cnewstv | 12.03.2025 | ಶಿವಮೊಗ್ಗ | ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಶಕ್ತಿ ಯೋಜನೆ : ಕೋಟ್ಯಂತರ ರೂ. ನಷ್ಟದಲ್ಲಿ ಕೆಎಸ್‌ಆರ್‌ಟಿಸಿ, ಬಿಎಂಟಿಸಿ.
ಬೆಂಗಳೂರು : ಕರ್ನಾಟಕದ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಕೆಕೆಆರ್‌ಟಿಸಿ ಮತ್ತು ಎನ್‌ಡಬ್ಲ್ಯುಕೆಆರ್‌ಟಿಸಿ ಸಾರಿಗೆ ನಿಗಮಗಳಿಗೆ ಕಳೆದ ಐದು ವರ್ಷಗಳಲ್ಲಿ ಭಾರಿ ನಷ್ಟವಾಗಿದೆ ಎಂದು ವಿಧಾನ ಪರಿಷತ್ತಿನಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ಶಕ್ತಿ ಯೋಜನೆಯ ಖರ್ಚು ಮತ್ತು ನಿಗಮಗಳ ಆರ್ಥಿಕ ಸ್ಥಿತಿಯ ಕುರಿತು ವಿವರವಾದ ಮಾಹಿತಿಯನ್ನು ಸಾರಿಗೆ ಸಚಿವರು ನೀಡಿದ್ದಾರೆ.
ಎಂಎಲ್ಸಿ ಕೇಶವ ಪ್ರಸಾದ್ ಪ್ರಶ್ನೆಗೆ, “ಕಳೆದ 5 ವರ್ಷಗಳಲ್ಲಿ ಕೆಎಸ್ಆರ್ಟಿಸಿಗೆ 1500 ಕೋಟಿ ರೂ., ಬಿಎಂಟಿಸಿಗೆ 1544 ಕೋಟಿ ರೂ. ಕೆಕೆಆರ್ಟಿಸಿಗೆ 777 ಕೋಟಿ ರೂ. ಎನ್ಡಬ್ಲೂಕೆಆರ್ಟಿಸಿಗೆ 1386 ಕೋಟಿ ರೂ. ನಷ್ಟವಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಉತ್ತರ ನೀಡಿದ್ದಾರೆ.
ಸರ್ಕಾರದಿಂದ ಶಕ್ತಿ ಯೋಜನೆಯ ಪೂರ್ತಿ ಮೊತ್ತ ಪಡೆಯಬೇಕಿದೆ. ಪ್ರಪಂಚದ ಯಾವುದೇ ಭಾಗದಲ್ಲಿಯೂ ಸಾರಿಗೆ ನಿಗಮ ನಷ್ಟದಲ್ಲಿದೆ. ಶೇ 40 ರಷ್ಟು ಬಸ್ಗಳು ನಷ್ಟದಲ್ಲೇ ಓಡುತ್ತಿವೆ. ಶೇ 30ರಷ್ಟು ಬಸ್ಗಳು ಯಾವುದೇ ಲಾಭ-ನಷ್ಟ ಇಲ್ಲದೆ ಓಡುತ್ತಿವೆ. ಶೇ 30ರಷ್ಟು ಬಸ್ಗಳು ಮಾತ್ರ ಲಾಭದಲ್ಲಿವೆ. ಸಾರಿಗೆ ಇಲಾಖೆಯಲ್ಲಿ ಪ್ರತಿದಿನ 9.45 ಕೋಟಿ ರೂ. ಖರ್ಚು ಇದೆ. ಏನಾದರೂ ದೂರುಗಳಿದ್ದರೆ ತಿಳಿಸಿ ಸರಿಪಡಿಸೋಣ ಎಂದು ಪರಿಷತ್ಗೆ ಹೇಳಿದರು.
ಶಕ್ತಿ ಯೋಜನೆಯಿಂದಾದ ನಷ್ಟ ಎಷ್ಟು ಎಂದು ಎಂಎಲ್ಸಿ ಕೇಶವ ಪ್ರಸಾದ್ ಮತ್ತೊಂದು ಪ್ರಶ್ನೆ ಕೇಳಿದರು.
