ರಾಜ್ಯದ ಜನರ ಹಾಗೂ ಬಡವರ ಕಣ್ಣೀರು ಒರೆಸಬೇಕಾದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಾವೇ ಕಣ್ಣೀರು ಸುರಿಸುತ್ತಿದ್ದಾರೆ ಎಂದು ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಭಾರತೀ ಶೆಟ್ಟಿ ಲೇವಡಿ ಮಾಡಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿಯವರು ಕಣ್ಣೀರು ಸುರಿಸುವ ಮೂಲಕ ಜನರಲ್ಲಿ ಸಿಂಪತಿಯನ್ನು ಮೂಡಿಸುವಂತಹ ಕೆಲಸ ಮಾಡುತ್ತಿದ್ದಾರೆ. ಮುಖ್ಯಮಂತ್ರಿಯಾದ ಇವರು, ಬಡವರ, ಶೋಷಿತರ ಹಾಗೂ ಸಂಕಷ್ಟದಲ್ಲಿರುವ ಜನರ ಕಣ್ಣೀರನ್ನು ಒರೆಸಬೇಕು. ಆ ಕೆಲಸ ಇವರಿಂದ ಆಗಬೇಕೆಂದು ಆಗ್ರಹಿಸಿದರು.
ರಾಜ್ಯದಲ್ಲಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುವುದರಲ್ಲಿ ಯಾವುದೇ ಸಂದೇಹವಿಲ್ಲ. ಇದು ಕಾಂಗ್ರೆಸ್, ಜೆಡಿಎಸ್ ಪಕ್ಷಗಳಿಗೂ ಮನವರಿಕೆಯಾಗಿದೆ. ಆದರೂ ಸಹ ಬಿಜೆಪಿ ನಾಯಕರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.
ಅಚ್ಚೇ ದಿನ್ ಯಾರಿಗೆ ಬಂದಿದೆ ಎನ್ನುತ್ತಾರೆ. ಅಚ್ಚೇದಿನ್ ದೇಶದ ಜನತೆಗೆ ಬಂದಿದೆ. ಕಾಂಗ್ರೆಸ್ ಪಕ್ಷಕ್ಕೆ ಬಂದಿಲ್ಲ ಎಂದ ಅವರು, ಮೋದಿ ನೇತೃತ್ವದ ಕೇಂದ್ರ ಸರ್ಕಾರ ೮೩ ಯೋಜನೆಗಳನ್ನು ಎಲ್ಲಾ ಹಂತದ ಜನರಿಗೆ ನೀಡಿದೆ. ರಾಹುಲ್ಗಾಂಧಿಯವರು ಚಿಕ್ಕ ಮಕ್ಕಳ ರೀತಿಯಲ್ಲಿ ವರ್ತಿಸುತ್ತಾರೆ. ಇಂತವರಿಗೆ ದೇಶದ ನಾಯಕತ್ವವನ್ನು ರಾಷ್ಟ್ರದ ಜನತೆ ಹೇಗೆ ಕೊಡುತ್ತಾರೆ ಎಂದು ಪ್ರಶ್ನಿಸಿದರು.
ಯಡಿಯೂರಪ್ಪನವರು ಹಾಗೂ ರಾಘವೇಂದ್ರರವರು ಸಂಸದರಾದ ಅವಧಿಯಲ್ಲಿ ಜಿಲ್ಲೆಯ ರೈಲ್ವೇ ಯೋಜನೆಗಳಿಗೆ ಸಂಬಂಧಿಸಿದಂತೆ ೩೨೨೦ ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ಅಲ್ಲದೆ, ವಿವಿಧ ಯೋಜನೆಗಳನ್ನು ಸಹ ಜಿಲ್ಲೆಗೆ ತಂದಿದ್ದಾರೆ ಎಂದು ಹೇಳಿದರು.
ಮಧು ಬಂಗಾರಪ್ಪನವರು ಸೊರಬ ಕ್ಷೇತ್ರಕೆ ನ್ಯಾಯ ದೊರಕಿಸಿಕೊಡುವಲ್ಲಿ ವಿಫಲರಾಗಿದ್ದಾರೆ. ಇಂತಹವರು ಇದೀಗ ಲೋಕಸಭಾ ಚುನಾವಣೆಯಲ್ಲಿ ಪಾರ್ಲಿಮೆಂಟ್ಗೆ ಸ್ಪರ್ಧಿಸಿದ್ದಾರೆ. ಇವರನ್ನು ಜನ ಹೇಗೆ ಆಯ್ಕೆ ಮಾಡುತ್ತಾರೆ ಎಂದು ಪ್ರಶ್ನಿಸಿದ ಅವರು, ಹೆಚ್.ಡಿ.ಕುಮಾರಸ್ವಾಮಿ ಸರ್ಕಾರದಿಂದ ಇದುವರೆಗೂ ಯಾವುದೇ ಯೋಜನೆಗಳು ರಾಜ್ಯದಲ್ಲಿ ಜಾರಿಗೆ ಬಂದಿಲ್ಲ ಎಂದು ಆರೋಪಿಸಿದರು.
ಸುದ್ದಿಗೋಷ್ಟಿಯಲ್ಲಿ ಪದ್ಮಿನಿ, ರಾಧಾ, ಮಂಜುಳಾ, ಸುವರ್ಣಾಶಂಕರ್ ಮೊದಲಾದವರಿದ್ದರು.
Recent Comments