Breaking News

ಕೋಟೆ ಮಾರಿಕಾಂಬಾ ದೇವಿ ಜಾತ್ರೆ ಬಹುಜನರ ಧಾರ್ಮಿಕ-ಸಾಂಸ್ಕೃತಿಕ ಉತ್ಸವ

 

ಶಿವಮೊಗ್ಗದ ಕೋಟೆ ಶ್ರೀಮಾರಿಕಾಂಬಾ ದೇವಿ ಜಾತ್ರೆ ನಾಡಿನ ಜನಮನ ಸೆಳೆದ . ಆಸ್ತಿಕ ಭಕ್ತರನ್ನು ಸೂಜಿಗಲ್ಲಿನಂತೆ ಸೆಳೆವ ಜಾತ್ರೆ. ಶಿರಸಿ, ಸಾಗರದ ಮಾರಿಕಾಂಬಾ ಜಾತ್ರೆಗಳ ನಂತರ ಅದ್ಧೂರಿಯ ಹೆಗ್ಗಳಿಕೆಗೆ ಪಾತ್ರವಾಗಿರುವುದು ಶಿವಮೊಗ್ಗನಗರದ ಕೋಟೆ ಶ್ರೀ ಮಾರಿಕಾಂಬಾದೇವಿ ಜಾತ್ರೆ. ಎರಡು ವರ್ಷಗಳಿಗೊಮ್ಮೆ ನಡೆಯುವ ಈ ಜಾತ್ರೆಯ ಹಿಂದೆ ಊರಿನ ಕ್ಷೇಮ, ಜನರ ಕಲ್ಯಾಣಕ್ಕೆ ಶಕ್ತಿ ದೇವತೆಯನ್ನು ಆರಾಧಿಸುವ ಜನಪದ ನಂಬಿಕೆಯೊಂದು ಭಕ್ತಿ ಮತ್ತು ವೈಭವದಿಂದ ನಡೆದುಕೊಂಡು ಬಂದ ಪರಂಪರೆಯೊಂದು ಹಾಸುಹೊಕ್ಕಾಗಿದೆ.

ದೂರ್ವಾಸ ಕ್ಷೇತ್ರವೆಂದೆ ಪುರಾಣಗಳಲ್ಲಿ ಕರೆಯಲ್ಪಡುವ ಶಿವಮೊಗ್ಗ ನಗರದ ಕೋಟೆ ಮಾರಿಕಾಂಬೆದೇವಿಯ ಜಾತ್ರೆಗೆ ಶತಮಾನದ ಇತಿಹಾಸವಿದೆ. ತುಂಗಾನದಿ ದಡದ ಕೆಳದಿ ಮನೆತನದ ಶಿವಪ್ಪನಾಯಕನ ಅರಮನೆಯ ಮಗ್ಗಲ ಬಯಲಿನ ಮೂಲಗದ್ದುಗೆಯಲ್ಲಿ ಜನಪದರ ಕೆಂಚಮಾರಿ ಎಂದೇ ಪೂಜಿಸಲ್ಪಡುತ್ತಿದ್ದ ದೇವಿಯು ಶಿವಮೊಗ್ಗ ನಗರದ ಗ್ರಾಮದೇವತೆಯಾಗಿದ್ದಳು. ಕೆಳದಿ ರಾಜ ಶಿವಪ್ಪನಾಯಕ ಯುದ್ಧ , ಬೇಟೆ ಮತ್ತು ಇನ್ಯಾವುದೇ ರಾಜಕಾರ್ಯಗಳನ್ನು ಕೈಗೊಳ್ಳುವ ಮುಂಚೆ ಈ ಕೆಂಚಮಾರಿ ಗದ್ದುಗೆಗೆ ಪೂಜೆ ಸಲ್ಲಿಸಿ ಮುನ್ನಡೆಯುತ್ತಿದ್ದನು ಎಂಬ ಐತಿಹಾಸಿಕ ಕತೆಗಳು ಪೂರ್ವಿಕರಿಂದ ಕೇಳಿಬರುತ್ತವೆ. ಇದಕ್ಕೆ ಪುರಾವೆ ಎಂಬಂತೆ ಗದ್ದುಗೆ ಮಗ್ಗಲಲ್ಲೆ ಶಿವಪ್ಪನಾಯಕನ ಅರಮನೆ ಇರುವುದು ಇಂತಹ ಕಥನಗಳನ್ನು ಪುಷ್ಟೀಕರಿಸುತ್ತದೆ.