ಇದಕ್ಕೆ ಉತ್ತರಿಸಿದ ಸಚಿವರು, “ಶಕ್ತಿ ಯೋಜನೆಗೆ ಒಟ್ಟು 9,978 ಕೋಟಿ ರೂಪಾಯಿ ಖರ್ಚಾಗಿದೆ. 448 ಬಿಎಂಟಿಸಿ ಬಸ್ ಖರೀದಿ ಮಾಡಿದ್ದೇವೆ. 2016ರ ಬಳಿಕ 10 ಸಾವಿರ ಜನರನ್ನ ನೇಮಕ ಮಾಡಿಕೊಂಡಿದ್ದೇವೆ. ಹೊಸದಾಗಿ 5,360 ಬಸ್ ಖರೀದಿಸಲಾಗಿದೆ. ಬಸ್ಗಳು ಮೊದಲು 1.40 ಸಾವಿರ ಟ್ರಿಪ್ ಸಂಚರಿಸುತ್ತಿದ್ದವು. ಈಗ 1.90 ಲಕ್ಷ ಟ್ರಿಪ್ ಪ್ರತಿದಿನ ಸಂಚರಿಸುತ್ತಿವೆ. 40 ವರ್ಷ ಮೇಲ್ಪಟ್ಟ ಸಿಬ್ಬಂದಿಗೆ ಜಯದೇವ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಲಾಗುತ್ತಿದೆ. ಒಂದು ತಿಂಗಳಿಗೆ ಸಿಬ್ಬಂದಿಯಿಂದ 650 ರೂ. ಪಡೆಯಲಾಗುತ್ತಿದೆ. ಸಿಬ್ಬಂದಿಯ ಇಡೀ ಕುಟುಂಬಕ್ಕೆ ಚಿಕಿತ್ಸೆ ನೀಡಲು ಇದು ಸಹಾಯವಾಗಿದೆ” ಎಂದು ಹೇಳಿದರು.
ಕಳೆದ ವರ್ಷ 2024ರ ಡಿಸೆಂಬರ್ನಲ್ಲಿ ಎನ್ಡಬ್ಲೂಕೆಆರ್ಟಿಸಿಯ ವ್ಯವಸ್ಥಾಪಕ ನಿರ್ದೇಶಕಿ ಎಮ್. ಪ್ರಿಯಾಂಗಾ ಅವರು ಆರ್ಥಿಕ ಇಲಾಖೆಗೆ ಬಾಕಿ ಇರುವ 414 ಕೋಟಿ ರೂ. ಬಿಡುಗಡೆ ಮಾಡುವಂತೆ ಪತ್ರ ಬರೆದಿದ್ದರು.
ಅಲ್ಲದೇ, ಎನ್ಡಬ್ಲೂಕೆಆರ್ಟಿಸಿಯಲ್ಲಿ ಒಂದು ದಿನಕ್ಕೆ ಸುಮಾರು 25 ಲಕ್ಷ ಜನ ಪ್ರಯಾಣ ಮಾಡುತ್ತಾರೆ. ಇದರಲ್ಲಿ ಸರಾಸರಿ 16 ಲಕ್ಷ ಜನ ಶಕ್ತಿ ಯೋಜನೆ ಫಲಾನುಭವಿಗಳು ಪ್ರಯಾಣ ಮಾಡುತ್ತಾರೆ. ಒಂದು ತಿಂಗಳಿಗೆ 120 ಕೋಟಿ ಶೂನ್ಯ ಟಿಕೆಟ್ ಪ್ರಯಾಣದ ದರವಾಗತ್ತೆ. ಈ ಪೈಕಿ ಸರ್ಕಾರದಿಂದ 102 ಕೋಟಿ ಹಣ ವಾಪಸ್ ಬರುತ್ತಿದೆ. ಬಾಕಿ 414 ಕೋಟಿ ಹಣ ಬರಬೇಕಾಗಿದೆ ಎಂದಿದ್ದರು.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಇದನ್ನು ಇದಿ…
C News TV Kannada News Online in cnewstv