ಶಿವಮೊಗ್ಗ: ಪೊಲೀಸ್ ಠಾಣೆಗಳಲ್ಲಿ ಕಾನೂನು ನೆರವು ಒದಗಿಸುವ ಕಾನೂನು ನೆರವು ಕೇಂದ್ರವನ್ನು ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜಿ.ಬಸವರಾಜ್ ಅವರು ಬುಧವಾರ ನಗರದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಉದ್ಘಾಟಿಸಿದರು.
ಅವರು ಈ ಸಂದರ್ಭದಲ್ಲಿ ಮಾತನಾಡಿ, ಯಾವುದೇ ಪೊಲೀಸ್ ಠಾಣೆಗೆ ವಿಚಾರಣೆಗಾಗಿ ಕರೆತರುವ ವ್ಯಕ್ತಿಗಳಿಗೆ ಬಂಧನಪೂರ್ವ ಕಾನೂನು ನೆರವು ಒದಗಿಸುವ ಉದ್ದೇಶದಿಂದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಕಾನೂನು ಸೇವಾ ಕೇಂದ್ರವನ್ನು ತೆರೆಯಲಾಗುತ್ತಿದೆ ಎಂದು ಹೇಳಿದರು.
ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಪ್ರತಿಯೊಬ್ಬನ ವೈಯಕ್ತಿಕ ಸ್ವಾತಂತ್ರ್ಯವನ್ನು ರಕ್ಷಿಸುವ ಉದ್ದೇಶದಿಂದ, ದಸ್ತಗಿರಿ ಮಾಡಿದಾಗ ಅನುಸರಿಸಬೇಕಾದ ಕ್ರಮಗಳ ಅನುಷ್ಟಾನ ಖಾತ್ರಿಪಡಿಸುವ ಉದ್ದೇಶದಿಂದ ಪೊಲೀಸ್ ಠಾಣೆಗಳಲ್ಲಿ ಕಾನೂನು ಸೇವಾ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಠಾಣೆಗಳಲ್ಲಿ ಕಾನೂನು ಸೇವಾ ಕೇಂದ್ರಗಳನ್ನು ತೆರೆಯುವ ಗುರಿಯನ್ನು ಹೊಂದಲಾಗಿದೆ ಎಂದು ಹೇಳಿದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಆರ್‍ಕೆಜಿಎಂ ಮಹಾಸ್ವಾಮೀಜಿ ಅವರು ಮಾತನಾಡಿ, ಯಾವುದೇ ವ್ಯಕ್ತಿಯ ಬಂಧನಕ್ಕೆ ಪೂರ್ವದಲ್ಲಿ ಮಾತ್ರವಲ್ಲದೆ ಬಂಧನ ಬಳಿಕವೂ ಕಾನೂನು ನೆರವನ್ನು ಈ ಕೇಂದ್ರದ ಮೂಲಕ ನೀಡಲಾಗುವುದು. ಯಾವುದೇ ವ್ಯಕ್ತಿಯನ್ನು ದಸ್ತಗಿರಿ ಮಾಡಿದ ತಕ್ಷಣ ಕೇಂದ್ರದಲ್ಲಿರುವ ರಿಮ್ಯಾಂಡ್ ಅಡ್ವಕೇಟ್ ಕಾನೂನು ನೆರವು ಒದಗಿಸುವರು. ಒಂದು ವೇಳೆ ನ್ಯಾಯಾಲಯದಲ್ಲಿ ಯಾವುದೇ ವಕೀಲರು ವಾದಿಸಲು ಇಲ್ಲದಿದ್ದರೆ, ರಿಮ್ಯಾಂಡ್ ಅಡ್ವಕೇಟ್ ಅಲ್ಲಿಯೂ ಕಾನೂನು ನೆರವು ಒದಗಿಸುವರು ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ.ಎಂ.ಶಾಂತರಾಜು, ಅಪರ ಪೊಲೀಸ್ ವರಿಷ್ಟಾಧಿಕಾರಿ ಡಾ.ಶೇಖರ ಹೆಚ್.ಟಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಎನ್.ಸರಸ್ವತಿ, ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎನ್.ದೇವೇಂದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.
ನಗರದ ಜಯನಗರ ಪೊಲೀಸ್ ಠಾಣೆಯಲ್ಲಿ ಸಹ ಕಾನೂನು ನೆರವು ಕೇಂದ್ರವನ್ನು ಈ ಸಂದರ್ಭದಲ್ಲಿ ಉದ್ಘಾಟಿಸಲಾಯಿತು.
Recent Comments