*ಮಾರಿಗದ್ದುಗೆ:*
ಶಿವಮೊಗ್ಗ ನಗರ ಬೆಳೆದಂತೆಲ್ಲಾ ಕೋಟೆ ಮಾರಿಗದ್ದುಗೆ ಬಹುಜನರ ಧಾರ್ಮಿಕ ನಂಬಿಕೆಯ ಶಕ್ತಿಕೇಂದ್ರವಾಗಿ ಬೆಳೆದಿದ್ದು, ಆ ಕಾಲದಲ್ಲಿ ಜನರನ್ನು ಕಾಡುತ್ತಿದ್ದ ಸಿಡುಬು, ಅಮ್ಮ, ದಡಾರ, ಕ್ಷಾಮ ದಂತಹ ನೈಸರ್ಗಿಕ ವಿಪತ್ತು, ಕಾಯಿಲೆಗಳ ನಿವಾರಣೆಗೆ ಮಾರಿಗದ್ದುಗೆಗೆ ಪೂಜೆ ಸಲ್ಲಿಸುವುದು, ಹರಕೆ ತೀರಿಸುವುದು ಜನರಲ್ಲಿ ವಾಡಿಕೆಯಾಗಿ ಈ ಪರಂಪರೆ ಇಂದಿಗೂ ಮುಂದುವರೆದುಕೊಂಡು ಬಂದಿದೆ. ಜೋಗತಿಯರು ಮಂಗಳವಾರ ಮತ್ತು ಶುಕ್ರವಾರ ಗದ್ದುಗೆ ಗೆ ಬಂದು ಪೂಜೆ ಸಲ್ಲಿಸುತ್ತಾ ಚೌಡಿಕೆ ಸೇವೆ ಸಲ್ಲಿಸಿದರೆ, ಸಾರ್ವಜನಿಕರು ಮೊಸರನ್ನ ಎಡೆ ಹಿಡುವುದು, ಕುರಿ ,ಕೋಳಿ ಬಲಿ ಅರ್ಪಿಸಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಂಡ ತೃಪ್ತಿಯನ್ನು ಕಾಣುತ್ತಿದ್ದರು. ಮಕ್ಕಳಿಗೆ ಅಮ್ಮ(ಸಿಡುಬು) ಬಂದರೆ ಮಾರಿಗದ್ದುಗೆ ಮಕ್ಕಳನ್ನು ಕರೆತಂದು ಹರಕೆ ತೀರಿಸುವುದು ಇದರಿಂದಾಗಿ ಅಮ್ಮ ವಾಸಿಯಾಗುವುದು ಇಂದಿಗೂ ವಿಸ್ಮಯದ ಸಂಗತಿಯಾಗಿ ನಡೆದುಕೊಂಡು ಬಂದಿದೆ. ಇಂತಹ ನಂಬಿಕೆ ಹಿಂದೂಗಳಷ್ಟೆ ಅಲ್ಲದೆ ,ಮುಸ್ಲಿಂ , ಕ್ರೈಸ್ತ ಧರ್ಮೀಯರಲ್ಲೂ ಇದ್ದೂ ಮಾರಿಗದ್ದುಗೆ ಒಂದು ಜಾತ್ಯಾತೀತ ದೈವಭಕ್ತಿಯ ಕೇಂದ್ರವಾಗಿ ಸೌಹಾರ್ದತೆಯನ್ನು ಕಾಯ್ದುಕೊಂಡು ಬಂದಿರುವುದು ವಿಶೇಷ.

