ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶ ನೀಡುವ ವಿವಾದ ಸಂಬಂಧ ಕೇರಳ ಸರ್ಕಾರ ತನ್ನ ಹಿಂದೂ ವಿರೋಧಿ ಧೋರಣೆಯನ್ನು ಕೈಬಿಡಬೇಕು ಎಂದು ಶಬರಿಮಲೆ ಸಂರಕ್ಷಣಾ ಕ್ರಿಯಾ ಸಮಿತಿ ಒತ್ತಾಯಿಸಿದೆ. ಶಿವಮೊಗ್ಗದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದ ಸಮಿತಿಯ ಕಾರ್ಯಕರ್ತರು, ಶಬರಿಮಲೆ ಶ್ರೀ ಕ್ಷೇತ್ರಕ್ಕೆ ನಿರ್ಬಂಧವಿದ್ದ ಮಹಿಳಾ ಪ್ರವೇಶವನ್ನು ಸುಪ್ರೀಂ ಕೋರ್ಟ್ ಆದೇಶ ನೀಡಿ ತೆರವುಗೊಳಿಸಿದ್ದು, ಇದರ ವಿರುದ್ಧ ಭಕ್ತರ ನಂಬಿಕೆಗೆ ಪೂರಕವಾಗುವಂತೆ ಮೇಲ್ಮನವಿ ಸಲ್ಲಿಸಬೇಕು. ಶಬರಿಮಲೆಯಲ್ಲಿನ ಧಾರ್ಮಿಕ ನಂಬಿಕೆಗಳ ಉಳಿವಿಗಾಗಿ ಶಾಂತಿಯುತ ಹೋರಾಟ ಮಾಡುತ್ತಿರುವ ಅಯ್ಯಪ್ಪ ಮಾಲಾಧಾರಿಗಳು, ಭಕ್ತರು ಹಾಗೂ ಬಿಜೆಪಿ ಮತ್ತು ಸಂಘ ಪರಿವಾರದ ಕಾರ್ಯಕರ್ತರ ಮೇಲಿನ ಪೊಲೀಸ್ ದೌರ್ಜನ್ಯ ತಡೆಯುವಂತೆ ಕೇರಳ ಸರ್ಕಾರಕ್ಕೆ ಸೂಚನೆ ನೀಡಬೇಕು. ಬಂಧಿತರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ಮಾತ್ರವಲ್ಲದೇ, ಪ್ರಕರಣಕ್ಕೆ ಸಂಬಂಧಿಸಿದಂತೆ ಮರುಪರಿಶೀಲನಾ ಅರ್ಜಿ ವಿಚಾರಣಾ ಹಂತದಲ್ಲಿರುವಾಗ ಆದೇಶವನ್ನೇ ನೆಪವಾಗಿಟ್ಟಕೊಂಡು ಮಹಿಳೆಯರು ಶಬರಿಮಲೆ ಪ್ರವೇಶಿಸುವ ಯತ್ನ ಮಾಡಬಾರದು. ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ಈ ಸಮಸ್ಯೆಗೆ ಸೂಕ್ತ ಪರಿಹಾರ ಸೂಚಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
Recent Comments