ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಐದು ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆ ಬಿಜೆಪಿಗೆ ಬಿಗ್ ಶಾಕ್ ನೀಡಿದೆ. ಇದೇ ವೇಳೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಕೂಟಕ್ಕೆ ಅಲ್ಪ ಸಮಾಧಾನವನ್ನೂ ತಂದುಕೊಟ್ಟಿದೆ. ಅದರಲ್ಲೂ ಶಿಕಾರಿಪುರ ಪುರಸಭೆಯಲ್ಲಿ ಬಿಜೆಪಿ ಸೋಲುಕಂಡಿರುವುದು ಬಿಜೆಪಿಗೆ ದೊಡ್ಡ ಶಾಕ್ ನೀಡಿದೆ. ಹತ್ತಾರು ವರ್ಷಗಳಿಂದಲೂ ಶಿಕಾರಿಪುರ ಪುರಸಭೆ ಬಿಜೆಪಿ ಹಿಡಿತದಲ್ಲೇ ಇತ್ತು. ಜೊತೆಗೆ ಶಿಕಾರಿಪುರ ಬಿಜೆಪಿ ಭದ್ರಕೋಟೆ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ತವರು. ಆದ್ದರಿಂದ ಈ ಬಾರಿಯೂ ಪುರಸಭೆಯ ಗದ್ದುಗೆಯನ್ನು ಬಿಜೆಪಿಯೇ ಹಿಡಿಯಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಈ ಎಲ್ಲ ನಿರೀಕ್ಷೆಗಳು ಸುಳ್ಳಾಗಿವೆ. ಶಿಕಾರಿಪುರ ಪುರಸಭೆಯ 23 ಸ್ಥಾನಗಳಲ್ಲಿ ಕಾಂಗ್ರೆಸ್ 12 ಸ್ಥಾನಗಳನ್ನು ಗೆದ್ದು ಅಧಿಕಾರದ ಗದ್ದುಗೆ ಹಿಡಿದಿದೆ. ಇನ್ನು ಈ ಹಿಂದೆ ಪುರಸಭೆಯಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಕೇವಲ 8 ಸ್ಥಾನಗಳನ್ನು ಮಾತ್ರ ಗೆದ್ದಿದೆ. ಉಳಿದ ಮೂರು ಸ್ಥಾನಗಳು ಪಕ್ಷೇತರರ ಪಾಲಾಗಿವೆ.
ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಪಟ್ಟಣಪಂಚಾಯಿತಿಯಲ್ಲೂ ಬಿಜೆಪಿ ಹೀನಾಯ ಸೋಲು ಕಂಡಿದೆ. 17 ಸ್ಥಾನ ಹೊಂದಿರುವ ಈ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ ಕೇವಲ 2 ಸ್ಥಾನಗಳನ್ನಷ್ಟೇ ಗೆದ್ದಿದೆ. ಕಾಂಗ್ರೆಸ್ 7 ಹಾಗೂ ಜೆಡಿಎಸ್ 3 ಸ್ಥಾನಗಳಲ್ಲಿ ಗೆದ್ದರೆ ಪಕ್ಷೇತರರು 5 ಸ್ಥಾನ ಗೆದ್ದಿದ್ದಾರೆ.
ಇದರಿಂದ ಶಿರಾಳಕೊಪ್ಪ ಪಟ್ಟಣ ಪಂಚಾಯಿತಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಯ ಪಾಲಾಗಿದೆ.
ಸಾಗರ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡಿದ್ದು ಇಲ್ಲಿ ಕಮಲ ಅರಳಿದೆ. ಸಾಗರ ನಗರಸಭೆಯ 31 ಸ್ಥಾನಗಳಲ್ಲಿ ಬಿಜೆಪಿ 16 ಸ್ಥಾನಗಳನ್ನು ಗೆದ್ದು ಅಧಿಕಾರ ಹಿಡಿದಿದೆ. ಆದರೆ ಕಾಂಗ್ರೆಸ್ ಕೇವಲ 9 ಸ್ಥಾನ ಗೆದ್ದು ನಿರಾಸೆ ಅನುಭವಿಸಿದೆ. ಜೆಡಿಎಸ್ ಒಂದು ಸ್ಥಾನದಲ್ಲಿ ಗೆದ್ದರೆ, ಐವರು ಪಕ್ಷೇತರರು ಗೆದ್ದಿದ್ದಾರೆ.
ಹೊಸನಗರ ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಕೂಟ ಅಧಿಕಾರಕ್ಕೇರಿದೆ. ಹೊಸನಗರ ಪಟ್ಟಣ ಪಂಚಾಯಿತಿಯ 11 ಸ್ಥಾನಗಳಲ್ಲಿ ಕಾಂಗ್ರೆಸ್ 4, ಬಿಜೆಪಿ 4 ಹಾಗೂ ಜೆಡಿಎಸ್ 3 ಸ್ಥಾನ ಗೆದ್ದಿದೆ. ಹೀಗಾಗಿ ಕಾಂಗ್ರೆಸ್ ಜೆಡಿಎಸ್ ಮೈತ್ರಿಕೂಟ ಇಲ್ಲಿ ಅಧಿಕಾರಕ್ಕೇರಲಿದೆ.
ಸೊರಬ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ ಸರಳ ಬಹುಮತಪಡೆದಿದೆ. ಸೊರಬ ಪಟ್ಟಣ ಪಂಚಾಯಿತಿಯ 12 ಸ್ಥಾನಗಳಲ್ಲಿ ಬಿಜೆಪಿ 6 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಇನ್ನು ಕಾಂಗ್ರೆಸ್ 4, ಜೆಡಿಎಸ್ 1 ಸ್ಥಾನ ಹಾಗೂ ಒಬ್ಬ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.
ಒಟ್ಟಾರೆ ಈ ಬಾರಿಯ ನಗರ ಸ್ಥಳೀಯ ಸಂಸ್ಥೆಯ ಚುನಾವಣೆ ಬಿಜೆಪಿಗೆ ಶಾಕ್ ನೀಡಿದ್ದಂತೂ ಸುಳ್ಳಲ್ಲ…
Recent Comments