಿಗಾಗಿ ಮಿಳ್ಳಘಟ್ಟದ ಗುರುನಾಥ ಸಾಮಿಲ್ನ ಸಮೀಪದಲ್ಲಿ 27ಜನರಿಗೆ ಊಟೋಪಹಾರ ವ್ಯವಸ್ಥೆ ಕಲ್ಪಿಸಲಾಗಿದೆ ಎಂದವರು ತಿಳಿಸಿದ್ದಾರೆ.
ಅಲ್ಲದೇ ನಗರ ವ್ಯಾಪ್ತಿಯ ಹಲವು ಪ್ರದೇಶಗಳ ಹೊರವಲಯದಲ್ಲಿ ಬೀಡು ಬಿಟ್ಟಿರುವ ಕುಶಲಕರ್ಮಿಗಳು, ಕಾರ್ಮಿಕರು ಹಾಗೂ ಊರೊಳಗೆ ವಸತಿ ಸೌಲಭ್ಯ ಹೊಂದಿದ್ದು, ಉದ್ಯೋಗಾವಕಾಶ ದೊರೆಯದೆ ಆಹಾರಕ್ಕಾಗಿ ಪರಿತಪಿಸುತ್ತಿದ್ದ 563 ಜನ ಬಾಧಿತರಿಗೆ ಊಟೋಪಹಾರ ಒದಗಿಸಲಾಗುತ್ತಿತ್ತು. ಪ್ರಸ್ತುತ ಸ್ಥಳೀಯ ಬಸವಕೇಂದ್ರದ ಸಹಕಾರದೊಂದಿಗೆ ಮಲವಗೊಪ್ಪದ ಬೈಪಾಸ್ನಲ್ಲಿರುವ ಹಕ್ಕಿಪಿಕ್ಕಿ ಜನಾಂಗದ 57ಕುಟುಂಬಗಳ 180ಜನರಿಗೆ ಅಗತ್ಯ ದಿನಸಿ ಆಹಾರಗಳ ಕಿಟನ್ನು ಪೂರೈಸಲಾಗಿದೆ.
ಇಂತಹ ಸಂದಿಗ್ಧ ಸಂದರ್ಭದಲ್ಲಿ ಪಾಲಿಕೆಯ ಈ ಮಹತ್ವದ ಕಾರ್ಯದಲ್ಲಿ ಸಾರ್ವಜನಿಕರು ಕೈಜೋಡಿಸುವಂತೆ ಕೋರಿರುವ ಅವರು, ನಗರದ ದಾನಿಗಳು ಸಿದ್ಧಪಡಿಸಿದ ಆಹಾರದ ಬದಲಾಗಿ ಅಕ್ಕಿ, ಬೇಳೆ ಮತ್ತಿತರ ದಿನಸಿಗಳನ್ನು ಮಹಾನಗರಪಾಲಿಕೆಯಲ್ಲಿ ಆರಂಭಿಸಲಾಗಿರುವ ಕೌಂಟರಿನಲ್ಲಿ ನೀಡಿ ಸಹಕರಿಸುವಂತೆ ಅವರು ಮನವಿ ಮಾಡಿದ್ದಾರೆ.
Recent Comments