ಮಾರಿಕಾಂಬೆಯ ಐತಿಹ್ಯದ ಕತೆಯೊಂದಿಗೆ ಶ್ರದ್ಧೆ,ಭಕ್ತಿ ಮತ್ತು ಸಾಂಸ್ಕೃತಿಕ ಆಯಾಮಗಳಿಂದ ಜಾತ್ರೆಯ ಸ್ವರೂಪಪಡೆದುಕೊಂಡಿದೆ. ಕೆಂಚಮಾರಿ ಕೋಟೆಮಾರಿಕಾಂಬೆಯಾಗಿ ಬದಲಾಗಿದ್ದು, ಜಾತ್ರೆಯ ಉತ್ಸವಕ್ಕೆ ಶತಮಾನಗಳಷ್ಟು ಇತಿಹಾಸವಿದೆ. ಕೇವಲ ತುಂಗಾನದಿ ದಡ್ಡಕ್ಕೆ ಸೀಮಿತವಾಗಿದ್ದ ಶಿವಮೊಗ್ಗ ನಗರದ ಅಂದಿನ ಮುಖಂಡರಾಗಿದ್ದ ಕುಸ್ತಿ ಪಟು ಬೀಳಗಿ ರಾಮಣ್ಣ, ಆನೆಪ್ಪ, ದ್ಯಾಮಣ್ಣ, ಅಕ್ಕಿತಿಮ್ಮಣ್ಣ. ಎಂ.ಸಿ ಮಹೇಶ್ವರಪ್ಪ . ಡಿ ರವಳಪ್ಪ ಮುಂತಾದವರು.. ಮಾರಿಕಾಂಬೆ ಜಾತ್ರೆಗೆ ಮುನ್ನುಡಿ ಬರೆದಿದ್ದು, ಶಿವಮೊಗ್ಗ ಪಟ್ಟಣದ ಸಾಂಸ್ಕೃತಿಕ ಮತ್ತು ಧಾರ್ಮಿಕ ವೈಭವವನ್ನಾಗಿ ರೂಪಿಸಿದರು. ಎಪ್ಪತ್ತರ ದಶಕದಲ್ಲಿ ಕೇವಲ ಒಂದು ದಿನಕ್ಕೆ ಸೀಮಿತವಾಗಿದ್ದ ಮಾರಿ ಜಾತ್ರೆ ಈಗ ಐದು ದಿನಗಳ ಕಾಲ ಅದ್ಧೂರಿಯಾಗಿ, ಶ್ರದ್ಧೆ-ಭಕ್ತಿ ಮತ್ತು ಸಂಭ್ರಮದಿಂದ ನಡೆಯುತ್ತಾ ಬಂದಿದೆ.

