Cnewstv / 20.11.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ದೇಶದಲ್ಲೇ ಅತಿ ಹೆಚ್ಚು ಗ್ರಂಥಾಲಯಗಳನ್ನು ಹೊಂದಿರುವ ರಾಜ್ಯ ನಮ್ಮದು : ಸಚಿವ ಎಸ್. ಮಧು ಬಂಗಾರಪ್ಪ..
ಶಿವಮೊಗ್ಗ : ಇನ್ನು 10 ವಾರದೊಳಗೆ ಡಿಜಿಟಲ್ ಗ್ರಂಥಾಲಯವನ್ನು ಮರು ಪ್ರಾರಂಭಿಸಲಾಗುವುದು ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವರು ಮತ್ತು ಜಿಲ್ಲಾ ಉಸ್ತುವರಿ ಸಚಿವರಾದ ಎಸ್. ಮಧು ಬಂಗಾರಪ್ಪ ತಿಳಿಸಿದರು.
ಸೊರಬದ ರಂಗ ಮಂದಿರದಲ್ಲಿ ಇಂದು ಏರ್ಪಡಿಸಿದ್ದ ಸಾರ್ವಜನಿಕ ಗ್ರಂಥಾಲಯ ಇಲಾಖೆ ಬೆಂಗಳೂರು ಹಾಗೂ ಜಿಲ್ಲಾ/ಕೇಂದ್ರ ಗ್ರಂಥಾಲಯ ಶಿವಮೊಗ್ಗ ಇವರ ಸಹಯೋಗದೊಂದಿಗೆ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಸಮಾರೋಪ ಮತ್ತು ಸಿಬ್ಬಂದಿ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಉಚಿತ ಸದಸ್ಯತ್ವವನ್ನು ಪಡೆದು ಡಿಜಿಟಲ್ ಗ್ರಂಥಾಲಯದ ಮೂಲಕ ಓದುವ ಹವ್ಯಾಸವನ್ನು ಹೆಚ್ಚಿಸಿಕೊಳ್ಳಬಹುದು ಹಾಗೂ ಮೊಬೈಲ್ ಅನ್ನು ಕಲಿಕೆಗಾಗಿ ಸದ್ಬಳಕೆ ಮಾಡಿಕೊಳ್ಳುಬಹುದು. 4 ಕೋಟಿ ಜನರು ಡಿಜಿಟಲ್ ಗ್ರಂಥಾಲಯದ ಸದಸ್ಯತ್ವ ಪಡೆದಿದ್ದು, ಶೀಘ್ರದಲ್ಲಿಯೇ ಸಕ್ರಿಯ ಗೊಳಿಸಲಾಗುವುದು. ಹೊರದೇಶದವರು ಡಿಜಿಟಲ್ ಗ್ರಂಥಾಲಯದ ಮೂಲಕ ಕನ್ನಡ ಪುಸ್ತಕವನ್ನು ಓದಬಹುದು.
ಶಿವಮೊಗ್ಗದ ನಗರ ಕೇಂದ್ರ ಗ್ರಂಥಾಲಯದಲ್ಲೇ ಅನೇಕರು ಊಟ ಕಟ್ಟಿಕೊಂಡು ಬಂದು ಬೆಳಗ್ಗೆಯಿಂದ ಸಂಜೆಯವರೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವುದನ್ನು ನೋಡಿದ್ದೇನೆ. ಅನೇಕರು ಹೊರಗಡೆ ಕೆಲಸ ಮಾಡಿ ಸಂಜೆ ಹೊತ್ತು ಗ್ರಂಥಾಲಯಕ್ಕೆ ಬಂದು ಓದುತ್ತಾರೆ. ಗ್ರಂಥಾಲಯದ ಬಳಿ ರೂಮ್ ಮಾಡಿಕೊಂಡು ಓದುವವರು ಇದ್ದಾರೆ. ಹೀಗೆ ಕೆಲಸಕ್ಕಾಗಿ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಓದುಗರಿಗೆ ಅನುಕೂಲವಾಗುವ ಪುಸ್ತಕಗಳು, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಪ್ರಸ್ತುತ ಗ್ರಂಥಾಲಯದ ವೇಳೆ ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆಯವರೆಗೆ ಇದ್ದು, ಸಂಜೆ ಹೊತ್ತಿನ ಓದುಗರಿಗೆ ಅನುಕೂಲವಾಗುವ ರೀತಿ ಸಮಯ ಹೆಚ್ಚಳ ಮತ್ತು ಪೂರಕ ವ್ಯವಸ್ಥೆಗಳ ವಿವರಣೆ ಪಡೆದುಕೊಂಡು ಬದಲಾವಣೆಯನ್ನು ಮಾಡಲಾಗುವುದು.
