ಶಿವಮೊಗ್ಗದಲ್ಲಿ ಸದ್ಯ ಕುತೂಹಲ ಕೇರಳಿಸುದ ಸುದ್ದಿ ನೀರುನಾಯಿಗಳು.. ತುಂಗಾ ನದಿಯ ದಡದಲ್ಲಿ ನೀರು ನಾಯಿಗಳು ಕಾಣಿಸುತ್ತಿದೆ ಎಂಬ ಸುದ್ದಿ ಕಾಡ್ಗಿಚ್ಚಿನ ಹಾಗೆ ಹಬ್ಬುತ್ತಿದೆ.
ಕೆಲವರು ನಾವು ನೋಡಿದ್ದೇವೆ..ನಾವು ನೋಡಿಲ್ಲ.. ಎಂಬ ಊಹಪೋಹಗಳ ನಡುವೆ ಛಾಯಾಗ್ರಾಹಕರು ತೆಗೆದ ನೀರುನಾಯಿಯ ಫೋಟೋವೊಂದು ಎಲ್ಲ ಕಡೆ ಹರಿದಾಡುತ್ತಿದೆ. ತುಂಗಾ ನದಿಯ ಬೆಕ್ಕಿನಕಲ್ಮಠ, ಮತ್ತೂರು ಭಾಗದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ ಎಂದು ಹೇಳಲಾಗುತ್ತಿದೆ.
ಮಾಹಿತಿಗಳ ಪ್ರಕಾರ ತುಂಗಭದ್ರಾ ನದಿಗಳಲ್ಲಿ ಅಪಾರ ಸಂಖ್ಯೆಯಲ್ಲಿ ಅಪರೂಪದ ‘ನೀರುನಾಯಿ’ ಗಳಿವೆ (ಆಟರ್).. ಇದು ತುಂಬಾ ನಾಚಿಕೆ ಸ್ವಭಾವದ ಜೀವಿ.
ನೀರು ನಾಯಿ ಕಾರ್ಡೇಟಾ ವಂಶಕ್ಕೆ ಸೇರಿದ ಸಸ್ತನಿ ವರ್ಗದ ಪ್ರಾಣಿ. ಇದು ಭಾರತದಲ್ಲಿ ಕಾಶ್ಮೀರ, ಅಸ್ಸಾಂ ಹಾಗೂ ದಕ್ಷಿಣ ಭಾರತದಲ್ಲಿ ಇದು ವ್ಯಾಪಕವಾಗಿದೆ. ಇದು ನದಿಗಳ ಸಮೀಪ ಬಂಡೆಗಳ ಪೊಟರೆಗಳಲ್ಲಿ ವಾಸಿಸುವುದು. ನೀಳ ದೇಹ, ನೀರಿನಲ್ಲಿ ತೋಯದ ತುಪ್ಪಳದ ಚರ್ಮ, ಚಪ್ಪಟೆಯಾದ ತಲೆ, ಶಕ್ತಿಯುತ ವಾದ ಬಾಲ, ದೋಣಿಯ ಹುಟ್ಟುಗಳಿಂತಿರುವ ಪಾದಗಳು, ಸ್ಪರ್ಶ ಸೂಕ್ಷ್ಮ ಮೀಸೆ ಕೂದಲುಗಳನ್ನು ಹೊಂದಿದೆ ಈ ಜೀವಿ.
ಮೀನು, ಏಡಿ, ಕಪ್ಪೆ, ಬಾತುಕೋಳಿ, ನೀರುಕೋಳಿ ಹಾಗೂ ಕೆಲವೊಮ್ಮೆ ಎಲೆಗಳು ಕೂಡಾ ಇದರ ಆಹಾರವಾಗಿ ಸೇವಿಸುತ್ತದೆ. ಇದರ ಗರ್ಭಧಾರಣಾ ಅವಧಿ ಸುಮಾರು ೬೦ ದಿನಗಳು. ತುಂಗಾ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾದ ಕಾರಣ ಈ ಜೀವಿ ಸಾರ್ವಜನಿಕರಿಗೆ ಕಾಣಿಸಿಕೊಳ್ಳುತ್ತಿದೆ ಎನ್ನಲಾಗುತ್ತಿದೆ.
ಒಟ್ಟಿನಲ್ಲಿ ಜೀವಸಂಕುಲಗಳು ನಶಿಸಿ ಹೋಗುತ್ತಾ ಇದೆ ಎನ್ನುವ ಈ ಸಮಯದಲ್ಲಿ ಅಪರೂಪದ ಜೀವಿಯೊಂದು ನಮ್ಮ ತುಂಗೆಯ ಒಡಲಿನಲ್ಲಿದೆ ಎನ್ನಲಾಗುತ್ತಿರುವುದು ನಿಜಕ್ಕೂ ಸಂತಸದ ಸಂಗತಿ.
ಪೋಟೋ ಕೃಪೆ : ಶಿವಮೊಗ್ಗ ನಾಗರಾಜ್
Recent Comments