*ಐತಿಹ್ಯ*
ಬ್ರಾಹ್ಮಣರ ಮನೆಯಲ್ಲಿ ಜೀತಕ್ಕಿದ್ದ ದಲಿತ ಕುಟುಂಬವೊಂದರ ಮಗ ದಡಗದ್ರ ಪಟ್ಟಣಕ್ಕೆ ಹೋಗಿ ಕಲಿತು ಬಂದಿರುತ್ತಾನೆ. ಆತ ತನ್ನ ತಾಯಿ ಜೀತ ಮಾಡುತ್ತಿದ್ದ ಬ್ರಾಹ್ಮಣರ ಮನೆ ಮಗಳು ಮಾರಿಕಾಂಬೆಯ ಸೌಂದರ್ಯವನ್ನು ನೋಡಿ ಮರುಳಾಗಿ ತನ್ನ ಜಾತಿಯನ್ನು ಮರೆಮಾಚಿ ತಾನೂ ಬ್ರಾಹ್ಮಣ ಎಂದು ಸುಳ್ಳು ಹೇಳಿ ಮದುವೆಯಾಗುತ್ತಾನೆ. ಇಬ್ಬರು ಮಕ್ಕಳಾದ ನಂತರ ತನ್ನ ಗಂಡ ಕೀಳು ಜಾತಿಯವನು ಎಂಬುದು ಗೊತ್ತಾಗಿ ಸಿಟ್ಟಿಗೇಳುವ ಮಾರಿಕಾಂಬೆ ಗಂಡನನ್ನು ಮತ್ತು ಆತನಿಂದ ಹುಟ್ಟಿದ ಮಕ್ಕಳನ್ನು ಬಲಿ ತೆಗೆದುಕೊಳ್ಳುವ ಶಪಥಮಾಡಿ ಮಾರಿಯಾಗಿ ಬಿಡುತ್ತಾಳೆ. ಅದರಂತೆ ಗಂಡನನ್ನು ಕೋಣವನ್ನಾಗಿಸಿಯೂ ಮಕ್ಕಳನ್ನು ಕುರಿ, ಕೋಳಿಗಳನ್ನಾಗಿಸಿ ಬಲಿಪಡೆಯುತ್ತಾ ಬಂದಿದ್ದಾಳೆ. ಇದರ ಪ್ರತೀಕವಾಗಿ ಮಾರಿಕಾಂಬೆಯನ್ನು ಸಮಾಧಾನಪಡಿಸಲು ಮಾರಿಜಾತ್ರೆ ನಡೆಯುತ್ತಾ ಬಂದಿದೆ ಎಂಬುದು ಒಂದು ಜನಪದ ಕತೆಯಂತೆ ಜನಜನಿತವಾಗಿದೆ. ಇದು ಪ್ರಾದೇಶಿಕವಾಗಿ ಭಿನ್ನ ಭಿನ್ನ ಕತೆಗಳೊಂದಿಗೆ ಹೆಣೆಯಲ್ಪಟ್ಟಿದ್ದರೂ, ಇಲ್ಲಿ ಬಹುಮುಖ್ಯವಾಗಿ ಬ್ರಾಹ್ಮಣ ಮತ್ತು ದಲಿತ ಸಮುದಾಯದ ನಡುವಿನ ಸಾಮಾಜಿಕ ಸಂಕರ ಮತ್ತು ಸಂಘರ್ಷದ ಕಥನವಾಗಿಯೇ ಕಾಣಲ್ಪಡುತ್ತದೆ.

*ಜಾತ್ರೆಯ ಮೆರಗು:*
ಕೋಟೆ ಶ್ರೀ ಮಾರಿಕಾಂಬದೇವಿ ಜಾತ್ರೆಗೆ ೧೯೭೮ ರಿಂದ ನಿರ್ಧಿಷ್ಠ ರೂಪ ಸಿಕ್ಕಿದ್ದು, ನಗರಸಭೆ ಅಧ್ಯಕ್ಷರ ನೇತೃತ್ವದಲ್ಲಿ ಸಾರ್ವಜನಿಕ ಸಮಿತಿಯೊಂದನ್ನು ರಚಿಸಿಕೊಂಡು ಜಾತ್ರೆಯನ್ನು ಮುಂದುವರೆಸಿಕೊಂಡು ಬರಲಾಗುತ್ತಿದೆ, ಇಂದಿನ ಮಹಾನಗರ ಪಾಲಿಕೆ ಮೇಯರ್ ಅವರೇ ಮಾರಿಕಾಂಬಾದೇವಿ ಸಮಿತಿಯ ಗೌರವಾಧ್ಯಕ್ಷರಾಗಿ ಜಾತ್ರೆಗೆ ಪೂರಕವಾದ ಗೌರವ ಮತ್ತು ಸೇವೆಗಳನ್ನು ನಿರ್ವಹಿಸುತ್ತಾರೆ.