ದೇಶದಲ್ಲೇ ಅತಿ ಹೆಚ್ಚು ಗ್ರಂಥಾಲಯಗಳನ್ನು ಹೊಂದಿರುವ ರಾಜ್ಯ ನಮ್ಮದು. ಅದರಲ್ಲೂ ನಮ್ಮ ಇಲಾಖೆ ಹೆಚ್ಚು ಸಂಖ್ಯೆಯ ಗ್ರಂಥಾಲಯಗಳನ್ನು ಹೊಂದಿದೆ. ಇಲಾಖಾ ವ್ಯಾಪ್ತಿಯಲ್ಲಿ 7000 ಕ್ಕೂ ಹೆಚ್ಚು ಗ್ರಂಥಾಲಯಗಳಿದ್ದು, ಅವುಗಳಲ್ಲಿ 1300 ಗ್ರಂಥಾಲಯ ಶಿಕ್ಷಣ ಇಲಾಖೆ ಹಾಗೂ ಉಳಿದವು ಗ್ರಾಮ ಪಂಚಾಯಿತಿಗಳಿಗೆ ಸೇರಿದ್ದು, ಮೇಲ್ದರ್ಜೆಗೆ ಏರಿಸಲು ಕ್ರಮ ವಹಿಸಲಾಗುವುದು ಎಂದ ಅವರು ಬೆಂಗಳೂರಿನ ವೆಸ್ಟ್ ಜೋನ್ ಎಂಬ ಸರ್ಕಾರಿ ಗ್ರಂಥಾಲಯ ಎಲ್ಲಾ ಸೌಕರ್ಯಗಳನ್ನು ಹೊಂದಿದ್ದು, ಅತ್ಯಂತ ಸುಸಜ್ಜಿತವಾಗಿದೆ ಎಂದು ತಿಳಿಸಿದರು.
ಗ್ರಂಥಾಲಯದ ಪಿತಾಮಹರೆನಿಸಿದ ಎಸ್. ರಂಗನಾಥನ್ ಹಠ ಛಲದಿಂದ ಗ್ರಂಥಾಲಯವನ್ನು ಆರಂಭಿಸಿದ್ದು ಅವರನ್ನು ನಾವು ಸ್ಮರಿಸಬೇಕು. ಜ್ಞಾನದ ಸಂಪತ್ತನ್ನು ಗ್ರಂಥಾಲಯಗಳಿಂದ ಗಳಿಸಬಹುದು. ಅತೀ ಹೆಚ್ಚು ಸಾಧಕರು, ಸಾಹಿತಿಗಳು ಗ್ರಂಥಾಲಯಗಳಿಂದ ಹೊರ ಹೊಮ್ಮಿದ್ದು, ಎಲ್ಲರೂ ಗ್ರಂಥಾಲಯಗಳ ಸದ್ಬಳಕೆ ಮಾಡಿಕೊಂಡು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕೆಂದು ಹೇಳಿದರು.
ಮಕ್ಕಳಿಗೆ ಅನಗತ್ಯವಾಗಿ ಮೊಬೈಲ್ ಅನ್ನು ನೀಡಬಾರದು. ಪೋಷಕರೇ ಇದಕ್ಕೆ ಕಡಿವಾಣ ಹಾಕಬೇಕು. ಓದಿನೆಡೆಗೆ ಅವರನ್ನು ಆಕರ್ಷಿಸಬೇಕು ಎಂದರು.
#DigitalLibrary #MadhuBangarappa #Shivamogga #Shivamogga #Library #ಡಿಜಿಟಲ್ ಗ್ರಂಥಾಲಯ #soraba #ಸೊರಬ
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಇದನ್ನು ನೋಡಿ
Recent Comments