ಶಿವಮೊಗ್ಗ : ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಇಂದಿನಿಂದ 5ದಿನಗಳ ಕಾಲ ನಡೆಯಲಿರುವ ಮೈಸೂರು ಸಿಲ್ಕ್ ಸೀರೆ ಹಾಗೂ ಸಿಲ್ಕ್ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಯನ್ನು ಜಿಲ್ಲಾಧುಕಾರಿಗಳಾದ ಕೆ.ಬಿ.ಶಿವಕುಮಾರ್ ಉದ್ಘಾಟಿಸಿದ್ದರು..
ಜಾಗತಿಕವಾಗಿ ಅಗ್ರಪಂಕ್ತಿಯಲ್ಲಿ ಗುರುತಿಸಲ್ಪಡುವ ಮೈಸೂರು ಸಿಲ್ಕ್ಸ್ ಉತ್ಪನ್ನಗಳು ನಾಡಿನ ಹೆಮ್ಮೆ ಹಾಗೂ ಶ್ರೇಷ್ಠ ಪರಂಪರೆಯ ಪ್ರತೀಕವೆನಿಸಿದೆ. ನಕಲು ಮಾಡಲಾಗದಂತಹ ಮೈಸೂರು ಸಿಲ್ಕ್ ಉತ್ಪನ್ನಗಳನ್ನು ಜನಸಾಮಾನ್ಯರ ಮನೆಬಾಗಿಲಿಗೆ ತಲುಪಿಸುವ ಉದ್ದೇಶದಿಂದ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ವರ್ಷಕ್ಕೆ 2ಬಾರಿ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳನ್ನು ಆರಂಭಿಸುತ್ತಿದೆ. ಇಲ್ಲಿನ ಉತ್ಪನ್ನಗಳನ್ನು ಶ್ರೀಸಾಮಾನ್ಯರು ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಖರೀದಿಸಬಹುದಾಗಿದೆ. ಅಂತೆಯೆ ಸಂಸ್ಥೆಯು ಕಾ¯ಕಾಲಕ್ಕೆ ನವೀನ ವಿನ್ಯಾಸದ ಉತ್ಪನ್ನಗಳನ್ನು ಜನರ ಬೇಡಿಕೆಗನುಗುಣವಾಗಿ ಉತ್ಪಾದಿಸಿ ಮಾರುಕಟ್ಟೆಗೆ ಪರಿಚಯಿಸುತ್ತಿದೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು..
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಮೈಸೂರು ಸಿಲ್ಕ್ ಸಂಸ್ಥೆಯ ವಿಭಾಗೀಯ ಅಧಿಕಾರಿ ಭಾನುಪ್ರಕಾಶ್ ಅವರು ಮಾತನಾಡಿ, ಮಾರುಕಟ್ಟೆಯಲ್ಲಿ ದಿನೇದಿನೇ ರೇಷ್ಮೇ ಉತ್ಪನ್ನಗಳಿಗಾಗಿ ಜನರ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವರ್ಷಕ್ಕೆ 2ಬಾರಿ ಮೇಳಗಳನ್ನು ಆಯೋಜಿಸಲಾಗುತ್ತಿದೆ. ರೂ.6,000/-ಗಳಿಂದ 1.50ಲಕ್ಷ ರೂ.ಗಳವರೆಗಿನ ಮೌಲ್ಯದ ಹೊಸ ವಿನ್ಯಾಸದ ಸೀರೆಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಗುತ್ತಿದೆ ಎಂದರು.
ಶ್ರೇಷ್ಠ ಗುಣಮಟ್ಟಕ್ಕೆ ಹೆಸರುವಾಸಿಯಾಗಿರುವ ಮೈಸೂರು ಸಿಲ್ಕ್ ಉತ್ಪನ್ನಗಳನ್ನು ದೇಶಕ್ಕೆ ಬರುವ ವಿದೇಶಿ ಪ್ರವಾಸಿಗರು ಹೆಮ್ಮೆಯಿಂದ ಖರೀದಿಸಿ ಹಿಂದಿರುಗುತ್ತಾರೆ ಎಂದ ಅವರು ಸಂಸ್ಥೆಯು ಉತ್ಪಾದಿಸುವ ರೇಷ್ಮೇ ಬಟ್ಟೆಗಳಿಗೆ ಕಳೆದ ಕೆಲವು ವರ್ಷಗಳಿಂದ ಮುಖ್ಯಮಂತ್ರಿಗಳ ವಾರ್ಷಿಕ ರತ್ನ ಪ್ರಶಸ್ತಿ ಪಡೆಯುತ್ತ ಮುಂದುವರೆಯುತ್ತಿರುವುದು ಹರ್ಷದ ಸಂಗತಿಯಾಗಿದೆ ಎಂದವರು ನುಡಿದರು. ಈ ಸಂದರ್ಭದಲ್ಲಿ ಮೈಸೂರು ಸಿಲ್ಕ್ ಸಂಸ್ಥೆಯ ವ್ಯವಸ್ಥಾಪಕರು, ಮಾರಾಟ ಪ್ರತಿನಿಧಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
Recent Comments