ಮಾರಿಜಾತ್ರೆಯ ಆಚರಣೆಯ ಪದ್ದತಿಗಳು ಜಾತಿ ವ್ಯವಸ್ಥೆಯ ಸಾಂಸ್ಕೃತಿಕ ಹೊಣೆಗಾರಿಕೆಗಳೆಂಬಂತೆ ಕಂಡು ಬರುತ್ತವೆ. ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಮಾರಿಕಾಂಬೆ ಜಾತ್ರೆ ನಿರ್ಧಾರವಾಗುತ್ತಿದ್ದಂತೆ ಮಡಿವಾಳ ಸಮಾಜದ ಸದಸ್ಯರು ಕಾಡಿಗೆ ತೆರಳಿ ಕೆಚ್ಚು ತುಂಬಿದ ಎತ್ಯಾಗದ ಮರವನ್ನು ಶಾಸ್ತ್ರೋಕ್ತವಾಗಿ ಪೂಜೆ ನೆರವೇರಿಸಿ ತಂದು ಗುಡಿಗಾರು/ಶಿಲ್ಪಿ ಸಮುದಾಯಕ್ಕೆ ಕೊಡುತ್ತಾರೆ. ಶಿಲ್ಪಿಗಳು ಮಾರಿಕಾಂಬೆಯ ಮೂರ್ತಿಯನ್ನು ಕೆತ್ತಿ ಜಾತ್ರೆ ದಿನ ಪ್ರತಿಷ್ಠಾಪನೆಗೆ ಅಣಿಗೊಳಿಸುತ್ತಾರೆ. ವಿಶ್ವಕರ್ಮ ಸಮುದಾಯದ ಸದಸ್ಯರು ಗಂಗೆ ಪೂಜೆಯೊಂದಿಗೆ ಮಾರಿಕಾಂಬೆಯನ್ನು ದೇವಿಯ ತವರು ಮನೆಯೆಂದೆ ಕರೆಯಲ್ಪಡುವ ಶಿಲ್ಪಿಗರ ಮನೆಯಲ್ಲಿ ಪ್ರತಿಷ್ಠಾಪನಾ ಪೂರ್ವ ವಿಧಿವಿಧಾನಗಳನ್ನು ಪೂರೈಸಿದ ನಂತರ, ಮಾರಿಕಾಂಬೆಯ ತವರಿನ ಬಂಧುಗಳಾದ ನಾಡಿಗರ(ಬ್ರಾಹ್ಮಣ) ಮನೆಯಿಂದ ಪೂಜಾಕ್ರಿಯೆಗಳು ಆರಂಭಗೊಂಡು ಇಡೀ ಸಮುದಾಯ ಮೆರವಣಿಗೆ ಮೂಲಕ ಕುಂಬಾರರ ಮನೆಯಿಂದ ಬಾಸಿಂಗ, ಬಳೆ-ಬಂಗಾರವನ್ನು ಪಡೆದು ಶಿಲ್ಪಿಗರ ಮನೆಗೆ ತಲುಪಿ ದೇವಿಗೆ ತಾಯಿಮನೆ ತಾಳಿ , ಬಾಸಿಂಗ ಕಟ್ಟಿ ಅಗ್ರ ಪೂಜೆಯನ್ನು ಸಲ್ಲಿಸುತ್ತದೆ. ನಂತರವೇ ಸಾರ್ವಜನಿಕರ ಪೂಜೆಗೆ ಮಾರಿಕಾಂಬೆಯ ದರ್ಶನ ತೆರವುಗೊಳ್ಳುತ್ತದೆ. ಮೊದಲ ದಿನ ಗಾಂಧಿಬಜಾರಿನ ಗುಡಿಗಾರರ ಮನೆಯ ಮಂಟಪದಲ್ಲಿ ಪೂಜೆಗೊಳ್ಳುವ ಮಾರಿಕಾಂಬೆಯನ್ನು ಉಪ್ಪಾರ ಸಮುದಾಯ ಅತ್ಯಂತ ವಿಜೃಂಭಣೆಯ ಮೆರವಣಿಗೆಯೊಂದಿಗೆ ತಡರಾತ್ರಿ ಮೂಲ ಗದ್ದುಗೆ( ಕೋಟೆ ರಸ್ತೆ) ಗೆ ಕರೆತರುತ್ತಾರೆ. ಇಲ್ಲಿ ದೇವಿಯ ಗಂಡನ ಮನೆಯ ಬಂಧುಗಳಾದ ಅಂದರೆ ದಲಿತ ಸಮುದಾಯದ ಕರ‍್ಲಟ್ಟಿ ಹರಿಜನರು ಎದುರುಗೊಂಡು ದೇವಿಯನ್ನು ಗದ್ದುಗೆಯಲ್ಲಿ ಪ್ರತಿಷ್ಠಾಪಿಸಿ ಇಲ್ಲಿಂದ ನಾಲ್ಕು ದಿನಗಳ ಕಾಲ ದಲಿತರು, ಶೂದ್ರರ ಪೂಜೆ ವಿಧಿವಿಧಾನಗಳು ಸಂಭ್ರಮ – ವಿಜೃಂಭಣೆಯಿಂದ ನಡೆಯುತ್ತವೆ. ಭಕ್ತಾದಿಗಳು ಮಕ್ಕಳನ್ನು ದೇವಿಯ ಮಡಿಲಿಗಿಟ್ಟು ಒಳಿತನ್ನು ಬೇಡಿ ನಮಿಸುತ್ತಾರೆ.

