Breaking News

ಈ ಬಾರಿ ಮನೆ ಗಣತಿಗೆ ಮೊಬೈಲ್ ಆ್ಯಪ್ ಬಳಕೆ- ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್

 

ಶಿವಮೊಗ್ಗ : ಜನಗಣತಿಗೆ ಪೂರ್ವಭಾವಿಯಾಗಿ ಏಪ್ರಿಲ್ 15 ರಿಂದ ಮೇ 29ರ ವರೆಗೆ ಜಿಲ್ಲೆಯಾದ್ಯಂತ ಮನೆ ಪಟ್ಟಿ ಮತ್ತು ಮನೆಗಣತಿ ಹಾಗೂ ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟರ್ ಪರಿಷ್ಕರಣೆ ಕಾರ್ಯ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದರು.

ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಹೊಸ ಸಭಾಂಗಣದಲ್ಲಿ ಜನಗಣತಿ ಅಧಿಕಾರಿಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಈ ಬಾರಿ ಮನೆಗಣತಿ ಕಾರ್ಯವನ್ನು ಮೊಬೈಲ್ ಆ್ಯಪ್ ಮೂಲಕ ಸಹ ನಡೆಸಲು ಅವಕಾಶ ಕಲ್ಪಿಸಲಾಗಿದೆ. ದೇಶ ಸ್ವಾತಂತ್ರ್ಯ ಪಡೆದ ಬಳಿಕ ನಡೆಯುತ್ತಿರುವ 8ನೇ ಜನಗಣತಿ ಇದಾಗಿದ್ದು, ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ ಕೈಗೊಳ್ಳಲಾಗುತ್ತಿದೆ. ಮನೆಗಣತಿ ಪೂರ್ಣಗೊಂಡ ಬಳಿಕ ಮುಂದಿನ ವರ್ಷದ ಫೆಬ್ರವರಿ 9 ರಿಂದ 28 ರವರೆಗೆ ವೈಯಕ್ತಿಕ ಜನಗಣತಿ ನಡೆಯಲಿದೆ ಎಂದು ಅವರು ಹೇಳಿದರು.

ಜನಗಣತಿ ಕಾರ್ಯ ಮುಂದಿನ 10 ವರ್ಷಗಳ ಅವಧಿಗೆ ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಜನಗಣತಿಯಲ್ಲಿ ಸಂಗ್ರಹಿಸಲಾಗುವ ಮಾಹಿತಿ ಆಧಾರದಲ್ಲಿ ಪ್ರತಿಯೊಂದು ಯೋಜನೆಗಳನ್ನು ರೂಪಿಸಲಾಗುತ್ತದೆ. ಆದ್ದರಿಂದ ಗಣತಿ ಸಂದರ್ಭದಲ್ಲಿ ನಿಖರವಾದ ಮಾಹಿತಿಯನ್ನು ಸಂಗ್ರಹಿಸಬೇಕು. ಯಾವುದೇ ಗೊಂದಲಕ್ಕೆ ಆಸ್ಪದವಿಲ್ಲದಂತೆ ಗಣತಿ ಕಾರ್ಯ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಭಾರತೀಯ ಜನಗಣತಿ ನಿರ್ದೇಶನಾಲಯದ ಹಿರಿಯ ಅಧಿಕಾರಿ ಕೇಶ್ಯಾ ನಾಯ್ಕ್ ಮಾತನಾಡಿ, ಮನೆ ಪಟ್ಟಿ ಮತ್ತು ಮನೆಗಣತಿ ಸಂದರ್ಭದಲ್ಲಿ ಮನೆ, ಕಟ್ಟಡ ಸೇರಿದಂತೆ ಎಲ್ಲಾ ನಿರ್ಮಾಣಗಳ ಮೂಲಭೂತ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಒಟ್ಟು 34 ಪ್ರಶ್ನೆಗಳಿದ್ದು, ಪ್ರತಿಯೊಂದು ಮಾಹಿತಿಗಳನ್ನು ಸಂಗ್ರಹಿಸಬೇಕು. 650 ರಿಂದ 800 ಜನರಿಗೆ ಅಥವಾ 150 ರಿಂದ 180 ಮನೆಗಳಿಗೆ ತಲಾ ಒಬ್ಬರು ಗಣತಿದಾರರನ್ನು ನೇಮಕ ಮಾಡಲಾಗುವುದು. ಪ್ರತಿ 6 ಗಣತಿದಾರರಿಗೆ ಒಬ್ಬರು ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ ಎಂದರು.

ಜನಗಣತಿಯ ಸಂದರ್ಭದಲ್ಲಿ ಪಡೆದ ಮಾಹಿತಿ ಗೌಪ್ಯವಾಗಿದ್ದು, ಅದನ್ನು ಸಾಕ್ಷಿಯಾಗಿ ಸಹ ಸ್ವೀಕರಿಸುವಂತಿಲ್ಲ. ಮನೆಗನತಿ ಸಂದರ್ಭದಲ್ಲಿ ಯಾವುದೇ ದಾಖಲೆಗಳನ್ನು ಪಡೆಯಲಾಗುವುದಿಲ್ಲ. 2010ರಲ್ಲಿ ಸಂಗ್ರಹಿಸಲಾಗಿರುವ ಎನ್.ಪಿ.ಆರ್. ಮಾಹಿತಿಯನ್ನು ಇದೇ ಸಂದರ್ಭದಲ್ಲಿ ಪರಿಷ್ಕರಣೆ ಮಾತ್ರ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಎನ್ ಪಿ ಆರ್ ಪರಿಷ್ಕರಣೆ ಸಂದರ್ಭದಲ್ಲಿ 23 ಮಾಹಿತಿಯನ್ನು ಸಂಗ್ರಹಿಸಲಾಗುವುದು. ಆದರೆ ಸಂಗ್ರಹಿಸುವ ಮಾಹಿತಿಗೆ ಪೂರಕವಾಗಿ ಯಾವುದೇ ದಾಖಲೆಗಳನ್ನು ಕೇಳುವುದಾಗಲೀ, ಪರಿಶೀಲಿಸುವುದಾಗಲಿ ಮಾಡುವುದಿಲ್ಲ. ಬಯೋಮೆಟ್ರಿಕ್ ಸಹ ಪಡೆಯಲಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಅಪರ ಜಿಲ್ಲಾಧಿಕಾರಿ ಜಿ.ಅನುರಾಧಾ ಅವರು ಮಾತನಾಡಿದರು. ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಟಾರೆ, ಯೋಜನಾ ನಿರ್ದೇಶಕ ಡಾ|| ನಾಗೇಂದ್ರ ಹೊನ್ನಳ್ಳಿ, ಜಿಲ್ಲಾ ಸಾಂಖ್ಯಿಕ ಅಧಿಕಾರಿ ಬ್ರಿಜೆಟ್ ವರ್ಗೀಸ್ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

*