ಜಾತ್ರೆಯ ಬಾಬುದಾರ ಸಮುದಾಯಗಳೆಂದೆ ಗುರುತಿಸಲ್ಪಡುವ ಮಡಿವಾಳ. ಕುರುಬರ ಚೌಡಿಕೆ ಸಮುದಾಯ, ಹರಿಜನರು, ಉಪ್ಪಾರ, ವಾಲ್ಮೀಕಿ ನಾಯಕ, ವಿಶ್ವಕರ್ಮ, ಬ್ರಾಹ್ಮಣ , ಗಂಗಾಮತಸ್ತ ಸಮುದಾಯಗಳಿಗೆ ಮಾರಿಕಾಂಬಾ ಸಮಿತಿವತಿಯಿಂದ ಅಕ್ಕಿ, ವಸ್ತ್ರ ಸೇರಿದಂತೆ ಅಗತ್ಯ ವಸ್ತುಗಳ ಪಾಲನ್ನು ಜಾತ್ರೆ ಆರಂಭದ ಹಿಂದಿನ ದಿನಗಳಲ್ಲಿ ನೀಡಲಾಗುತ್ತದೆ. ಜಾತ್ರೆಯಲ್ಲಿ ಈ ಸಮುದಾಯಗಳು ಸರದಿ ಮೇರೆಗೆ ಐದು ದಿನಗಳ ಕಾಲ ಪೂಜೆಗಳನ್ನು ನೆರವೇರಿಸುವ ಹೊಣೆಗಾರಿಕೆಯನ್ನು ಹೊಂದಿರುತ್ತವೆ.
ತವರು ಮನೆಯ(ಗಾಂಧಿಬಜಾರ್) ಮೊದಲ ದಿನದ ಸಾತ್ವಿಕ ಪೂಜೆಯ ನಂತರದ ಗಂಡನೆ ಮನೆಯ (ಮಾರಿಗದ್ದುಗೆ) ನಾಲ್ಕು ದಿನಗಳ ಜಾತ್ರೆಯಲ್ಲಿ ಭಕ್ತರು ಹರಕೆ ತೀರಿಸುವ, ಕುರಿ , ಕೋಳಿ ಬಲಿ ಕೊಡುವ ಮೂಲಕ ತಮ್ಮ ಇಷ್ಟಾರ್ಥ ಪೂಜೆಯನ್ನು ನೆರವೇರಿಸಿ ದೇವಿಯಲ್ಲಿ ಒಳಿತಿಗಾಗಿ ಪ್ರಾರ್ಥಿಸುತ್ತಾರೆ.(ಮಾರಿಗದ್ದುಗೆಯಲ್ಲಿ ಬಲಿ ಕೊಡುವುದನ್ನು ನಿಷೇಧಿಸಲಾಗಿದೆ) ಬೇವಿನುಡಿಗೆ , ಬಾಯಿಬೀಗ ದಂತ ಆಚರಣೆಗಳು ನಡೆಯುತ್ತವೆಯಾದರೂ ಬದಲಾದ ದಿನಗಳಲ್ಲಿ ಮೂಢನಂಬಿಕೆಗಳಿಗೆ ಕೋಟೆ ಮಾರಿಕಾಂಬಾ ಸೇವಾಸಮಿತಿ ಕಡಿವಾಣ ಹಾಕಿದ್ದು, ವೈಚಾರಿಕ ನೆಲೆಯಲ್ಲಿ ಧಾರ್ಮಿಕ ನಂಬುಗೆಯನ್ನು ಅನುಸರಿಸುವತ್ತ ಜನಸಮುದಾಯವು ಹೆಜ್ಜೆ ಹಾಕತೊಡಗಿದೆ.

ಐದನೇ ದಿನ ವಿವಿಧ ಸಾಂಸ್ಕೃತಿಕ ಮೇಳಗಳೊಂದಿಗೆ ಅದ್ಧೂರಿಯ ರಾಜಬೀದಿ ಉತ್ಸವ ನಡೆಯಲಿದ್ದು, ನಗರದ ಪ್ರಮುಖ ರಸ್ತೆಗಳನ್ನು ಹಾದು ಹೊರವಲಯವಾದ ಸವಳಂಗ ರಸ್ತೆಯ ವನದಲ್ಲಿ ದೇವಿಯ ವಿಗ್ರಹವನ್ನು ವಿಸರ್ಜನೆ ಮಾಡುವುದರೊಂದಿಗೆ ಮಾರಿಕಾಂಬಾ ಜಾತ್ರೆಗೆ ತೆರೆ ಬೀಳಲಿದೆ.

*ಸಾಂಸ್ಕೃತಿಕ ಅಸ್ಮಿತೆ;*

ಕೋಟೆ ಮಾರಿಕಾಂಬ ದೇವಿ ಜಾತ್ರೆ ಅನಾದಿಕಾಲದ ಐತಿಹ್ಯದ ಹೊರತಾಗಿಯೂ ಕಾಲಕ್ರಮೇಣ ಅದೊಂದು ಶಿವಮೊಗ್ಗ ನಗರದ ಸಾಂಸ್ಕೃತಿಕ ಮತ್ತು ಧಾರ್ಮಿಕ ನಂಬಿಕೆಯ ಅಸ್ಮಿತೆಯಾಗಿ ಮುಂದುವರೆದುಕೊಂಡು ಬಂದಿದೆ. ಪರಂಪರಗತವಾಗಿ ಬಂದ ಆಚರಣೆಗಳಲ್ಲಿದ್ದ ಮೂಢನಂಬಿಕೆಗಳನ್ನು ಕಳಚಿ ವೈಚಾರಿಕ ನೆಲಗಟ್ಟಿನಲ್ಲಿ ಸಾಮಾಜಿಕ ಮತ್ತು ಸಾಂಸ್ಕೃತಿಕವಾಗಿ ಎಲ್ಲರನ್ನೂ ಒಳಗೊಳ್ಳುವ ಸಾಮರಸ್ಯದ ಸಂಭ್ರಮವಾಗಿ ಮುನ್ನಡೆಸಿಕೊಂಡು ಬರುವಲ್ಲಿ ಕೋಟೆ ಶ್ರೀ ಮಾರಿಕಾಂಬ ದೇವಿ ಸೇವಾ ಸಮಿತಿ ಯಶಸ್ವಿಯಾಗಿದೆ.
ನಾಡಿನ ಮೂಲೆ ಮೂಲೆಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸುವ ಭಕ್ತ ಸಮೂಹ ಜಾತ್ರೆಯ ಸೊಬಗನ್ನು ಸವಿದು ದೇವಿಯ ಆರ್ಶಿವಾದ ಪಡೆಯುತ್ತದೆ. ಕೇವಲ ಪೂಜೆ ವಿಧಿಗಳಗಷ್ಟೆ ಜಾತ್ರೆ ಸೀಮಿತವಾಗಿರದೆ ಗ್ರಾಮೀಣ ಬದುಕಿನ ಜನಪದ ಕಲೆಗಳನ್ನು ಅಭಿವ್ಯಕ್ತಿಸುವ ಸಂಭ್ರವೂ ಆಗಿದೆ. ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಗಳು, ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಭಕ್ತಾಧಿಗಳಿಗೆ ಅನ್ನದಾಸೋಹ ನಡೆಯಲಿದೆ.

ಕೋಟೆ ಮಾರಿಕಾಂಬ ದೇವಿ ಗದ್ದುಗೆಯನ್ನೊಳಗೊಂಡ ದೇವಸ್ಥಾನದಲ್ಲಿ ೧೯೯೧ ರಲ್ಲಿ ಸ್ಥಿರಮೂರ್ತಿಯನ್ನು ಪ್ರತಿಷ್ಠಾಪಿಸಿದ್ದು, ಶೃಂಗೇರಿ ಜಗದ್ಗುರು ಶ್ರೀ ಭಾರತೀ ತೀರ್ಥಮಹಾಸ್ವಾಮಿಗಳಿಂದ ಪ್ರತಿಷ್ಠಾಪನೆಗೊಂಡಿರುತ್ತದೆ. ದೇವಸ್ತಾನದ ಅಭಿವೃದ್ದಿ ವರ್ಷದಿಂದ ವರ್ಷಕ್ಕೆ ಪ್ರಗತಿದಾಯಕವಾಗಿದ್ದು, ನಾಡಿನ ಭಕ್ತಜನರನ್ನು ಮತ್ತು ಪ್ರವಾಸಿಗರನ್ನು ಸೆಳೆಯುವ ಮಟ್ಟಿಗೆ ಮೆರಗನ್ನು ಹೊಂದಿದೆ.

– ಎನ್.ರವಿಕುಮಾರ್ ಟೆಲೆಕ್ಸ್

Leave a Reply

Your email address will not be published. Required fields are marked *

*

Tags

*ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ* *9916660399* Accident Bangalore Bhadravathi BJP B S yaduvurappa B Y Ragavendra Congress Corona Corona report Corona virus Covid 19 Hosanagara JDS Kerala K S Eshwarappa MP election M P Election News NSUI Sagara Shikaripura Shimoga shimoga district Shivammoga Shivamoga Shivamogga Shivamogga NSUI SP shivamogga ಒಮಿಕ್ರಾನ್ ಸೋಂಕಿತರ ಸಂಖ್ಯೆ 578 ಕ್ಕೆ ಏರಿಕೆ. ಕಾಂಗ್ರೆಸ್ ಕೊರೊನಾ ಕೋಟೆ ಶ್ರೀ ಮಾರಿಕಾಂಬ ಜಾತ್ರೆ : ಇಂದು ಗಾಂಧಿಬಜಾರ್ ನಲ್ಲಿ ಚಪ್ಪರ ಪೂಜೆ.‌ ಚಾರುಲತಾ ಸೋಮಲ್‌ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಜಿಲ್ಲೆಯಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 791 ಕೊರೊನಾಗೆ 7 ಜನ ಬಲಿ ಜಿಲ್ಲೆಯಲ್ಲಿ ಎರಡಂಕಿಗೆ ಇಳಿದ ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 38 ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ. ನಾಳೆ ನಗರದಲ್ಲಿ ವಿದ್ಯುತ್ ವ್ಯತ್ಯಯ. ಮೆಗ್ಗಾನ್ ಆಸ್ಪತ್ರೆ ಶಿವಮೊಗ್ಗ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸಚಿವ ಕೆ.ಎಸ್.ಈಶ್ವರಪ್ಪ ಸಿಗಂದೂರು

Recent Comments